ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಸ್ ಪಾಪಾ? ನೋ ಪಾಪಾ!

Last Updated 17 ಮೇ 2019, 20:09 IST
ಅಕ್ಷರ ಗಾತ್ರ

ಪ್ರಭ್ಯಾನ ಮನಿ ಮುಂದ ಹಾದ್‌ ಹೊಂಟಾಗ, ಒಳಗಿನಿಂದ ‘ಹ್ಞೂ, ಸರಿಯಾಗಿ ಉಠಾಬಸಿ ಮಾಡು. ಬಸ್ಕಿ ಹೊಡೆಯೊದನ್ನ ಮಾಸ್ತರ್‌ ಕಲಿಸಿಲ್ಲ ಏನ್ ಮಗ್ನ. ಎರಡೂ ಕೈಗಳನ್ನ ಅಡ್ಕತ್ತರಿ ಹಾಕ್ಕೊಂಡ್‌, ಕಿವಿಗಳನ್ನ ಹಿಡ್ಕೊಂಡು ಬಸ್ಕಿ ಹೊಡಿಬೇಕ್‌. ಏನ್‌ ಮುಖಾ ನೋಡಾ ಕತ್ತಿ. ಹೊಡಿ... ಅಂತ ಜೋರ್‌ ದನಿ ಕೇಳಿ ಬರಾಕತ್ತಿತ್ತು. ಕುತೂಹಲದಿಂದಲೇ ಮನಿಒಳಗ್‌ ಕಾಲಿಟ್ಟೆ.

ಪ್ರಭ್ಯಾನ ಮಗಾ ಪಕ್ಯಾ ಏದುಸಿರು ಬಿಡುತ್ತ ಐವತ್ತಾರ್‌, ಐವತ್ತೇಳ್‌... ಅಂತ ಹೇಳ್ಕೊಂತ ಉಠಾಬಸಿ ಹೊಡ್ಯಾಕತ್ತಿದ್ದ. ಅದ್ನ ನೋಡತ್ತಿದ್ಹಂಗ್‌, ‘ಏಯ್‌ ಮಳ್ಳ, ಕೂಸಿಗೆ ಇಂಥಾ ಶಿಕ್ಷಾ ಯಾಕ್‌ ಕೊಡಾಕತ್ತಿ. ಅಂವಾ ಏನ್‌ ಅಂಥಾ ತಪ್‌ ಮಾಡ್ಯಾನ್‌. ಮಾವಿನ ಹಣ್ಣ ಕದ್ದು ನೀರಾಗ್‌ ತೊಳಿಲಾರ‍್ದ ತಿಂದಿದ್ದನ್ನು ಹೆಮ್ಮೆಯಿಂದ ಹೇಳ್ಕೊಂಡಿರುವ ‘ನಮೋ’ ಥರಾ, ಇವ್ನೂ ಮಾವಿನ ಹಣ್ಣಿನ ಈ ಸೀಸನ್‌ದಾಗ್‌ ಹಂಗs ಮಾಡ್ಯಾನ್‌ ಏನ್‌’ ಅಂತ ಕೇಳ್ದೆ.

‘ಅಂಥಾ ತಪ್‌ ಮಾಡಿದ್ರ ಬಾರಾ ಖೂನ್‌ ಮಾಫ್‌ ಥರಾ ಬಿಟ್‌ ಬಿಡ್ತಿದ್ದೆ. ‘ನಮೋ’ ಸಾಹೇಬರನ್ನ ಹೀಯಾಳಿಸುವ ರೈಮ್ಸ್‌ ಹೇಳಿ ನನ್ನ ಹೊಟ್ಟಿ ಉರಸಾಕತ್ತಾನ. ಇನ್ನೊಮ್ಮೆ ಅಂಥಾ (ನೀಚ) ಕೆಲ್ಸಾ ಮಾಡ್ಬಾರ್ದು ಅಂತ ಈ ಶಿಕ್ಷೆ ಕೊಟ್ಟೀನಿ’ ಅಂದ ಪ್ರಭ್ಯಾ. ‘ಏನೋ ಪಕ್ಯಾ. ಏನಂತಹ ತಪ್‌ ಮಾಡಿ’ ಎಂದು ಕೇಳುತ್ತಿದ್ದಂತೆ ಹುಡುಗಾ, ಉಠಾಬಸಿನ್ನ ಅರ್ಧಕ್ಕ ನಿಲ್ಸಿ, ಕೈಕಟ್ಕೊಂಡ್‌ ನಿಂತು, ‘ಮೋದಿ ಮೋದಿ– ಯೆಸ್‌ ಪಾಪಾ/ ಎನಿ ಡೆವಲಪ್‌ಮೆಂಟ್‌?– ನೊ ಪಾಪಾ/ ಫಾರ್ಮರ್ಸ್‌ ಹ್ಯಾಪಿ?– ನೊ ಪಾಪಾ/ ವಿಮೆನ್ ಸೇಫ್‌?– ನೊ ಪಾಪಾ/ 10 ಕ್ರೋರ್‌ ಜಾಬ್‌?– ನೊ ಪಾಪಾ/ 15 ಲ್ಯಾಕ್ಸ್‌ ಇನ್‌ ಯುವರ್‌ ಅಕೌಂಟ್‌?– ನೊ ಪಾಪಾ/ ಓನ್ಲಿ ಜುಮ್ಲಾ (ಬರೀ ಒಣಾ ಭರವಸೆ)?– ಯೆಸ್‌ ಪಾಪಾ.. ಹ್ಹ ಹ್ಹ ಹ್ಹಾ’ ಎಂದು ರಾ(ಗಾ)ಗಬದ್ಧವಾಗಿ ಹೇಳಿ ಮುಗಿಸುತ್ತಿದ್ದಂತೆ, ನಾನು ಗೊಳ್ಳನೆ ನಕ್ಕುಬಿಟ್ಟೆ. ಅಡುಗಿ ಮನ್ಯಾಗನಿಂದ ಪಾರೋತಿಯ ಮುಸಿಮುಸಿ ನಗು ಪಡಸಾಲಿ ತನ್ಕಾ ಕೇಳಿಬಂತು. ಪ್ರಭ್ಯಾಗ್‌ ಅಂಗಾಲಿನಿಂದ ಹಿಡ್ದು ಅಳ್ಳೆತ್ತಿತನ್ಕಾ ಉರಿದಂಗ್ಹಾಗಿ ಬುಸುಗುಡಾಕತ್ತ.

‘ಭವಿಷ್ಯದಾಗ್‌ ‘ನಮೋ’ ಭಕ್ತರು ಇಂತಹ ರೈಮ್ಸ್‌ ಹೇಳಿ ಭಜನೆ ಮಾಡ್ತಾರ್‌ ಅಂತ ಬಿಹಾರದ ಲಾಲು ಪ್ರಸಾದ್‌ ಅವರ ಆರ್‌ಜೆಡಿ ಪಕ್ಷ ಈ ರೈಮ್ಸ್‌ ಟ್ವೀಟ್‌ ಮಾಡೇದ್‌. ನಿನ್ನ ಮಗಾ ಅದ್ನ ಹೇಳಿದ್ದಕ್ಕ ನೀ ಇಂಥಾ ಶಿಕ್ಷೆ ಕೊಟ್ಟಿ ಅಂದ್ರ, ನಿಂಗೂ ಒಳಗೊಳಗs ಅಂಜಿಕಿ ಸುರು ಆಗಿರೋ ಹಂಗ್‌ ಕಾಣಸ್ತದ’ ಎಂದು ಕಾಲೆಳೆದೆ. ‘ಏಯ್‌, ಏನ್‌ ಹೇಳ್ತಿ. ಎಂಥಾ ಅಂಜಿಕಿ. ನನಗ್ಯಾಕ್‌ ಕಾಡ್ತದ’ ಎಂದು ಪ್ರಭ್ಯಾ ಅಳುಕಿನಿಂದಲೇ ಜೋರ್‌ ಮಾಡ್ದಾ.

‘ನಮೋ ಸಾಹೇಬ್ರು ಬದುಕಿದವ್ರನ್ನ ಬಿಟ್ಟು ಸತ್ತವರನ್ನೂ ಸೇರ‍್ಸಿ, ಸಿಕ್ಕಸಿಕ್ಕವರ ವಿರುದ್ಧ ಚುನಾವಣಾ ಭಾಷ್ಣಾದಾಗ್‌ ಪ್ರಧಾನಿ ಹುದ್ದೆ ಘನತೆನಾ ಬದಿಗಿಟ್ಟು ಹಿಗ್ಗಾ ಮುಗ್ಗಾ ಬಯ್ಯೋದು ನೋಡಿದ್ರ, ನಂಗಂತೂ ಕೈಲಾಗದವ ಮೈಯೆಲ್ಲ ಪರ್ಚ್‌ಕೊಂಡ ಅನ್ನೊ ಥರಾ ಕಾಣ್ಸಾಕತ್ತೈತಿ ನೋಡಪಾ’ ಎಂದೆ. ‘ಹೌದ್‌ ನೋಡ್ರಿ ಕಾಕಾ. ನೀವ್‌ ಹೇಳೋದು ನೂರಕ್ಕ ನೂರ್‌ ಖರೆ ಐತ್ರಿ. ಹುಡುಗ ಖುಷಿಲೇ ರೈಮ್ಸ್‌ ಹೇಳ್ಕೊಂಡ್‌ ಕುಣ್ಯಾಕತ್ತಿತ್ತು. ಅದ್ನ ನೋಡಿ ನಾನೂ ಬಿದ್ದ ಬಿದ್ದ ನಗಾಕತ್ತಿದ್ದೆ. ಇವ್ರು ಹೊರಗಿನಿಂದ ಬಂದವರ, ಹುಡುಗನ ಬೆನ್ನಿಗೆ ನಾಲ್ಕ್‌ ಬಾರಿಸಿ ಜಬರ್‌ದಸ್ತಿಲೆ ಬಸ್ಕಿ ಹೊಡ್ಯಾಕ್‌ ಹಚ್ಯಾರ. ದೇಶಕ್ಕೊಬ್ಬ ಮುಖ್ಯ ವಿಭಜಕ, ಮನಿಗೊಬ್ಬ ಇಂಥಾ ಮ(ನ)ನೆ ಮುರುಕ್ರು ಇರೋದಿಂದ್ರ ಮಳಿ ಬೆಳಿ ಸರಿಯಾಗಿ ಆಗವಲ್ದ. ಬಾವಿಗೋಳೆಲ್ಲ ಬತ್ತಿ ಹೋಗ್ಯಾವ್‌ ನೋಡ್ರಿ’ ಅಂತ ಪಾರೋತಿ ಅಡ್ಗಿ ಮನ್ಯಾಗನಿಂದ ಕೂಗ್‌ ಹಾಕಿದ್ಲು. ‘ಏಯ್‌, ಹುಚಪ್ಯಾಲಿ, ರಾಜಕೀಯ ನಿನಗ್‌ ಏನ್‌ ಗೊತ್ತಾಗತೈತಿ. ಮುಂದ್ ನೋಡಿ ರೊಟ್ಟಿ ಬಡಿ’ ಎಂದು ಪ್ರಭ್ಯಾ ಜಬರಿಸಿದ.

ಅದೇ ಹೊತ್ತಿಗೆ ಪಕ್ಯಾ ಅಡ್ಡಬಾಯಿ ಹಾಕಿ, ‘ಮಾವಾ, ಮಾಡ ಕವ್ದದ. ಗರ್ಜಸ್ಸಾಕತ್ತದ, ಮಳಿ ಬರ್ತದೇನ್‌’ ಅಂತ ಕೇಳ್ದ. ‘ರೇಡಾರ್‌, ಡಿಜಿಟಲ್‌ ಕ್ಯಾಮೆರಾ ತಂತ್ರಜ್ಞ, ಇ–ಮೇಲ್‌ ಪರಿಣತ ‘ನಮೋ’ಗೆ ಕೇಳಿ ಹೇಳ್‌ಬೇಕ್ ತಡಿ. ಅಂವಾ ಹೇಳಿದ್ರ ಕರಿ ಮಾಡಾ ಇರದಿದ್ರೂ ಮಳಿ ಗ್ಯಾರಂಟಿ ಬರ್ತದ’ ಅಂತ ಹೇಳುತ್ತಿದ್ದಂತೆ ಪ್ರಭ್ಯಾನ ಮಾರಿ ಕಪ್ಪಿಟ್ಟಿತು.

‘ಅಲ್ಲೋ, ಮೋದಿ ಸಾಹೇಬ್ರು ಮಾಡಿದ್ದ ಅದ್ಯಾವುದೋ ಆರೋಪ ಸಾಬೀತಾಗದಿದ್ರ ನೂರ್‌ ಬಸ್ಕಿ ಹೊಡಿಬೇಕಾಗ್ತೈತಿ’ ಅಂತ ಬಂಗಾಳದ ಹೆಣ್‌ ಹುಲಿ ಸವಾಲ್‌ ಹಾಕೇದ್‌. ಇವತ್ತ ಬಂಗಾಳ್‌ ಏನ್‌ ಆಲೋಚನೆ ಮಾಡ್ತದೋ ನಾಳೆ ದೇಶವೂ ಅದನ್ನೇ ಯೋಚಿಸ್ತದ ಅಂತ ಚಂದ್ರಬಾಬು ನಾಯ್ಡು ಹೇಳಿದ ಮಾತನ್ನ ನೀ ಇಷ್ಟ್‌ ಬೇಗ್‌ ಹೀಂಗ್‌ ಜಾರಿಗೆ ತರ‍್ತಿ ಅಂತ ನಾ ಅಂದ್ಕೊಂಡಿರಲಿಲ್ಲ ಬಿಡು’ ಎಂದೆ.

ಅಷ್ಟೊತ್ತಿಗೆ ಬೀದಿ ನಾಯಿಗಳು ಬೊಗಳೊ ಸದ್ದನ್ಯಾಗ್‌ ನಮ್ಮ ಮಾತ್‌ ಕೇಳ್ಸದ್ಹಂಗಾತು. ಸಿಡಿಮಿಡಿಗೊಂಡ ಪ್ರಭ್ಯಾ, ‘ಆ ನಾಯಿಗೋಳ್‌ ಯಾಕ್‌ ಬೊಗಳಾಕತ್ತಾವ್‌, ಬೀದ್ಯಾಗ್‌ ಆನಿಗೀನಿ ಹೊಂಟದೇನ್‌ ನೋಡ್‌’ ಅಂತ ಮಗನಿಗೆ ಹೇಳ್ದ. ಹೊರಗ್ ಓಡಿ ಹೋದ ಪಕ್ಯಾ, ಬಾಗಿಲ್‌ ಹೊರ‍್ಗs ನಿಂತ್ಕೊಂಡು, ‘ಆನಿ ಕಾಣ್ತಾ ಇಲ್ಲ. ಹಂದಿಗೋಳ್‌ ಹೀಂಡ್‌ ಕಂಡು ನಾಯಿಗೋಳು ಬೊಗಳಾಕತ್ತಾವ್‌’ ಅಂದ.

‘ಏಯ್‌, ಮೊದ್ಲು ಓಡ್ಸು ಅವನ್ನ’ ಎಂದ. ‘ನಾಯಿಗೋಳ್ನ ಏನ್‌ ಹಂದಿಗೋಳ್ನ’ ಅಂತ ಪಕ್ಯಾ ಪೆಕರನಂತೆ ಕೇಳ್ದ. ‘ನಾಯಿ ಓಡ್ಸಲೇ, ಸಮ್ಮಿಶ್ರ ಸರ್ಕಾರದಾಗ್‌, ಆನಿ ಭವಿಷ್ಯದ ಸಿಎಂ ಅಂತ ಹೇಳ್ಕೊಂಡ್‌ ಹೋಗ್‌ತಿದ್ರ, ನಾಯಿಗೋಳು ರಾಗ ಬದ್ಧವಾಗಿ ಬೌ... ಅಂತ ಬೊಗಳಾಕಾತ್ತಾವ್‌. 23ರ ನಂತ್ರ ಕುಮಾರಣ್ಣನ ಸರ್ಕಾರ ಇರೋದಿಲ್ಲ. ಅವಾಗರ ನಾಯಿಗೋಳೆಲ್ಲ ಬೊಗಳೋದನ್ನ ನಿಲ್ಸತಾವೇನ್‌ ನೋಡ್ಬೇಕ್‌. ಬಾಯಿಗೆ ಬಂದ್ಹಂಗ್‌ ಮಾತಾಡೋರಿಗೆ ಬೀರೇಶ್ವರ ಸದ್ಬುದ್ಧಿ (ದುರ್ಬುದ್ಧಿ) ಕೊಡಲಿ’ ಎಂದು ಪ್ರಭ್ಯಾ ಮಾತಿಗೆ ತೆರೆ ಎಳೆದ.

‘ನಾಯಿ ಬಾಲಾ ಯಾವಾಗ್ಲೂ ಡೊಂಕ. ಅವು ಎಷ್ಟ್‌ ಬೊಗಳಿದ್ರೂ ಅವುಗಳ ಗಂಟ್ಲಿಗೆ ಏನೂ ಆಗುದಿಲ್ಲ. ಭಾಷಣ ವೀರ ನವಜೋತ್‌ ಸಿಂಗ್‌ ಸಿದುಗ ರಾಜಕೀಯ ಮಾತಾಡಿ ಮಾತಾಡಿ ಗಂಟ್ಲ ನೋವ ಬಂದದಂತ. ನಾಯಿಗಳ ತಂಟೆಗೆ ಹೋದ ನಮಗೂ ಗಂಟ್ಲ ನೋವ್‌ ಬರೋದನ್ನ ತಡ್ಯಾಕ್‌ ಬಿಯರ್‌ ಕುಡ್ದು ತಂಪ್‌ ಮಾಡ್ಕೊಳ್ಳೋಣ ನಡಿ’ ಅಂತ ಪ್ರಭ್ಯಾನ ಕರಕೊಂಡು ಹೊರಬಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT