ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇದೋ ಬಂದಿದೆ, ಆಮೆಗಳ ಹಬ್ಬ

ಜೀವಿವೈವಿಧ್ಯದ ಪ್ರಮುಖ ಕೊಂಡಿಯೆನಿಸಿರುವ ಆಮೆಗಳ ಆವಾಸಗಳನ್ನು ಸದೃಢಗೊಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ
Published 23 ಮೇ 2023, 0:36 IST
Last Updated 23 ಮೇ 2023, 0:36 IST
ಅಕ್ಷರ ಗಾತ್ರ

ತಮಿಳುನಾಡಿನ ರಾಮನಾಥಪುರಂನ ಕರಾವಳಿ ತೀರದಲ್ಲಿ ಈ ವರ್ಷದ ಮಾರ್ಚ್ ಮೂರರಂದು ಸೇರಿದ್ದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಪರೀಕ್ಷೆಯ ಒತ್ತಡದ ನಡುವೆಯೂ ಕಡಲತೀರಕ್ಕೆ ಬಂದಿದ್ದ ವಿದ್ಯಾರ್ಥಿಗಳು, ಆಗತಾನೇ ಮರಳುಗೂಡಿನಿಂದ ಹೊರಬಂದಿದ್ದ ಕಡಲಾಮೆ ಮರಿಗಳನ್ನು ಕೈಯಲ್ಲಿ ಹಿಡಿದು ಕಡಲಿಗೆ ಬಿಟ್ಟು, ಅವು ಅವಸರದಲ್ಲಿ ಪುಟುಪುಟು ಹೆಜ್ಜೆ ಇರಿಸಿ ತೇಲಿ ಹೋಗುವುದನ್ನು ನೋಡಿ, ಆಕಾಶಕ್ಕೆ ರಾಕೆಟ್ ಹಾರಿಸಿದಷ್ಟೇ ಖುಷಿಯಾಗಿದ್ದರು. ಅರಣ್ಯ ಇಲಾಖೆಯವರು ರಕ್ಷಿಸಿ ಮರಿ ಮಾಡಿಸಿದ್ದ ಇತರ 12,000 ಕಡಲಾಮೆಯ ಮರಿಗಳನ್ನು ಅಂದು ‘ಸಾಗರಜೀವಿಗಳ ಜೀವಿಗೋಳ’ ಎಂದೇ ಖ್ಯಾತವಾಗಿರುವ ಮನ್ನಾರ್‌ಕೊಲ್ಲಿಯಲ್ಲಿ ತೇಲಿಬಿಡಲಾಗಿತ್ತು. ಆಮೆಗಳ ಹಬ್ಬವೇ ನಡೆದಿತ್ತು. ಇತ್ತ ನಮ್ಮ ಕರ್ನಾಟಕದ ಹೊನ್ನಾವರದ ಕಡಲ ತೀರದಲ್ಲೂ ಕಡಲಾಮೆಗಳ ಹಬ್ಬ ಮೇಳೈಸಿತ್ತು.

ಬೇಸಿಗೆ ಬಂತೆಂದರೆ, ಸಾಗರಗಳಲ್ಲೇ ಗರ್ಭ ಧರಿಸಿದ ಸಾವಿರಾರು ಕಡಲಾಮೆಗಳು ತೀರಕ್ಕೆ ಬಂದು, ಮರಳಿನ ಗೂಡು ರಚಿಸಿ, ಎಂಬತ್ತರಿಂದ ನೂರು ಮೊಟ್ಟೆಗಳನ್ನಿಟ್ಟು ಸದ್ದಿಲ್ಲದೆ ಸಮುದ್ರ ಸೇರಿಕೊಳ್ಳುತ್ತವೆ. ಒಂದರಿಂದ ಎರಡು ಅಡಿ ಆಳದ ಗುಂಡಿ ತೆರೆದು ಮೊಟ್ಟೆ ಇಡುವುದಷ್ಟೇ ಕೆಲಸ. ಮೊಟ್ಟೆಗಳಿಗೆ ಕಾವು ಕೊಡುವ ಕೆಲಸ ಮರಳಿನದ್ದು. ಮೊಟ್ಟೆಯಿಂದ ಮರಿಗಳು ಹೊರಬರಲು 45ರಿಂದ 60 ದಿನಗಳು ಬೇಕು. ಮರಳಿನ ಉಷ್ಣಾಂಶ ಕಡಿಮೆ ಇದ್ದರೆ ಗಂಡು, ಜಾಸ್ತಿಯಾದರೆ ಹೆಣ್ಣು ಆಮೆಗಳು ಜನಿಸುತ್ತವೆ. ಜನಿಸಿದ ಕೆಲವೇ ನಿಮಿಷಗಳಲ್ಲಿ ಗೂಡಿನಿಂದ ಮೇಲಕ್ಕೆ ಒಂದು ಅಲೆಯ ರೂಪದಲ್ಲಿ ಸಾವಿರಾರು ಆಮೆಗಳು ಕಡಲು ಸೇರಿಕೊಳ್ಳುತ್ತವೆ. ಮೊಟ್ಟೆಗಳು ಹಾಗೂ ಮರಿಗಳು ಕೆಲವೊಮ್ಮೆ ಬೇಟೆ ಹಕ್ಕಿ, ಹದ್ದು, ನಾಯಿ, ಜನರ ಪಾಲಾಗುವುದೂ ಉಂಟು. ಪ್ರವಾಸಿಗರ ತುಳಿತಕ್ಕೆ ಸಿಲುಕಿ ನಾಶವಾಗುವುದೂ ಇದೆ.

ದಕ್ಷಿಣ ಏಷ್ಯಾದ ಸಾಗರಜೀವಿಗಳ ಸ್ವರ್ಗ ಎಂದೇ ಪ್ರಸಿದ್ಧವಾದ ಮನ್ನಾರ್‌ಕೊಲ್ಲಿ (ಗಲ್ಫ್ ಆಫ್ ಮನ್ನಾರ್) ಸಾವಿರಕ್ಕೂ ಹೆಚ್ಚು ಸಾಗರ ಜೀವ ಪ್ರಭೇದಗಳಿಗೆ ನೆಲೆ ಕಲ್ಪಿಸಿದೆ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಆಮೆ ಪ್ರಭೇದಗಳು ಇಲ್ಲಿವೆ. ಮೊಟ್ಟೆಗಳು ನೈಸರ್ಗಿಕವಾಗಿ ಮರಿಗಳಾಗಿ ಕಡಲು ಸೇರುವುದನ್ನು ನೋಡಲು ಬರುವ ದೇಶ ವಿದೇಶಗಳ ಆಸಕ್ತರು, ಚಿತ್ರಗ್ರಾಹಕರು, ಸಂರಕ್ಷಣಾ ತಜ್ಞರು, ವಿಜ್ಞಾನಿಗಳು ಕ್ಯಾಮೆರಾ ಕಣ್ಣುಗಳಿಂದ ಅವುಗಳ ಚೈತನ್ಯಪೂರ್ಣ ಬದುಕಿನ ಸುಂದರ ಕ್ಷಣಗಳನ್ನು ಸೆರೆಹಿಡಿದು ತಾವೂ ಆನಂದಿಸಿ ಇತರರಿಗೂ ಆನಂದ ಹಂಚುತ್ತಾರೆ. ರಕ್ಷಣೆಯ ಜವಾಬ್ದಾರಿಯನ್ನೂ ನೆನಪಿಸುತ್ತಾರೆ.

ಕಡಲಾಮೆಗೂ ಕಾಡು, ಹುಲ್ಲುಗಾವಲು, ಕಲ್ಲುಪೊಟರೆ ಆಮೆಗಳಿಗೂ ವ್ಯತ್ಯಾಸವಿದೆ. ಕಡಲಾಮೆಗಳ ಆಯುಷ್ಯ ಬರೀ 25ರಿಂದ 30 ವರ್ಷಗಳಾದರೆ, ಸಾಧಾರಣ ಆಮೆ ಹತ್ತತ್ತಿರ ಇನ್ನೂರು ವರ್ಷ ಜೀವಿಸಬಲ್ಲದು. ಜೀವಿವೈವಿಧ್ಯದ ಬಹುಮುಖ್ಯ ಕೊಂಡಿಯಾಗಿರುವ ಆಮೆಗಳ ರಕ್ಷಣೆಯ ದಿಸೆಯಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23ರಂದು ‘ಆಮೆ ದಿನಾಚರಣೆ’ ನಡೆಯುತ್ತದೆ.

ಮಾಂಸ, ಚಿಪ್ಪು ಮತ್ತು ಚರ್ಮಗಳಿಗಾಗಿ ಇವುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಶೇ 30ರಷ್ಟು ಪ್ರಭೇದಗಳು ಅಳಿವಿನಂಚಿಗೆ ಸರಿದಿವೆ. ದೋಣಿಗಳಿಗೆ ಬಲೆ ಕಟ್ಟಿಕೊಂಡು ಮೀನು ಶಿಕಾರಿ ಮಾಡುವಾಗ ಮೀನುಗಳ ಜೊತೆ ಲಕ್ಷಾಂತರ ಆಮೆಗಳು ಬಲೆಗೆ ಸಿಲುಕುತ್ತವೆ. ಒಂದು ಲೆಕ್ಕದ ಪ್ರಕಾರ, ಶೇ 52ರಷ್ಟು ಆಮೆಗಳು ಪ್ಲಾಸ್ಟಿಕ್ ಸೇವನೆಯಿಂದ ಸಾಯುತ್ತವೆ ಮತ್ತು ಮೀನುಗಾರರ ಬಲೆಗೆ ಸಿಲುಕುವ ಶೇ 92ರಷ್ಟು ಆಮೆಗಳು ಉಸಿರುಗಟ್ಟಿ ಸಾಯುತ್ತವೆ. ವರ್ಷವೊಂದಕ್ಕೆ ಹತ್ತು ಲಕ್ಷ ಆಮೆಗಳು, ಸೀಲ್, ಡಾಲ್ಫಿನ್‍ಗಳು ಜೀವ ಕಳೆದುಕೊಳ್ಳುತ್ತಿರುವುದು ಜೀವವಿಜ್ಞಾನಿಗಳ ನಿದ್ದೆಗೆಡಿಸಿದೆ.

