ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸರಳವಾಗಿರಲಿ ಅಂತ್ಯಸಂಸ್ಕಾರ

Last Updated 1 ಜನವರಿ 2023, 19:45 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರು ಇತ್ತೀಚೆಗೆ ನಿಧನರಾದಾಗ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಕೆಲವೇ ಗಂಟೆಗಳಲ್ಲಿ ಸರಳವಾಗಿ ಪೂರೈಸಲಾಯಿತು. ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟು ಸಾಮಾನ್ಯರಂತೆ ನಡೆದ ಮೋದಿಯವರು ಅಂತ್ಯಸಂಸ್ಕಾರ ಮುಗಿದ ನಂತರ ತಮ್ಮ ಅಧಿಕೃತ ಕಾರ್ಯಗಳಲ್ಲಿ ಭಾಗಿಯಾದರು. ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸದಂತೆ ಸೂಚನೆ ಕೂಡ ಕೊಟ್ಟಿದ್ದರು.

ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಅವರು ತಮ್ಮ ಪತ್ನಿಯ ಅಂತ್ಯಕ್ರಿಯೆಯನ್ನು ಮುಂಜಾನೆ ಮುಗಿಸಿ, ಮಧ್ಯಾಹ್ನ ರಾಷ್ಟ್ರದ ಕಾರ್ಯದಲ್ಲಿ ತೊಡಗಿದ್ದರು. ಈ ಇಬ್ಬರು ನಾಯಕರ ನಡೆ ಮಾದರಿಯಾಗುವಂತಹುದು.

ಸಾವು ಅರ್ಥವಾದರೆ ಮಾತ್ರ ಬದುಕು ಅರ್ಥವಾಗುತ್ತದೆ ಎನ್ನುವ ಮಾತಿದೆ. ಮರಣ ಸಾರ್ವಜನಿಕ ಸಂಗತಿಯಲ್ಲ. ಅಂತಿಮ ಸಂಸ್ಕಾರದ ಹೆಸರಿನಲ್ಲಿ ನಡೆಯುವ ಕ್ರಿಯೆಗಳಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಶಿವರಾಮ ಕಾರಂತ ಹೇಳುತ್ತಿದ್ದರು.

ಗಣ್ಯರ ನಿಧನದ ನೆಪ ಮಾಡಿಕೊಂಡು ಸರ್ಕಾರಿ ಕಚೇರಿಗಳಿಗೆ, ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಶೋಕ ಆಚರಿಸುವುದರಿಂದ ಸಮಾಜಕ್ಕೆ ಭಾರವಾಗುತ್ತದೆ. ಸತ್ತವರ ಬಗ್ಗೆ ಗೌರವವಿರಲಿ, ಆದರೆ ಸಾವಿನ ಅತಿಯಾದ ವೈಭವೀಕರಣ, ಕೆಲಸಕ್ಕೆ ರಜೆ ಕೊಡುವುದು ಸರಿಯಲ್ಲ. ಶರಣರು ಸಾವನ್ನು ಒಂದು ಸಹಜಕ್ರಿಯೆಯಾಗಿ ಭಾವಿಸಿದ್ದರು. ಸತ್ತವರ ಹೆಸರಿನಲ್ಲಿ ಗುಡಿ, ಸಮಾಧಿ ಕಟ್ಟುವುದನ್ನು ಕೂಡ ಅವರು ವಿರೋಧಿಸಿದ್ದರು. ಶರಣ ಲದ್ದಿ ಸೋಮಣ್ಣನ ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು: ‘ಆವ ಕಾಯಕವಾದಡೂ ಸ್ವ ಕಾಯಕವ ಮಾಡಿ, ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು, ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ?’

ಅಲ್ಲಮಪ್ರಭು ಸಾವನ್ನು ಬಯಲಲ್ಲಿ ಬಯಲಾಗುವುದು ಎಂದು ಬಣ್ಣಿಸಿದ್ದಾರೆ. ಬಯಲಿನ ಪರಿಕಲ್ಪನೆ ತುಂಬ ಮಾರ್ಮಿಕವಾಗಿದೆ. ಈ ಬದುಕು ಸುಮ್ಮನೆ ಇದ್ದು ಹೋಗುವುದಕ್ಕೆ ಇದೆ, ಹಕ್ಕು ಸ್ಥಾಪನೆಗೆ ಅಲ್ಲ ಎಂದು ಸಾಹಿತಿ ಸತ್ಯಕಾಮ ಹೇಳುತ್ತಿದ್ದರು. ಅವರ ಆಶ್ರಮದ ಹೆಸರು ‘ಸುಮ್ಮನೆ’.

ಪತ್ರಕರ್ತ ಅರುಣ್ ಶೌರಿ ಅವರು ಕೊರೊನಾ ಕಾಲಘಟ್ಟದಲ್ಲಿ ಬರೆದ ‘ಪ್ರಿಪೇರಿಂಗ್ ಫಾರ್ ಡೆತ್’ ಕೃತಿ ಬಹಳ ಗಮನ ಸೆಳೆಯುತ್ತದೆ. ಅದರಲ್ಲಿ ಅವರು ಬರೆದ ಮಾತು ಬದುಕಿಗೆ ದೊಡ್ಡ ಪಾಠ ಹೇಳುತ್ತದೆ. ‘ನನ್ನ ದೇಹದಲ್ಲಿ ಉಪಯೋಗಕ್ಕೆ ಬರುವ ಅಂಗಗಳಿದ್ದರೆ ಅವುಗಳನ್ನು ದಾನ ಮಾಡಬೇಕು. ದೇಹವನ್ನು ಯಾವುದೇ ಧಾರ್ಮಿಕ ಆಚರಣೆಗಳಿಲ್ಲದೆ ಸುಟ್ಟು ಹಾಕಬೇಕು. ಗಂಧದ ಕಟ್ಟಿಗೆಯ ಆಡಂಬರ ಬೇಡ. ತೋಪು ಹಾರಿಸಿ ಗೌರವಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

ಗಣ್ಯರು, ಸೆಲೆಬ್ರಿಟಿಗಳ ಸಾವಿನ ಕುರಿತು ಟಿ.ವಿ. ಚಾನೆಲ್‌ಗಳು ಎರಡು– ಮೂರು ದಿನ ನೇರ ಪ್ರಸಾರ ಮಾಡುತ್ತವೆ. ಅಂತ್ಯಕ್ರಿಯೆ ಕಾಲಕ್ಕೆ ಭವ್ಯ ಮೆರವಣಿಗೆಯನ್ನು ರಸ್ತೆಯುದ್ದಕ್ಕೂ ಮಾಡುವಾಗ ಸಂಚಾರಕ್ಕೆ ಬಹಳ ಅಡಚಣೆ ಉಂಟಾಗುತ್ತದೆ. ಮೆರವಣಿಗೆ ಕಾಲಕ್ಕೆ ಕೆಲವರು ಪ್ರಾಣ ಕಳೆದುಕೊಂಡ ನೋವಿನ ಉದಾಹರಣೆಗಳೂ ಇವೆ.

‘ಸಾವಿನ ಬಾಗಿಲಲ್ಲಿ ಅರಸು ಕೂಡ ಭಿಕಾರಿ ಆಗಿರುತ್ತಾನೆ. ಬದುಕು ಎಂದಿಗೂ ಅಪೂರ್ಣವೇ, ಹಾಗಿರುವುದರಲ್ಲಿಯೇ ಅದರ ರಹಸ್ಯ ತುಂಬಿದೆ. ಸಾವು ತನ್ನ ಹಸ್ತವನ್ನು ಯಾವುದೋ ಗಳಿಗೆಯಲ್ಲಿ ಇಟ್ಟುಬಿಡುತ್ತದೆ. ಅದು ಸಹಜ ಕ್ರಿಯೆ’ ಎನ್ನುತ್ತಾರೆ ವ್ಯಾಸ ಮಹರ್ಷಿ.

‘ನಾನು ಹೊರಟುಹೋದ ಮೇಲೆ ಓಡೋಡಿ ಬಂದು ಸಂತಾಪ ಸೂಚಿಸುವುದಕ್ಕಿಂತ ಬದುಕಿದ್ದಾಗಲೇ ಬಂದು ಭೇಟಿಯಾದರೆ ಸಂತೋಷಪಡುವೆ. ನಾನು ಹೊರಟುಹೋದ ಮೇಲೆ ದುಃಖಸೂಚಕ ಸಭೆಯಲ್ಲಿ ಹೊಗಳುವುದರಿಂದ ಪ್ರಯೋಜನವಿಲ್ಲ. ಈಗಲೇ ಒಂದು ಒಳ್ಳೆಯ ಮಾತು ಹೇಳಿದರೆ ನನ್ನ ಹೃದಯ ಅರಳುತ್ತದೆ’ ಎಂದು ರವೀಂದ್ರನಾಥ ಟ್ಯಾಗೋರ್ ತಮ್ಮ ಒಂದು ಕವಿತೆಯಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ಹೆಣ ಶೃಂಗಾರ ಅರಿಯದು ಎಂದು ಜಾನಪದ ಹೇಳಿದೆ. ಅಂತ್ಯಕ್ರಿಯೆ ಸರಳವಾಗಿರಲಿ ಎಂಬುದು ಇದರ ಭಾವ. ಕವಿ ದ.ರಾ.ಬೇಂದ್ರೆ ಅವರು ಹೆಣ ಹೂಳುವುದನ್ನು ಬಿತ್ತುವುದು ಎಂದು ಉನ್ನತೀಕರಿಸಿ ಹೇಳುತ್ತಿದ್ದರು. ಈ ಮಾತು ಸೃಷ್ಟಿಕ್ರಿಯೆಯ ರೂಪಕದಂತಿದೆ.

ಗಾಂಧೀಜಿ ಮತ್ತು ಕಸ್ತೂರಬಾ ಅವರು 1945ರಲ್ಲಿ ಆಗಾ ಖಾನ್ ಜೈಲಿನಲ್ಲಿದ್ದರು. ಗಾಂಧೀಜಿ ಅವರ ಆರೋಗ್ಯ ತೀರ ಕ್ಷೀಣಿಸಿತ್ತು. ಅವರು ಅಸ್ತಂಗತರಾಗಬಹುದು ಎಂದುಕೊಂಡ ಬ್ರಿಟಿಷ್ ಸರ್ಕಾರ ಜೈಲಿನಲ್ಲಿಯೇ ಅಂತ್ಯಕ್ರಿಯೆ ನಡೆಸಲು ರಹಸ್ಯವಾಗಿ ಸಿದ್ಧತೆ ಮಾಡಿಕೊಂಡಿತ್ತು. ಗಂಧದ ಕಟ್ಟಿಗೆ ತಂದು ಇಡಲಾಗಿತ್ತು. ವಿಧಿಯ ವೈಚಿತ್ರ್ಯ ಕಸ್ತೂರಬಾ ನಿಧನರಾದರು. ಜೈಲಿನಲ್ಲಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಯಿತು. ಗಾಂಧೀಜಿ ಚಿತೆಗೆ ಎಂದು ತಂದಿದ್ದ ಕಟ್ಟಿಗೆಯನ್ನು ಕಸ್ತೂರಬಾ ಚಿತೆಗೆ ಬಳಸಲು ತರಲಾಯಿತು. ಗಂಧದ ಕಟ್ಟಿಗೆ ನೋಡಿ ಗಾಂಧೀಜಿ ‘ನಾನು ಬಡವ’ ಎಂದು ಗಂಧದ ಕಟ್ಟಿಗೆ ಬಳಸುವುದನ್ನು ತಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT