ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಶುದ್ಧ’ ಎಂದರೆ ಏನು?

ಭಾಷೆಯ ಮಟ್ಟಿಗೆ ‘ಶುದ್ಧ’ ಎನ್ನುವ ಶಾಸ್ತ್ರೀಯವಾದ ವ್ಯಾಖ್ಯೆಯೇ ಇಲ್ಲ
Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ನೂತನ ಅಧ್ಯಕ್ಷ ಮಹೇಶ ಜೋಶಿ ಅವರು ಕಾರ್ಯಕ್ರಮವೊಂದರಲ್ಲಿ, ‘ರಾಜಧಾನಿ ಬೆಂಗಳೂರಿನಲ್ಲಿ ‘ಅ’ಕಾರ ಮತ್ತು ‘ಹ’ಕಾರ ವ್ಯತ್ಯಾಸ ತಿಳಿದ ಕನ್ನಡಿಗರು, ಶುದ್ಧ ಕನ್ನಡ ಗೊತ್ತಿರುವವರ ಸಂಖ್ಯೆ ಬಹಳ ಕಡಿಮೆ... ಶುದ್ಧ ಮತ್ತು ಸ್ಪಷ್ಟ ಕನ್ನಡವನ್ನು ನಾವು ಉಳಿಸಿಕೊಳ್ಳಬೇಕು.
ಇಡೀ ಜಗತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಮಾತ್ರ ಅತ್ಯಂತ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ...’ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾಷೆಯ ಕುರಿತು ಹಲವರು ಹಲವು ರೀತಿಯಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ ಕಸಾಪದಂಥ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಈ ಚರ್ಚೆ.

ಭಾಷೆಯ ಮಟ್ಟಿಗೆ ‘ಶುದ್ಧ’ ಎಂದರೇನು? ಹಾಗೆಂದು ಒಂದು ಶಾಸ್ತ್ರೀಯವಾದ ವ್ಯಾಖ್ಯೆ ಇಲ್ಲ. ರೂಪಿಸಿಕೊಳ್ಳಬೇಕು ಎನ್ನುವುದಾದರೆ, ‘ಹೊರಗಿನ ಭಾಷೆಯ ಯಾವುದೇ ಪ್ರಭಾವವಿಲ್ಲದೆ, ಕೇವಲ ಮೂಲ ಪದ, ವ್ಯಾಕರಣವನ್ನು ಮಾತ್ರ ಬಳಸುವ, ಉಳಿದ ಭಾಷೆಯ ಪದಗಳನ್ನು ಸ್ವೀಕರಿಸದೇ ಇರುವ ಭಾಷೆ’ ಎಂದು ಬೇಕಾದರೆ ಹೇಳಬಹುದು. ಆದರೆ, ಈ ತರಹದ ಒಂದು ಜೀವಂತ ಭಾಷೆ ಜಗತ್ತಿನಲ್ಲಿ ಯಾವುದೂ ಇಲ್ಲ.

ಈಗ, ‘ಶುದ್ಧ ಕನ್ನಡ’ ಎನ್ನುವ ಪದವನ್ನೇ ತೆಗೆದುಕೊಳ್ಳಿ. ‘ಶುದ್ಧ’ ಎನ್ನುವುದೇ ಕನ್ನಡ ಪದವಲ್ಲ, ಅದು ಸಂಸ್ಕೃತ ಪದ. ಹೀಗಿರುವಾಗ ಅದು ‘ಶುದ್ಧ’ ಕನ್ನಡ ಹೇಗಾಯಿತು? ಸಂಸ್ಕೃತ ಪದಗಳು, ಪದಪುಂಜ, ನುಡಿಗಟ್ಟು ಮತ್ತು ವ್ಯಾಕರಣವನ್ನು ಕನ್ನಡಕ್ಕೆ ಎರವಲು ಪಡೆಯುವುದು ಸರಿಯೆಂದಾದರೆ, ಬೇರೆ ಭಾಷೆಯ ಪದಗಳನ್ನು ಯಾವ ಆಧಾರದ ಮೇಲೆ ಪ್ರತ್ಯೇಕಿಸುವುದು? ಕಾಲಾಂತರದಲ್ಲಿ ಕನ್ನಡ ಭಾಷೆಯು ತನ್ನನ್ನಾಡುವ ಜನಸಮುದಾಯಕ್ಕೆ ಪ್ರಯೋಜನಕಾರಿಯಾಗುವ ದಿಸೆಯಲ್ಲಿ ಸಂಸ್ಕೃತವಲ್ಲದೇ
ಸೋದರ ಭಾಷೆಗಳಿಂದಲ್ಲದೇ ಮರಾಠಿ, ಹಿಂದಿ, ಉರ್ದು, ಪರ್ಶಿಯನ್, ಪೋರ್ಚುಗೀಸ್, ಲ್ಯಾಟಿನ್, ಗ್ರೀಕ್, ಇಂಗ್ಲಿಷ್ ಇತ್ಯಾದಿ ಮೂಲಗಳಿಂದ ಪದ ಮತ್ತು ಪದಪ್ರಯೋಗದ ಭಂಡಾರವನ್ನೇ ಬಳಸಿಕೊಂಡಿದೆ. ಅವೆಲ್ಲವನ್ನೂ ವಿವಿಧ ಪೌಷ್ಟಿಕಾಂಶಗಳ ರೀತಿಯಲ್ಲಿ ಅರಗಿಸಿಕೊಂಡೇ ಕನ್ನಡ ಇವತ್ತಿನ ಸಂವಹನದ ಅಗತ್ಯಗಳಿಗೆ ಅನುಗುಣವಾಗಿ ಸಶಕ್ತವಾಗಿ ಬೆಳೆದಿದೆ.

ಹಿಂದೊಮ್ಮೆ ನಾವು ಕಸಾಪದ ‘ಕನ್ನಡ ರತ್ನಕೋಶ’ದಲ್ಲಿನ, ಸಂಸ್ಕೃತವೂ ಸೇರಿದ ಹಾಗೆ ಎಲ್ಲ ‘ಕನ್ನಡೇತರ’ ಪದಗಳನ್ನು ಕೈಬಿಟ್ಟು ಎಣಿಸಿ ನೋಡಿದೆವು. ಆಗ ಅದರಲ್ಲಿದ್ದವುಗಳಲ್ಲಿ ಮೂಲ ಕನ್ನಡ ಪದಗಳು ಶೇ 20ರಷ್ಟೂ ಉಳಿಯಲಿಲ್ಲ.

ಯಾವುದೇ ಸಕ್ರಿಯ ಸಮುದಾಯದ ಪ್ರಚಲಿತ ಆಡುಭಾಷೆಯಾಗಿ ಬಳಕೆಯಲ್ಲಿರುವ ಭಾಷೆಯನ್ನು ನಾವು ‘ಜೀವಂತ ಭಾಷೆ’ ಎನ್ನುತ್ತೇವೆ. ಗ್ರೀಕ್, ಲ್ಯಾಟಿನ್, ಸಂಸ್ಕೃತ ಭಾಷೆಗಳು ಇವತ್ತಿಗೆ ಇಂಥ ಜೀವಂತ ಭಾಷೆಗಳಲ್ಲ. ಜೀವಂತ ಭಾಷೆಯು ಹರಿಯುವ ನದಿಯಿದ್ದಂತೆ. ಅದು ಹರಿಯುವ ಹಾದಿಗುಂಟ ಹೊಸದನ್ನು ಸೇರಿಸಿಕೊಳ್ಳುತ್ತಾ ಬೆಳೆಯುತ್ತದೆ. ಕೆಲವೊಮ್ಮೆ ಕಸಕಡ್ಡಿ ಕಲ್ಮಶಗಳೂ ಸೇರಿಕೊಳ್ಳುತ್ತವೆ. ಆದರೆ, ಬೇಡವಾದದ್ದನ್ನು ತೊಡೆದುಹಾಕುವ, ಬೇಕಾದ್ದನ್ನು ಮಾತ್ರ ಇಟ್ಟುಕೊಂದು ಮುಂದುವರಿಯುವ ನೈಜ ಗುಣ ನದಿಗೆ ಇರುತ್ತದೆ. ಜೀವಂತ ಭಾಷೆಯೂ ಹಾಗೆಯೇ.

ಸಮುದಾಯದ ದೈನಂದಿನ ಬದುಕಿನೊಂದಿಗೆ ಕೈಜೋಡಿಸಿ ಸಾಗುವ ಭಾಷೆ ಆಯಾ ಕಾಲದ ಸಂವಹನದ ಅಗತ್ಯಗಳಿಗೆ ತಕ್ಕ ಹಾಗೆ ಬದಲಾಗುತ್ತಾ ಆ ಮೂಲಕ ಬೆಳೆಯುತ್ತಾ ಹೋಗುತ್ತದೆ.

ಇನ್ನು ಸ್ಪಷ್ಟ ಉಚ್ಚಾರಣೆಯ ಸಮಸ್ಯೆ! ಸ್ವಾರಸ್ಯಕರ ಸಂಗತಿಯೆಂದರೆ, ಹಳೆ ಮೈಸೂರು ಪ್ರಾಂತ್ಯದ, ವಿಶಿಷ್ಟವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದ ಮಾತೃಭಾಷೀ ಕನ್ನಡಿಗರಲ್ಲಿ, ಮಹಾಪ್ರಾಣ ಧ್ವನಿಗಳನ್ನು ಉಚ್ಚರಿಸದೇ ಇರುವ, ಕೆಲವೊಮ್ಮೆ ಅಲ್ಪಪ್ರಾಣದ ಬದಲಿಗೆ ಮಹಾಪ್ರಾಣವನ್ನು ಉಚ್ಚರಿಸುವ, ಸ, ಶ ಮತ್ತು ಷ ಧ್ವನಿಗಳನ್ನು ಪ್ರತ್ಯೇಕವಾಗಿ ಉಚ್ಚರಿಸದೇ ಇರುವ, ‘ತ್ಸ’ವನ್ನು ‘ಸ್ತ’ ಎಂದು ಉಚ್ಚರಿಸುವ (ರಾಜ್ಯೋಸ್ತವ) ಅಭ್ಯಾಸವಾಗಿರುತ್ತದೆ. ಇದಕ್ಕೆ ಮೂಲ ಕಾರಣ ಈ ಪ್ರಾಂತ್ಯದ ಒಟ್ಟಾರೆ ಆಡುಭಾಷೆಯಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲದಿರುವುದಾಗಿದೆ. ಹಾಗೆಂದು, ಈ ಪ್ರದೇಶದ ಹಲವಾರು ವಿದ್ವಾಂಸರು, ಸಾಹಿತಿಗಳು, ವಿಜ್ಞಾನಿಗಳು, ಪ್ರಾಧ್ಯಾಪಕರನ್ನೂ ಒಳಗೊಂಡ ಹಾಗೆ ಇವರಿಗೆ ಶುದ್ಧ ಕನ್ನಡ ಬರುವುದಿಲ್ಲ ಎಂದು ತೀರ್ಪು ನೀಡುವುದು ಸಮಂಜಸವಲ್ಲ. ಅವರದು ಉಚ್ಚಾರ ದೋಷವಲ್ಲ. ಉಚ್ಚಾರ ‘ಭಿನ್ನತೆ’, ಅಷ್ಟೆ.

ಅಲ್ಲದಿದ್ದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ,ಅವರು ಬಳಸುವ ಪ್ರತೀ ಭಾಷೆಯಲ್ಲಿಯೂ ‘ಡಿಗ್ಲಾಸಿಯಾ’ ಎನ್ನುವ ಒಂದು ಸ್ಥಿತಿ ಇರುತ್ತದೆ: ಒಂದೇ ಭಾಷೆಯನ್ನು ಅನೌಪಚಾರಿಕ ಆಡುಮಾತಿನ ಮತ್ತು ಔಪಚಾರಿಕ ಭಾಷಣ, ಬರಹದ ಸನ್ನಿವೇಶಗಳಲ್ಲಿ ಎರಡು ವಿಭಿನ್ನ ಸ್ತರಗಳಲ್ಲಿ ಬಳಸುವ ಒಂದು ಅಭ್ಯಾಸ ಇರುತ್ತದೆ, ಇದು ನೈಜ.

ಆದ್ದರಿಂದ ನಾವು ಭಾಷೆಯ ಶುದ್ಧತೆಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ, ಕನ್ನಡ ಭಾಷಿಕರ ಆಧುನಿಕ ಅಗತ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ರೀತಿಯಲ್ಲಿ ಕನ್ನಡವನ್ನು ಸಶಕ್ತಗೊಳಿಸುವತ್ತ ಮತ್ತು ಎಲ್ಲರಲ್ಲಿಯೂ ಕನ್ನಡವನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಮಾತಿನಲ್ಲಿ, ಬರಹದಲ್ಲಿ, ಒಟ್ಟಾರೆ ಸಂವಹನದಲ್ಲಿ ಸಮರ್ಥವಾಗಿ ಬಳಸುವ ಕೌಶಲಗಳನ್ನು ವೃದ್ಧಿಸುವತ್ತ ಕಾಳಜಿ ವಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಕಾಳಜಿಯ ಇಂಥ ಇತರ ಸಂಸ್ಥೆಗಳು ಗಮನಹರಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT