ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕುರಿತ ಕರಡು ನಿಯಮಾವಳಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಮಕ್ಕಳ ಖಾಸಗಿತನ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ದಿಸೆಯಲ್ಲಿ, 18 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಲು ಪೋಷಕರ ಸಮ್ಮತಿ ಬೇಕಾಗುತ್ತದೆ. ಪೋಷಕರೆಂದು ಗುರುತಿಸಲಾದ ವ್ಯಕ್ತಿಯು ವಯಸ್ಕರೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಸಾರ್ವಜನಿಕರಿಗೆ ಆಕ್ಷೇಪ ಇದ್ದಲ್ಲಿ ಫೆ. 18ರ ಒಳಗೆ ಸಲ್ಲಿಸಬಹುದಾಗಿದೆ.

ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕ, ಸಾಮಾಜಿಕ ಜಾಗೃತಿ, ಸಮಾನಮನಸ್ಕರ ಭೇಟಿ, ವಿವಿಧ ಕ್ಷೇತ್ರಗಳ ಪರಿಣತರ ಪರಿಚಯ ಇವೆಲ್ಲಕ್ಕೂ ಉತ್ತಮ ಮಾರ್ಗ. ಬಾಲ್ಯದಿಂದಲೇ ತಂತ್ರಜ್ಞಾನದಲ್ಲಿ ಪರಿಣತ ರಾಗಿರುವ ಮಕ್ಕಳಿಗೆ ಇದು ಆಕರ್ಷಕ ಎನಿಸುವುದರಲ್ಲಿ ಸಂಶಯವೇ ಇಲ್ಲ. ಆದರೆ, ಸಾಮಾಜಿಕ ಜಾಲತಾಣ ಗಳನ್ನು ಹೇಗೆ, ಯಾವಾಗ, ಎಲ್ಲಿ ಬಳಸಬೇಕು ಎನ್ನುವ ವಿವೇಕ ಮಕ್ಕಳಿಗೆ ಇರುವುದಿಲ್ಲ.

ಭಾರತದಲ್ಲಿ 2022ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ ವತಿಯಿಂದ ನಡೆದ ಸಮೀಕ್ಷೆಯ ಪ್ರಕಾರ, 9 ವರ್ಷದಿಂದ 13 ವರ್ಷ ದವರೆಗಿನ ನಗರವಾಸಿ ಮಕ್ಕಳು ದಿನಕ್ಕೆ ಮೂರಕ್ಕಿಂತ ಹೆಚ್ಚು ಗಂಟೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯು ತ್ತಿದ್ದಾರೆ. 10 ವರ್ಷದ ಮಕ್ಕಳು ಈಗಾಗಲೇ ತಮ್ಮದೇ ಖಾತೆಯನ್ನು ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲವೂ ಆನ್ಲೈನ್ ಪದ್ಧತಿಗೆ ಬದಲಾದಾಗ, ಸ್ಮಾರ್ಟ್ಫೋನ್ಗಳ ಬಳಕೆ ಅನಿವಾರ್ಯವಾಗಿ, ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಮೀರಿತು.

ವೈಯಕ್ತಿಕ ಖಾತೆ ತೆರೆಯಲು ವಯೋಮಿತಿ ಇದ್ದರೂ ಬಹಳಷ್ಟು ಮಕ್ಕಳು ತಂದೆ–ತಾಯಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇದು ಅವರ ಶೈಕ್ಷಣಿಕ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಪ್ರಗತಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂಬುದು ಬೆಳಕಿಗೆ ಬಂದಿತ್ತು. ಅನಾಮಧೇಯ ನಕಲಿ ಖಾತೆಯಿಂದ ತೊಂದರೆ, ಚಾರಿತ್ರ್ಯವಧೆಯಾಗುವ ಸೈಬರ್ ಬುಲ್ಲಿಯಿಂಗ್ ಕೂಡ ಬಹು ಅಪಾಯಕಾರಿ. ಹಾಗಾಗಿ, ಮಕ್ಕಳಿಗೆ ಇಂಟರ್ನೆಟ್ ಡಿಅಡಿಕ್ಷನ್ ಸೆಂಟರ್ಗಳನ್ನು ಸ್ಥಾಪಿಸಬೇಕು. ಜೊತೆಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರವೇಶ ಎಂದರೆ ನಮ್ಮ ಬದುಕಿಗೆ ಇತರರು ಪ್ರವೇಶಿಸಲು ಅನುಮತಿ ನೀಡಿದ ಹಾಗೆ! ಖಾತೆ ತೆರೆಯುವ ಮುನ್ನ ಅಲ್ಲಿನ ‘ನಿಯಮಗಳಿಗೆ ಬದ್ಧರಾಗಿರುತ್ತೇವೆ’ ಎನ್ನುವ ಷರತ್ತನ್ನು ಒಪ್ಪಬೇಕಾಗುತ್ತದೆ. ಇದರಿಂದಾಗಿ, ಬಳಸುವ ಖಾತೆ ಖಾಸಗಿಯದ್ದಾಗಿದ್ದರೂ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಹಕ್ಕು ಸಹಜವಾಗಿಯೇ ಕಂಪನಿಗೆ ಸಿಗುತ್ತದೆ. ಅಲ್ಲಿ ನಾವು ಹಾಕುವ ಪೋಸ್ಟ್, ಕಾಮೆಂಟ್ ಎಲ್ಲವೂ ಡಿಜಿಟಲ್ಲೋಕದ ಹೆಜ್ಜೆಗಳು. ಕಂಪನಿಗಳು ಇದರಿಂದ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಫೋಟೊ, ವಿಡಿಯೊ, ಶಾಲಾ- ಕಾಲೇಜು ಇವೆಲ್ಲದರ ಜೊತೆಗೆ ಆಸಕ್ತಿ, ಸ್ನೇಹಿತ ವರ್ಗ, ಓಡಾಡಿದ ಸ್ಥಳ, ಖರೀದಿಸುವ ವಸ್ತುಗಳು, ಆಹಾರ ಪದ್ಧತಿ, ಇಷ್ಟಪಡುವ ಮನರಂಜನಾ ವಿಧಾನ, ಧಾರ್ಮಿಕ ನಂಬಿಕೆ ಇವೆಲ್ಲವುಗಳ ಮಾಹಿತಿಯನ್ನು ಪಡೆಯುತ್ತವೆ. ಮಾತ್ರವಲ್ಲ, ಇವೆಲ್ಲವನ್ನೂ ಸಮೀಕ್ಷೆ, ಸಂದರ್ಶನ, ವಿಮರ್ಶೆ, ದೂರು ಇವುಗಳಲ್ಲಿ ಬಳಸಲು ಸಾಧ್ಯವಿದೆ. ಹಾಗಾಗಿ, ಈ ಜಾಲತಾಣಗಳು ನಮ್ಮ ಬಗ್ಗೆ ಮಾಹಿತಿ ತಿಳಿಸುವ ಡಿಜಿಟಲ್ ಪುಸ್ತಕವಿದ್ದಂತೆ! ಗೊತ್ತಿಲ್ಲದೇ ಇವುಗಳನ್ನು ಬಳಸುವುದು ಮಕ್ಕಳ ಹಕ್ಕು ಮತ್ತು ಖಾಸಗಿತನಕ್ಕೆ ಧಕ್ಕೆ ತರುತ್ತದೆ.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ವಯಸ್ಸಿನ ಮಿತಿಯನ್ನು ವಿಧಿಸಲಾಗಿದೆ. ಸದ್ಯಕ್ಕೆ ಭಾರತದಲ್ಲಿ 13 ವರ್ಷ ಮೇಲ್ಪಟ್ಟ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಖಾತೆಗಳನ್ನು ಕ್ಷಣಮಾತ್ರದಲ್ಲಿ ತೆರೆಯಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ಗಂಭೀರ ಸಮಸ್ಯೆಯಾಗಿರುವುದರಿಂದ ಖಾತೆ ತೆರೆಯಲು ವಯೋಮಿತಿ ಹೆಚ್ಚಿಸಬೇಕು ಮತ್ತು ಪೋಷಕರ ಸಮ್ಮತಿ ಬೇಕು ಎನ್ನುವುದು ಅನೇಕರ ವಾದವಾಗಿತ್ತು. ಆದರೆ ಈ ರೀತಿ ನಿರ್ಬಂಧ ಹೇರುವುದು ಸರಿಯೇ, ಅದು ಪ್ರಾಯೋಗಿಕವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಇಂದಿನ ಮಕ್ಕಳು ತಂತ್ರಜ್ಞಾನ ಬಳಕೆಯಲ್ಲಿ ನಿಪುಣರು. ಆಧುನಿಕ ಆ್ಯಪ್ಗಳು ಮತ್ತು ವಿಧಾನಗಳಿಂದ ಸಾಮಾಜಿಕ ಜಾಲತಾಣಗಳನ್ನು ಮುಚ್ಚಿಡಬಹುದಾದರೂ ಅದರ ಬಳಕೆಗೆ ಹಿರಿಯರ ಅನುಮತಿ ಬೇಕೆಂದಾಗ, ಮಕ್ಕಳಿಗೆ ಅದರ ಬಗ್ಗೆ ಆಕರ್ಷಣೆ ಹೆಚ್ಚುತ್ತದೆ. ಹೇಗೋ ಮಾಡಿ ಇನ್ನಿತರ ಮಾರ್ಗ ಕಂಡುಕೊಳ್ಳುತ್ತಾರೆ. ಹಾಗಾಗಿ, ಎಲ್ಲವನ್ನೂ ಯೋಚಿಸಿ ಪ್ರಾಯೋಗಿಕವಾಗಿ ಸಾಧ್ಯವಾಗುವ ಮಾರ್ಗವನ್ನು ಅನುಸರಿಸಬೇಕು ಎಂಬುದು ಹಲವರ ವಾದ.

ಮಕ್ಕಳ ವಯಸ್ಸಿಗೆ ಸೂಕ್ತವಾದಂತಹ ಜಾಲತಾಣಗಳ ನಿರ್ಮಾಣ, ಡಿಜಿಟಲ್ ಸಾಕ್ಷರತೆಯ ಬಗ್ಗೆ ಶಿಕ್ಷಣ, ಸಮಯದ ಮಿತಿ, ಜಾಲತಾಣಗಳಲ್ಲಿ ನೋಡುವ ವಿಷಯದ ಕುರಿತು ಫಿಲ್ಟರ್ ಮತ್ತು ಸುರಕ್ಷತೆ ಕುರಿತು ಮಕ್ಕಳಿಗೆ ಮನೆ, ಶಾಲೆಗಳಲ್ಲಿ ಮಾರ್ಗದರ್ಶನ ಸಿಗಬೇಕು. ಹಾಗಾಗಿ, ಪೋಷಕರು ಸಾಮಾಜಿಕ ಜಾಲತಾಣಗಳ ಬಳಕೆಗೆ ಅನುಮತಿ ನೀಡುವುದು, ಬಳಕೆಯ ಮೇಲೆ ಕಣ್ಣಿಡುವುದು ಸರಿ. ಅದರೊಂದಿಗೇ ಸಮರ್ಥ, ಸುರಕ್ಷಿತ ಬಳಕೆ, ಸಾಧಕ ಬಾಧಕಗಳ ಬಗ್ಗೆ ಪರಿಣತರಿಂದ ಅರಿವು ಮೂಡಿಸುವ ಕೆಲಸ ಅವಶ್ಯವಾಗಿ ನಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.