ಇದನ್ನು ತಡೆಯಲು, ಮುಂದುವರಿದ ದೇಶಗಳಲ್ಲಿ ಟರ್ಟಲ್ ಎಕ್ಸ್‌ಕ್ಲೂಡರ್ ಡಿವೈಸರ್‌ಗಳನ್ನು ಬಳಸುತ್ತಾರೆ. ಇದರಿಂದ ತಮಗೆ ಸಿಗುವ ಮೀನಿನ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವ ಮೀನುಗಾರರು, ಆಧುನಿಕ ತಂತ್ರಜ್ಞಾನ ಬಳಕೆಗೆ ಆಸಕ್ತಿ ತೋರಿಸುತ್ತಿಲ್ಲ. ಜಪಾನ್‍ನ ತಜ್ಞರು ಸ್ಥಳೀಯ ಮೀನುಗಾರರೊಂದಿಗೆ ಮಾತನಾಡಿ, ‘ಬಲೆಯ ವಿನ್ಯಾಸವನ್ನು ಸ್ಪಲ್ಪ ಅಗಲ ಮಾಡಿದರೆ ಆಮೆಗಳು ಸುಲಭವಾಗಿ ಬಲೆಯಿಂದ ತಪ್ಪಿಸಿಕೊಳ್ಳುತ್ತವೆ. ನಿಮಗೆ ಬಹಳಷ್ಟು ಮೀನುಗಳು ಸಿಗುತ್ತವೆ’ ಎಂದು ಭರವಸೆ ತುಂಬಿ ಮೀನುಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೀನಿನ ಬಲೆಗಳಿಗೆ ಮಿನುಗುವ ಎಲ್‍ಇಡಿ ಬಲ್ಬ್ ಅಳವಡಿಸಿದರೆ, ಮಿಣುಕು ಬೆಳಕು ಗಮನಿಸಿ ಬಲೆಯಿಂದ ದೂರವುಳಿಯುವ ಆಮೆಗಳು ಸುರಕ್ಷಿತ ಜಾಗ ತಲುಪುತ್ತವೆ ಎಂಬುದು ಗೊತ್ತಾಗಿದೆ. ಇದರ ಬಳಕೆಯ ಪ್ರಯತ್ನ ಇಟಲಿ, ವಿಯೆಟ್ನಾಂನ ತೀರ ಪ್ರದೇಶಗಳಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರದ ಕಾಂಡ್ಲಾ ಕಾಡುಗಳ ಉಸ್ತುವಾರಿ ಸಮಿತಿಯು ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳೊಂದಿಗೆ ಚರ್ಚಿಸಿ, ಬಲೆಗೆ ಬೀಳುವ ಆಮೆಗಳನ್ನು ರಕ್ಷಿಸಲು ಬಲೆಯನ್ನು ತುಂಡರಿಸಿ, ಅವು ನೀರಿಗೆ ವಾಪಸಾಗುವಂತೆ ಮಾಡುವ ಮೀನುಗಾರರಿಗೆ ನಗದು ಬಹುಮಾನ ನೀಡುವ ಯೋಜನೆ ಪ್ರಾರಂಭಿಸಿದೆ.

ಜೀವಿವೈವಿಧ್ಯದ ಪ್ರಮುಖ ಕೊಂಡಿಯೆನಿಸಿರುವ ಆಮೆಗಳು, ಸಾಗರಗಳಲ್ಲಿ ಜೆಲ್ಲಿ ಮೀನುಗಳ ಸಂಖ್ಯೆ ಹತೋಟಿ ಮೀರಿ ವೃದ್ಧಿಯಾಗುವುದನ್ನು ತಡೆಯುತ್ತವೆ. ಹಾಕ್‍ಬಿಲ್ ಪ್ರಭೇದದ ಆಮೆಗಳು ಹವಳದಿಬ್ಬದ ಬೆಳವಣಿಗೆ ಕುಂಠಿತಗೊಳಿಸುವ ಸ್ಪಾಂಜ್‍ಗಳನ್ನು ನಿಯಂತ್ರಿಸುತ್ತವೆ. ಗೂಡಿನ ಸಾವಿರಾರು ಮೊಟ್ಟೆಗಳು ಮರಿಗಳಾಗದೆ ನಾಶವಾದರೂ ಅವುಗಳ ಪೋಷಕಾಂಶ ತೀರ ಪ್ರದೇಶದ ಸಸ್ಯ ಸಂಪತ್ತಿನ ವೃದ್ಧಿಗೆ ನೆರವಾಗುತ್ತದೆ. ಅಂಟಾರ್ಕ್ಟಿಕ ಹೊರತುಪಡಿಸಿ ಗೋಳದ ಎಲ್ಲ ಭಾಗಗಳಲ್ಲೂ ಆಮೆಗಳ ಆವಾಸವಿದೆ. ಅವನ್ನು ಸದೃಢಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT