ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಬಿಡುಗಡೆಯತ್ತ ವೈಧವ್ಯದ ಪರಿಭಾಷೆ

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಪರಿವರ್ತನೆಯು ಕಾಲಧರ್ಮದ ಮುಖ್ಯ ತತ್ವ. ಅದಕ್ಕೆ ಅನುಗುಣವಾಗಿ ವೈಧವ್ಯದ ಪರಿಕಲ್ಪನೆಗಳು ಸಹ ಕಾಲಾನುಕ್ರಮದಲ್ಲಿ ಬದಲಾಗುತ್ತಾ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ವೈಧವ್ಯದ ಕಟ್ಟಲೆ ಪಾಲನೆಗೆ ಸಂಬಂಧಿಸಿದಂತೆ ಇದ್ದ ಕಠೋರವಾದ ನೀತಿ ನಿಯಮಗಳು ಈಗ ಮೃದುವಾಗಿವೆ. ವೈಚಾರಿಕತೆ ಮುನ್ನೆಲೆಗೆ ಬಂದಿದೆ. ಹೀಗೆ, ವೈಧವ್ಯಕ್ಕೆ ಸಂಬಂಧಿಸಿದಂತೆ ಇದ್ದ ಕಟ್ಟುಪಾಡುಗಳು ಕ್ರಮೇಣ ಕಳಚಿ ಮಾನವೀಯತೆಯತ್ತ ಸಾಗಿದ್ದು ಖುಷಿ ತರುವ ಸಂಗತಿ.

ಇಂದಿನ ಸಮಾಜದಲ್ಲಿ ಮಹಿಳೆಯು ‘ವಿಧವೆ’ ಎಂದು ಪ್ರತ್ಯೇಕವಾಗಿ ಕಾಣಿಸಿಕೊಳ್ಳದೆ, ಎಲ್ಲರೂ ಇರುವಂತೆಯೇ ಇದ್ದು ಜೀವನ ಸಾಗಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಕೇಶಮುಂಡನ ಮಾಡಿಸಿಕೊಂಡು, ಸನ್ಯಾಸಿನಿಯಂತೆ ಕೆಂಪು ಸೀರೆಯನ್ನುಟ್ಟು, ಸ್ತ್ರೀತ್ವದ ಎಲ್ಲ ಉಡುಗೆ-ತೊಡುಗೆಗಳಿಂದ ವಂಚಿತಳಾಗಿ, ಕಣ್ಣೀರು
ಸುರಿಸುತ್ತಾ ಕತ್ತಲ ಕೋಣೆಯಲ್ಲಿ ಕುಳಿತಿರುತ್ತಿದ್ದ ಆ ಸ್ತ್ರೀ ಎಲ್ಲಿ, ಬಣ್ಣ ಬಣ್ಣದ ಸೀರೆಯುಟ್ಟು, ಹೂವು ಮುಡಿದು, ಕುಂಕುಮವಿಟ್ಟು, ಮಂಗಳಸೂತ್ರ ಧರಿಸಿ ಸಭೆ-ಸಮಾರಂಭಗಳಲ್ಲಿ, ಶುಭ ಕಾರ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇಂದಿನ ಈ ವಿಧವಾ ಸ್ತ್ರೀ ಎಲ್ಲಿ? ಅಜಗಜಾಂತರದಷ್ಟು ಬದಲಾವಣೆ!

ಜೂನ್ 23 ಅನ್ನು ಅಂತರರಾಷ್ಟ್ರೀಯ ‘ವಿಧವೆಯರ ದಿನ’ ಎಂದು ಆಚರಿಸಲಾಗುತ್ತಿದೆ. ಅಂದರೆ, ಸಮಾಜದಲ್ಲಿ ವಿಧವೆಯರು ಇಂದಿಗೂ ಸಂಕಷ್ಟದಲ್ಲಿದ್ದಾರೆ ಎಂದಂತಾಯಿತು. ಅವರನ್ನು ಸಮಾಜದಲ್ಲಿ ಗೌರವದ ದೃಷ್ಟಿಯಿಂದ ಕಾಣಬೇಕು, ಸ್ವಾಭಿಮಾನ ತುಂಬಬೇಕು, ವೈಚಾರಿಕ ಮನೋಭಾವ ಬೆಳೆಸಬೇಕು,
ಸರ್ಕಾರಗಳಾಗಲಿ, ಪ್ರಗತಿಪರ ವಿಚಾರಧಾರೆಯ ಸಂಘ– ಸಂಸ್ಥೆಗಳಾಗಲಿ ಸಹಾಯಹಸ್ತ ನೀಡಬೇಕು. ಇದು ಇಂತಹದ್ದೊಂದು ದಿನಾಚರಣೆಯ ಉದ್ದೇಶವಾಗಿದೆ.

ಚರಿತ್ರೆಯ ಪುಟಗಳನ್ನು ತಿರುವಿದರೆ, ವೇದ ಕಾಲದಲ್ಲಿ ಪುರುಷರಂತೆ ಸ್ತ್ರೀಯರಿಗೂ ಸರಿಸಮನಾದ ಶಿಕ್ಷಣ ನೀಡಲಾಗುತ್ತಿತ್ತು, ವಿಧವೆಯರಿಗೆ ಮರು ಮದುವೆಯ ವ್ಯವಸ್ಥೆ ಇತ್ತು ಎಂಬಂತಹ ವಿವರಗಳು ಕಾಣಸಿಗುತ್ತವೆ. ಆ ನಂತರದ ಸ್ಮೃತಿ ಯುಗದ ಮನು ಮಹರ್ಷಿಯ ಆದೇಶಗಳ ಅನುಸಾರವಾಗಿ ಸ್ತ್ರೀಯರನ್ನು ಗೌಣದೃಷ್ಟಿಯಲ್ಲಿ ನೋಡುವ ಪರಿಪಾಟ ಆರಂಭವಾಯಿತು. ಪತಿಯ ಮರಣಾನಂತರ ಸತಿಯ ಮೇಲೆ ನಿರ್ದಯವಾದ ಕಟ್ಟಲೆಗಳನ್ನು ಹೇರಲಾಗಿತ್ತು. ಆಕೆಯ ಮುಖದರ್ಶನವೇ ಅಶುಭವೆಂದು ಧಾರ್ಮಿಕ ಆಚರಣೆ, ಮಂಗಳಕಾರ್ಯಗಳಲ್ಲಿ ಪ್ರವೇಶ ನೀಡಲಾಗುತ್ತಿರಲಿಲ್ಲ. ಆಸ್ತಿಯ ಹಕ್ಕನ್ನು ನೀಡದೆ ಎಷ್ಟೋ ಸಲ ಮನೆಯಿಂದ ಆಚೆಗೆ ಅಟ್ಟಿಬಿಡಲಾಗುತ್ತಿತ್ತು. ಆಗ ಆಕೆ ಭಿಕ್ಷೆ ಬೇಡುವ ಇಲ್ಲವೇ ವೇಶ್ಯಾವೃತ್ತಿಗೆ ಇಳಿಯುವ ದಾರುಣ ಸ್ಥಿತಿಗೆ ತಲುಪುತ್ತಿದ್ದಳು.

ಶತಮಾನಗಳು ಉರುಳಿದವು, ಸಮಾಜದಲ್ಲಿ ಆಮೂಲಾಗ್ರ ಪರಿವರ್ತನೆಗಳಾದವು. ರಾಜಾರಾಮ್ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ ಅವರಂಥ ಸಮಾಜ ಸುಧಾರಕರು ‘ಸತಿಪದ್ಧತಿ’ಯ ನಿಷೇಧಕ್ಕಾಗಿ ಹೋರಾಡಿದ್ದರ ಫಲವಾಗಿ, ಆಗಿನ ಬ್ರಿಟಿಷ್‌ ಸರ್ಕಾರವು ಸತಿಪದ್ಧತಿಯನ್ನು ನಿಷೇಧಿಸಿತು. ವಿಧವೆಯರ ಮರುಮದುವೆಗೆ ಪೂರಕವಾಗಿ ಕಾಯ್ದೆಗಳನ್ನು ಜಾರಿಗೊಳಿಸಿತು. ವೈಚಾರಿಕತೆ ಮತ್ತು ವೈಜ್ಞಾನಿಕತೆ ಮುಂಚೂಣಿಯಲ್ಲಿದ್ದ 20ನೇ ಶತಮಾನದಲ್ಲಿ ಮಹಿಳಾಪರವಾದ ಹಲವಾರು ಸಮಾಜ ಸುಧಾರಕರ ಪ್ರಯತ್ನಗಳ ಭಾಗವಾಗಿ ಸ್ತ್ರೀ ಶಿಕ್ಷಣಕ್ಕೆ ಪ್ರಚಾರ ದೊರೆಯಿತು. ಮಹಿಳೆಯರಲ್ಲಿ ಈ ಸಂಬಂಧ ಜಾಗೃತಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ನಡೆಸಿದ ನಿರಂತರ ಹೋರಾಟದ ಫಲವಾಗಿ ವಿಧವೆಯರು ಸುಶಿಕ್ಷಿತರಾಗಿ, ಉದ್ಯೋಗಸ್ಥರಾಗಿ ಸ್ವತಂತ್ರವಾಗಿ ಜೀವನ ನಡೆಸುತ್ತಾ ನೆಮ್ಮದಿಯಿಂದ ಬಾಳತೊಡಗಿದರು.

ಪ್ರಗತಿಪಥದಲ್ಲಿರುವ ಇಂದಿನ ಭಾರತದಲ್ಲಿ ವಿಧವೆಯರಿಗೆ ಸಂಬಂಧಿಸಿದಂತೆ, ಸಮಾಜಕ್ಕೆ ಕಳಂಕ ತರುವಂಥ ಕೆಲ ವಿದ್ಯಮಾನಗಳೂ ಚಾಲ್ತಿಯಲ್ಲಿವೆ. ಉತ್ತರಪ್ರದೇಶದಲ್ಲಿನ ಬೃಂದಾವನದಲ್ಲಾಗಲಿ, ಕಾಶಿಯಲ್ಲಾಗಲಿ ಆಶ್ರಯ ಪಡೆದ ಸಾವಿರಾರು ವಿಧವೆಯರ ಸ್ಥಿತಿ ಚಿಂತಾಜನಕವಾಗಿದೆ. ಊಟ, ಉಡುಗೆ, ಸೂಕ್ತ ವಸತಿ ವ್ಯವಸ್ಥೆ ಇಲ್ಲದ್ದರಿಂದ ಅವರು ಭಿಕ್ಷಾಟನೆ ಮಾಡುತ್ತಾ ಬೀದಿಗಳಲ್ಲಿ ವಾಸವಾಗಿದ್ದಾರೆ. ಅವರ ಇಂಥ ಹೀನಾಯ ಸ್ಥಿತಿಗೆ ಸರ್ಕಾರವಾಗಲಿ, ಸಮಾಜವಾಗಲಿ ಸ್ಪಂದಿಸದಿರುವುದು ಅತ್ಯಂತ ವಿಷಾದದ ಸಂಗತಿ. ವಿಧವೆಯರ ಸಂಕಟದ ಕಥೆಯ ಮುಂದುವರಿದ ಭಾಗ ಎಂಬಂತೆ, ಇಂದು ದೌರ್ಜನ್ಯಕ್ಕೆ ಒಳಗಾದ ಸತಿಯರು, ಪತಿಯನ್ನು ತೊರೆದ ಅನೇಕ ಪತ್ನಿಯರು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಆಧುನಿಕ ವಿಚಾರಧಾರೆಯ ಕೆಲವು ಮಹಿಳೆಯರು ವಿವಾಹವನ್ನು ನಿರಾಕರಿಸಿ, ಏಕಾಂಗಿಯಾಗಿ ಇರುವುದೇ ಮೇಲೆಂದು ಭಾವಿಸಿದ್ದಾರೆ. ಇಂಥವರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ‘ವಿಧವಾ ದಿನಾಚರಣೆ’ಯ ಈ ಸಂದರ್ಭದಲ್ಲಿ ಇಂದಿನ ಪ್ರಜ್ಞಾವಂತ ಸಮುದಾಯ ಬಯಸುವುದೆಂದರೆ, ವಿಧವೆಯರಿಗಾಗಿ ಹಾಗೂ ದುರಾಚಾರಿ ಪತಿಯನ್ನು ತ್ಯಜಿಸಿದ ಮಹಿಳೆಯರಿಗಾಗಿ ಸರ್ಕಾರವಾಗಲಿ, ಪ್ರಗತಿಪರ ಸೇವಕರಾಗಲಿ ಸಹಾನುಭೂತಿಯಿಂದ ಉದ್ಯೋಗಗಳನ್ನು ಕಲ್ಪಿಸಬೇಕು. ಈ ಮೂಲಕ ಅವರನ್ನು ಅರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಸುರಕ್ಷತೆಯನ್ನು ಖಾತರಿಗೊಳಿಸಿ, ಅವರಲ್ಲಿ ಧೈರ್ಯ ತುಂಬಬೇಕು. ಈ ದಿಸೆಯಲ್ಲಿ ಇಡೀ ಸಮಾಜವೇ ಸಕ್ರಿಯವಾಗಬೇಕಿದೆ.

ಒಟ್ಟಾರೆ, ಇಂದಿನ ನಮ್ಮ ಮಹಿಳೆಯರು ಸ್ವಾವಲಂಬಿಗಳಾಗಿ, ಸ್ವಾಭಿಮಾನದ ಬಾಳನ್ನು ಕಟ್ಟಿಕೊಳ್ಳಬೇಕಿದೆ. ಪರಂಪರಾಗತವಾಗಿ ಬಂದ ವೈಧವ್ಯದ ಪರಿಕಲ್ಪನೆ ಇಂದು ಅರ್ಥ ಕಳೆದುಕೊಂಡಿದೆಯಾದ್ದರಿಂದ, ಅದನ್ನು ಸಂಪೂರ್ಣವಾಗಿ ತ್ಯಜಿಸಿ ಮುನ್ನಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT