ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆನ್‌ಲೈನ್‌ ಮೋಸದ ಜಾಲದ ಕರಾಮತ್ತು

ನಮ್ಮನ್ನು, ನಮ್ಮ ಹಿರಿಯರನ್ನು, ಮಕ್ಕಳನ್ನು ಆನ್‍ಲೈನ್ ಮೋಸದ ಜಾಲದಿಂದ ಕಾಪಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ
Last Updated 6 ಮೇ 2022, 19:46 IST
ಅಕ್ಷರ ಗಾತ್ರ

ಈ ಶತಮಾನದ ಸಮಸ್ಯೆಗಳಲ್ಲಿ ಮುಖ್ಯವಾದದ್ದು ಆನ್‍ಲೈನ್ ವಂಚನೆ. ಒಂದೆಡೆ ಜಗತ್ತು ಡಿಜಿಟಲೀಕರಣಗೊಳ್ಳುತ್ತಿದ್ದಂತೆ, ಕ್ಯಾಶ್‍ಲೆಸ್ ಆರ್ಥಿಕತೆಯ ಘೋಷಣೆಗಳು ಕೇಳಿಬರುತ್ತಿದ್ದಂತೆ, ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸೈಬರ್ ಮೋಸದ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿವೆ. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾದ ಈ ಸಮಸ್ಯೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಮೊದಲೆಲ್ಲ ಯಾರೋ ಕೆಲವರು ವೈಯಕ್ತಿಕವಾಗಿ ಈ ರೀತಿಯ ವಂಚನೆ ಎಸಗುತ್ತಿದ್ದರು. ಆದರೀಗ ಅದಕ್ಕೆಂದೇ ವ್ಯವಸ್ಥಿತ ಮೋಸದ ಜಾಲಗಳಿವೆ. ಯಾವುದು ಅಸಲಿ, ಯಾವುದು ನಕಲಿ ಎಂದು ಗೊತ್ತೇ ಆಗದಂತೆ ವೆಬ್‍ಸೈಟ್‌ಗಳನ್ನು ರೂಪಿಸಿ ಅವುಗಳ ಮೂಲಕ ಜನರ ಖಾತೆಗಳ ರಹಸ್ಯ ಮಾಹಿತಿಗಳನ್ನು ಪಡೆದು ಹಣ ಕದಿಯಲಾಗುತ್ತಿದೆ. ಬೆರಳ ತುದಿಯಲ್ಲಿ ಜಗತ್ತಿನ ಕೀಲಿಕೈ ಇದೆ ಎಂದು ಹೆಮ್ಮೆ ಪಡುತ್ತಿರುವ ಹೊತ್ತಲ್ಲೇ, ಅದೇ ಬೆರಳ ತುದಿಯಿಂದ ಮಾಡುವ ಒಂದು ಕ್ಲಿಕ್ ನಮ್ಮ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿಬಿಡಬಹುದು ಎನ್ನುವುದು ವಿಚಿತ್ರವಾದರೂ ಸತ್ಯ!

ನಿಮ್ಮ ಅಕೌಂಟ್ ಬ್ಲಾಕ್‌ ಆಗಲಿದೆ ಅಥವಾ ಖಾತೆಯಿಂದ ಹಣ ಕಟಾವಣೆಯಾಗಿದೆ, ಅದನ್ನು ಸರಿಪಡಿಸಿಕೊಳ್ಳಲು ಈ ಲಿಂಕ್ ಒತ್ತಿ ಎಂದು ಬ್ಯಾಂಕಿನ ಗ್ರಾಹಕರ ಮೊಬೈಲಿಗೆ ಸಂದೇಶ ಬರುತ್ತದೆ. ಬ್ಯಾಂಕಿನವರೇ ಕಳಿಸಿದ್ದೇನೋ ಅನ್ನಿಸುವಂತಿರುತ್ತದೆ ಆ ಸಂದೇಶ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ಒಂದು ವೆಬ್‍ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ಕೆಲವು ಮಾಹಿತಿಗಳನ್ನು ತುಂಬಲು ಹೇಳಲಾಗುತ್ತದೆ. ಗ್ರಾಹಕರು ಮಾಹಿತಿ ತುಂಬಿದ ಕೂಡಲೇ ಖಾತೆಯಿಂದ ಹಣ ಮಂಗಮಾಯವಾಗುತ್ತದೆ! ವಿಶ್ವಾಸಾರ್ಹ ಸಂಸ್ಥೆಗಳ ಹೆಸರು ಬಳಸಿಕೊಂಡು ಸುಳ್ಳು ಸಂದೇಶ, ಇ– ಮೇಲ್‍ಗಳ ಮೂಲಕ ಲಿಂಕ್ ಕಳಿಸಿ, ಆ ಮೂಲಕ ನಡೆಸುವ ಮೋಸದ ವ್ಯವಹಾರವನ್ನು ‘ಫಿಶಿಂಗ್’ (Phishing) ಎನ್ನುತ್ತಾರೆ. ನಿಮ್ಮ ಖಾತೆ ನವೀಕರಿಸಬೇಕು, ಡೆಬಿಟ್ ಕಾರ್ಡ್ ಲಾಕ್ ಆಗಿದೆ, ಲಾಟರಿ ಹೊಡೆದಿದೆ ಹೀಗೆ ಹಲವು ಸಂದೇಶಗಳ ಮೂಲಕ ಗ್ರಾಹಕರನ್ನು ವಂಚಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.

ನಾವು ಓದಿದವರು, ಜಾಣರು ನಮಗೆಲ್ಲ ಆನ್‍ಲೈನ್ ವಂಚನೆ ಆಗಲು ಸಾಧ್ಯವಿಲ್ಲ ಎಂದೇ ನಾವೆಲ್ಲಾ ಅಂದುಕೊಳ್ಳುತ್ತೇವೆ. ಆದರೆ ಆನ್‍ಲೈನ್ ವಂಚನೆಯ ಕರಾಳ ಬಾಹುಗಳು ಎಷ್ಟು ಚುರುಕೆಂದರೆ ಅದರ ಹಿಡಿತದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆ ವಂಚನೆಗೆ ಒಳಗಾದರೆ ನಮ್ಮ ಹಣ ಕೈಜಾರಿದಂತೆಯೆ! ಹುಲ್ಲಿನರಾಶಿಯಲ್ಲಿ ಕಳೆದ ಸೂಜಿಯನ್ನು ಹುಡುಕಿದಂತೆ ಇದು! ಹಾಗಾಗಿ ಕಾಯಿಲೆಯ ಇಲಾಜಿಗಿಂತ ಮುನ್ನೆಚ್ಚರಿಕೆಯೇ ಕ್ಷೇಮ! ಯಾವುದೇ ಬ್ಯಾಂಕಿನ ಅಧಿಕೃತ ವೆಬ್‍ಸೈಟ್‌ಗೆ ಹೋಗಿ ಅಲ್ಲಿಂದಲೇ ಕಸ್ಟಮರ್ ಕೇರ್ ನಂಬರ್ ತೆಗೆದುಕೊಂಡು ಕರೆ ಮಾಡಬೇಕೇ ವಿನಾ ಗೂಗಲ್‍ನಲ್ಲಿ ಸಿಗುವ ಕಂಡ ಕಂಡ ನಂಬರುಗಳಿಗಲ್ಲ!

ಉದ್ದೇಶಪೂರ್ವಕವಾಗಿ ಯಾವುದೋ ಬ್ಯಾಂಕಿನ ಹೆಸರು ಹಾಕಿ ಮೋಸಗಾರರು ತಮ್ಮ ನಂಬರ್ ಕೊಟ್ಟಿರುತ್ತಾರೆ. ಅರೆಕ್ಷಣದಲ್ಲಿ ನಿಮ್ಮ ಕ್ರೆಡಿಟ್, ಡೆಬಿಟ್ ಕಾರ್ಡ್ ಮೊತ್ತ ಸೊನ್ನೆಯಾಗಿರುತ್ತದೆ!

ಈ ವರ್ಚುವಲ್ ಜಗತ್ತಿನಲ್ಲಿ ಎಷ್ಟೇ ಎಚ್ಚರವಾಗಿದ್ದರೂ ನಮ್ಮನ್ನು ವಂಚಿಸುವ ಹೊಸ ಹೊಸ ವಿಧಾನಗಳನ್ನು ಮೋಸಗಾರರು ಕಂಡುಹಿಡಿಯುತ್ತಲೇ ಇದ್ದಾರೆ. ಹಾಗಾಗಿ ನಾವು ನಮ್ಮ ಖಾತೆಯ, ಕಾರ್ಡ್‌ಗಳಪಿನ್ ನಂಬರ್, ಮೂರಂಕಿಯ ಸಿವಿವಿ ನಂಬರ್ ವಿವರವನ್ನು ಯಾರಿಗೂ ಹೇಳದೇ ಇದ್ದರೆ ಯಾರಿಗೂ ನಮ್ಮನ್ನು ಮೋಸಗೊಳಿಸಲು ಆಗುವುದಿಲ್ಲ. ಹಾಗಾಗಿ ಫೋನ್ ಕರೆ, ಸಂದೇಶಗಳ ಮೂಲಕ ಯಾರೇ ಈ ನಂಬರುಗಳನ್ನು ಕೇಳಿದರೆ ಕೊಡುವುದು ಬೇಡ. ಸ್ವಲ್ಪ ಕಷ್ಟವಾದರೂ ನಮ್ಮ ಬ್ಯಾಂಕ್‌ ಶಾಖೆಗೇ ಹೋಗಿ ವಿಚಾರಿಸುವುದು ಒಳ್ಳೆಯದು. ಇಂತಹ ಸಂದೇಶಗಳಲ್ಲಿ ಬರುವ ನಕಲಿ ಲಿಂಕ್‍ಗಳ ಮೇಲೆ ಯಾವ ಕಾರಣಕ್ಕೂ ಕ್ಲಿಕ್ ಮಾಡಬಾರದು. ನಕಲಿ ಲಿಂಕ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಏನಾದರೂ ಒಂದು ಸ್ಪೆಲ್ಲಿಂಗಿನದ್ದೋ, ವ್ಯಾಕರಣದ್ದೋ ತಪ್ಪು ಇದ್ದೇ ಇರುತ್ತದೆ.

ಅಷ್ಟೇ ಅಲ್ಲ, ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆ ಅಥವಾ ಡಿಸ್ಕೌಂಟ್ ಸಿಗುತ್ತದೆ ಎಂದೆಲ್ಲ ಬರುವ ಲಿಂಕ್‍ಗಳ ಮೇಲೆಯೂ ಕ್ಲಿಕ್ ಮಾಡಬಾರದು. ನಮ್ಮ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸಿ ನಮ್ಮ ಹೆಸರಲ್ಲಿ ಮೋಸ ಮಾಡುವವರೂ ಇರುತ್ತಾರೆ. ಫೇಸ್‍ಬುಕ್ ನಕಲಿ ಖಾತೆಗಳ ಹಾವಳಿ ಇತ್ತೀಚೆಗೆ ಹೆಚ್ಚುತ್ತಿರುವುದನ್ನು ನಾವೆಲ್ಲ ಗಮನಿಸಿಯೇ ಇದ್ದೇವೆ. ಅಪರಿಚಿತರು ಕಳಿಸುವ ಕ್ಯೂಆರ್ ಕೋಡ್‍ಗಳ ಮೇಲೆ ಕೂಡ ಕ್ಲಿಕ್ ಮಾಡಬಾರದು. ಹಣ ಬರುವ ಬದಲು ಕಳೆದುಕೊಂಡವರ ಸಂಖ್ಯೆ ಬಹಳ ಇದೆ. ಇನ್ನು ಒಂದೇ ಅಕೌಂಟಿನಲ್ಲಿ ಬಹಳ ಮೊತ್ತವಿಟ್ಟು ಅದನ್ನೇ ಎಲ್ಲ ಕಡೆ ಸ್ಕ್ಯಾನ್ ಮಾಡುವುದೂ ಅಪಾಯಕಾರಿ. ನಮ್ಮನ್ನು, ನಮ್ಮ ಹಿರಿಯರನ್ನು, ಮಕ್ಕಳನ್ನು ಈ ಆನ್‍ಲೈನ್ ಮೋಸದ ಜಾಲದಿಂದ ಕಾಪಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT