ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಭಾಷಾ ಕಲಿಕೆ: ಎತ್ತ ಸಾಗುತ್ತಿದ್ದೇವೆ?

Last Updated 17 ಜೂನ್ 2022, 20:17 IST
ಅಕ್ಷರ ಗಾತ್ರ

ಪಠ್ಯಪುಸ್ತಕ ಮರುಪರಿಷ್ಕರಣೆಗೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಇದರ ಮತ್ತೊಂದು ಮಗ್ಗುಲನ್ನೂ ಗಮನಿಸಬೇಕಾದ ಅಗತ್ಯವಿದೆ. ಕೇಳುವುದು, ಗ್ರಹಿಸುವುದು, ನೆನಪಿಟ್ಟುಕೊಳ್ಳುವುದು ಮತ್ತು ಮರುಬಳಕೆ ಮಾಡುವುದು ವಿದ್ಯಾರ್ಥಿಯ ಧರ್ಮ. ಇಂದಿನ ಪರೀಕ್ಷಾ ಪದ್ಧತಿ ಮತ್ತು ಗಳಿಸುತ್ತಿರುವ ಹೊರೆಹೊರೆ ಅಂಕಗಳ ಆಧಾರದ ಮೇಲೆ ಅತ್ಯಂತ ಬುದ್ಧಿವಂತ ಪೀಳಿಗೆಗಳು ಸೃಷ್ಟಿಯಾಗುತ್ತಿರುವಂತೆ ತೋರುತ್ತಿದೆ.

ಮನಃಶಾಸ್ತ್ರದ ಅಧ್ಯಯನ ಸಹ ‘ಪೀಳಿಗೆಯಿಂದ ಪೀಳಿಗೆಗೆ ಮೆದುಳು ‘ನಿಶಿತಮತಿ’ ಆಗುತ್ತಾಹೋಗುತ್ತದೆ’ ಎನ್ನುತ್ತದೆ. ಆದರೆ ‘ಭಾಷಾ ಕಲಿಕೆ’ ಮಾತ್ರ ಸದ್ದಿಲ್ಲದೇ ಜಾರುತ್ತಿದೆ. ಭಾಷಾ ಕಲಿಕೆಗೆ ಸಂಬಂಧಿಸಿದ ಮೂರು ಪ್ರಸಂಗಗಳು ಇಲ್ಲಿ ಉಲ್ಲೇಖಾರ್ಹ:

1990ರ ಕಾಲ. ಆಗ ನಾನು ಮಹಿಳಾ ಪದವಿ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದೆ. ಐಚ್ಛಿಕ ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ. 15- 20 ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ ಒಬ್ಬರು ಬಾರದಿದ್ದರೂ ನಮಗೆ ತಿಳಿಯುತ್ತಿತ್ತು. ಮುಂದಿನ ತರಗತಿಯಲ್ಲಿ ಆ ವಿದ್ಯಾರ್ಥಿನಿಯನ್ನು ಕರೆದು, ‘ನಿನ್ನೆ ನೀನು ಕ್ಲಾಸಿಗೆ ಬಂದಿರಲಿಲ್ಲ, ಚಿಂತೆಯಿಲ್ಲ, ನೀನೊಂದು ರಜೆ ಚೀಟಿ ಬರೆದುಕೊಡು.ನಿನಗೆ ಆಬ್ಸೆಂಟ್‌ ಮಾರ್ಕ್ಹಾಕದೆ ಲೀವ್ಎಂದು ರಿಜಿಸ್ಟರ್‌ನಲ್ಲಿ ನಮೂದಿಸುತ್ತೇನೆ. ಕನ್ನಡ ಅಥವಾ ಇಂಗ್ಲಿಷ್ಯಾವುದು ಸರಾಗವೆನಿಸುತ್ತದೋ ಆ ಭಾಷೆಯಲ್ಲೇ ಬರೆದುಕೊಡು. ಇದೇನೂ ನಿಯಮವಲ್ಲ. ಆದರೆ ನನಗೆ ಶಿಸ್ತು ಬೇಕು’ ಎನ್ನುತ್ತಿದ್ದೆ.

ಈ ಪ್ರಯೋಗವನ್ನು ಹಲವು ವಿದ್ಯಾರ್ಥಿನಿಯರ ಮೇಲೆ ನಡೆಸಿ, ಅವರ ರಜಾ ಚೀಟಿಗಳನ್ನು ಗಮನಿಸಿದಾಗ ಆಘಾತವಾಯಿತು. ಯಾರೊಬ್ಬರೂ ಇಂಗ್ಲಿಷಿನಲ್ಲಾಗಲೀ ಕನ್ನಡದಲ್ಲಾಗಲೀ ಒಂದೇ ಒಂದು ವಾಕ್ಯವನ್ನೂ ಸರಿಯಾಗಿ ಬರೆದಿರಲಿಲ್ಲ. ನಂತರ ಅವರಿಗೆ ವಾರಕ್ಕೊಮ್ಮೆ 30 ನಿಮಿಷ ಸಮಯ ಕೊಟ್ಟು, ಅವರಿಗಿಷ್ಟ ಬಂದ ವಿಷಯದ ಬಗ್ಗೆ ಪ್ರಬಂಧ ಬರವಣಿಗೆಯ ಪ್ರಯೋಗ ಮಾಡಲಾಯಿತು. ಅದರಿಂದ ಅವರಿಗೆ ಓದುವ ಹವ್ಯಾಸ ಬೆಳೆಯಿತು ಮತ್ತು ಹಲವರ ಭಾಷೆ ಸುಧಾರಿಸಿತು.

2000ದ ದಶಕದಲ್ಲಿ, ನನ್ನ ಗೆಳತಿ ಕನ್ನಡದ ಉಪನ್ಯಾಸಕಿಯೊಬ್ಬರು ಪದವಿ ತರಗತಿಯ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸದಸ್ಯೆಯಾಗಿದ್ದರು. ಹೊಸ ಪಠ್ಯ ಆರಿಸುವಾಗ ರೂಢಿಯಂತೆ ಕನಕದಾಸರು ಮತ್ತು ಪುರಂದರದಾಸರ ಕೀರ್ತನೆಳನ್ನು ಆಯ್ದುಕೊಳ್ಳುವ ಬಗ್ಗೆ ಮಾತು ಪ್ರಾರಂಭವಾಯಿತು. ಇವರು ‘ಬಹಳ ವರ್ಷಗಳಿಂದ ಈ ಇಬ್ಬರು ದಾಸಶ್ರೇಷ್ಠರ ಕೀರ್ತನೆಗಳನ್ನೇ ಆರಿಸಲಾಗುತ್ತಿದೆ. ಆದರೆ ಮಹಿಳೆಯರೂ ಸೇರಿದಂತೆ ಇನ್ನೂ ಅನೇಕ ಹರಿದಾಸರಿದ್ದಾರೆ. ಉದಾಹರಣೆಗೆ, ಅಂಬಾಬಾಯಿ ಎನ್ನುವ ಮಹಿಳೆ ‘ಹಚ್ಚಡ ಒಗೆಯಬೇಕಮ್ಮ’ ಎನ್ನುವ ಕೀರ್ತನೆಯಲ್ಲಿ, ದೇಹವನ್ನೇ ಬಟ್ಟೆಯನ್ನಾಗಿಸಿ ಮಹಿಳಾ ಸಂವೇದನೆಗಳನ್ನು ಮೂರ್ತಸ್ವರೂಪದಿಂದ ಅಮೂರ್ತದವರೆಗೆ ಬಹಳ ಚೆನ್ನಾಗಿ ವಿವರಿಸಿದ್ದಾರೆ’ ಎಂದರಂತೆ. ತಕ್ಷಣ ಅಲ್ಲಿದ್ದ ಕನ್ನಡ ಉಪನ್ಯಾಸಕರೊಬ್ಬರು ‘ಅಯ್ಯೋ ಈ ಮೂರ್ತ ಅಮೂರ್ತ ಎಲ್ಲಾ ಪಾಠ ಮಾಡಕ್ಕೆ ಯಾರಿಗೆ ಬೇಕು ಮೇಡಂ? ಸುಲಭವಾಗಿ ಇರೋದೊಂದು ಆಯ್ಕೆ ಮಾಡಾಣ’ ಅಂದರಂತೆ! ಇದು ಪದವಿ ತರಗತಿಗೆ ಪಾಠ ಮಾಡುತ್ತಿದ್ದವರ ಹೇಳಿಕೆ!

2021ರಲ್ಲಿ ನಡೆದ ಘಟನೆಯೊಂದನ್ನು ಖಾಸಗಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ವಿವರಿಸಿದ್ದು ಹೀಗೆ: ಅವರ ಕಾಲೇಜಿನಲ್ಲಿ ನಿವೃತ್ತರಾದ ನಾಲ್ವರು ಉಪನ್ಯಾಸಕರ ಜಾಗಕ್ಕೆ ಹೊಸಬರನ್ನು ಆರಿಸುವ ಸಂದರ್ಭ. ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಎಲ್ಲರಿಗೂ ಇ– ಮೇಲ್‌ ಮೂಲಕ ‘ಇಂಥಾ ದಿನ ಲಿಖಿತ ಪರೀಕ್ಷೆಗೆ ಹಾಜರಾಗಬೇಕು’ ಎಂದು ತಿಳಿಸಲಾಯಿತು. ಅರ್ಧಕ್ಕರ್ಧ ಜನ ಬರಲೇ ಇಲ್ಲ. ಬಂದವರಿಗೆ ಒಂದು ಗಂಟೆ ಅವಧಿಯಲ್ಲಿ ಅವರವರು ಪಡೆದ ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡಿದ ವಿಷಯದ ಮಹತ್ವದ ಬಗ್ಗೆ ಅನಿಸಿಕೆ ಬರೆದುಕೊಡಲು ತಿಳಿಸಲಾಯಿತು. ಕೆಲವರು ಬರೆಯದೇ ಒಂದೆರಡು ನಿಮಿಷಗಳಲ್ಲಿ ಎದ್ದು ಹೋದರು. ಉಳಿದ 15– 20 ಜನರು, ಎರಡು ಸಾಲು, ನಾಲ್ಕು ಸಾಲು, ಕಾಲು ಪುಟ ಮತ್ತು ಅರ್ಧ ಪುಟದ ಬರಹವನ್ನು ಕೊಟ್ಟು ಹೋದರು! ಇದು ಶಿಕ್ಷಕರ ಹುದ್ದೆಗೆ ಬರಲಿಚ್ಛಿಸಿದ್ದವರ ಮನಃಸ್ಥಿತಿ.

ಈ ಮೂರೂ ಪ್ರಸಂಗಗಳಲ್ಲಿನ ಏಕಮಾತ್ರ ದುರಂತವೆಂದರೆ, ಭಾಷೆ ಕಲಿಸುವ ಮತ್ತು ಬರೆಯುವ ಮಟ್ಟ ಹೇಗೆ ಕುಸಿಯುತ್ತಿದೆ ಎನ್ನುವುದು. ಕಲಿಸುವ ವ್ಯವಸ್ಥೆಯೇ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಸಮಾಜ ಮತ್ತು ಸರ್ಕಾರದ ಗಮನ ಎತ್ತ ಸಾಗಬೇಕು ಎನ್ನುವುದನ್ನು ಯಾರು ಹೇಳಬಲ್ಲರು? ಒಂದು ಕಾಲದಲ್ಲಿ ‘ಭಾಷೆಯೇ ಬದುಕಿನುಸಿರು’ ಎಂದುಕೊಂಡು ಪ್ರಾಚೀನ ಕವಿಪುಂಗವರ ಸಾರಸತ್ವವನ್ನು ಬೆರಗುಗೊಳ್ಳುವಂತೆ ಪಾಠ ಮಾಡುತ್ತಿದ್ದ ಉಪನ್ಯಾಸಕರನ್ನು ಪಡೆದದ್ದು ನಮ್ಮ ಕಾಲದ ಪುಣ್ಯವಷ್ಟೇ. ಒಂದು ಕಡೆ ಅನಿವಾಸಿ ಭಾರತೀಯ ಕನ್ನಡಿಗರು ಮಾತೃಭಾಷೆಯನ್ನು ತಮ್ಮ ಮುಂದಿನ ಪೀಳಿಗೆಯಲ್ಲೂ ಉಳಿಸಲು ವಾರಾಂತ್ಯ ಕನ್ನಡ ಶಾಲೆಯನ್ನು ನಡೆಸುತ್ತಾ ಸಂಭ್ರಮಿಸುತ್ತಿದ್ದಾರೆ. ಮತ್ತೊಂದೆಡೆ, ವಿಶ್ವದ

ಸಕಲೆಂಟು ಭಾಷೆಗಳಲ್ಲಿ, ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡು ಮುನ್ನಡೆಯುತ್ತಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವ ಹೆಮ್ಮೆಯ ಸಂಗತಿಯನ್ನು ಪಾಶ್ಚಾತ್ಯ ಅಧ್ಯಯನ ತಿಳಿಸುತ್ತದೆ. ಇಲ್ಲಿ ಕನ್ನಡತನ್ನತಾಯ್ನೆಲದಲ್ಲೇಬೇರುಮಟ್ಟದಕಲಿಸುವಿಕೆಯಲ್ಲಿ ರೋಗಗ್ರಸ್ತವಾಗುತ್ತಿರುವುದು ಕನ್ನಡ ಭಾಷೆಯದೌರ್ಭಾಗ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT