ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸರಣಿ ಪರೀಕ್ಷೆ: ಶಾಲೆಯ ಹೆಗ್ಗಳಿಕೆಯಲ್ಲ

ಪರೀಕ್ಷಾ ಕ್ರಮದ ಬಗ್ಗೆ ಅಭ್ಯಾಸ ಮಾಡಿಸಲು ನಾಲ್ಕಾರು ಪರೀಕ್ಷೆಗಳನ್ನು ನಡೆಸಿದರೆ ಮಗುವಿ‌ನ ದೇಹ ಮತ್ತು ಮನಸ್ಸು ಎರಡೂ ದಣಿದು ಹೋಗುತ್ತವೆ
Published 12 ಫೆಬ್ರುವರಿ 2024, 0:04 IST
Last Updated 12 ಫೆಬ್ರುವರಿ 2024, 0:04 IST
ಅಕ್ಷರ ಗಾತ್ರ

ಜಿಲ್ಲಾ ಹಂತದ್ದೊ, ರಾಜ್ಯ ಮಟ್ಟದ್ದೊ ಆಟದ ಪಂದ್ಯಾವಳಿಗೆ ಇನ್ನೊಂದು ವಾರ ಇದೆ ಅನ್ನುವಾಗ, ದೈಹಿಕ ಶಿಕ್ಷಣ ಶಿಕ್ಷಕರು ನಮ್ಮ ಕಠಿಣ ಅಭ್ಯಾಸವನ್ನು ನಿಲ್ಲಿಸುತ್ತಿದ್ದರು. ಆ ಒಂದು ವಾರ ಬರೀ ಲಘು ದೈಹಿಕ ಚಟುವಟಿಕೆಗಳು. ಒತ್ತಡ ನಿವಾರಿಸುವ ದಿಸೆಯಲ್ಲಿ ನಿರಾಳ ಮಾತುಕತೆ. ಆಟದ ಕುರಿತಾಗಿ ಸಕಾರಾತ್ಮಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಕಠಿಣ ಅಭ್ಯಾಸ ಯಾಕೆ ಬೇಡ ಎಂದು ಕೇಳಿದರೆ ‘ಆಟ ಆಡುತ್ತಾ ಏನಾದರೂ ಗಾಯಗಳಾದರೆ ಪಂದ್ಯಾವಳಿಗೆ ದೊಡ್ಡ ಹೊಡೆತ ಬೀಳುತ್ತದೆ. ವಿಶ್ರಾಂತಿ‌ ಇಲ್ಲದ ಅಭ್ಯಾಸ ಸುಸ್ತು ಮಾಡುತ್ತದೆ. ಅಲ್ಲದೆ ಒತ್ತಡವನ್ನೂ ತರುತ್ತದೆ’ ಎನ್ನುತ್ತಿದ್ದರು. ಅವರ ಈ ಯೋಜನೆ ಕೆಲಸ ಮಾಡುತ್ತಿತ್ತು. ನಾವು ಬಹಳ ಆತ್ಮವಿಶ್ವಾಸದಲ್ಲೇ ಆಡಿ ಗೆಲ್ಲುತ್ತಿದ್ದೆವು. 

ನಮ್ಮ ಪಕ್ಕದ ಮನೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಮಗುವಿನ ಪೋಷಕರು ಮಗನ ಸರಣಿ ಪೂರ್ವಸಿದ್ಧತಾ ಪರೀಕ್ಷೆಗಳ ಬಗ್ಗೆ ಅಲವತ್ತುಕೊಂಡರು. ಮಗುವನ್ನು ಮುಖ್ಯ ಪರೀಕ್ಷೆಗೆ ಸಜ್ಜಾಗಿಸಲು ಎಷ್ಟು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಕೊಡಬಹುದು? ಒಂದು ಅಥವಾ ಎರಡು ಸಾಕಾಗುತ್ತದೆ. ಆದರೆ ಅವುಗಳ ಸಂಖ್ಯೆ ನಾಲ್ಕೋ ಐದೋ ಆದರೆ ಏನಾಗಬಹುದು? 

‘ಒಂದು ತಿಂಗಳಿನಿಂದ ದಿನಾಲೂ ಪರೀಕ್ಷೆ ಬರೆದೂ ಬರೆದೂ ಸಾಕಾಗಿದೆ. ಇವತ್ತು ರಾತ್ರಿ ಓದು, ನಾಳೆ ಹಗಲು ಬರೆ... ಎರಡು ಸಬ್ಜೆಕ್ಟ್‌ಗಳಲ್ಲಿ ನಾನು ಸ್ವಲ್ಪ ವೀಕು. ಅದರ ಕಡೆ ಹೆಚ್ಚು ಗಮನಹರಿಸುವುದಕ್ಕೇ ಆಗುತ್ತಿಲ್ಲ. ಪರೀಕ್ಷೆ ಎಂದರೆ ವಾಕರಿಕೆ ಬಂದಂತೆ ಆಗುತ್ತಿದೆ’ ಅಂದನಂತೆ ಅವರ ಮಗ.‌ ಹೆಚ್ಚು ಪೂರ್ವಸಿದ್ಧತಾ ಪರೀಕ್ಷೆಗಳು ಅಂದರೆ ಒಳ್ಳೆಯದು, ಪರಿಣಾಮಕಾರಿ ಅಂದು
ಕೊಂಡಿದ್ದ ಅವರ ಪೋಷಕರಿಗೆ ಗಾಬರಿಯಾಗಿದೆ.

ಮುಖ್ಯ ಪರೀಕ್ಷೆ ಬರೆಯುವ ಮುಂಚೆಯೇ ಆ ಹುಡುಗ ಅಂಕಣದಿಂದ ನಿರ್ಗಮಿಸಲು ಯೋಚಿಸಿದನೇ? ಪರೀಕ್ಷೆ ಬಗ್ಗೆ ಇರುವ ಕುತೂಹಲ, ಆಸಕ್ತಿ, ಸಣ್ಣ ಆರೋಗ್ಯಯುತ ಭಯ ಇಲ್ಲದೇಹೋದರೆ ಮುಖ್ಯ ಪರೀಕ್ಷೆ ಬೇರೆಯದೇ ಬಗೆಯ ಫಲಿತಾಂಶ ಕೊಡಬಹುದು. ನಷ್ಟ ಮಾತ್ರ ಮಗುವಿಗೆ.‌

ಪೂರ್ವಸಿದ್ಧತಾ ಪರೀಕ್ಷೆಗಳಿಂದ ಮಗುವಿನ ಮುಖ್ಯ ಪರೀಕ್ಷೆಗೆ ಮಾತ್ರ ಅನುಕೂಲವಾದರೆ ಸಾಕು. ಅದು ಅವರನ್ನು ಕಾಡಿಸುವಂತೆ ಇರಬಾರದು. ಮಕ್ಕಳು ಸುಸ್ತಾಗುವಂತೆ ಮಾಡಬಾರದು. ಸರಣಿ ಪರೀಕ್ಷೆಗಳನ್ನು ನಡೆಸುವುದು ಒಂದು ಶಾಲೆಯ ಹೆಗ್ಗಳಿಕೆಯಲ್ಲ.

ಪರೀಕ್ಷಾ ದಿನದ ಸಿದ್ಧತೆಗಳೇನು, ಮೂರು ಗಂಟೆಯ ಆ ಸಮಯವನ್ನು ಹೇಗೆ ಹೊಂದಿಸಿಕೊಳ್ಳಬೇಕು, ಯಾವ ಪ್ರಶ್ನೆಗೆ ಎಷ್ಟು ಸಮಯ ಬಳಸಿಕೊಳ್ಳಬೇಕು, ಉತ್ತರ ಬರೆಯುವ ಪರಿ ಹೇಗೆ, ಅಂಕಗಳನ್ನು ಪಡೆಯುವ ತಂತ್ರ ಯಾವುದು, ಪರೀಕ್ಷಾ ಕೊಠಡಿಯಲ್ಲಿ ಶಿಸ್ತು ಹಾಗೂ ಗಾಂಭೀರ್ಯವನ್ನು ಹೇಗೆ ಕಂಡುಕೊಳ್ಳಬೇಕು ಎಂಬಂತಹ ಸಂಗತಿಗಳ ಬಗ್ಗೆ ಮಕ್ಕಳಿಗೆ ಅಭ್ಯಾಸ ಮಾಡಿಸಲು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಕ್ರಮ ತಿಳಿಸಲು ಒಂದು ಅಥವಾ ಎರಡು ಸರಣಿ ಪರೀಕ್ಷೆಗಳು ಸಾಕು. ನಾಲ್ಕಾರು ಪರೀಕ್ಷೆಗಳನ್ನು ನಡೆಸಿ ಒಂದು ತಿಂಗಳು ಮಗುವಿ‌ನ ಸಮಯವನ್ನೂ ಶ್ರಮವನ್ನೂ ತಿಂದುಹಾಕಬಾರದು. ಅದರಿಂದ ದೇಹ ಮತ್ತು ಮನಸ್ಸು ಎರಡೂ ದಣಿದು ಹೋಗುತ್ತವೆ. 

ಮಗು ಒಂದೆರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬಹುದು. ಅಭ್ಯಾಸ ಮಾಡಬಹುದು. ನಂತರವೂ ಮತ್ತೊಂದು, ಇನ್ನೊಂದು ಅಂದರೆ ಮಗುವಿನ ಮನಸ್ಸು ಒದ್ದಾಡುತ್ತದೆ. ಅಭ್ಯಾಸ ಕೈ ಬಿಡುತ್ತದೆ. ಏನೋ ಒಂದು ಎಂದು ಬರೆದು ಬರುತ್ತದೆ. ಯಾವುದು ಕೂಡ ಅತಿ ಆಗಬಾರದು!

ನಾಲ್ಕು ಪರೀಕ್ಷೆಗಳನ್ನು ಬರೆಯುವುದರಿಂದ ಕಲಿತದ್ದು ಹೆಚ್ಚು ಮನನ ಆಗಬಹುದು. ಹೀಗಾಗಿ, ಅದಾಗಲೇ ಎಲ್ಲವನ್ನೂ ಕಲಿತ ಮಕ್ಕಳಿಗೆ ಅದು ಪುನರಾವರ್ತನೆಯಂತೆ ಭಾಸವಾಗಬಹುದು. ಆದರೆ ಇನ್ನೂ ಕಲಿಯುತ್ತಿರುವ ನಿಧಾನಗತಿಯ ಮಕ್ಕಳಿಗೆ ಅಷ್ಟೊಂದು ಅನುಕೂಲವಾಗದು. ಅವರಿಗೆ ಕಲಿಯಲು ಬಹಳಷ್ಟು ಸಮಯ ಬೇಕು. ಪರೀಕ್ಷೆಗಳ ಸಂಖ್ಯೆ ಹೆಚ್ಚಾದರೆ ಆ ಸಮಯದಲ್ಲಿ ಮಗು ನಿರಂತರವಾಗಿ ಪರೀಕ್ಷೆ ಬರೆಯುತ್ತಾ ಕೂರಬೇಕಾಗುತ್ತದೆ.

ತಾನು ಏನು ಕಲಿಯಬೇಕು, ತುಂಬಾ ಹಿಂದಿರುವ ವಿಷಯದಲ್ಲಿ ಹೇಗೆ ಸುಧಾರಿಸಿಕೊಳ್ಳಬೇಕು ಎಂದು ಯೋಜಿಸುವುದಕ್ಕೆ ಸಮಯ ಮತ್ತು ಸಂಬಂಧಿಸಿದ ಶಿಕ್ಷಕರು ಇಬ್ಬರೂ ಪೂರ್ಣವಾಗಿ ಲಭ್ಯವಾಗುವುದಿಲ್ಲ. ಅಲ್ಲದೆ ನಾಲ್ಕು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆದ ಮಾತ್ರಕ್ಕೆ ಮಗು ಸಂಪೂರ್ಣವಾಗಿ ಶಕ್ತವಾಗುವುದಿಲ್ಲ. ಸತತ ಅಭ್ಯಾಸ ಮತ್ತು ಪುನರಾವರ್ತಿತ ಕಲಿಕೆಗೆ ಅವಕಾಶ ಇರಬೇಕು.‌

ಹತ್ತನೇ ತರಗತಿಯ ಮಕ್ಕಳು ಎದುರಿಸುವ ಇನ್ನೊಂದು ಸಮಸ್ಯೆ ಎಂದರೆ, ಮೂರು ತಿಂಗಳ ಮುಂಚೆಯೇ ಅವರ ಸಿಲೆಬಸ್ ಬೋಧನೆ ಮುಗಿದು ಹೋಗಿರುತ್ತದೆ. ಬೋಧನೆಯನ್ನು ಬಹಳಷ್ಟು ವೇಗವಾಗಿ ಮಾಡಲಾಗುತ್ತದೆ. ಶಿಕ್ಷಕರಿಗೆ ಇದು ಅನಿವಾರ್ಯ.ಏಕೆಂದರೆ ಸರಣಿ ಪರೀಕ್ಷೆಗೆ ಸಮಯ ಕೊಡಬೇಕು ಮತ್ತು ಅದಕ್ಕೆ ತಯಾರಿ ಮಾಡಿಕೊಳ್ಳಬೇಕು. ಬೋಧನೆಯ ಗತಿ ವೇಗವಾಗುವುದರಿಂದ ಮಗು ಪಠ್ಯವನ್ನು ಆಳವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಾಗುವುದಿಲ್ಲ. ಬರೀ ಪರೀಕ್ಷಾ ಉದ್ದೇಶಕ್ಕಾಗಿ ವೇಗದಿಂದ ಕಲಿತು ಪರೀಕ್ಷೆ ಬರೆದು ಮರೆತುಬಿಡುವಂತಹ ಕಲಿಕೆಯಾಗಿರುತ್ತದೆ ಅದು. ಶಿಕ್ಷಣ ಅಂದರೆ ಬರೀ ಪರೀಕ್ಷೆಯಲ್ಲ, ಅದು ಬದುಕು ಎಂದು ಸದಾ ತುತ್ತೂರಿ‌ ಊದುವ ನಾವು ಈ ಕ್ರಮವನ್ನು ಬಿಡಬೇಕು. 

ಓದು-ಬರಹ-ಪರೀಕ್ಷೆಗಳು ಈ ಹೊತ್ತಿನಲ್ಲಿ ಮಗುವನ್ನು ಬಹಳಷ್ಟು ಹೈರಾಣಾಗಿಸುತ್ತಿವೆ. ಅವರ ಬಾಲ್ಯ, ಮುಗ್ಧತೆ, ಕುತೂಹಲ, ಕನಸು ಎಲ್ಲವೂ ನಮ್ಮ ಅತೀವ ಹೇರಿಕೆಯಿಂದ ಕಮರಿ ಹೋಗುತ್ತಿವೆ. ಮಕ್ಕಳಸ್ನೇಹಿ ಶಿಕ್ಷಣ ವ್ಯವಸ್ಥೆ, ಪರೀಕ್ಷಾ ವ್ಯವಸ್ಥೆ ಎಂದು ಬರುವುದೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT