ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ – ಕನ್ನಡ ಕಲಿಕೆ: ಜಾರಿಕೊಳ್ಳುವುದೇಕೆ?

ಪಿಯುಸಿ ವಿದ್ಯಾರ್ಥಿಗಳು ಭಾಷೆಯನ್ನು ಆಯ್ದುಕೊಳ್ಳುವಾಗ, ಅದರ ಹಿಂದೆ ಇರುವ ಅವರ ಮನಃಸ್ಥಿತಿಯನ್ನು ಗಮನಿಸಬೇಕಾಗುತ್ತದೆ
Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ಪಿಯುಸಿ ವಿದ್ಯಾರ್ಥಿಗಳು ಯಾವುದೇ ಎರಡು ಭಾಷೆಗಳ ಆಯ್ಕೆಯ ವಿಷಯಕ್ಕೆ ಬಂದಾಗ, ಕನ್ನಡದ ಬಗ್ಗೆ ಅಸಹನೆ ಮತ್ತು ಆತಂಕ ವ್ಯಕ್ತಪಡಿಸುತ್ತಿರುವುದನ್ನು ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ.

ನನ್ನ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಇಂಗ್ಲಿಷ್ ಮತ್ತು ಕನ್ನಡವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಮುಂದೆ ತಮ್ಮ ತಂಗಿ, ತಮ್ಮ ಅಥವಾ ನೆರೆಕರೆಯವರನ್ನು ಪಿಯುಸಿಗೆ ಸೇರಿಸುವಾಗ, ಭಾಷೆಗಳ ವಿಷಯದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಅಥವಾ ಸಂಸ್ಕೃತವನ್ನು ಆಯ್ಕೆ ಮಾಡಿ ಕನ್ನಡವನ್ನು ದೂರ ಮಾಡುತ್ತಿದ್ದರು. ಹೀಗೇಕೆ ಎಂದು ಕೇಳಿದಾಗ ಮೂರು ಕಾರಣಗಳನ್ನು ಹೇಳಿದರು. ಕನ್ನಡ ಪರೀಕ್ಷೆಗೆ ಓದಲು ತುಂಬಾ ಪಾಠಗಳಿವೆ, ಬರೆಯಲು ಮೂರು ಗಂಟೆ ಸಾಲದು, ಎಷ್ಟು ಸರಿಯಾಗಿ ಬರೆದರೂ ಪೂರ್ಣ ಅಂಕ ಕೊಡುವುದಿಲ್ಲ.

ಕನ್ನಡದಲ್ಲಿ ಕೆಲವು ಪಾಠಗಳು ಅತಿ ದೀರ್ಘವಾಗಿರುವುದು ಮಾತ್ರವಲ್ಲದೆ ವಿದ್ಯಾರ್ಥಿಗಳ ಆಸಕ್ತಿಯನ್ನು ಅರಳಿಸುವಲ್ಲಿ ಸೋಲುತ್ತವೆ. ಇನ್ನು ಕನ್ನಡದಲ್ಲಿ ಹೆಚ್ಚು ಬರೆಯಬೇಕಾಗಿರುವುದರ ಕಷ್ಟ. ಎಷ್ಟೇ ವೇಗವಾಗಿ ಬರೆಯುವವರೂ ‘ನಮಗೆ ಮೂರು ಗಂಟೆ ಸಾಕಾಗದು’ ಎನ್ನುತ್ತಾರೆ. ಆದರೆ ಸಂಸ್ಕೃತ ಮತ್ತು ಹಿಂದಿ ಎರಡೂವರೆ ಗಂಟೆ ಬರೆದರೂ 100ಕ್ಕೆ 100 ಅಂಕ ಪಡೆಯಲು ಸಾಧ್ಯವಾಗುತ್ತದೆ. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಹೊಂದಿಸಿ ಬರೆಯುವುದು, ಸರಿಯಾದ ಉತ್ತರ ಆಯ್ಕೆ ಮಾಡುವುದು ಮತ್ತು ವಾಕ್ಯ ಕಂಡಿಕೆಗಳನ್ನು ಕೊಟ್ಟು ಅದರಿಂದ ಪ್ರಶ್ನೆ ಕೇಳಿ ಉತ್ತರ ಪಡೆಯುವ ರೀತಿ ಸುಲಭದಲ್ಲಿ ಅಂಕಗಳನ್ನು ಪಡೆಯುವ ಮಾದರಿಗಳಿವೆ. ಇಂಥ ಸೌಕರ್ಯಗಳು ಕನ್ನಡದಲ್ಲಿ ಇಲ್ಲ.

ಇನ್ನು, ಸಂಸ್ಕೃತ, ಹಿಂದಿಯಲ್ಲಿ 10 ವಿದ್ಯಾರ್ಥಿಗಳಿಗೆ ನೂರು ಅಂಕಗಳು ಬರುವಾಗ, ಕನ್ನಡದಲ್ಲಿ ಒಬ್ಬರಿಗೋ ಇಬ್ಬರಿಗೋ ನೂರು ಅಂಕಗಳು ಬರುತ್ತವೆ. ಇದಕ್ಕೆ ಕಾರಣಗಳು ಹಲವಾರು. ಮುಖ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆ. ಎಷ್ಟೋ ಮೌಲ್ಯಮಾಪಕರಿಗೆ ಯಾವ ಪ್ರಶ್ನೆಗೆ ಎಷ್ಟು ಉತ್ತರ ಹೇಗೆ ಬರೆಯಬೇಕೆಂದು ಗೊತ್ತಿಲ್ಲ. ನನ್ನ 15 ವರ್ಷಗಳ ಬೋಧನಾನುಭವದಲ್ಲಿ ಸುಮಾರು 18 ವಿದ್ಯಾರ್ಥಿಗಳಿಗೆ 100 ಅಂಕಗಳು ಬಂದಿವೆ. ಆದರೆ ನಿಜವಾಗಿ ಸಿಗಬೇಕಾದ ವಿದ್ಯಾರ್ಥಿಗಳಿಗೆ ಸಿಗದೆ ನಿರಾಸೆಯಾಗಿದೆ. ಉತ್ತರ ‍ಪತ್ರಿಕೆಗಳ ಛಾಯಾಪ್ರತಿ ತರಿಸಿ ನೋಡಿದರೆ, ಅಲ್ಲಿ 98, 99 ಅಂಕಗಳಲ್ಲಿ ನಿಲ್ಲಿಸಲಾಗಿರುತ್ತದೆ. ಅಲ್ಲಿ 1, 2 ಅಂಕಗಳನ್ನು ಕಳೆಯುವ ಯಾವ ತಪ್ಪೂ ಇರುವುದಿಲ್ಲ. ಒಮ್ಮೆ ಮೌಲ್ಯಮಾಪನ ಮಾಡುವಾಗ, ‘ಇದು ಯಾಕೆ 5 ಅಂಕಗಳನ್ನು ಕೊಡಬಹುದಾದಲ್ಲಿ 4 ಕೊಟ್ಟಿದ್ದೀರಿ, ಇದರಲ್ಲಿ ಏನೂ ತಪ್ಪಿಲ್ಲವಲ್ಲ’ ಎಂದು ಸಹ ಮೌಲ್ಯಮಾಪಕರನ್ನು ಕೇಳಿದ್ದೆ. ‘ಇರಲಿ ಬಿಡಿ ಸರ್’ ಎಂದು ಹೇಳಿ ತಮ್ಮ ಕೆಲಸದಲ್ಲಿ ತೊಡಗಿದ್ದರು.

ಮೌಲ್ಯಮಾಪಕರಲ್ಲಿನ ಇನ್ನೊಂದು ದುರ್ಗುಣ ಎಂದರೆ ಸೋಮಾರಿತನ. 98, 99, 100 ಅಂಕಗಳು ಬಂದ ಉತ್ತರಪತ್ರಿಕೆಗಳನ್ನು ವಿಶೇಷ ಪರಿವೀಕ್ಷಕರು ಪರಿಶೀಲಿಸಬೇಕು. ಉತ್ತರ ಪತ್ರಿಕೆಗಳನ್ನು ಪರಿವೀಕ್ಷಕರಿಗೆ ತಲುಪಿಸಿದ ಬಳಿಕ ಪರಿಶೀಲನೆಗಾಗಿ ಅವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಅದರ ಬದಲು ಅಂಕಗಳನ್ನು 97ಕ್ಕೆ ನಿಲ್ಲಿಸಿಬಿಟ್ಟರೆ ಸಮಸ್ಯೆಯೇ ಇರುವುದಿಲ್ಲ. ಇದನ್ನು ಸೋಮಾರಿತನವೊ ವ್ಯವಸ್ಥೆಯ ದೋಷವೊ ಏನೆಂದು ಕರೆಯುವುದು? ಅಂತೂ ಆ ಮಕ್ಕಳಿಗೆ ನೂರರ ಭಾಗ್ಯವಿಲ್ಲ.

ಉತ್ತರ ಪತ್ರಿಕೆಯ ಒಂದು ಲಕೋಟೆಯಲ್ಲಿ 12 ಉತ್ತರ ಪತ್ರಿಕೆಗಳಿರುತ್ತವೆ. ಇದನ್ನು ಸರಿಯಾಗಿ ಮೌಲ್ಯಮಾಪನ ಮಾಡಬೇಕಾದರೆ ಕನಿಷ್ಠ ಎರಡು ಗಂಟೆಯಾದರೂ ಬೇಕು. ಆದರೆ ಅರ್ಧಗಂಟೆಯಲ್ಲೇ ಮಾಡುವ ಪರಾಕ್ರಮಿಗಳು ಇದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ನಿಧಾನವಾಗಿ ಮೌಲ್ಯಮಾಪನ ಮಾಡುವವರನ್ನು ಅಪರಾಧಿಗಳಂತೆ ನೋಡಲಾಗುತ್ತದೆ. ಇಷ್ಟಾದರೂ ಪ್ರಾಮಾಣಿಕವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೌಲ್ಯಮಾಪನ ಮಾಡುವ ಕೆಲವು ಮೌಲ್ಯಮಾಪಕರು ಇದ್ದಾರೆ. ಅವರಿಂದಾಗಿಯೇ ಅದರ ಮೌಲ್ಯ ಇನ್ನೂ ಉಳಿದಿದೆ.

ಪ್ರತಿವರ್ಷ ಕನ್ನಡದಿಂದ ಜಾರುವವರ ಸಂಖ್ಯೆ ಜಾಸ್ತಿಯಾದರೆ ಅದರ ದೂರಗಾಮಿ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು. ಎಷ್ಟೋ ಜನ ಕನ್ನಡ ಅಧ್ಯಾಪಕರಿಗೆ ಉದ್ಯೋಗ ಇಲ್ಲದೇ ಹೋಗಬಹುದು. ಆಗ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಯಾರಿಗೆ ಬೋಧಿಸುವುದು ಎಂದು ಯೋಚಿಸಬೇಕು. ಯಾವುದೇ ಒಂದು ಭಾಷೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೊದಲ ಆದ್ಯತೆ ಅಂಕಗಳು. ಎರಡನೆಯದ್ದು ಸುಲಭ ಬರವಣಿಗೆ. ಕೊನೆಯದ್ದು ಭಾಷಾಭಿಮಾನ. ಇದು ಭಾಷೆ ಆಯ್ಕೆಯ ಹಿಂದೆ ಇರುವ ವಿದ್ಯಾರ್ಥಿಗಳ ಮನಃಸ್ಥಿತಿ.

ಇದಕ್ಕೆಲ್ಲಾ ಪರಿಹಾರ ಏನೆಂದು ಯೋಚಿಸಬೇಕು. ಪಿಯುಸಿ ಪಠ್ಯ ಮತ್ತು ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಆಗಬೇಕು. ಹಿಂದಿ, ಸಂಸ್ಕೃತದ ಮಾದರಿಯನ್ನು ಸ್ವಲ್ಪಮಟ್ಟಿಗೆ ಬಳಸಿಕೊಳ್ಳಬಹುದು. ಇದಲ್ಲದೆ ಪ್ರಶ್ನೆಪತ್ರಿಕೆಯ ಎಲ್ಲ ಪ್ರಶ್ನೆಗಳಿಗೂ ನುರಿತ ಪಿಯುಸಿ ಅಧ್ಯಾಪಕರಿಂದಲೇ ಕೇರಳದ ಮಾದರಿಯಲ್ಲಿ ‘ಅಧ್ಯಾಪಕರ ಕೈಪಿಡಿ’ ತಯಾರಾಗಬೇಕು. ಮೌಲ್ಯಮಾಪನದಲ್ಲಿ ಅಂಕಗಳನ್ನು ನೀಡುವುದಕ್ಕೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಹೀಗಾದರೆ ಮರುಮೌಲ್ಯಮಾಪನದಲ್ಲಿ ಬರುವ ಭಾರಿ ಅಂಕಗಳ ವ್ಯತ್ಯಾಸವನ್ನು ಸರಿಪಡಿಸಬಹುದು. ಇದು ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ, ಧೈರ್ಯ ಉಂಟು ಮಾಡುತ್ತದೆ. ಆಗ ಕನ್ನಡ ಕಲಿಕೆಯಿಂದ ಅರಿವು ಮತ್ತು ಆನಂದ ದೊರೆಯಬಹುದು.

(ಲೇಖಕ: ಕನ್ನಡ ಉಪನ್ಯಾಸಕ, ಆಳ್ವಾಸ್ ಕಾಲೇಜು, ಮೂಡುಬಿದಿರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT