ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಓ... ನೀವು ಹೌಸ್ ವೈಫಾ?!

ಮನೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರಕ್ಕೆ ಪ್ರಾಮುಖ್ಯ ಸಿಗುವುದೆಂದು?
Published 30 ಆಗಸ್ಟ್ 2024, 0:30 IST
Last Updated 30 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ಈಚೆಗೆ ಭೇಟಿಯಾದ ಅಪರಿಚಿತ ಹಿರಿಯರೊಬ್ಬರು ಮಾತನಾಡುತ್ತ ‘ನೀವು ಏನು ಕೆಲಸ ಮಾಡುತ್ತೀರಿ?’ ಎಂದು ಕೇಳಿದರು. ಅದಕ್ಕೆ ಹೇಗೋ ಉತ್ತರ ಕೊಟ್ಟು ಕೈ ತೊಳೆದುಕೊಂಡಾಗ, ಎರಡನೇ ಪ್ರಶ್ನೆ ಬಂತು ‘ನಿಮ್ಮ ಮನೆಯವರು ಏನು ಕೆಲಸ ಮಾಡುತ್ತಾರೆ?’ ಈ ಪ್ರಶ್ನೆ ಬೇರೆಯವರಿಂದ ಬಂದಾಗ, ಅನೇಕ ಸಲ ಇರುಸುಮುರುಸು ಉಂಟುಮಾಡಿದೆ. ‘ಅವರು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ’ ಎಂದರೆ ‘ಓ ಹೌಸ್ ವೈಫಾ’ ಎಂಬ ಉದ್ಗಾರ ಹೊರಡುತ್ತದೆ. ಇತ್ತೀಚೆಗೆ ಅದಕ್ಕೆ ಸಿಕ್ಕಿರುವ ಹೊಸ ಹೆಸರು ‘ಹೋಂ ಮೇಕರ್’. ‘ಹೌಸ್ ವೈಫು’ ಅಂತ ಮೂಗು ಮುರಿಯುವುದಕ್ಕಿಂತ ಇದು ಒಳಿತು ಎನಿಸುತ್ತದೆ. ಆದರೂ ತಲೆತಲಾಂತರ
ದಿಂದ ಮನೆಯ ಜವಾಬ್ದಾರಿ ಹೊತ್ತು ಗಂಡ-ಮಕ್ಕಳನ್ನು ನೋಡಿಕೊಳ್ಳುವ ಮಹಿಳೆಗೆ ಈ ಸಮಾಜ ಅನ್ಯಾಯ ಮಾಡಿದೆ ಎನಿಸುತ್ತದೆ.

ತಿಂಗಳು ತಿಂಗಳು ಸಂಬಳ ತರುವ ಕೆಲಸ ಮಾಡುವ ಜನ ಮಾತ್ರ ಕೆಲಸ ಮಾಡುವವರು, ಸಂಬಳಕ್ಕಾಗಿ ದುಡಿಯದೇ ತಮ್ಮ ಆಸೆ ಆಕಾಂಕ್ಷೆಗಳು, ಆದ್ಯತೆಗಳನ್ನೆಲ್ಲ ಬದಿಗಿಟ್ಟು ಸಂಸಾರಕ್ಕಾಗಿ ದುಡಿಯುವವರ ಶ್ರಮಕ್ಕೆ ಬೆಲೆಯೇ ಇಲ್ಲ ಎಂಬಂತಿರುತ್ತದೆ ಕೆಲವರ ನಡವಳಿಕೆ. ಮನೆಯೊಳಗೆ ಮಹಿಳೆ (ಅವಳು ಅಮ್ಮ, ಅಕ್ಕ, ಅತ್ತಿಗೆ... ಹೀಗೆ ಯಾರೇ ಆಗಿರಬಹುದು) ಪ್ರತಿನಿತ್ಯ ಮಾಡುವ ಕೆಲಸವನ್ನು ಇಷ್ಟೇ ಎಂದು ಹೇಳಲು ಸಾಧ್ಯವೇ ಇಲ್ಲ.

ಸಾಮಾನ್ಯವಾಗಿ ಅವರು ಮನೆಯ ಇತರರು ಏಳುವ ಮುನ್ನ ಏಳಬೇಕು. ಹಾಸಿಗೆಯಲ್ಲಿ ಕುಳಿತೇ ‘ಕಾಫಿ’ ಎನ್ನುವವರಿಗೆ ಅವರ ಇಚ್ಛೆ ಪೂರೈಸಬೇಕು. ಬಾಗಿಲು ಸಾರಿಸಿ, ರಂಗೋಲಿ ಹಾಕಬೇಕು. ಮಕ್ಕಳನ್ನು ಹಾಸಿಗೆಯಿಂದ ಏಳಿಸಬೇಕು. ತಿಂಡಿ, ಅಡುಗೆ ಸಿದ್ಧಪಡಿಸಬೇಕು. ಸ್ನಾನ ಮಾಡಿಸಿ ಯೂನಿಫಾರ್ಮ್‌ ತೊಡಿಸಬೇಕು. ಹೆಣ್ಣುಮಕ್ಕಳಾದರೆ ತಲೆಬಾಚಿ, ರಿಬ್ಬನ್ನು ಕಟ್ಟಿ, ಕರವಸ್ತ್ರ ಕೈಗೆ ನೀಡುವವರೆಗೆ ಎಲ್ಲವೂ ಅಮ್ಮನ ಕೆಲಸ. ಆಮೇಲೆ ಲಗುಬಗೆಯಿಂದ ಊಟದ ಡಬ್ಬಿ ಕೈಗೆ ಕೊಟ್ಟು ಮಕ್ಕಳನ್ನು ಶಾಲೆಗೆ ಹೊರಡಿಸಬೇಕು.

ಸಣ್ಣ ಮಕ್ಕಳಾದರೆ ಎಲ್ಲಕ್ಕಿಂತ ಕಷ್ಟದ ಕೆಲಸ ಶಾಲೆಗೆ ಹೋಗುವ ಮುನ್ನ ಅವರಿಗೆ ತಿನ್ನಿಸುವುದು. ಅದಕ್ಕೆ ಏನೇನು ಸರ್ಕಸ್ಸು ಮಾಡಬೇಕು ಎಂಬುದು ತಾಯಂದಿರಿಗೆ ಮಾತ್ರ ಗೊತ್ತು! ನಾನು ಗಮನಿಸಿರುವಂತೆ, ಮಕ್ಕಳಿಗೆ ತಿಂಡಿ ತಿನ್ನಿಸುವ ಕೆಲಸವನ್ನು ಮಾತ್ರ ಯಾರ ಮನೆಯಲ್ಲೂ ಅಪ್ಪ ಮಾಡುವುದಿಲ್ಲ. ಅದು ಅಮ್ಮನಿಗೇ ಮೀಸಲಾದ ಕೆಲಸ. ಯಾಕೋ ಗೊತ್ತಿಲ್ಲ!

ಅಷ್ಟುಹೊತ್ತಿಗೆ ಕಚೇರಿಗೆ ಹೊರಡಲು ಬರುವ ಗಂಡ ಮಹಾಶಯನ ಎಲ್ಲಾ ಅಗತ್ಯಗಳನ್ನು ಪೂರೈಸಬೇಕಿ
ರುವುದು ಹೆಂಡತಿಯ ಕೆಲಸ. ಅಂತೂ ಬೆಳಿಗ್ಗೆ ಎದ್ದರೆ ರಾತ್ರಿ ಮಲಗುವವರೆಗೆ ಗಿರಿಗಿಟ್ಟಲೆ ತಿರುಗುವಂತೆ ಮನೆಯಲ್ಲಿ ಅಮ್ಮನ, ಹೆಂಡತಿಯ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆದರೆ ಹೆಚ್ಚಿನ ಮನೆಗಳಲ್ಲಿ ‘ನೀನು ತಿಂಡಿ ತಿಂದೆಯಾ?’, ‘ಊಟ ಮಾಡಿದೆಯಾ?’ ಎಂದು ಅವರನ್ನು ಯಾರೂ ಕೇಳುವವರಿಲ್ಲ. ಅಮ್ಮನಿಗೆ ಹುಷಾರಿಲ್ಲದಿದ್ದರೆ ಅವಳು ಕೈಲಾಗದೆ ಮಲಗುವವರೆಗೂ ಯಾರಿಗೂ ಅದು
ಗಮನಕ್ಕೇ ಬರುವುದಿಲ್ಲ.

ಎಲ್ಲಾ ಮನೆಗಳಲ್ಲಿ ಹೀಗೇ ನಡೆಯುತ್ತದೆ, ಎಲ್ಲಾ ಕಡೆ ಗಂಡಸರು ಅಮಾನವೀಯರೇ ಆಗಿರುತ್ತಾರೆ ಎಂದು ಹೇಳಲಾಗದು. ಆದರೆ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ಮನೆಯಲ್ಲಿ ಆಕೆ ಎಷ್ಟೆಲ್ಲ ಕೆಲಸ ಮಾಡುತ್ತಾಳೆ, ಅವಳ ಅನುಪಸ್ಥಿತಿಯಲ್ಲಿ ಆ ಎಲ್ಲ ಕೆಲಸಗಳನ್ನು ಮಾಡಲು ಎಷ್ಟು ಜನ ಬೇಕು ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅಷ್ಟಾಗಿಯೂ ಜನ ಹೇಳುವುದು ‘ಓ ಹೌಸ್ ವೈಫಾ’ ಎಂದು. ಅಂದರೆ ಕೆಲಸಕ್ಕೆ ಹೋಗುವುದಿಲ್ಲವೇ ಎಂಬ ಅರ್ಥದಲ್ಲಿ.

ಅವಳು ಮನೆಯಲ್ಲಿದ್ದೇ ಕೆಲಸಕ್ಕೆ ಹೋಗುವವರ ನಾಲ್ಕು ಪಟ್ಟು ಕೆಲಸ ಮಾಡುತ್ತಾಳೆ. ಇನ್ನು ಕೆಲಸಕ್ಕೆ ಹೋಗುವ ಹೆಂಗಸರು ಸಾಮಾನ್ಯವಾಗಿ ಮನೆಯಲ್ಲಿ ಇದೆಲ್ಲವನ್ನೂ ಮಾಡಿ ಮುಗಿಸಿ ಕೆಲಸಕ್ಕೆ ಹೋಗಬೇಕು. ನನ್ನ  ಮಹಿಳಾ ಸಹೋದ್ಯೋಗಿ ಒಬ್ಬರಿದ್ದರು. ಮೂವತ್ತು ವರ್ಷಗಳ ಹಿಂದೆ ಅವರು ದಿನನಿತ್ಯ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಕೆಲಸ ಮಾಡಿ ವಾಪಸ್‌ ಬರುತ್ತಿದ್ದರು. ಬಂದವರು ರಿಕ್ಷಾ ಹಿಡಿದು, ಹತ್ತು ಕಿ.ಮೀ. ದೂರದಲ್ಲಿದ್ದ ಮನೆಗೆ ಹೋಗಿ, ಮನೆಯವರಿಗೆ ಅಡುಗೆ ಮಾಡಬೇಕಿತ್ತು. ಮರುದಿನ ಬೆಳಿಗ್ಗೆ ಮತ್ತೆ ನಾಲ್ಕು ಗಂಟೆಗೆ ಎದ್ದು ಕುಟುಂಬದವರಿಗೆ ತಿಂಡಿ, ಮಧ್ಯಾಹ್ನದ ಊಟವನ್ನು ಸಿದ್ಧಪಡಿಸಿ ತಮಗೆ ಬುತ್ತಿ ಕಟ್ಟಿಕೊಂಡು ಮತ್ತೆ ರೈಲಿಗೆ ಹೊರಡಬೇಕಿತ್ತು. ಅವರು ಅಷ್ಟು ದೂರ ಹೋಗಿ ಬರುತ್ತಾರೆ ಎಂಬ ಕಾರಣಕ್ಕೆ ಮನೆಯವರೇನೂ ಆಕೆಯ ಕೆಲಸಗಳಲ್ಲಿ ನೆರವಾಗುತ್ತಿರಲಿಲ್ಲ.  ಈಗಲೂ ಪ್ರತಿನಿತ್ಯ ಕೆಲಸಕ್ಕಾಗಿ ಬೆಂಗಳೂರು- ಮೈಸೂರಿಗೆ ಓಡಾಡುವ ಮಹಿಳೆಯರು ತುಂಬಾ ಜನ ಇದ್ದಾರೆ. ಅವರ ಪ್ರಯಾಣದ ಅವಧಿ
ಸ್ವಲ್ಪಮಟ್ಟಿಗೆ ಕಡಿಮೆ ಆಗಿರಬಹುದು, ಆದರೆ ಕಷ್ಟ ಮಾತ್ರ ಕಡಿಮೆ ಆದಂತಿಲ್ಲ.

ಮನೆಯಲ್ಲಿ ತಾಯಿ, ಹೆಂಡತಿಯಂತಹ ಹಲವು ಪಾತ್ರಗಳನ್ನು ನಿರ್ವಹಿಸುವ ಹೆಣ್ಣುಮಕ್ಕಳು ಮಾಡುವ ದಿನನಿತ್ಯದ ಕೆಲಸಗಳಿಗೆ ಬೆಲೆ ಕಟ್ಟಲಾಗದು ಎಂಬ ಸತ್ಯ ನಮ್ಮವರಿಗೆ ಅರ್ಥವಾಗುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT