ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಕ್ಕಳಿಗೆಂದೂ ಮನೆಯೇ ಮಾದರಿ

ಮಕ್ಕಳಲ್ಲಿ ಜೀವಪರತೆ ಮತ್ತು ಜೀವನೋತ್ಸಾಹವನ್ನು ಮೂಡಿಸಲು ಮನೆ ಯಶಸ್ವಿಯಾದರೆ ಅದು ದೊಡ್ಡ ಗೆಲುವು
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಶಾಲಾಕಾಲೇಜಿನ ಪೋಷಕರ ಸಭೆಯ ನಂತರ ಶಿಕ್ಷಕ ವಲಯದಲ್ಲಿ ವ್ಯಕ್ತವಾಗುವ ಅಭಿಪ್ರಾಯದಲ್ಲಿ ಸಾಮ್ಯತೆ ಇರುತ್ತದೆ. ಸಭೆಯಲ್ಲಿ ಕಲಿಕೆಗಿಂತಲೂ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವುದು ಮಕ್ಕಳ ನಡವಳಿಕೆಯ ವಿಷಯ. ತಮ್ಮದೇ ಮನೆಮಕ್ಕಳು ಜವಾಬ್ದಾರಿ ಮರೆವ ರೀತಿ, ವರ್ತನೆಯಲ್ಲಿ ತೋರುತ್ತಿರುವ ಅನಾದರ, ಅಗೌರವದ ಬಗೆಗಿನ ಬಹುತೇಕ ಪೋಷಕರ ಅಳಲು, ಆತಂಕವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಅಪಾರ ಕಾಳಜಿಯಿಂದ, ಜೀವಿತದುದ್ದಕ್ಕೂ ನಿದ್ದೆಗೆಟ್ಟು, ಅನ್ನನೀರು ಬಿಟ್ಟು ಸಾಕಿ ಸಲಹಿ, ಅಷ್ಟಿಷ್ಟು ಸಂಪಾದಿಸಿದುದರ ಶ್ರಮವ ನೆನೆಯದೆ, ಮೌಲ್ಯವನ್ನರಿಯದೆ ಹೋಗುತ್ತಿರುವ ಪರಿಯೇ ಅವರ ಅಚ್ಚರಿ.

ಬುದ್ಧಿಮಾತು ಹೇಳುವುದು ಹಾಗಿರಲಿ, ತಾವು ‌ಬಯಸಿದ್ದನ್ನು ಆ ಹೊತ್ತಿಗೇ ದಕ್ಕಿಸಿಕೊಳ್ಳಲು ರಚ್ಚೆ
ಹಿಡಿಯುವ ತಮ್ಮದೇ ಮಕ್ಕಳೆದುರು ಮಂಡಿಯೂರಬೇಕಾದ ಅಸಹಾಯಕ ಪರಿಸ್ಥಿತಿ ಹೆತ್ತವರದು. ಅನು
ಕೂಲಸ್ಥ ಕುಟುಂಬಗಳ ಗೋಳು ಇನ್ನೂ ಹೆಚ್ಚಿನದು.

ಮಕ್ಕಳ ಅಸಹಜ ವರ್ತನೆಗೆ ಕಾರಣವೂ ಸ್ಪಷ್ಟ. ಸರಳ, ಸಂತೃಪ್ತ ಜೀವನಶೈಲಿ, ಮಾನವೀಯ ಮೌಲ್ಯ
ಗಳನ್ನು ಮರೆತು ದುಡ್ಡಿನ ಹಿಂದೆ ದಿಕ್ಕೆಟ್ಟು ಓಡುವ ಜನಮನದಲ್ಲಿ ಬೇರೂರಿದ ಧನದಾಹ, ಯಾಂತ್ರಿಕ ಜೀವನಕ್ರಮವು ಬಾಂಧವ್ಯದ ತಂತುವನ್ನು ಸಡಿಲಗೊಳಿಸುತ್ತಿದೆ. ಅನಿವಾರ್ಯ ಎಂಬಂತೆ ಎಳವೆಯಲ್ಲೇ ಮಕ್ಕಳನ್ನು ಕಾನ್ವೆಂಟ್ ಸಂಸ್ಕೃತಿಗೆ ತಳ್ಳಿ, ಮೆರಿಟ್ಟು–ರ್‍ಯಾಂಕ್, ನೀಟ್, ಜೆಇಇ ಎಂಬ ಭ್ರಮೆಯಲ್ಲಿ ಅಪರಿಮಿತ ಒತ್ತಡ ಹೇರುತ್ತಾ, ಮಕ್ಕಳನ್ನೂ ಯಾಂತ್ರಿಕ ಬದುಕಿಗೆ ನೂಕುತ್ತಿರುವ ಮತಿಭ್ರಾಂತ ಸನ್ನಿವೇಶ ಇಂದಿನದು. ಯಂತ್ರಗಳೇ ನಮ್ಮನ್ನಾಳುತ್ತಿರುವ ಡಿಜಿಟಲ್ ಯುಗ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಮರುಳಲ್ಲಿ ತೇಲುತ್ತಿರುವ ನಾವು ಬಾಯಿಮಾತಿಗಷ್ಟೇ ದೇಶಭಕ್ತರು. ಸಹಜತೆ, ಮುಕ್ತತೆ ಮರೆಯಾಗಿ ಪ್ರೀತಿ, ವಿಶ್ವಾಸದ ಜಾಗದಲ್ಲೀಗ ಸ್ವಾರ್ಥ, ಪ್ರತಿಷ್ಠೆಗಳ ಮೆರೆದಾಟವಿದೆ. ಮಕ್ಕಳಿಗೆ ನೆಲದ ನಂಟನ್ನೂ ಕೂಡುಕುಟುಂಬದ ಒಡನಾಟವನ್ನೂ ವಂಚಿಸಿದ ಹೆತ್ತವರದು ಸ್ವಯಂಕೃತ ಅಪರಾಧವೂ ಹೌದು. ಹಾಗಾಗಿಯೇ, ಮಕ್ಕಳನ್ನು ತಿದ್ದಿತೀಡಿ ಪೊರೆಯಬೇಕಾದ ಕುಟುಂಬಗಳು ತಮ್ಮ ವೈಭವ ಹಾಗಿರಲಿ ಸಹಜ ಗುಣಚೈತನ್ಯವನ್ನೂ ಕಳೆದುಕೊಂಡು ನಿತ್ರಾಣಗೊಳ್ಳುತ್ತಿರುವುದು.

ಖಲೀಲ್ ಗಿಬ್ರಾನ್  ಹೇಳುವಂತೆ ‘ಬಿಲ್ಲು ಬಾಗಿದಷ್ಟೂ ಬಾಣ ಮುಂದೆ ಹೋಗುತ್ತದೆ...’ ಆರೋಗ್ಯಕರ ಅಭ್ಯಾಸ– ಹವ್ಯಾಸಗಳಿಗೆ ಮೊದಲ ಪ್ರೇರಣೆ, ಪೋಷಣೆ ದೊರಕಬೇಕಾದದ್ದು ಮನೆ ಮಂದಿಯಿಂದಲೇ. ಮೊಬೈಲ್ ಫೋನ್‌, ಟಿ.ವಿ. ರಿಮೋಟುಗಳನ್ನು ತಾವು ಹಿಡಿದುಕೊಂಡು, ಮಕ್ಕಳ ಕೈಲಿ ಪುಸ್ತಕವಿರಲಿ ಎಂದು ಬಯಸುವುದು ನಿರರ್ಥಕ. ಮಕ್ಕಳಿಗೆ ಸಂಸ್ಕಾರ, ಹೊಣೆಗಾರಿಕೆ ಮತ್ತು ಆತ್ಮವಿಶ್ವಾಸವನ್ನು ಬಿತ್ತಬೇಕಾದ ಮೊದಲ ಪ್ರಶಸ್ತ ಜಾಗವೇ ಮನೆ. ಬಾಂಧವ್ಯದ ಹಿಗ್ಗು ಮತ್ತು ಗುರುಹಿರಿಯರೆಡೆಗಿನ ಸನ್ನಡತೆಯ ಮಾದರಿಗಳು ಒಡಮೂಡಬೇಕಾದದ್ದು ಅಲ್ಲಿಯೇ. ಹಾಗಾಗಿ, ಬಂಧುಮಿತ್ರರ ಮನೆಗಳಿಗೆ ಪರಸ್ಪರ ಭೇಟಿ ನೀಡುವ, ಆ ಕುಟುಂಬಗಳೊಟ್ಟಿಗೆ ಆಗಾಗ ಕೂಡಿ ಕಲೆಯುವ ಪರಿಪಾಟವನ್ನು ಬೆಳೆಸಿಕೊಳ್ಳುವುದು
ಅವಶ್ಯಕ. ಮನೆಯ ಹೊಸ್ತಿಲಿಗೆ ಬಂದುನಿಂತ ಅತಿಥಿಗಳನ್ನು ಒಳಕರೆದು ಸತ್ಕರಿಸುವ ನಡೆನುಡಿಗಳು ಇಂದಿನ
ಮಕ್ಕಳಲ್ಲಿ ಮಾಯವಾಗಿರುವುದರ ಬಗ್ಗೆ ಹಿರಿಯರಲ್ಲಿನ ಕಳವಳಕ್ಕೂ ಪರಿಹಾರ ಹುಡುಕಿಕೊಳ್ಳಬೇಕು.

ಎಟಿಎಂನಿಂದ ದುಡ್ಡು ಬರುತ್ತದೆ, ಗೂಗಲ್‍ನಲ್ಲಿ ಪಾಠ ಕಲಿತರಾಯ್ತು ಅಂದುಕೊಳ್ಳುವ ಮಕ್ಕಳಿಗೆ ಭೌತಿಕ ಉಪಸ್ಥಿತಿಯ ಅರಿವು ಮೂಡಿಸಬೇಕಿದೆ. ಮೊಬೈಲು, ಟಿ.ವಿ. ಗೀಳಿನಿಂದಾಗಿ ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳಿಗೆ ಬಾಂಧವ್ಯದ ಹಂಗಿಲ್ಲ. ಬೆರಳ ತುದಿಯಲ್ಲಿ ಬ್ರಹ್ಮಾಂಡವೇ ಕಾಣಸಿಗುತ್ತಿರುವ ಸಂದರ್ಭದಲ್ಲಿ ತರಗತಿ ಕಲಿಕೆ ಸಪ್ಪೆಯಾಗುವ ಅಪಾಯವಿದೆ. ಮಕ್ಕಳು ಸಹಪಠ್ಯ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳನ್ನು ಹಚ್ಚಿಕೊಳ್ಳಲು ನೆರವಾಗಬೇಕು.

ಅಗಾಧ ಸಾಮರ್ಥ್ಯ, ಅವಕಾಶಗಳೊಟ್ಟಿಗೆ ಹುಟ್ಟಿ ಬರುವ ಮಕ್ಕಳು ಮುಂದೆ ತಮ್ಮ ಆಶಯ, ನಿರೀಕ್ಷೆಯ ಬದುಕು ಕಟ್ಟಿಕೊಳ್ಳುವ ಅಭಿಲಾಷೆಗೆ ನಿಯಂತ್ರಣ ಯಾಕೆ? ಮಕ್ಕಳನ್ನು ಚೆನ್ನಾಗಿ ಸಾಕಿ, ವಿಶಾಲ
ಸಾಧ್ಯತೆಗಳನ್ನು ಅವರಿಗೇ ಬಿಟ್ಟು, ಬಾಳ್ವೆಗೆ ಬೇಕಿರುವ ಕೌಶಲ, ಅರಿವು, ವ್ಯಕ್ತಿತ್ವವನ್ನು ಕರುಣಿಸಬೇಕು. ಬದುಕಿನ ಸಾರ್ಥಕತೆಗೆ ಅಷ್ಟು ಸಾಕು.

ಜೀವಮಾನವಿಡೀ ತಾವು ಸಂಪತ್ತಿನ ಕ್ರೋಡೀಕರಣವನ್ನೇ ವ್ರತದಂತೆ ಆಚರಿಸುತ್ತಾ ಹೋದರೆ ಎಳೆಯ
ಕುಡಿಗಳಿಗೆ ಬದುಕಿನ ಅರ್ಥ ತಿಳಿಯುವುದಾದರೂ ಹೇಗೆ? ಜೀವದಯೆ, ಮನುಷ್ಯಪ್ರೀತಿ, ಸಮತೆ, ಸೋದರತೆಯನ್ನು ಬದುಕಲ್ಲಿ ಬಾಳಿಸಿಕೊಳ್ಳದಿದ್ದರೆ ಕಷ್ಟ. ನಾಳೆಗಳು ಸಹನೀಯವಾಗಿ ಉಳಿಯಬೇಕೆಂದರೆ ಸಹನೆ, ಸರಳತೆಯೆಂಬ ಸಾತ್ವಿಕ ಬದುಕಿನ ತಾತ್ವಿಕ ಸೆಲೆಯು ಎದೆಯೊಳಗೆ ಬತ್ತಕೂಡದು. ಹಾಗೆಯೇ ಉದಾತ್ತ ಚಿಂತನೆಗಳನ್ನು ಮಾತಿನಲ್ಲಷ್ಟೇ ಅಲ್ಲದೆ ಕೃತಿಯಲ್ಲಿಯೂ ಬಾಳುವ ಧೈರ್ಯವನ್ನೂ ಬೆಂಬಲಿಸುವ ಔದಾರ್ಯವನ್ನೂ ತೋರುವುದು ಮುಖ್ಯ. ಬೆಳಕಿನ ಬೀಜಗಳಂತೆ ಬೆಳೆವ ಮಕ್ಕಳು ತಾಜಾ ಪರಿಸರದ ಗಾಳಿ, ನೀರು ಹೀರಿ ಬೆಳೆಯಬೇಕು, ಹೊಳೆಯಬೇಕು.

ವಿಶ್ವಮಾನವರಾಗಿ ಹುಟ್ಟುವ ಮಕ್ಕಳನ್ನು ಸಂಕುಚಿತತೆಯಿಂದ ಮುಕ್ತಗೊಳಿಸುವುದು ಮತ್ತು ಮಾನವಶ್ರೇಷ್ಠತೆಯ ಉದಾತ್ತ ಚಿಂತನೆಗಳತ್ತ ಮನೆಯೇ ದಾರಿತೋರಲಿ. ಮಕ್ಕಳಲ್ಲಿ ಜೀವಪರತೆ ಮತ್ತು ಜೀವನೋತ್ಸಾಹವನ್ನು ಮೂಡಿಸಲು ಮನೆ ಯಶಸ್ವಿಯಾದರೆ ಅದು ದೊಡ್ಡ ಗೆಲುವು. ಮುಂದಿನದು ಸನ್ನಿವೇಶ
ಪ್ರೇರಿತ ಬದುಕು-ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT