ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಡುಗಟ್ಟಿದ ನೋವು: ನಿರ್ಲಜ್ಜ ವ್ಯವಸ್ಥೆ

ಅಸಹಾಯಕತೆ ಈ ಮಟ್ಟಿಗೆ ಆವರಿಸಿಕೊಳ್ಳಲು ಕಾರಣವಾದದ್ದು ಏನು? ಅಂತಹ ಸ್ಥಿತಿಯಿಂದ ಮಹಿಳೆಯರಿಗೆ ಮುಕ್ತಿ ದೊರಕಿಸುವ ಬಗೆ ಹೇಗೆ?
Published 6 ಮೇ 2024, 0:01 IST
Last Updated 6 ಮೇ 2024, 0:01 IST
ಅಕ್ಷರ ಗಾತ್ರ

ಹಾಸನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿವೆ ಹಾಗೂ ನಾಗರಿಕ ಸಮಾಜ ಬೆಚ್ಚಿಬೀಳುವಂತೆ ಮಾಡಿವೆ. ಅಧಿಕಾರ ವಲಯದಲ್ಲಿರುವ ಜನಪ್ರತಿನಿಧಿಗಳು ಹಾಗೂ ಆಡಳಿತ ವಲಯದ ಅಧಿಕಾರಿಶಾಹಿಯು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತು, ಸ್ವೇಚ್ಛಾಚಾರದಲ್ಲಿ ತೊಡಗಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಈ ಪ್ರಕರಣಗಳು ನಿದರ್ಶನಗಳಾಗಿ ನಿಲ್ಲುತ್ತವೆ.

ಸಮಾಜದ ದುರ್ಬಲ ವರ್ಗಗಳ ಮೇಲೆ, ಅಸಹಾಯಕರು ಮತ್ತು ಅಮಾಯಕ ಶ್ರೀಸಾಮಾನ್ಯರ ವಿರುದ್ಧ ಒಂದು ಬಲಿಷ್ಠ ಸಾಮಾಜಿಕ ವ್ಯವಸ್ಥೆಯು ಯಜಮಾನಿಕೆಯನ್ನು ಸ್ಥಾಪಿಸಿದ್ದಕ್ಕೆ ಹಾಸನದ ಬೆಳವಣಿಗೆಗಳು ನಿದರ್ಶನಗಳಾಗಿವೆ. ಇಂತಹ ವಿಕೃತಗಳು ಈಗಿನ ಜನತಂತ್ರ ವ್ಯವಸ್ಥೆಯಲ್ಲೂ ಸಾಧ್ಯವಾಗಿರುವುದು ಯಾರನ್ನಾದರೂ ಚಕಿತಗೊಳಿಸುತ್ತವೆ. ಈ ಯಜಮಾನಿಕೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಮೇಲ್ಪದರದ ಸಮಾಜ ಹಾಗೂ ಇದನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳುವ ರಾಜಕೀಯ ಶಕ್ತಿ ಇವೆರಡೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ.

ಅಸಹಾಯಕ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ಲೈಂಗಿಕ ದೌರ್ಜನ್ಯಗಳು ಯಾರಿಂದ ನಡೆದಿವೆ ಮತ್ತು ಇವು ಯಾರಿಂದ, ಯಾವ ಸಂದರ್ಭದಲ್ಲಿ, ಹೇಗೆ, ಏತಕ್ಕಾಗಿ ಬಯಲಾದವು ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಕಾಡಬೇಕಿರುವುದು, ಈ ದೌರ್ಜನ್ಯ ಗಳನ್ನು ಸಹಿಸಿಕೊಳ್ಳುವಂತಹ ಒಂದು ಕಲಿತ ಸಮಾಜ ನಮ್ಮ ನಡುವೆ ಇದೆ ಎಂಬುದು. ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳೂ ಸಿಲುಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೇ ಆಗಿದ್ದರೆ, ಅಧಿಕಾರಿಗಳಾದವರೂ ಇಷ್ಟೊಂದು ಅಸಹಾಯಕ
ರಾಗಿದ್ದು ಏಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ.  

ಏಕೆಂದರೆ, ಕೆಲಸದ ಸ್ಥಳಗಳಲ್ಲಾಗಲೀ ಅಧಿಕಾರ ಕೇಂದ್ರಗಳಲ್ಲಾಗಲೀ ಸಾಮಾನ್ಯ ಮಹಿಳೆ ತನ್ನ ಸ್ಥಾನಮಾನದ ಹೊರತಾಗಿಯೂ ಸ್ಥಾಪಿತ ವ್ಯವಸ್ಥೆಗೆ ಅಧೀನಳಾಗಿಯೇ ಇರುವ ಸ್ಥಿತಿ ಈಗಲೂ ನಮ್ಮಲ್ಲಿ ಇದೆ. ಈ ವ್ಯವಸ್ಥೆಯನ್ನು ಅಥವಾ ಇದರ ವಾರಸುದಾರರನ್ನು ಧಿಕ್ಕರಿಸುವ, ವಿರೋಧಿಸುವ ಅಥವಾ ಆಜ್ಞೆಯನ್ನು ಉಲ್ಲಂಘಿಸುವ ಯಾವುದೇ ನಡೆಗೆ ಮಹಿಳೆ ಅಪಾರ ಬೆಲೆ ತೆರಬೇಕಾಗುತ್ತದೆ. ಇದು ಗ್ರಾಮ ಪಂಚಾಯಿತಿಯಿಂದ ಬ್ಯಾಂಕಿಂಗ್‌ ಕ್ಷೇತ್ರದವರೆಗೂ, ಸಾಫ್ಟ್‌ವೇರ್‌ ಉದ್ದಿಮೆಯಲ್ಲೂ ಕಾಣಬಹುದಾದ ವಾಸ್ತವ. ಹಾಸನದ ಪ್ರಕರಣದಲ್ಲಿ ನಮಗೆ ಕಾಣಿಸಬೇಕಾದದ್ದು ವ್ಯಕ್ತಿಗತ ಸಂತ್ರಸ್ತೆಯರಲ್ಲ ಅಥವಾ ವೈಯಕ್ತಿಕ ಅಪರಾಧವೂ ಅಲ್ಲ. ಇಲ್ಲಿ ಢಾಳಾಗಿ ಕಾಣುತ್ತಿರುವುದು ನಮ್ಮ ಸಮಾಜದೊಳಗಿನ ಭೌತಿಕ ಮಾಲಿನ್ಯ, ಬೌದ್ಧಿಕ ತ್ಯಾಜ್ಯ ಹಾಗೂ ಊಳಿಗಮಾನ್ಯ ಸಾಮಾಜಿಕ ಮನಃಸ್ಥಿತಿ.

ಹಲ್ಲೆ ಅಥವಾ ದಾಳಿಗೊಳಗಾದ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ತಾನೇ ವ್ಯಾಖ್ಯಾನಿ
ಸಿಕೊಂಡು ನ್ಯಾಯ ವ್ಯವಸ್ಥೆಯ ಮುಂದೆ ಅಂಗಲಾಚಲಾಗುತ್ತದೆಯೇ? ತಾನು ಒಳಗಾದ ಪುರುಷಾಹಮಿಕೆಯ ವಿಕೃತಿಗೆ ಕಾರಣಗಳನ್ನು ತನ್ನೊಳಗೇ ಕಂಡುಕೊಳ್ಳುವಂತೆ ನೊಂದ ಮಹಿಳೆಯನ್ನು ಕೇಳಲಾಗುವುದೇ? ತಮ್ಮನ್ನು ಆವರಿಸುವ ಅಸಹಾಯಕತೆಯಿಂದ ಬಾಯ್ಬಿಡಲಾಗದೆ, ಮೌನವಾಗಿ ಪುರುಷವಿಕೃತಿಯನ್ನು
ಸಹಿಸಿಕೊಳ್ಳುವ ಮಹಿಳೆಯರ ನೋವು ಎಂತಹುದಾಗಿರಬಹುದು? ಸಾಂಸ್ಥಿಕವಾಗಿ ಅಥವಾ ಸಾಂಘಿಕ ವಾಗಿ ಭಾರತೀಯ ಸಮಾಜದಲ್ಲಿ ಹೀಗೆ ತನ್ನ ಅಂತ ರಂಗದ ನೋವು, ಅಳಲನ್ನು ತೋಡಿಕೊಳ್ಳಲು ಸಾಮಾನ್ಯ ಮಹಿಳೆಗೆ ನಾವು ಅವಕಾಶಗಳನ್ನು
ಕಲ್ಪಿಸಿದ್ದೇವೆಯೇ?

ಈ ಪ್ರಶ್ನೆಗಳಿಗೆ ಬಹುತೇಕ ಪುರುಷಾಧಿಪತ್ಯಕ್ಕೆ ಒಳಪಟ್ಟಿರುವ ಸಾಮಾಜಿಕ, ಸಾಂಸ್ಕೃತಿಕ ವಲಯಗಳು ಉತ್ತರಿಸಬೇಕಾಗುತ್ತದೆ. ಇದು ಬರೀ ರಾಜಕೀಯ ಪ್ರಶ್ನೆಯಲ್ಲ ಅಥವಾ ಯಾವುದೋ ಒಂದು ಚಿಂತನಾವಾಹಿನಿಯ ಸಾಂಘಿಕ ಪ್ರಶ್ನೆಯೂ ಅಲ್ಲ. ಸಾಮಾಜಿಕ ಬಲಾಢ್ಯ ಸ್ಥಿತಿ ಮತ್ತು ಆರ್ಥಿಕ ಮೇಲಂತಸ್ತಿನ ಆಳ್ವಿಕೆಗೆ ಒಳಗಾಗಿರುವ ಪ್ರತಿ ಸಂಸ್ಥೆಯಲ್ಲೂ ಸಂಘಟನೆ ಯಲ್ಲೂ ಈ ಪ್ರಶ್ನೆಗೆ ಉತ್ತರವನ್ನು ಶೋಧಿಸಬೇಕಿದೆ. ಒಂದು ಆರೋಗ್ಯಕರ ಸಮಾಜದ ಜವಾಬ್ದಾರಿ ಇರುವುದು ಇಲ್ಲಿ.

ಕ್ಷುದ್ರ ರಾಜಕೀಯ ನಿರೂಪಣೆಗೊಳಗಾಗಿ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿರುವ ಸಮಾಜವೊಂದು ನಮ್ಮ ನಡುವೆ ಇದೆ. ಈ ಸಮಾಜದ ನಿಷ್ಕ್ರಿಯತೆ ಹಾಗೂ ಸಾಮಾನ್ಯರ ನೋವಿಗೆ ಸ್ಪಂದಿಸಲು ಹಿಂಜರಿಯುವ ಅದರ ನಿರ್ಲಿಪ್ತತೆಯನ್ನು ಗಟ್ಟಿಯಾಗಿ ಪ್ರಶ್ನಿಸಬೇಕಿದೆ. ಸಾಮಾಜಿಕ-ವಿದ್ಯುನ್ಮಾನ ಮಾಧ್ಯಮಗಳ ಜವಾಬ್ದಾರಿ ಇದಲ್ಲವೇ?

ಆದರೆ ಆಧುನಿಕತೆಯ ಫಲಾನುಭವಿ ಸಮಾಜದ ಮೆದುಳು ಹೆಪ್ಪುಗಟ್ಟಿರುವುದರಿಂದ ಇದು ಗಮನಕ್ಕೆ ಬರುವುದಿಲ್ಲ. ಮನುಜಸೂಕ್ಷ್ಮತೆಯೇ ಇಲ್ಲದ ರಾಜಕೀಯ ವ್ಯವಸ್ಥೆ, ಲಿಂಗಸೂಕ್ಷ್ಮತೆಯಿಲ್ಲದ ಸಮಾಜ ಮತ್ತು ಜೀವಪರ ಸಂವೇದನೆಯೇ ಇಲ್ಲದ ಸಾಂಸ್ಕೃತಿಕ ಜಗತ್ತಿನ ನಡುವೆ ಹಾಸನದ ಲೈಂಗಿಕ ದೌರ್ಜನ್ಯಗಳು ನಮ್ಮನ್ನು ಕಾಡುತ್ತಿವೆ. ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಎದುರಾಗುವ ವಿಕೃತಿಗಳ ವಿರುದ್ಧ ನಾವು ದನಿ ಎತ್ತಬೇಕಾಗಿದೆ, ಸಂಘಟಿತರಾಗಿ ಹೋರಾಡಬೇಕಿದೆ. ಆಗ ಮಾತ್ರ, ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರ ಮಡುಗಟ್ಟಿದ ನೋವು ನಮಗೆ ಕಾಣಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT