ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹದಿಹರೆಯ: ಬೇಕಿದೆ ಸಹಾಯ

ಎಚ್.ಬಿ.ಚಂದ್ರಶೇಖರ್‌
Published 17 ಮಾರ್ಚ್ 2024, 23:31 IST
Last Updated 17 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ಕೆಲ ದಿನಗಳ ಹಿಂದೆ ಪ್ರೌಢಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ ಗಮನಿಸಿದ ಅಂಶ ನನ್ನನ್ನು ಚಿಂತನೆಗೆ ಹಚ್ಚಿತು. ಕೆಲ ಶಿಕ್ಷಕರು ಆಯ್ದ ಕೆಲ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಲಘು ಶಿಕ್ಷೆ ನೀಡುತ್ತಿದ್ದುದನ್ನು ಗಮನಿಸಿದೆ. ಈ ಬಗ್ಗೆ ಪ್ರಸ್ತಾಪಿಸದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ ಹೋದಂತೆ ವಿಷಯದ ಅರಿವಾಯಿತು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೊಂದಿರುವ ಬಿಗಿ ಧೋರಣೆಯ ಪರಿಣಾಮ, ಶಿಕ್ಷಕರು ಹಾಗೂ ಕೆಲ ವಿದ್ಯಾರ್ಥಿಗಳ ನಡುವೆ ಕಂದಕ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳನ್ನು ಶಿಸ್ತಿಗೆ ಒಳಪಡಿಸುವ ಪ್ರಯತ್ನಗಳು ಫಲ ಕೊಡದೇ ತಿರುಗುಬಾಣವಾಗಿ ಕೆಲಸ ಮಾಡಿವೆ. ವಿದ್ಯಾರ್ಥಿಗಳು ಶಾಲೆಯ ಡೆಸ್ಕ್‌, ತರಗತಿ ಕೋಣೆಯ ಸ್ವಿಚ್‌, ಪ್ರೊಜೆಕ್ಟರ್‌ ಸಂಪರ್ಕಿಸುವ ವೈರ್‌ಗಳನ್ನು ಹಾಳು ಮಾಡುವಂತಹ ಹಾನಿಕಾರಕ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ತಿಳಿಯಿತು.

ಶಾಲೆಯ ತರಗತಿ ಕೋಣೆಗಳಲ್ಲಿ ಶುಚಿತ್ವ ಕಾಪಾಡುವ ವಿಷಯದಲ್ಲಿ ಶಿಕ್ಷಕರಿಗೆ ಸಹಕಾರ ನೀಡದೆ ಪೇಪರ್‌, ಚಾಕೊಲೇಟ್‌ ಹಾಳೆ, ಪೆನ್ಸಿಲ್‌ ಚೂಪು ಮಾಡಿದಾಗ ಬರುವ ಚೂರುಗಳನ್ನು ಎಲ್ಲೆಡೆ ಬಿಸಾಕುತ್ತಾರೆ. ಇದನ್ನು ಹತ್ತನೇ ತರಗತಿಯೊಂದರಲ್ಲಿ ನಾನು ಪ್ರಸ್ತಾಪಿಸುತ್ತಾ, ‘ನಿಮ್ಮ ತರಗತಿ ದೇವಾಲಯವಿದ್ದಂತೆ. ದೇವಸ್ಥಾನ, ಚರ್ಚ್‌, ಮಸೀದಿಯಲ್ಲಿ ನಾವು ಸ್ವಚ್ಛತೆ ಕಾಣುತ್ತೇವೆ ಅಲ್ಲವೇ? ನಿಮ್ಮ ಮನೆಯ ಪೂಜಾಗೃಹವೂ ಸ್ವಚ್ಛವಾಗಿರುತ್ತದೆ. ವಿದ್ಯೆಯನ್ನು ಪಡೆಯುವ ಈ ಜಾಗವೂ ಪವಿತ್ರವಾದ ದೇವಾಲಯದಂತೆ. ಇದನ್ನು ನಾವು ಸ್ವಇಚ್ಛೆಯಿಂದ ಶುಚಿಯಾಗಿ ಇಟ್ಟುಕೊಳ್ಳಬೇಕಲ್ಲವೇ?’ ಎಂದು ಕೇಳಿದೆ. ಅವರೊಂದಿಗೆ ಸಂವಾದಿಸುತ್ತಾ ಒಂದಷ್ಟು ಪ್ರೀತಿ, ಆತ್ಮೀಯತೆಯಿಂದ ತಿಳಿಹೇಳಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರ ಗಮನವನ್ನೂ ಸ್ವಚ್ಛತೆಯ ಪ್ರಾಮುಖ್ಯತೆಯತ್ತ ಸೆಳೆದೆ. ಶಾಲೆಯ ಭೇಟಿ ಮುಗಿಸಿ ಹೊರಡುವ ವೇಳೆ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು ‘ಸರ್‌, ಈಗ ನಮ್ಮ ತರಗತಿ ನೋಡಬನ್ನಿ’ ಎಂದ. ನಾನು ತರಗತಿ ಕೋಣೆಯ ಶುಚಿತ್ವ ನೋಡಿ ಬೆರಗಾದೆ. ‘ಸರ್‌, ಶಾಲೆಯ ಸ್ವಚ್ಛತಾ ಕೆಲಸಗಾರರ ಜೊತೆ ನಾವೂ ಕೈಜೋಡಿಸಿ ಶುಚಿ ಮಾಡಿದ್ದೇವೆ. ಇನ್ನು ಮುಂದೆ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ, ಸ್ವಚ್ಛತೆ ಕಾಪಾಡುತ್ತೇವೆ’ ಎಂದ.

ಸಾಮಾನ್ಯವಾಗಿ ಪ್ರೌಢಶಾಲೆಗಳಲ್ಲಿ ಸ್ವಲ್ಪ ಹಿರಿಯ ವಿದ್ಯಾರ್ಥಿಗಳೊಂದಿಗೆ ಒಡನಾಡುವಾಗ ಶಿಕ್ಷಕರು ಸೂಕ್ಷ್ಮವಾಗಿ ವರ್ತಿಸದೇ ಇರುವುದು ಕಂಡುಬರುತ್ತದೆ. ಬಿ.ಇಡಿಯಲ್ಲಿ ಸೈದ್ಧಾಂತಿಕವಾಗಿ ಕಲಿತ ಶೈಕ್ಷಣಿಕ ಮನೋವಿಜ್ಞಾನದ ಪಾಠವನ್ನು ಶಿಕ್ಷಕರಾದ ಮೇಲೆ ಪ್ರಾಯೋಗಿಕವಾಗಿ ಅನುಸರಿಸಲು ಕೆಲವರು ಮುಂದಾಗುವುದಿಲ್ಲ. ಆಗ ಶಿಕ್ಷಕ–ವಿದ್ಯಾರ್ಥಿಗಳ ಗುಂಪುಗಳು ‘ನಾನೊಂದು ತೀರ, ನೀನೊಂದು ತೀರ’ ಎಂಬಂತಾಗಿಬಿಡುವ ಅಪಾಯ ಇರುತ್ತದೆ.

ಪ್ರಾಥಮಿಕ ಶಾಲೆಯಲ್ಲಿ ನಲಿ–ಕಲಿ ಪದ್ಧತಿಯಡಿ ಆಪ್ತವಾಗಿ ಮಕ್ಕಳೊಂದಿಗೆ ಒಡನಾಡುತ್ತಾ ಕಲಿಸುವ ಶಿಕ್ಷಕರು, ಮಕ್ಕಳು ಬೆಳೆಯುತ್ತಾ ಹೋದಂತೆ ಅವರಲ್ಲಿ ಮೊಳೆಯುವ ಸ್ವಂತಿಕೆ, ಸ್ವಾಭಿಮಾನದ ಗುಣಗಳಿಗೆ ಮನ್ನಣೆ ನೀಡುವುದನ್ನು ಕಲಿಯದಿದ್ದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಅದರಲ್ಲೂ ಮಕ್ಕಳು 9 ಅಥವಾ 10ನೇ ತರಗತಿ ತಲುಪಿದಾಗ ಅವರಲ್ಲುಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ತಕ್ಕಂತೆ ಒಡನಾಡಬೇಕಾದ ಸೂಕ್ಷ್ಮ ಮನೋಭಾವ, ಸಂವೇದನೆಗಳನ್ನು ಶಿಕ್ಷಕರು ಹೊಂದುವುದು
ಅನಿವಾರ್ಯವಾಗುತ್ತದೆ. ಈ ಹಂತದಲ್ಲಿ ಮಕ್ಕಳೊಂದಿಗೆ ಸ್ನೇಹ, ಪ್ರೀತಿಯಿಂದ ವರ್ತಿಸಿದಷ್ಟೂ ಅವರು ಶಿಕ್ಷಕರಿಗೆ ಹತ್ತಿರವಾಗುತ್ತಾರೆ. ಹದಿಹರೆಯದ ಮಕ್ಕಳು ವಯೋಸಹಜವಾಗಿ ತೋರುವ ವರ್ತನೆಗಳಿಗೆ ತಕ್ಕಂತೆ ಶಿಕ್ಷಕರು ಹಾಗೂ ಪೋಷಕರು ಸ್ಪಂದಿಸಬೇಕಾದ ವಿಧಾನ, ಕೌಶಲಗಳನ್ನು ಅರಿಯಬೇಕು. ಇಲ್ಲದೇ
ಹೋದಲ್ಲಿ ಪೋಷಕರು ಹಾಗೂ ಶಿಕ್ಷಕರಿಂದ ಮಕ್ಕಳು ದೂರ ಸರಿಯುತ್ತಾ ಹೋಗುತ್ತಾರೆ. ಇದರಿಂದ ಮಕ್ಕಳ ಭವಿಷ್ಯ ಮಸುಕಾಗುವ ಅಪಾಯ ಇರುತ್ತದೆ.

ಭಾವನೆಗಳ ನಿರ್ವಹಣೆ, ಪ್ರತಿರೋಧಗಳ ಸ್ವ ನಿಯಂತ್ರಣ, ನಿರ್ಧಾರ ಕೈಗೊಳ್ಳುವಂತಹ ಕಾರ್ಯಗಳಿಗೆ ನೆರವಾಗುವ ಮೆದುಳಿನ ಭಾಗ ಹದಿಹರೆಯದವರಲ್ಲಿ ಪೂರ್ಣವಾಗಿ ಬೆಳವಣಿಗೆಯಾಗದ ಕಾರಣ ಅವರು ವಿಭಿನ್ನವಾಗಿ ವರ್ತಿಸುತ್ತಾರೆ. ಇದರಿಂದ ಪರಿಣಾಮಗಳ ಅರಿವಿಲ್ಲದೆ ಪೋಷಕರು ಹಾಗೂ ಶಿಕ್ಷಕರಿಗೆ ಎದುರು ಮಾತನಾಡುವುದು, ಅವಿಧೇಯವಾಗಿ ವರ್ತಿಸುವುದನ್ನು ಮಾಡುತ್ತಾರೆ. ಇಂತಹ ಸನ್ನಿವೇಶಗಳಲ್ಲಿ
ತಮ್ಮ ಅಹಂಗೆ ಗಾಸಿಯಾದ ವಯಸ್ಕರೂ ಕೆರಳಿ ನಿಂತರೆ ಪರಿಸ್ಥಿತಿ ಹದಗೆಡುತ್ತದೆ. ಶಿಕ್ಷಕರು ಹಾಗೂ ಪೋಷಕರಿಗಿರುವ ಅಧಿಕಾರಸ್ಥ ಸ್ಥಾನದ ಕಾರಣ ಅವರು ವಿಧಿಸುವ ನಿಯಮವನ್ನು ತೋರಿಕೆಗಾಗಿ ಪಾಲಿಸಿದಂತೆ ಕಾಣುತ್ತದೆ. ಶಿಕ್ಷಕರು, ಪೋಷಕರ ಅನುಪಸ್ಥಿತಿಯಲ್ಲಿ ವಸ್ತುಗಳನ್ನು ಹಾಳು ಮಾಡುವುದು ಅಥವಾ ಸ್ನೇಹಿತರೊಂದಿಗೆ ಗುಂಪು ಸೇರಿಕೊಂಡು ಅಶಿಸ್ತಿನಿಂದ ವರ್ತಿಸುವುದು ಮಾಡುತ್ತಾರೆ.

ಹದಿಹರೆಯದವರ ವರ್ತನೆಗೆ ನಮ್ಮ ಕಟುಮಾತು, ವರ್ತನೆಯಿಂದ ಪ್ರತಿಕ್ರಿಯಿಸದೆ ತಾಳ್ಮೆ ವಹಿಸುವುದನ್ನು ಕಲಿಯಬೇಕು. ಶಾಂತ ಪರಿಸ್ಥಿತಿಯಲ್ಲಿ ಅವರೊಂದಿಗೆ ಸಂವಹನ ಮಾಡಬೇಕು. ಅವರಲ್ಲಿರುವ ಉತ್ತಮ ವರ್ತನೆಗಳನ್ನು ಗುರುತಿಸಿ, ಪ್ರಶಂಸಿಸಬೇಕು. ಗುಂಪಿನಲ್ಲಿ ತೀವ್ರ ಅಶಿಸ್ತು ತೋರುವ ವಿದ್ಯಾರ್ಥಿಯೊಡನೆ ವೈಯಕ್ತಿಕವಾಗಿ ಆತ್ಮೀಯತೆಯಿಂದ ಸಮಾಲೋಚಿಸಬೇಕು. ಸಂದಿಗ್ಧ, ಉದ್ವೇಗ, ಆತಂಕದ ಗೂಡಿನಂತಿರುವ ಹದಿಹರೆಯದವರಿಗೆ ಸಹಾಯ ಬೇಕಿರುತ್ತದೆಯೇ ವಿನಾ ಶಿಕ್ಷೆಯಲ್ಲ ಎಂಬುದನ್ನು ಮನಗಾಣಬೇಕು.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT