ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಜನಾಂಗ ಮತ್ತು ಪಂಥಗಳು

ತಾಳೆಗರಿಯಲ್ಲಿರುವ ‘ಬೇಡ’ ಶಬ್ದ ಜಾತಿವಾಚಕವಾಗಿ ಸ್ವೀಕರಿಸಿದವರ ತಪ್ಪು ಕಲ್ಪನೆಯ ಫಲವೇ ಕುರುಬರ ಕನಕ ‘ಬೇಡ’ನಾದದ್ದು
Last Updated 30 ನವೆಂಬರ್ 2018, 2:19 IST
ಅಕ್ಷರ ಗಾತ್ರ

‘ಕನಕದಾಸರದ್ದು ವೈಷ್ಣವ ಸಂಪ್ರದಾಯ’ (ವಾ.ವಾ., ನ. 28) ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ವಿದ್ವಾಂಸ ಬಿ. ರಾಜಶೇಖರಪ್ಪ ತಮ್ಮ ಹೇಳಿಕೆಯ ಪ್ರತಿಪಾದನೆಗೆ ಎರಡು ಆಧಾರಗಳನ್ನೂ ಇಬ್ಬರು ವಿದ್ವಾಂಸರ ಹೆಸರುಗಳನ್ನೂ ಬಳಸಿಕೊಂಡಿದ್ದಾರೆ. ಇದೊಂದು ಜನಾಂಗೀಯ ಅಧ್ಯಯನದ ಅರಿವಿಲ್ಲದ ಏಕಮುಖ ಚರ್ಚೆ ಎನ್ನದೆ ವಿಧಿಯಿಲ್ಲ.

ಜನಾಂಗೀಯ ತಜ್ಞರ ಅಭಿಪ್ರಾಯದಂತೆ ಸುಮಾರು ಐದು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವಿರುವ ಕರ್ನಾಟಕದ ಕುರುಬ ಜನಾಂಗವು ಯಾವುದೇ ಒಂದು ಪಂಥ- ಧರ್ಮದ ವ್ಯಾಪ್ತಿಯೊಳಗೆ ಸೀಮಿತವಾಗಿ ಉಳಿದಿಲ್ಲ. ಈ ಸಮುದಾಯ ಹಲವಾರು ಧಾರ್ಮಿಕ ಸ್ಥಿತ್ಯಂತರಗಳನ್ನು ದಾಟಿ ಬಂದಿದೆ ಎಂಬುದನ್ನು ಧಾರ್ಮಿಕ ಇತಿಹಾಸ ಹೇಳುತ್ತದೆ.

ಮೊಹೆಂಜದಾರೊ- ಹರಪ್ಪ ಕಾಲದಿಂದಲೂ ಇವರು ವೃಕ್ಷಾರಾಧನೆ, ಲಿಂಗಾರಾಧನೆ ಮತ್ತು ಮಾತೃದೇವತೆಯ ಆರಾಧನೆ ಕೈಗೊಂಡವರು. ಜೈನ, ಬೌದ್ಧ, ಸಿಖ್‌ ಮತ್ತು ಲಿಂಗಾಯತದಲ್ಲಿ ಬೇರಾಗಿ ಬೆರೆತು, ಅವುಗಳನ್ನು ಚಿಗುರಿನಂತೆ ಬೆಳೆಸಿದವರು. ವಾಸ್ತವ ಏನೆಂದರೆ, ಕರ್ನಾಟಕದ ಇಂದಿನ ಕುರುಬರು ‘ತಮ್ಮ ಕುಲಗುರು ರೇವಣಸಿದ್ಧರು, ಕುಲದೈವ ಬೀರದೇವರು ಎಂದು ಸ್ವೀಕರಿಸಿಯೂ ಶೈವ, ವೈಷ್ಣವ ಮತ್ತು ಶಾಕ್ತೇಯ ಪಂಥದಲ್ಲಿ ನಂಬಿಕೆ ಇಟ್ಟಿದ್ದು, ಬಹುದೇವೋಪಾಸಕರಾಗಿದ್ದಾರೆ.

ಎರಡನೆಯದಾಗಿ, ‘ಕನಕದಾಸರು ಅಪ್ಪಟ ಕುರುಬರು. ವೈಷ್ಣವ ಮತಾನುಯಾಯಿ’ ಎಂದಾಕ್ಷಣ ಅವನು ಬೇಡ, ಅಥವಾ ವೈಷ್ಣವಪಂಥದ ಬ್ರಾಹ್ಮಣನಾಗಿರಬೇಕೆಂದಿಲ್ಲ. ‘The Kurubas formed an important fighting element in the armies of Haider Ali and the Ankusahgiri paligars, and several fiets of military still remain in the possession of Inamdars of Ande caste. Their favourite caste title is ‘Nayak’ (Deexithar; Studies in Tamil Literature and History, P. 178-179).

‘ಬಾಡ’ ಆಡಳಿತ ಕೇಂದ್ರವಾಗಿದ್ದ, 78 ಗ್ರಾಮಗಳ ದಂಡನಾಯಕ ಬೀರಪ್ಪ- ಬಚ್ಚಮ್ಮ (ಕುರುಬರ ಬ್ಯಾಲನ ಕುಲದ ಬಚ್ಚಲಕಲ್ಲಪ್ಪ> ಬೀರಪ್ಪನ ಹೆಸರು) ಎಂಬುವರ ಮಗನಾಗಿ ಹುಟ್ಟಿದ ತಿಮ್ಮಪ್ಪನು ಹಂಡೆ ಕುರುಬ ನಾಯಕರ ವಂಶಜನೆಂದು ಬಳ್ಳಾರಿ, ಕುರುಗೋಡು ಮತ್ತು ಬಂಕಾಪುರದ ಕೈಫಿಯತ್ತುಗಳು ಹೇಳುತ್ತವೆ.

‘ಯಥಾ ರಾಜಾ ತಥಾ ಪ್ರಜಾ’ ಎಂಬಂತೆ, ವಿಜಯನಗರದ ಚಕ್ರವರ್ತಿ ಇಮ್ಮಡಿ ವಿರೂಪಾಕ್ಷನ ಕಾಲದಲ್ಲಿ ಶೈವದಿಂದ ವೈಷ್ಣವ ಪಂಥದತ್ತ ಅನೇಕ ಪಾಳೇಗಾರರು, ದಂಡನಾಯಕರು ಹೊರಳಿದ್ದನ್ನು ಇತಿಹಾಸ ಹೇಳುತ್ತದೆ. ಕನಕದಾಸರ ಪೂರ್ವಜರು ವೈಷ್ಣವ ದೈವಗಳನ್ನು ಪೂಜಿಸಲು ಆರಂಭಿಸಿದ್ದು ಇದೇ ಕಾರಣಕ್ಕಾಗಿ.

ಚಿತ್ರದುರ್ಗದ ಹತ್ತಿರದ ಚಂದವಳ್ಳಿಯಲ್ಲಿ ದೊರೆತ ಮಯೂರನ ಶಾಸನದಲ್ಲಿ ಇರುವ ‘ವರ್ಮ’ ಪದವನ್ನು ಹೇಗೆ ‘ಶರ್ಮ’ವಾಗಿ ಓದಿಕೊಂಡು ಕದಂಬರ ಇತಿಹಾಸ ಪಟ್ಟಭದ್ರರ ಪಾಲಾಗಿದೆಯೋ (ನೋಡಿ, ಡಾ. ಷ. ಶೆಟ್ಟರ್, ಶಂಗಂ ತಮಿಳಗಂ ಮತ್ತು ಕನ್ನಡ ನಾಡುನುಡಿ) ಹಾಗೇ ತಾಳೆಗರಿಯಲ್ಲಿರುವ ‘ಬೇಡ’ ಶಬ್ದ ಕ್ರಿಯಾವಾಚಕವೆಂದರಿಯದೆ, ಜಾತಿವಾಚಕವಾಗಿ ಸ್ವೀಕರಿಸಿದವರ ತಪ್ಪು ಕಲ್ಪನೆಯ ಫಲವೇ ಕುರುಬರ ಕನಕ ‘ಬೇಡ’ನಾದದ್ದು.

ಯಾವುದೇ ಒಬ್ಬ ಕವಿ ಎಷ್ಟೇ ಜಾತ್ಯತೀತನಿದ್ದರೂ ಅವನ ಕೃತಿಗಳಲ್ಲಿ ಅವನ ಪರಿಸರ, ಕುಲಾಚರಣೆಯ ಲಕ್ಷಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಸ್ವತಃ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ‘ಕೀಳುದಾಸ ಕುರುಬದಾಸ’, ‘ನಾವು ಕುರುಬರು ನಮ್ಮ ದೇವರು ಬೀರಪ್ಪ’ ಎನ್ನುತ್ತ, ತಾವು ಬರೆದ ಒಂದು ಉಗಾಭೋಗದಲ್ಲಿ:

‘ಯಮನು ಮುನ್ನೆ ಮಾಂಡವ್ಯ ಶಾಪದಿಂದೆರಡುಜ‌‌‌

ನುಮ ಶೂದ್ರಯೋನಿಯೊಳಗೆ ಪುಟ್ಟಿದನು ಮೊದಲಜ

ನುಮ ವಿದುರನಾಗಿ, ಬಳಿಕ ಕುರುಬ ಕುಲದಲಿ

ಜನಿಸಿದೆನಗೀ ಜನುಮದಲಿ ಮುಕ್ತಿ ಎಂತು ಎಂಬೆ’

(ಕನಕ ಸಾಹಿತ್ಯ ದರ್ಶನ-4, ಪುಟ 661) ಎಂದು ಹೇಳಿಕೊಂಡಿದ್ದಾರೆ. ಅವನು ಕುರುಬನಾಗಿದ್ದರಿಂದಲೇ ಕನಕದಾಸರ ಗುರು ವ್ಯಾಸರಾಯರು ‘ನಾಡಾರ ಹುಡುಕಿದರೂ ಇವಗೆ ಈಡಾರ ಕಾಣೆ’; ‘ಕುರುಬನಿಗೇಕೋ ಕೋಣನ ಮಂತ್ರ’ ಎಂದು ವಾಚಿಸಿ; ಶಿಷ್ಯರಿಗೆ ‘ಕನಕನ ಕೆಣಕಬೇಡಿ, ಕೆಣಕಿ ತಿಣುಕಬೇಡಿ’ ಎಂದು ತಾಕೀತು ಮಾಡುತ್ತಾರೆ.

ಪ್ರಬುದ್ಧ ಇತಿಹಾಸಕಾರ ಮೊದಲು ಜನಾಂಗೀಯ ತಜ್ಞನೂ, ಭಾಷಾತಜ್ಞನೂ ಆಗಿರಬೇಕು. ಅಂತಹವನು ಪ್ರಾಚೀನ ಜನಾಂಗವೊಂದರ ಸಾಂಸ್ಕೃತಿಕ, ಧಾರ್ಮಿಕ ಹೆಜ್ಜೆಗಳನ್ನು ನಿಖರವಾಗಿ ಗುರುತಿಸಬಲ್ಲ. ಜನಾಂಗವೊಂದನ್ನು ತಮ್ಮ ಧಾರ್ಮಿಕ ತೆಕ್ಕೆಗೆ ತೆಗೆದುಕೊಳ್ಳುವ ಏಕಮುಖಿ ಹುನ್ನಾರ ರಾಜಶೇಖರಪ್ಪ ಮತು ಎಂ.ಎಂ. ಕಲಬುರ್ಗಿ ಅವರ ಕನಕದಾಸರ ಕುರಿತ ಲೇಖನಗಳಲ್ಲಿ ಕಂಡುಬರುತ್ತದೆ.

ಕುರುಬರ ಅನೇಕ ಮಹಾತ್ಮರನ್ನು ಶರಣ ವೃತ್ತದೊಳಗೆ ಸೆಳೆಯುವ, ಇತಿಹಾಸದ ವೀರರನ್ನು ಅಪಹರಿಸುವ ಕಾರ್ಯ ಇಂತಹವರಿಂದ ನಿರಂತರ ನಡೆದಿದೆ. ಲಿಂಗಾಯತವನ್ನು ಸ್ವತಂತ್ರ ಧರ್ಮವೆನ್ನುವ ಇವರು ಅದರ ಮೂವತ್ತೆಂಟಕ್ಕೂ ಹೆಚ್ಚು ಒಳಪಂಗಡಗಳು ಸಮುದ್ರದ ನಡುಗಡ್ಡೆಯಂತೆ ತೇಲುತ್ತ ಅತಂತ್ರವಾಗಿ ನಿಂತಿರುವುದಕ್ಕೆ ಏನು ಕಾರಣ ಕೊಡಬಲ್ಲರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT