ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸ್ವಾರಸ್ಯಕರ ಸುದ್ದಿಯ ಹಿಂದೆ...

ಡಾ. ಎ.ಶ್ರೀಧರ
Published 11 ಜೂನ್ 2024, 23:54 IST
Last Updated 11 ಜೂನ್ 2024, 23:54 IST
ಅಕ್ಷರ ಗಾತ್ರ

ಸುದ್ದಿಯೇನೋ ಸ್ವಾರಸ್ಯಕರವಾಗಿಯೇ ಇರುತ್ತದೆ. ಆದರೆ ಅದು ಸತ್ಯವನ್ನು ಮರೆಮಾಚಿರಲೂಬಹುದು. ತಂತ್ರಜ್ಞಾನದ ಮೂಲಕ ಹರಿದುಬಂದು ಬಹಿರಂಗಗೊಳ್ಳುತ್ತಿರುವ ಇಂದಿನ ಅನೇಕ ವಿಷಯಗಳು ಸತ್ಯದಿಂದ ದೂರ ಸರಿದಿರುವುದು ಸ್ಪಷ್ಟ. ಹೀಗಿದ್ದರೂ ಇಂತಹ ಸುದ್ದಿಗಳು ಜನಚಿತ್ತಕ್ಕೆ ಬಹು ಆಕರ್ಷಕ. ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಹಲವಾರು ವಿವರಣೆಗಳು ಸಿಗುತ್ತವೆ. ಮುಖ್ಯವಾಗಿ, ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಹೆಚ್ಚು ಕುತೂಹಲ ಇರಿಸಿಕೊಳ್ಳುವ ಮನಸ್ಸುಗಳು ಅವರ ಪ್ರತಿ ಚಲನವಲನವನ್ನೂ ತಪ್ಪದೆ ಗಮನಿಸುತ್ತಲೇ ಇರುತ್ತವೆ. ವೇಷಭೂಷಣ, ನಡೆನುಡಿ, ಹಾವಭಾವ ಮತ್ತು ಜನಪ್ರಿಯತೆಯ ಕಾರಣಕ್ಕೆ ಅವರು ಪಾಲ್ಗೊಳ್ಳುವ ಜಾಹೀರಾತು ಹಾಗೂ ಅವರ ಬಗೆಗಿನ ಪ್ರಚಾರವು ಜನಮಾನಸದಲ್ಲಿ ಸುಲಭವಾಗಿ ಬೆರೆತುಬಿಡುತ್ತವೆ.

ಮೊಬೈಲು, ಕಂಪ್ಯೂಟರಿನಂತಹ ಉಪಕರಣಗಳು ಸುದ್ದಿಯ ತುಣುಕೊಂದನ್ನು ಕ್ಷಣಮಾತ್ರದಲ್ಲಿ ಲಕ್ಷಾಂತರ ಮಂದಿಯ ಮನಸ್ಸಿನೊಳಗೆ ತೂರಿಸಿಬಿಡಬಲ್ಲವು. ಇವುಗಳಲ್ಲಿ ಅಡಗಿರುವ ಭಾವಸೂಚಿ ಗುಂಡಿಗಳನ್ನು ಒತ್ತುವುದರ ಮೂಲಕ ಜನ ತಮ್ಮ ಅಭಿಪ್ರಾಯ, ಆಕ್ರೋಶವನ್ನು ಸುಲಭವಾಗಿ ಹೊರಗೆಡವಬಲ್ಲರು.
ಹೀಗೆ ವ್ಯಕ್ತಿಯೊಬ್ಬ ಯಾವುದೇ ವಿಷಯದ ಬಗ್ಗೆ ತನ್ನ ನಿಲುವನ್ನು ಪ್ರಕಟಿಸುವುದು ಬಹು ಸರಾಗ. ಅದರಲ್ಲಿಯೂ ಆಕ್ರೋಶಭರಿತ, ನಕಾರಾತ್ಮಕ ಭಾವನೆಗಳಂತೂ ಅತ್ಯಂತ ವೇಗವಾಗಿ ವ್ಯಕ್ತವಾಗುತ್ತವೆ.

ವಿಷಯದ ಬಗ್ಗೆ ಕೊಂಚ ಆಲೋಚಿಸಿ, ಅದರ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಂಡು ಅಭಿಪ್ರಾಯ ಸೂಚಿಸುವಂತಹ ತಾಳ್ಮೆ ಇರುವ ನೆಟ್ಟಿಗರ ಸಂಖ್ಯೆ ತೀರಾ ಕಡಿಮೆ. ಬಹಳಷ್ಟು ಬಾರಿ ಸೆಲೆಬ್ರಿಟಿಗಳ ನಿತ್ಯದ ಬದುಕು ಸಹ ನೆಟ್ಟಿಗರ ಪ್ರತಿಕ್ರಿಯೆಗಳನ್ನೇ ಅವಲಂಬಿಸಿರುತ್ತದೆ.

ಸೆಲೆಬ್ರಿಟಿಗಳ ಗೆಳೆತನ, ಸಹವಾಸ ಮತ್ತು ಆಪ್ತ ಸಂಬಂಧಗಳಿಗೆ ಸಂಬಂಧಿಸಿದ ಸುದ್ದಿಗಳು ಕೆಲವು ಜನಸಾಮಾನ್ಯರಿಗೆ ರೋಮಾಂಚನ ತರುವಂತಹ ವಿಷಯಗಳಾಗಿದ್ದು, ಮಾಧ್ಯಮಗಳು ಇವುಗಳನ್ನು ಚಿತ್ರಸಮೇತ ವಿಶ್ಲೇಷಿಸುವುದು ಸಾಮಾನ್ಯ. ಮದುವೆ, ವಿಚ್ಛೇದನ, ಲೈಂಗಿಕತೆಗೆ ಸಂಬಂಧಿಸಿದ ತುಣುಕು ಸಂಗತಿಗಳೂ ಮಾಧ್ಯಮಗಳಿಗೆ ಲಾಭ ತರುವಂತಹ ದೊಡ್ಡ ಮಾಲುಗಳೇ ಆಗಿರುತ್ತವೆ. ಅದಕ್ಕೆ ಸರಿಯಾಗಿ ಸಾಮಾಜಿಕವಾಗಿ ಸರಿ-ತಪ್ಪು ಎನ್ನುವ ದೃಷ್ಟಿಯಿಂದ ವಿಶ್ಲೇಷಣೆ ಮಾಡುವುದಂತೂ ಬಹು ಲಾಭದಾಯಕ. ಜನ ಕೂಡ ಪ್ರಖ್ಯಾತರ ಹುಳುಕುಗಳನ್ನು ಹುಡುಕಲು ಸದಾ ಉತ್ಸುಕರಾಗಿರುತ್ತಾರೆ. ಬಹುಶಃ ಇದನ್ನು ಒಂದು ರೀತಿಯ ‘ಕೆದಕುವ ಕಾಂಪ್ಲೆಕ್ಸ್‌’ ಎನ್ನಬಹುದೇನೊ.

ಇಂದಿನ ಯುವಜನರ ಮನಸ್ಸು, ಜೀವನ ನಿಭಾಯಿಸಲು ಮಾಡಿಕೊಳ್ಳುವ ಸಿದ್ಧತೆಗಳು ಹಳೆಯ ತಲೆಮಾರಿನಿಂದ ಬಹಳ ದೂರ ಸರಿದಿದ್ದು, ತುಂಬಾ ಭಿನ್ನವಾಗಿಯೇ ಇರುತ್ತವೆ. ತಮ್ಮ ಬದುಕಿನಲ್ಲಿ ಯಾವ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕು, ಸಮಸ್ಯೆಗಳನ್ನು ಗ್ರಹಿಸಿ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬಂತಹ ಸಂಗತಿಗಳು ಯಾವುದೇ ಕಟ್ಟುಪಾಡು, ನೈತಿಕತೆಯ ಚೌಕಟ್ಟಿನಲ್ಲಿ ಬರುವುದಿಲ್ಲ. ಆದರೆ ಸೆಲೆಬ್ರಿಟಿಗಳು ಇಂತಹುದೇ ನಡೆನುಡಿ ಅನುಸರಿಸಿದರೆ ಅದು ಅನುಯಾಯಿಗಳಿಗೆ ಹಿಡಿಸುವುದಿಲ್ಲ. ಈ ಮೂಲಕ ತಮ್ಮ ಆರಾಧನಾ ಸಂಕೇತ ಭಗ್ನಗೊಳ್ಳುತ್ತಿದೆ ಎನ್ನುವುದನ್ನು ಅವರು ಸುಲಭವಾಗಿ ಒಪ್ಪಿಕೊಳ್ಳ
ಲಾರರು. ಹೀಗಾಗಿ, ತಮ್ಮ ತುಡಿತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾನಾ ರೀತಿಯಲ್ಲಿ ಹೊರಗೆಡಹಲು ಅವರು ಮುಂದಾಗುತ್ತಾರೆ. ಆದರೆ ಸೆಲೆಬ್ರಿಟಿಗಳು ತಮ್ಮದೇ ಸಮಸ್ಯೆ, ಸಂಘರ್ಷಗಳನ್ನು ತಮ್ಮ ಮಾನಸಿಕ ಹಿತ, ಅಗತ್ಯಕ್ಕೆ ತಕ್ಕಂತೆ ನಿರ್ವಹಿಸುವುದನ್ನು ಚೆನ್ನಾಗಿಯೇ ಕಂಡುಕೊಂಡಿರುತ್ತಾರೆ. ತಮ್ಮ ಖಾಸಗಿ ಜೀವನವನ್ನು ಬಹು ಜಾಣತನದಿಂದ ಕಾಯ್ದುಕೊಳ್ಳುವ ತಂತ್ರವು ಎಲ್ಲಾ ಸೆಲೆಬ್ರಿಟಿಗಳಲ್ಲಿ ಇರದು ಎನ್ನುವುದೂ ನಿಜವೇ. ಈ ಸಂಗತಿ ಕೂಡ ಸೆಲೆಬ್ರಿಟಿಗಳ ಬದುಕು ಬಯಲಾಗುವುದಕ್ಕೆ ಕಾರಣ.

ಆದರೆ ಇಂದು ಸಮಾಜ ಗಮನಿಸಬೇಕಾಗಿರುವ ಬಹುಮುಖ್ಯ ವಿಷಯವೆಂದರೆ, ವ್ಯಕ್ತಿಯ ವೈವಾಹಿಕ ಜೀವನದ ಏರುಪೇರುಗಳು ಜನಸಾಮಾನ್ಯರ ನಂಬಿಕೆ, ಸಾಮಾಜಿಕ ಸುಸ್ಥಿರತೆಯನ್ನು ಬುಡಮೇಲು ಮಾಡುವಷ್ಟು ಪ್ರಬಲವಾಗಿ ಇರುವುದಿಲ್ಲ. ಹೀಗಾಗಿ, ಸೆಲೆಬ್ರಿಟಿಗಳ ವೈವಾಹಿಕ ಬದುಕಿನಲ್ಲಿ ಕಾಣಿಸಿಕೊಳ್ಳುವ ಬೀಸುಗಾಳಿಯೊಂದು ಬಿರುಗಾಳಿಯೇನಲ್ಲ ಎನ್ನುವುದನ್ನು ತಿಳಿಯಬೇಕು.

ಪ್ರೀತಿಸಿ, ಮೋಹಿಸಿ ಒಂದಾಗಿದ್ದವರು ಕೆಲವೇ ಸಮಯದಲ್ಲಿ ದೂರ ಸರಿಯುವುದು ಅಸ್ವಾಭಾವಿಕ
ವೇನಲ್ಲ. ಗಾಢವಾಗಿ ಪ್ರೀತಿಸಿ ಅದ್ದೂರಿಯಿಂದ ಮದುವೆಯಾಗಿದ್ದರೂ ಹೆಚ್ಚುದಿನ ಒಟ್ಟಿಗೇ ಇರಲಾರೆವು ಎನ್ನುವ ಭಾವನೆಯಿಂದ ನ್ಯಾಯಯುತವಾಗಿ ದೂರಸರಿಯುವುದು ಕೆಟ್ಟದ್ದೇನಲ್ಲ. ಆದರೆ ಇಂತಹ ಸಂಗತಿಗಳು ಸೆಲೆಬ್ರಿಟಿಗಳನ್ನು ಆರಾಧಿಸುವವರ ಮನಸ್ಸಿಗೆ ಆಘಾತ ಉಂಟುಮಾಡುವುದು ಇಂದಿನ ಸಾಮಾಜಿಕ ಸ್ವಭಾವಗಳಿಗೆ ಹೊಸದಾಗಿ ಸೇರಿರುವ ವಿಷಯ. ಉದಾಹರಣೆಗೆ, ಎಂದಿನಿಂದಲೂ ಹಾಲಿವುಡ್‌ ನಟನಟಿಯರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಕ್ರೀಡಾಪಟುಗಳು, ಹೆಸರಾಂತ ಸಾಹಿತಿಗಳು, ವಿಜ್ಞಾನಿಗಳು, ರಾಜಕಾರಣಿಗಳು, ಆಗರ್ಭ ಶ್ರೀಮಂತರು ಸಹ ತಮ್ಮ ಅಮೂಲ್ಯ ಗೆಳೆತನ, ದಾಂಪತ್ಯವನ್ನು ಅಂತ್ಯಗೊಳಿಸಿಕೊಂಡಿದ್ದಿದೆ. ಆದರೂ ಅವರು ತಮ್ಮಲ್ಲಿನ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ ಎನ್ನುವುದನ್ನು ಅವರ ಸಾಧನೆಗಳೇ ಬಿಂಬಿಸುತ್ತವೆ. ಆದ್ದರಿಂದ ಮಾಧ್ಯಮಗಳ ಅತಿ ಉತ್ಸಾಹದ ವಿವರಣೆ, ವ್ಯಾಖ್ಯಾನಗಳು, ಕಹಿಯಾದ ನಂಟಿಗೆ ಉತ್ತಮ ಮದ್ದಾಗಲಾರವು.

ಲೇಖಕ: ಮನೋವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT