ಶುಕ್ರವಾರ, ಡಿಸೆಂಬರ್ 3, 2021
24 °C

ಸಂಗತ | ಲಸಿಕೆ ಅಭಿಯಾನ: ಇರಲಿ ಅಭಿಮಾನ

ಡಾ. ಲಕ್ಷ್ಮಣ ವಿ.ಎ. Updated:

ಅಕ್ಷರ ಗಾತ್ರ : | |

ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿ ಹತ್ತೂವರೆ ತಿಂಗಳುಗಳು ಕಳೆದಿವೆ. ಜನವರಿ ಮಧ್ಯಭಾಗದಿಂದ ಆರಂಭದಲ್ಲೇ ಈ ಅಭಿಯಾನಕ್ಕೆ ನಿರೀಕ್ಷಿಸಿದಷ್ಟು ಜನಸ್ಪಂದನೆ ಸಿಗಲಿಲ್ಲ. ಲಸಿಕೆ ಬಗೆಗಿದ್ದ ಅನುಮಾನ, ಮೂಢನಂಬಿಕೆ, ಭಯ, ಅಪಪ್ರಚಾರದಂತಹ ಕಾರಣಗಳಿಂದ ಅಭಿಯಾನಕ್ಕೆ ಹಿನ್ನಡೆ ಮಾತ್ರವಲ್ಲ ಸ್ವತಃ ಸರ್ಕಾರವೂ ಅಸಹಾಯಕವಾಗಿತ್ತು. ಜನರ ಭಾರಿ ಬೇಡಿಕೆ ನಿರೀಕ್ಷಿಸಿ ತಯಾರಿಸಿದ್ದ ಲಸಿಕೆ ದಾಸ್ತಾನುಗಳು ಹಾಳಾಗಿ ಹೋಗುವ ಭೀತಿ ಉಂಟಾಗಿತ್ತು.

ಇತ್ತ ಆರೋಗ್ಯ ಇಲಾಖೆಯು ಜನರಿಗೆ ಲಸಿಕೆ ಹಾಕಿಸಲು ಹರಸಾಹಸ ಪಡುತ್ತಿತ್ತು. ಆದರೆ ಈ ಹೊತ್ತಿಗಾಗಲೇ ಆಗಷ್ಟೇ ಕೋವಿಡ್ ಒಂದನೇ ಅಲೆಯ ಸಂಕಟ ಮುಗಿದು ಸಂಭಾವ್ಯ ಎರಡನೆಯ ಅಲೆಯನ್ನು ಎದುರಿಸಲು ಇಲಾಖೆ ಸಜ್ಜಾಗುತ್ತಿತ್ತು. ಸರಿಯಾಗಿ ಇದೇ ಸಮಯಕ್ಕೆ ಯುರೋಪ್, ರಷ್ಯಾ, ಬ್ರೆಜಿಲ್‌ನಲ್ಲಿ ಎರಡನೆಯ ಅಲೆಯಿಂದಾಗಿ ಜನ ತತ್ತರಿಸಿ ಹೋಗುತ್ತಿದ್ದರು. ವಿಪರ್ಯಾಸವೆಂದರೆ, ಭಾರತದಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದರು. ಆರಂಭದಲ್ಲಿ, ಅರವತ್ತು ವರ್ಷ ಮೇಲ್ಪಟ್ಟ ದುರ್ಬಲ ಆರೋಗ್ಯದವರಿಗೆ ನಂತರ, ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು.

ಅರ್ಧ ಹಳ್ಳಿ, ಅರ್ಧ ಪಟ್ಟಣದ ಜನರನ್ನು ಒಳಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಆರೋಗ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು, ಆಶಾ ಕಾರ್ಯಕರ್ತೆಯರು ಹಾಗೂ ನರ್ಸುಗಳು ಸೇರಿ ಪ್ರತಿದಿನ ಅರ್ಹ ಫಲಾನುಭವಿಗಳ ಪಟ್ಟಿ ಹಿಡಿದು ಮನೆ ಮನೆಗೆ ಹೋಗಿ ಲಸಿಕೆಗೆ ಮನವೊಲಿಸುತ್ತಿದ್ದೆವು. ಆದರೆ ಕೆಲ ಮನೆಯವರು ಹಿಂಬಾಗಿಲಿನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದರು, ಕೆಲವರು ಮುಖ ತಪ್ಪಿಸುತ್ತಿದ್ದರು, ಇನ್ನು ಹಲವರು ‘ನಮಗೆ ಇಷ್ಟ ಇಲ್ಲ’ ಎಂದು ನೇರವಾಗಿ ನಿರಾಕರಿಸಿದರು. ಕೆಲ ಮನೆಗಳವರಿಂದ ನಮಗೆ ಬೈಗುಳಗಳೂ ಪ್ರಾಪ್ತವಾಗಿ ಇಡೀ ತಂಡದ ಮನೋಬಲವನ್ನು ಕುಗ್ಗಿಸುತ್ತಿದ್ದರು. ಹೀಗೆ ಆರೋಗ್ಯದ ಹಿತದೃಷ್ಟಿಯಿಂದ ಹೃದಯಪೂರ್ವಕವಾಗಿ ಸ್ವಾಗತಿಸಬೇಕಿದ್ದ ಅಭಿಯಾನವು ಜನರ ಉಡಾಫೆಯಿಂದಾಗಿ ಆಮೆಗತಿಯಲ್ಲಿ ಸಾಗಿತು. ತತ್ಫಲವಾಗಿ ಲಸಿಕಾ ಕಂಪನಿಯು ಲಸಿಕೆ ತಯಾರಿಕೆಯನ್ನು ನಿಧಾನಗೊಳಿಸಿತು. ಇದೆಲ್ಲಾ ಮಾರ್ಚ್‌ ಅಂತ್ಯದವರೆಗಿನ ಭಾರತದ ಪ್ರತಿಯೊಂದು ಹಳ್ಳಿ, ನಗರದ ಚಿತ್ರಣ.

ಆದರೆ ಯಾವಾಗ ಎರಡನೇ ಅಲೆ ದಿಢೀರನೆ ಬಂದು ಅಪ್ಪಳಿಸಿತೋ ಇದೇ ಜನರ ಆರೋಗ್ಯ ಕಾಳಜಿ ಇದ್ದಕ್ಕಿದ್ದಂತೆ ಜಾಗೃತವಾಯಿತು. ಅವರೆಲ್ಲ ಆಸ್ಪತ್ರೆಯ ಮುಂದೆ ಸರದಿಯಲ್ಲಿ ನಿಂತು ಲಸಿಕೆಗಾಗಿ ಗೋಗರೆ
ಯತೊಡಗಿದರು. ಪ್ರಾಣಭಯದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಇನ್ನಿಲ್ಲದ ಆಮಿಷವೊಡ್ಡಿ ಲಸಿಕೆಗಾಗಿ ಪೈಪೋಟಿ ನಡೆಸಿದರು. ಪುಢಾರಿಗಳು ತಮ್ಮ ಬಲಪ್ರದರ್ಶನಕ್ಕೆ ಅನಾರೋಗ್ಯಕರ ಪೈಪೋಟಿಗಿಳಿದರು. ಲಸಿಕೆಯು ವೋಟ್ ಬ್ಯಾಂಕ್‌ ರಾಜಕಾರಣದ ದಾಳವಾಗಿ ಬಳಕೆಯಾಯಿತು.

ಆ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದು ಆರೋಗ್ಯ ಇಲಾಖೆ. ಒಂದೆಡೆ, ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದ ರೋಗಿಗಳ ಆರೈಕೆ, ಕೋವಿಡ್ ಪರೀಕ್ಷೆಗಾಗಿ ಸಾಲುಗಟ್ಟಿ ನಿಂತವರ ಪರೀಕ್ಷೆ, ಆಕ್ಸಿಜನ್‌ಬೆಡ್ ಸಿಗದೇ ಬೀದಿ ಬದಿಯಲ್ಲಿ, ಆಸ್ಪತ್ರೆಯ ಕಾರಿಡಾರುಗಳಲ್ಲಿ ಸಾಯುತ್ತಿದ್ದ ರೋಗಿಗಳು, ಇದರ ಜೊತೆ ಜೊತೆಗೇ ಅರ್ಹರಿಗೆ ಶೀಘ್ರವಾಗಿ ಲಸಿಕೆ ನೀಡುವ ಅನಿವಾರ್ಯ. ದುರ್ದೈವದ ಸಂಗತಿಯೆಂದರೆ, ಈ ಸಮಯದಲ್ಲಿ ತೀವ್ರವಾದ ಲಸಿಕೆಯ ಅಭಾವ. ಇದ್ದಕ್ಕಿದ್ದಂತೆ ಲಸಿಕೆಗೆ ಬೇಡಿಕೆ ಹೆಚ್ಚಾದ್ದರಿಂದ ಅದರ ಪೂರೈಕೆಯಲ್ಲಾದ ವ್ಯತ್ಯಯಗಳು. ಕೆಲವು ಕಡೆ ಪ್ರಭಾವಿಗಳ ಕೈವಾಡದಿಂದ, ವ್ಯಕ್ತಿ ನಲವತ್ತೈದು ದಾಟಿಲ್ಲದಿದ್ದರೂ ಲಸಿಕೆ ಕೊಡಬೇಕೆನ್ನುವ ಒತ್ತಡ! ಈ ಎಲ್ಲಾ ಕಾರಣಗಳಿಂದ ಎಲ್ಲೆಲ್ಲೂ ಭೀತಿ, ಅಲ್ಲೋಲಕಲ್ಲೋಲದ ವಾತಾವರಣ.

ಅದನ್ನೆಲ್ಲಾ ನೆನಪಿಸಿಕೊಂಡರೆ ಈಗಲೂ ಮೈ ಕಂಪಿಸುತ್ತದೆ. ಏರಿದಷ್ಟೇ ವೇಗದಲ್ಲಿ ಇಳಿದ ಎರಡನೆಯ ಅಲೆ ಜನರಿಗೆ ಕೊಂಚ ನಿರಾಳ ತಂದಿತು. ಜನ ಮತ್ತೆ ಲಸಿಕೆ ಪಡೆಯಲು ಸ್ವಯಂಪ್ರೇರಿತರಾಗಿ ಆಸ್ಪತ್ರೆಯತ್ತ ಧಾವಿಸಿದರು. ಈ ವೇಳೆಗಾಗಲೇ ಬೇಡಿಕೆಗೆ ತಕ್ಕಂತೆ ಲಸಿಕೆಯೂ ಪೂರೈಕೆಯಾಗಿ ಸದ್ಯ ಕರ್ನಾಟಕ ಅತಿ ಹೆಚ್ಚು ಲಸಿಕೆ ನೀಡಿದ ಎರಡನೆಯ ರಾಜ್ಯವಾಗಿದೆ. ಆದರೆ ಕೋವಿಡ್‌ನ ಆತಂಕ ಇನ್ನೂ ಸಂಪೂರ್ಣವಾಗಿ ಮರೆಯಾಗಿಲ್ಲ. ಹೀಗಾಗಿ ಮೈಮರೆಯುವಂತಿಲ್ಲ.

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿದ ಯುರೋಪಿಯನ್ ದೇಶಗಳು ಲಸಿಕೆ ನೀಡಿದ್ದರೂ ಮೂರು ಮತ್ತು ನಾಲ್ಕನೆಯ ಅಲೆಗಳನ್ನು ಸೂಕ್ತವಾಗಿ ಎದುರಿಸಲು ಹೆಣಗಾಡುತ್ತಿವೆ. ಈಗ ಭಾರತಲ್ಲಿ ಕೋವಿಡ್‌ನ ರೂಪಾಂತರಿ ಡೆಲ್ಟಾ ವೈರಸ್ ದುರ್ಬಲವಾಗಿದೆ. ಲಸಿಕೆ ಪಡೆದುಕೊಂಡ ಬಹುತೇಕರು ಕೇವಲ ಮನೆ ಉಪಚಾರದಿಂದ ವಾಸಿಯಾಗುತ್ತಿರುವುದು ಸಂತಸದ ಸಂಗತಿ.

ಮೂರನೆಯ ಸಂಭಾವ್ಯ ಅಲೆಯನ್ನು ಎದುರಿಸಲು ಸಜ್ಜಾಗಿರುವ ಆರೋಗ್ಯ ಇಲಾಖೆಯ ಮುಂದೆ ಅನೇಕ ಸವಾಲುಗಳಿವೆ. ಜನಸಮೂಹಕ್ಕೆ ಮರೆವು ಜಾಸ್ತಿ. ಬಹಳಷ್ಟು ಲಸಿಕೆ ಲಭ್ಯವಿದ್ದರೂ ಮತ್ತದೇ ನಿರಾಸಕ್ತಿ, ಆರೋಗ್ಯದ ಮೇಲಿನ ನಿಷ್ಕಾಳಜಿಯಿಂದಾಗಿ ನಿರೀಕ್ಷಿತ ವೇಗದಲ್ಲಿ ಲಸಿಕೆ ನೀಡಿಕೆ ಸಾಧ್ಯವಾಗುತ್ತಿಲ್ಲ.

ಇನ್ನು ಮೈ ಮರೆಯದೆ ಸಕಾಲಕ್ಕೆ ಲಸಿಕೆ ಪಡೆದುಕೊಂಡರೆ ಸಂಭಾವ್ಯ ಅಲೆಗಳನ್ನು ಧೈರ್ಯವಾಗಿ ಎದುರಿಸಬಹುದು. ಅಭಿಯಾನದಲ್ಲಿ ಸರ್ಕಾರ ಮಾತ್ರವಲ್ಲದೆ ಜನಸಮೂಹ ಕೈಗೂಡಿಸಿದರೆ ಮಾತ್ರ ನಾವು ಇನ್ನು ಕೆಲವೇ ದಿನಗಳಲ್ಲಿ ನೂರು ಪ್ರತಿಶತ ಲಸಿಕೆ ಗುರಿ ಸಾಧಿಸಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು