ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹೋಂವರ್ಕ್: ಸಂಕಟವಲ್ಲ, ಸಡಗರವಾಗಲಿ

ಮಕ್ಕಳಲ್ಲಿ ಬೇರೂರಿರುವ ಹೋಂವರ್ಕ್ ಕುರಿತ ಭೀತಿಯನ್ನು ಅಧ್ಯಾಪಕರು ಹಾಗೂ ಪೋಷಕರು ಹೋಗಲಾಡಿಸುವುದು ಅತ್ಯಗತ್ಯ
Published 25 ಮೇ 2023, 23:28 IST
Last Updated 25 ಮೇ 2023, 23:28 IST
ಅಕ್ಷರ ಗಾತ್ರ

ಹೋಂವರ್ಕ್ ಎಂದೊಡನೆ ಬಹುತೇಕ ಮಕ್ಕಳು ಹಾವು ಕಂಡಂತೆ ಗಾಬರಿಪಡುತ್ತಾರೆ. ಅದೊಂದು ಶಿಕ್ಷೆ ಎಂತಲೋ ಕಠಿಣ ಸಮಸ್ಯೆಗಳಿಗೆ ಉತ್ತರದ ವ್ಯರ್ಥ ಹುಡುಕಾಟ ಎಂದೋ ಅಥವಾ ಹೇಗೋ ಅಷ್ಟಿಷ್ಟು ವಿಷಯ ಸಂಗ್ರಹಿಸಿ ಪೋಣಿಸಿ ಒಪ್ಪಿಸುವ ಪ್ರಬಂಧವೆಂದೋ ಭಾವಿಸುವುದಿದೆ.

ಈಗ್ಗೆ ಇಪ್ಪತ್ತು ವರ್ಷಗಳಿಗೂ ಹಿಂದೆ ಶಾಲೆಯಲ್ಲಿ ನೀಡುತ್ತಿದ್ದ ಹೋಂವರ್ಕ್‍ಗೆ ಹೋಲಿಸಿದರೆ ಇಂದಿನದು ದುಪ್ಪಟ್ಟು ಗಾತ್ರದ್ದೆಂಬುದು ಸರಿ. ಹೋಂವರ್ಕ್ ಮಾಡದಿದ್ದರೆ ಅತ್ತ ಶಾಲೆಯಲ್ಲೂ ಇತ್ತ ಮನೆಯಲ್ಲೂ ಮಕ್ಕಳಿಗೆ ಅಸಹನೀಯ ಒತ್ತಡ, ಇದಕ್ಕಿಂತ ಹೊಣೆಗೇಡಿತನ ಇನ್ನೊಂದಿಲ್ಲ ಎಂಬ ಪಟ್ಟ. ‘ಗುಮ್ಮ’ ಎಂದೇ ಮಕ್ಕಳು ಪರಿಭಾವಿಸುವ ಹೋಂವರ್ಕ್, ಅವರಲ್ಲಿ ಬಗೆ ಬಗೆ ಸುಳ್ಳು ಹೇಳಿಸಬಹುದು, ನೆಪ ಹೂಡಿಸಬಹುದು. ಅಧ್ಯಾಪಕರು ಹಾಗೂ ಪೋಷಕರು ಮಕ್ಕಳಲ್ಲಿ ಬೇರೂರಿರುವ ಹೋಂವರ್ಕ್ ಕುರಿತ ಭೀತಿಯನ್ನು ಹೋಗಲಾಡಿಸುವುದು ಅತ್ಯಗತ್ಯ.

ಮಕ್ಕಳಿಗೆ ಕೊಡುವ ಹೋಂವರ್ಕ್ ಅವರಿಗೆ ಆಪ್ತವಾಗುವತ್ತ ಸಂಯಮದ ಹೆಜ್ಜೆಗಳನ್ನಿಡುವುದು ಸಾಧ್ಯ. ಇಲ್ಲಿ ಪೋಷಕರ ಆದ್ಯತೆ ಮಕ್ಕಳೇ ವಿನಾ ಹೋಂವರ್ಕ್ ಅಲ್ಲ! ಅದರ ಹೆಸರೇ ಹೋಂವರ್ಕ್- ಮನೆಯಲ್ಲಿ ಬಿಡುಬೀಸಾಗಿ ವಿದ್ಯಾಲಯದಲ್ಲಿ ನಿಗದಿಪಡಿಸಿದ್ದರ ಅಭ್ಯಾಸ. ನಾಳೆ ಅಧ್ಯಾಪಕರಿಗೆ ‘ಇಗೊಳ್ಳಿ ಇಷ್ಟು ಪೂರೈಸಿದ್ದೇನೆ’ ಎನ್ನುವ ವರದಿಗಿಂತಲೂ ತಾನೇನು ಕಲಿತೆ, ಅರಿತೆ ಎನ್ನುವುದು ವಿದ್ಯಾಕಾಂಕ್ಷಿಗೆ ಮುಖ್ಯವಾಗುತ್ತದೆ. ಹೋಂವರ್ಕ್ ಜ್ಞಾನದ ಜೊತೆಗೆ ಸ್ವಯಂ ಶಿಸ್ತು, ಜವಾಬ್ದಾರಿ ಕಲಿಸುವಲ್ಲಿ ಪ್ರೇರಕ ನಿರ್ದೇಶನವಾಗುವುದು. ‌

ಮಕ್ಕಳು ಚಿಂತನೆಗಳಿಗೂ ಮೀರಿ ತಪ್ಪುಗಳಿಂದಲೇ ತಿಳಿವಳಿಕೆಯತ್ತ ದಾಪುಗಾಲಿಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಕೊಟ್ಟ ಹೋಂವರ್ಕ್ ಅನ್ನು ಸಮರ್ಪಕವಾಗಿ ಮಾಡಿದಾಗ ಮಕ್ಕಳು ಆಯಾ ವಿಷಯದ ಮುಂದಿನ ಅಧ್ಯಾಯವನ್ನು ಸುಲಭವಾಗಿ ಆತ್ಮವಿಶ್ವಾಸದಿಂದ ಅರ್ಥೈಸಿಕೊಳ್ಳಬಹುದು. ಎಂತಹ ದಿವ್ಯತೆಯನ್ನು ಅವರು ಪಡೆಯಬಹುದೆಂದರೆ, ಹೋಂವರ್ಕ್ ಕೊಟ್ಟಿರದ ದಿನ ಕೂಡ ಗಂಭೀರ ಓದಿನಲ್ಲಿ, ಬರವಣಿಗೆಯಲ್ಲಿ, ಏನಾದರೊಂದು ಉಪಯುಕ್ತ ಓದಿನಲ್ಲಿ ತೊಡಗಿರುತ್ತಾರೆ. ಮಕ್ಕಳು ಹೋಂವರ್ಕ್‌ನಲ್ಲಿ ನಿರತರಾದಾಗ ಹಿರಿಯರು ಅವರೊಂದಿಗೆ ಕುಳಿತು ತಮ್ಮ ಓದು, ಸಣ್ಣಪುಟ್ಟ ಕಡತದ ವಿಲೇವಾರಿಯಲ್ಲಿ ಮಗ್ನರಾದರೆ ಅದಕ್ಕಿಂತ ಸ್ಫೂರ್ತಿಯಿರದು. ತನಗೆ ಮಾತ್ರ ಈ ಪ್ರಯಾಸ, ಮನೆಯಲ್ಲಿ ಉಳಿದವರೆಲ್ಲ ಆರಾಮವಾಗಿದ್ದಾರೆ ಎಂಬ ಭಾವ ಮಕ್ಕಳಿಗೆ ಬರಬಾರದು. ಮನೆಗೆಂದು ಕೊಟ್ಟ ಪಾಠವನ್ನು ಉಲ್ಲಾಸದಾಯಕ ಆಟವಾಗಿ ರೂಪಾಂತರಿಸುವುದು ಸಾಧ್ಯ.

ಮಕ್ಕಳಿಗೆ ಹೋಂವರ್ಕ್ ಮಾಡಿಸುವುದೆಂದರೆ ದೊಡ್ಡ ಸಾಹಸವೆಂಬ ನಿಲುವನ್ನು ಪೋಷಕರು ತಮ್ಮ ಮನಸ್ಸಿನಿಂದ ಮೊದಲು ಕಿತ್ತೊಗೆಯಬೇಕು. ವಿದ್ಯಾಲಯಕ್ಕೆ ಮತ್ತು ಮನೆಗೆ ಮಗುವಿನ ಕಲಿಯುವ ಶೈಲಿ ತಿಳಿದಿದ್ದರೆ ಹೋಂವರ್ಕ್ ಎಂಬ ಯಜ್ಞ ಸಾಂಗವಾಗುವುದು.

ಇದು ತಮ್ಮ ಮಕ್ಕಳಿಗೆ ಕೊಟ್ಟ ಹೋಂವರ್ಕ್, ತಮಗಲ್ಲ, ತಮ್ಮದೇನಿದ್ದರೂ ಉತ್ತೇಜನ ಎಂದು ಪೋಷಕರು ತಿಳಿದರೆ ಹೋಂವರ್ಕ್‍ನ ಉದ್ದೇಶ ಅರ್ಧ ಹಾದಿ ಕ್ರಮಿಸಿದಂತೆ. ಶಾಲೆಯಿಂದ ಬಂದ ಕೂಡಲೇ ‘ಇವೊತ್ತು ಏನು ಕೊಟ್ಟಿದ್ದಾರೆ, ಯಾವ ಲೆಕ್ಕ, ಎಷ್ಟು ಸಾಲುಗಳ ಪದ್ಯ ಬರೆದುಕೊಂಡು ಹೋಗಬೇಕು’ ಎಂದೆಲ್ಲ ವಿಚಾರಿಸುವ ಆತುರ, ಕಾತರದ ಅಗತ್ಯವಿಲ್ಲ. ಇಂಥ ತಾಕೀತಿನಿಂದ ಇಡೀ ದಿನ ಪೇಪರ್, ಪೆನ್ಸಿಲ್, ರಬ್ಬರ್, ಮಗ್ಗಿಯಲ್ಲಿ ತೊಡಗಿದ ಮಗುವಿನಲ್ಲಿ ಸಿಟ್ಟು, ಅಸಹನೆ ಮತ್ತಷ್ಟು ಹೆಚ್ಚುತ್ತದೆ. ಅವರು ಹೋಂವರ್ಕ್ ನಿರಾಕರಿಸುವುದು ಸಹಜ. ರೇಗುವುದು, ಬೆದರಿಸುವುದು, ದಂಡಿಸುವುದರ ಬದಲು, ಹೋಂವರ್ಕ್ ಮಾಡದಿದ್ದರ ಪರಿಣಾಮಗಳನ್ನು ಅವರ ಮುಂದೆ ಮುಕ್ತವಾಗಿ ತೆರೆದಿಡಬೇಕು. ಬದಲಿಗೆ ಹೋಂವರ್ಕ್ ಮಾಡುವ ಸಮಯವನ್ನು ಮಕ್ಕಳ ಆಯ್ಕೆಗೇ ಬಿಡುವುದು ಸೂಕ್ತ.

ಟಿ.ವಿ., ಮೊಬೈಲ್, ಕಂಪ್ಯೂಟರ್ ಗೇಮ್‌ಗಳ ಮುಕ್ತ ವಾತಾವರಣದಲ್ಲಿ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುವುದು ಪರಿಣಾಮಕಾರಿ. ಒಂದು ಸಣ್ಣ ಸೂಚನೆಯನ್ನೊ, ಸುಳಿವನ್ನೊ ನೀಡಿ ಅವರಿಂದಲೇ ಉತ್ತರ, ವಿವರಣೆ ಮೂಡಿಸುವುದು ಅದ್ಭುತವಾಗಿ ಕಲಿಸುವ, ಕಲಿಯುವ ಅನುಭವ. ಆಗ ಮಕ್ಕಳೇ ಮನೆಗೆ ಕೊಟ್ಟ ಪಾಠದ ಮೌಲ್ಯ ಅರಿಯುತ್ತಾರೆ. ವಿಪರ್ಯಾಸವೆಂದರೆ, ಹೋಂವರ್ಕ್ ನಿಮಿತ್ತವಾಗಿಯೇ ತಮ್ಮ ಮಕ್ಕಳನ್ನು ಪೋಷಕರು ಟ್ಯೂಷನ್ನಿಗೆ ಕಳಿಸುವುದುಂಟು. ನಿಜಕ್ಕೂ ವಿದ್ಯಾರ್ಜನೆಯ ಗೊತ್ತು ಗುರಿಯನ್ನೇ ಮೂಲೆಗುಂಪಾಗಿಸುವ ನಿರ್ಧಾರವಿದು. ಇದರಿಂದ ಮಕ್ಕಳಿಗೆ ಮತ್ತಷ್ಟು ಒತ್ತಡ, ಸಮಯಹರಣವಷ್ಟೇ ಅಲ್ಲ, ಸ್ವಾಧ್ಯಯನಕ್ಕೆ, ಸೃಜನಶೀಲತೆಗೆ ಅವಕಾಶವೇ ಇಲ್ಲದಂತಾಗುವ ತರಾತುರಿ.

‘ಬಹಳ ಕಷ್ಟ ಬಿಡು, ನಿನಗೆ ಅರ್ಥವಾಗದು’ ಎಂಬ ನಿರುತ್ತೇಜನದ ಮೂಲಕ, ಪಾಲಕರು ಅರಳುವ ಮನಸ್ಸುಗಳನ್ನು ಶರಣಾಗತಿಗೆ ದೂಡಬಾರದು. ಪೋಷಕರಿಗೆ ತಮ್ಮ ಮಕ್ಕಳ ಬಗೆಗಿನ ನಿರೀಕ್ಷೆಗಳು ವಾಸ್ತವಿಕವಾಗಿಯೂ ಸಾಧನಾರ್ಹವಾಗಿ ಇರುವುದು ಮಾದರಿ.

ಹೋಂವರ್ಕ್ ಎನ್ನುವುದು ಮನೆಗೆ ನಿಯೋಜಿಸುವ ಕಾರ್ಯವಲ್ಲ, ಅದು ಪರಿಣತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪೂರೈಸಲು ಹೇಳುವ ನಿಗದಿತ ಕಾರ್ಯ. ಮಕ್ಕಳು ಆ ಯಶಸ್ಸನ್ನು ಮುಟ್ಟಿದರೆ ತರಗತಿ ರಂಜನೀಯ ಎನ್ನಿಸುವುದು. ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಶಾಲೆ ತೊರೆಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗುತ್ತದೆ. ‘ಹೋಂವರ್ಕ್’ ಎಂಬ ಪದವನ್ನೇ ಮಾರ್ಪಡಿಸಿ ‘ಮನೆ ಓದು’ ಅಥವಾ ‘ಮನೆ ಅಭ್ಯಾಸ’ ಎನ್ನುವುದು ಸೂಕ್ತ. ಕೊಡುವ ಹೋಂವರ್ಕ್ ಕಗ್ಗಂಟು, ಒಗಟಾದರೆ ನಿಸ್ಸಂದೇಹವಾಗಿ ಅದು ಮಕ್ಕಳಿಗೆ ಹೊರೆ. ಹಾಗಾಗಿ ಆಯಾ ಬೋಧಕರು ಸರಳವಾದರೂ ಪರಿಕಲ್ಪನೆಗಳಿಂದ ಸಮೃದ್ಧವಾಗಿರುವ ಹೋಂವರ್ಕ್ ನಿಗದಿಗೊಳಿಸಬೇಕು. ಆ ದಿಸೆಯಲ್ಲಿನ ಅವರ ಪರಿಶ್ರಮ ಫಲಕಾರಿ.

ಅಮೆರಿಕದ ಹಿರಿಯ ಬರಹಗಾರ್ತಿ ಲಿಲಿ ಟಾಮ್ಲಿನ್ ಅವರ ಮೌಲಿಕ ನುಡಿಯಿದು: ‘ಹೋಂವರ್ಕ್‌ನಿಂದ ಆಚೆಗೂ ಮಕ್ಕಳಲ್ಲಿ ಏನಾದರೂ ಹೊಸತು ಸ್ಫುರಿಸುವ ‘ಹೋಂವರ್ಕ್‌’ ಅನ್ನು ಮನೆಗೊಯ್ಯಲು ಹೇಳುವ ಶಿಕ್ಷಕರನ್ನು ಇಷ್ಟಪಡುತ್ತೇನೆ’.

ಪೋಷಕರು ತಮ್ಮ ಮಕ್ಕಳ ವಿದ್ಯಾರ್ಜನೆಯಲ್ಲಿ ಒಳಗೊಂಡರೆ ಆಗುವ ಪ್ರಯೋಜನಗಳು ಬಹುಮುಖಿ. ಮಕ್ಕಳಲ್ಲಿ ಜೀವನವಿಡೀ ಉತ್ತಮ ಶೈಕ್ಷಣಿಕ ಅನುಭವ ಅನುರಣಿಸುತ್ತದೆ. ಜ್ಞಾನ, ಸಾಮಾಜಿಕ ಕೌಶಲ, ಸದ್ವರ್ತನೆಯು ಶಾಲೆ ಮತ್ತು ಮನೆಯ ಸಹಯೋಗದಿಂದ ತಮಗೆ ಪ್ರಾಪ್ತವಾದ ಉಡುಗೊರೆ ಎಂದು ಅವರು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT