ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಡಗರ, ಸಂಭ್ರಮ ಮೈಮರೆಸದಿರಲಿ

ಬದುಕಿಗೆ ಹೊಸ ಚೈತನ್ಯ ತುಂಬುವ ರಜೆ, ಹಬ್ಬ, ಹೊಸ ವರ್ಷದ ಸಂಭ್ರಮವನ್ನು ತಮಗೂ ಇತರರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ಆಚರಿಸುವುದು ಮುಖ್ಯ
Published 25 ಡಿಸೆಂಬರ್ 2023, 19:47 IST
Last Updated 25 ಡಿಸೆಂಬರ್ 2023, 19:47 IST
ಅಕ್ಷರ ಗಾತ್ರ

ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾನಮತ್ತ ಯುವಕರ ಗುಂಪು ಇತ್ತೀಚೆಗೆ, ಚಲಿಸುತ್ತಿದ್ದ ಕಾರಿನ ಮೇಲೆ ನಿಂತು ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿದ ದೃಶ್ಯಾವಳಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ‘ಅಯ್ಯೋ! ಈ ರೀತಿ ಅತಿರೇಕದ ವರ್ತನೆ, ಜಗಳ, ದೌರ್ಜನ್ಯ ಎಲ್ಲವೂ ಕುಡಿದಾಗ ಸಾಮಾನ್ಯ. ಈಗಂತೂ ದೆಹಲಿಯನ್ನು ಬಿಟ್ಟರೆ ದೇಶದಲ್ಲಿ ಅತ್ಯಂತ ಹೆಚ್ಚು ಅಪಘಾತಗಳಾಗುವ ಮಹಾನಗರಗಳಲ್ಲಿ ಬೆಂಗಳೂರಿಗೆ ದ್ವಿತೀಯ ಸ್ಥಾನ. ಅದರಲ್ಲೂ ಡಿಸೆಂಬರ್ ಕಡೆಯ ವಾರ ಮತ್ತು ಕಡೆಯ ದಿನ ಇಡೀ ವರ್ಷದಲ್ಲಿ ಇರುವುದಕ್ಕಿಂತ ಅತಿ ಹೆಚ್ಚು ಗಲಾಟೆ, ಅಪಘಾತಗಳು ಸಂಭವಿಸುತ್ತವೆ. ಬೇಜಾರಿನ ಸಂಗತಿ ಎಂದರೆ, ಇದರಲ್ಲಿ ಬಹಳಷ್ಟನ್ನು ಸ್ವಲ್ಪ ಎಚ್ಚರಿಕೆ ವಹಿಸಿದರೂ ತಡೆಯಲು ಸಾಧ್ಯವಿರುತ್ತದೆ. ಅನ್ಯಾಯವಾಗಿ ಸಾವು ನೋವಾಗುವುದನ್ನು ಕಂಡಾಗ ಬಹಳ ಬೇಸರವಾಗುತ್ತೆ’ ಎಂದು ನುಡಿದವರು ಒಬ್ಬ ಪೊಲೀಸ್ ಅಧಿಕಾರಿ.

ಅಧ್ಯಯನಗಳ ಪ್ರಕಾರ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಈ ಸಂದರ್ಭದಲ್ಲಿ ಅಪಘಾತಗಳಿಗೆ ಮುಖ್ಯವಾದ ಕಾರಣ. ಭಾರತದಲ್ಲಿ ಪ್ರತಿವರ್ಷ ಇದೇ ಕಾರಣದಿಂದ ಹನ್ನೆರಡು ಸಾವಿರ ಜನ ಮರಣವನ್ನಪ್ಪಿದರೆ, ಒಂಬತ್ತು ಲಕ್ಷ ಜನರ ಮೇಲೆ ಪ್ರಕರಣ ದಾಖಲಾಗುತ್ತದೆ. ಮದ್ಯಸೇವನೆಯಿಂದ ಸರಿ-ತಪ್ಪು ನಿರ್ಣಯಿಸುವ ಶಕ್ತಿ, ದೂರ-ಆಳ ನಿರ್ಧರಿಸುವ ಸಾಮರ್ಥ್ಯ ಕುಂಠಿತವಾಗುತ್ತದೆ. ಏಕಾಗ್ರತೆ ಕಡಿಮೆಯಾಗಿ, ಕೈ ಕಾಲುಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ದೃಷ್ಟಿಯೂ ಸ್ವಲ್ಪ ಮಂಜಾಗಬಹುದು. ಇವೆಲ್ಲವೂ ಸುರಕ್ಷಿತವಾದ ವಾಹನ ಚಾಲನೆಗೆ ಅಡ್ಡಿಯಾಗುವ ಅಂಶಗಳು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಖಂಡಿತಾ ಸಲ್ಲದು.

ಇದರೊಂದಿಗೆ ಇನ್ನೂ ಇತರ ಕಾರಣಗಳಿವೆ. ಡಿಸೆಂಬರ್ ಕಡೆಯಲ್ಲಿ ಮಕ್ಕಳಿಗೆ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಪ್ರಯಾಣ ಕೈಗೊಳ್ಳುವವರ ಸಂಖ್ಯೆ ಹೆಚ್ಚು. ಹೀಗಾಗಿ, ರಸ್ತೆಯಲ್ಲಿ ರಾತ್ರಿಯೂ ಬಹಳಷ್ಟು ವಾಹನ ಸಂಚಾರ ಇರುತ್ತದೆ. ಪ್ರತಿಯೊಬ್ಬರಿಗೂ ಬೇಗ ತಲುಪುವ ಆತುರ. ಟ್ರಾಫಿಕ್‌ ಜಾಮ್‌ ಆದಾಗ ಕಾದು ಸಾಕಾಗಿ ಅಸಹನೆಯಿಂದ ರಸ್ತೆಯಲ್ಲಿ ವಾಗ್ವಾದ, ಹೊಡೆದಾಟ, ತಪ್ಪು ಬದಿಯಿಂದ ಓವರ್ ಟೇಕ್, ಸಿಗ್ನಲ್ ಜಂಪಿಂಗ್, ಓವರ್ ಸ್ಪೀಡ್ ಹೀಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾ ಅಪಾಯಕ್ಕೆ ಆಹ್ವಾನ ನೀಡುತ್ತಾರೆ.

ವಾಹನ ಚಲಾಯಿಸುವಾಗ ಇತರರೊಡನೆ ಮಾತನಾಡುವುದು, ವಿವಿಧ ಭಂಗಿಗಳಲ್ಲಿ ಫೋಟೊ ಕ್ಲಿಕ್ಕಿಸುತ್ತಾ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಪ್ರವೃತ್ತಿಯು ಜನಪ್ರಿಯ. ಈ ರೀತಿ ಮೊಬೈಲ್ ಬಳಕೆಯಿಂದ ಗಮನ ಎಲ್ಲೋ ಇದ್ದು ಕ್ಷಣಾರ್ಧದಲ್ಲಿ ಅಪಘಾತ ಸಂಭವಿಸುವ ಎಲ್ಲ ಸಾಧ್ಯತೆಯೂ ಇರುತ್ತದೆ.

ಹರೆಯದ ಮಕ್ಕಳಿಗೆ ಬೈಕ್ ಓಡಿಸುವುದು ಆತ್ಮವಿಶ್ವಾಸ ಮತ್ತು ಶಕ್ತಿಯ ಸಂಕೇತ. ಹೆಚ್ಚುಗಾರಿಕೆಗಾಗಿ ತಮ್ಮ ಪೋಷಕರ ವಾಹನಗಳನ್ನು ಚಾಲನಾ ಪರವಾನಗಿ ಇಲ್ಲದಿದ್ದರೂ ಚಲಾಯಿಸುತ್ತಾರೆ. ಪೋಷಕರು ‘ಸಣ್ಣವನಾದರೂ ಎಲ್ಲಾ ಓಡಿಸ್ತಾನೆ’ ಎಂದು ಹೆಮ್ಮೆ ವ್ಯಕ್ತಪಡಿಸುವುದೂ ಇದೆ. ಇಂಥ ಮಕ್ಕಳು ವಾಹನ ಚಲಾಯಿಸಿ ಅಪಘಾತ ಎಸಗಿದ ಅನೇಕ ಉದಾಹರಣೆಗಳಿವೆ. ಕಾನೂನಿನ ಪ್ರಕಾರ ಹೀಗೆ ವಾಹನ ಚಲಾಯಿಸಲು ನೀಡುವಂತಿಲ್ಲ. ಒಂದೊಮ್ಮೆ ಅಪಘಾತವಾದರೆ ವಾಹನ ಮಾಲೀಕರಾದ ಪೋಷಕರನ್ನು ವಿಚಾರಣೆಗೆ ಗುರಿಪಡಿಸಿ ದಂಡ, ಶಿಕ್ಷೆ ವಿಧಿಸಲು ಅವಕಾಶವಿದೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ವಹಿಸುವುದು ಸೂಕ್ತ.

ಹಬ್ಬ- ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಪಾರ್ಟಿಗಳಲ್ಲಿ ಯುವಜನರಿಂದ ಮದ್ಯ ಸೇವನೆ ತುಸು ಹೆಚ್ಚಿಗೇ ನಡೆಯುತ್ತದೆ ಬೈಕಿನಲ್ಲಿ ಮೂರ್ನಾಲ್ಕು ಜನ ಕುಳಿತು, ಜೋರಾಗಿ ಕಿರುಚಿಕೊಂಡು, ಕರ್ಕಶ ಸದ್ದು ಮಾಡುತ್ತಾ ಓಡಿಸುವುದು, ಬೈಕಿನ ಸೈಲೆನ್ಸರ್ ತೆಗೆದು ವ್ಹೀಲಿಂಗ್ ಮಾಡುವುದು ಫ್ಯಾಷನ್.  ಬೇಜವಾಬ್ದಾರಿಯ ಇಂಥ ವರ್ತನೆ ಇತರರಿಗೆ ತೊಂದರೆಯನ್ನುಂಟು ಮಾಡುವುದಷ್ಟೇ ಅಲ್ಲ ಪ್ರಾಣವನ್ನೇ ತೆಗೆಯಬಲ್ಲ ದುಸ್ಸಾಹಸ ಕೂಡ.

ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇದ್ದಾಗ ಅವುಗಳಿಂದ ವಾಹನ ಸವಾರರಿಗೆ ಮಾತ್ರವಲ್ಲ ಪಾದಚಾರಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಮನಗಂಡು ಪ್ರತಿವರ್ಷ ಪೊಲೀಸ್‌ ಮತ್ತು ಸಂಚಾರ ವಿಭಾಗದಿಂದ ಇದನ್ನು ತಡೆಗಟ್ಟಲು ಬಹಳಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಡ್ರೋನ್‍ಗಳನ್ನು ಬಳಸಿ ಜನರ ಮೇಲೆ ನಿಗಾ ಇಡಲಾಗುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ಮದ್ಯಸೇವನೆ ಬಗ್ಗೆ ಪರೀಕ್ಷೆ ನಡೆಯುತ್ತದೆ. ಶ್ವಾನದಳದಿಂದ ಮಾದಕವಸ್ತುಗಳ ಪರಿಶೀಲನೆ, ಪ್ರಮುಖ ಸ್ಥಳಗಳಲ್ಲಿ ನಿರೀಕ್ಷಣಾ ಗೋಪುರಗಳಿಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚುವರಿ ಭದ್ರತೆ ಮತ್ತು ಪ್ರಯಾಣಿಕ
ರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅತಿವೇಗ ಮತ್ತು ವ್ಹೀಲಿಂಗ್ ವಿರುದ್ಧ ಕಠಿಣ ಕ್ರಮ ಜಾರಿಯಲ್ಲಿದೆ. ರಾಜ್ಯದಲ್ಲಿ ಹಿಂದಿನ ವರ್ಷದ ಕಡೆಯ ದಿನ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ನಾಲ್ವರು ದುರ್ದೈವಿಗಳು ಅಸುನೀಗಿದ್ದರು.

ರಜೆ, ಹಬ್ಬ, ಹೊಸ ವರ್ಷದ ಸಂಭ್ರಮವು ಬದುಕಿಗೆ ಹೊಸ ಚೈತನ್ಯ ತುಂಬುವ ಖುಷಿಯ ಸಂದರ್ಭ. ಹೇಗೆ, ಎಲ್ಲಿ, ಯಾವಾಗ ಮಾಡಬೇಕು ಎಂಬುದು ಅವರವರ ಇಚ್ಛೆ, ವಿವೇಚನೆಗೆ ಬಿಟ್ಟದ್ದು. ಆದರೆ ತಮಗೂ ಇತರರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ಆಚರಿಸುವುದು ಮುಖ್ಯ. ಸಂಭ್ರಮದ ಆಚರಣೆ ಶೋಕಾಚರಣೆಯಾಗದಂತೆ ಎಚ್ಚರ ಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT