ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಪ್ರಯೋಗಾಲಯ ಎಂಬ ಅನುಭವ ಮಂಟಪ

ವಿದ್ಯಾರ್ಥಿಗಳು ತಪ್ಪದೇ ಪ್ರಾಯೋಗಿಕ ತರಗತಿಗಳಿಗೆ ಹಾಜರಾದಾಗ ಮಾತ್ರ ವಿಜ್ಞಾನ ಒಲಿಯುತ್ತದೆ
Published : 3 ಆಗಸ್ಟ್ 2024, 0:18 IST
Last Updated : 3 ಆಗಸ್ಟ್ 2024, 0:18 IST
ಫಾಲೋ ಮಾಡಿ
Comments

ಮಗು ತನಗೆ ಒಂದು ವರ್ಷ ತುಂಬುವ ಮುನ್ನವೇ ಬಟ್ಟಲಿನಿಂದ ಬಟ್ಟಲಿಗೆ ನೀರು ವರ್ಗಾಯಿಸುತ್ತದೆ, ದ್ರವದ ನಿರಾಕಾರ ಸ್ಥಿತಿ ಕಂಡು ಪುಲಕಗೊಳ್ಳುತ್ತದೆ. ಮಾತು ತೊದಲಾದರೇನು, ‘ಪುಟ್ಟ ಅರ್ಕಿಮಿಡೀಸ್’ ಸ್ವತಃ ನಡೆಸಿದ ಸರಳ ಪ್ರಯೋಗದಿಂದ ಭರ್ಜರಿ ವಿಸ್ಮಯದ ಅನಾವರಣ!

ನಮ್ಮ ಬದುಕಿನ ಯಾವ ಸಂದರ್ಭವೂ ವಿಜ್ಞಾನಕ್ಕೆ ಹೊರತಾಗಿಲ್ಲ. ಪ್ರೌಢಶಾಲಾ ಹಂತದಲ್ಲಿ ತರಗತಿಗೆ ಮಾಸ್ತರು ಫ್ಲಾಸ್ಕ್‌ ಅಥವಾ ಟೆಸ್ಟ್‌ಟ್ಯೂಬ್‌ ತಂದರೆ ಅವನ್ನು ನೋಡಲು ಮಕ್ಕಳು ಮುಗಿಬೀಳುತ್ತಾರೆ. ಆದರೆ ಕಾಲೇಜಿಗೆ ಬಂದಾಗ ಅದೇಕೊ ಪ್ರಯೋಗಾಲಯದತ್ತ ಅವರ ಹೆಜ್ಜೆಗಳು ಭಾರವಾಗುತ್ತವೆ. ‘ಪ್ರ್ಯಾಕ್ಟಿಕಲ್ಸ್‌’ಗೆ ಹಾಜರಾಗದಿದ್ದರೆ ಏನೀಗ ಎನ್ನುವ ಮನೋಭಾವವೇ ಬಹುತೇಕರಿಗೆ. ಆದರೆ ನಿಜವಾಗಿ ಅವರ ಗಮನವನ್ನು ಗಂಭೀರವಾಗಿ ಸೆಳೆಯಬೇಕಾದದ್ದು ಪ್ರಾಯೋಗಿಕ ತರಗತಿಗಳೇ. ಅವರು ಆಸಕ್ತಿಯಿಂದ ತಪ್ಪದೇ ಪ್ರಾಯೋಗಿಕ ತರಗತಿಗಳಿಗೆ ಹಾಜರಾದಾಗ ಮಾತ್ರ ವಿಜ್ಞಾನ ಒಲಿಯುತ್ತದೆ. 

ಯಾವುದೇ ದೇಶದ ಸಮಾಜವು ವೈಜ್ಞಾನಿಕವಾಗಿ ಸಾಕ್ಷರವಾಗಲು ‘ನೋಡಿ ಕಲಿ, ಮಾಡಿ ನಲಿ’ ತತ್ವಾಧಾರಿತ ಶಿಕ್ಷಣ ಅಗತ್ಯ. ಹಾಗಾಗಿ, ಮಕ್ಕಳ ಚಿತ್ತ ಪ್ರಯೋಗಾಲಯದತ್ತ ಹರಿಯಬೇಕು. ಅವರು ತರಗತಿಯ ಸಾಂಪ್ರದಾಯಿಕ ಓದು, ಬರಹ, ಬೋಧನೆಗಿಂತಲೂ ಹೆಚ್ಚು ಸಮರ್ಥವಾಗಿ ಪ್ರಯೋಗಗಳಿಂದ ಕಲಿತಾರು. ಗ್ರೀಕ್‌ ಗಣಿತಜ್ಞ ಪೈಥಾಗೊರಸ್‌ ಕ್ರಿ.ಪೂ. 530ರ ಸುಮಾರಿನಲ್ಲಿ ಶಬ್ದದ ಅಧ್ಯಯನಕ್ಕೆ ತನ್ನ ಮನೆಯಲ್ಲೇ ಒಂದು ಪ್ರಯೋಗಾಲಯ ಸ್ಥಾಪಿಸಿದ್ದ.

ಸಿದ್ಧಾಂತದ ಜೊತೆಗೆ ಪ್ರಯೋಗದಿಂದ ಜ್ಞಾನವು ಸಮರ್ಥವಾಗಿ ಪ್ರಾಪ್ತವಾಗುತ್ತದೆ. ಈಜು, ಬೈಸಿಕಲ್‌, ನೇಯ್ಗೆ, ಕಾಗದ ತಯಾರಿಕೆ, ಫೋಟೊಗ್ರಫಿಯನ್ನು ತರಗತಿಯಲ್ಲಿ ಸಮರ್ಥವಾಗಿ ಕಲಿಯಲಾದೀತೆ? ಹೊರಜಗತ್ತಿಗೆ ಬಂದು ಅಭ್ಯಾಸನಿರತರಾದರೆ ಮಾತ್ರ ಆ ಕೌಶಲದ ಸಿದ್ಧಿ ಸಾಧ್ಯ.

‘ಆಲಿಸಿದರೆ ಮರೆತುಬಿಡುವೆ, ನೋಡಿದರೆ ನೆನಪಿಡುವೆ, ಮಾಡಿದರೆ ಅರ್ಥಮಾಡಿಕೊಳ್ಳುವೆ’- ಚೀನಾದ ಪ್ರಾಚೀನ ದಾರ್ಶನಿಕ ಕನ್‌ಫ್ಯೂಷಿಯಸ್‌ನ ಈ ನುಡಿ ಸಾರ್ವಕಾಲಿಕವಾಗಿದೆ. ಪ್ರಯೋಗವು ವಾಸ್ತವದೊಡನೆ ನಮಗೆ ಸಂಬಂಧ ಕಲ್ಪಿಸುತ್ತದೆ. ಆ ಮೂಲಕ ಕಾರ್ಯಕಾರಣ ನಂಟು ಅರಿವಾಗುವುದು.

ಪ್ರಯೋಗವು ವಿಜ್ಞಾನದ ಅವಿಭಾಜ್ಯ ಅಂಗ. ಅಡುಗೆ ಸಿದ್ಧತೆಯ ವೀಕ್ಷಣೆ ಬೇರೆ, ಸ್ವತಃ ಅಡುಗೆ ಮಾಡುವುದು ಬೇರೆ. ಪ್ರಯೋಗ ಒಂದು ಪರಿಣಾಮಕಾರಿ ಕಲಿಕಾ ವಿಧಾನ. ಭೌತಿಕ ಜಗತ್ತಿನ ವಿದ್ಯಮಾನಗಳ ಪರಿಚಯಕ್ಕೆ ಪ್ರಯೋಗವೇ ಬೆನ್ನೆಲುಬು. ಪ್ರಯೋಗಾಲಯದ ತಕ್ಕಡಿ, ಬೀಕರ್‌, ಅಯಸ್ಕಾಂತದಂತಹವು ಬರೀ ಸಲಕರಣೆಗಳಲ್ಲ. ಅವು ವಿದ್ಯಾರ್ಥಿಗಳ ಸಂದೇಹಗಳಿಗೆ ನಿಶ್ಚಿತ ರೂಪ ನೀಡುವ ಮೈಲಿಗಲ್ಲುಗಳು. ಬೋಧಕರ ಮಾರ್ಗದರ್ಶನದಲ್ಲಿ ಪ್ರಯೋಗಾತ್ಮಕವಾಗಿ ನಾಟಿದ ಪರಿಕಲ್ಪನೆಗಳು ಜೀವನಪರ್ಯಂತ ಉಳಿಯುತ್ತವೆ.

ಅಂದಹಾಗೆ ಪ್ರಯೋಗಗಳ ಪುನರಾವರ್ತನೆ ವಿಜ್ಞಾನದಲ್ಲಿ ಅಷ್ಟೇ ಪ್ರಧಾನ. ಮಹತ್ವದ ಆವಿಷ್ಕಾರಗಳು ಕೈಗೂಡಿರುವುದು ಪರೀಕ್ಷೆ, ಅವಲೋಕನದ ಸರಮಾಲೆಗಳಿಂದಲೇ. ಎಂದಮೇಲೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ತರ್ಕಶೀಲತೆ ಪುಟಿಯಲು ಅವರು ಪ್ರಯೋಗಗಳಲ್ಲಿ ನಿರತರಾಗುವುದು ಅವಶ್ಯ. ಒಂದು ವಿದ್ಯಾಲಯದಲ್ಲಿ ಪ್ರಯೋಗಾಲಯ ಸಜ್ಜುಗೊಳಿಸಲು ಸರ್ಕಾರ, ಆಡಳಿತ ವರ್ಗಕ್ಕೆ ತಗಲುವ ವೆಚ್ಚವೇನೂ ಕಡಿಮೆಯಲ್ಲ. ಪ್ರಾಯೋಗಿಕ ತರಗತಿಗಳನ್ನು ಲಘುವಾಗಿ ಪರಿಗಣಿಸಿದರೆ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತೆ ಅಲ್ಲವೇ? ಪೋಷಕರು ತಮ್ಮ ಮಕ್ಕಳು ಪ್ರಾಯೋಗಿಕ ತರಗತಿಗಳಿಗೆ ಗೈರಾಗದಂತೆ ನಿಗಾ ಇಡಬೇಕು.

ಪ್ರಯೋಗಾಲಯದಿಂದ ಶಿಕ್ಷಕರ ಅರಿವೂ ಪುನಶ್ಚೇತನಗೊಳ್ಳುವುದು. ಅಲ್ಲಿ ಅವರು ಬೋಧಿಸಲು ಕಲಿಯುತ್ತಾರೆ, ಕಲಿಯಲು ಬೋಧಿಸುತ್ತಾರೆ. ಪ್ರಾಯೋಗಿಕ ತರಗತಿಗಳು ಶಿಕ್ಷಕಕೇಂದ್ರಿತದಿಂದ ವಿದ್ಯಾರ್ಥಿಕೇಂದ್ರಿತ ಕಲಿಕೆಗೆ ತಲುಪಿಸುತ್ತವೆ. ವಿದ್ಯಾರ್ಥಿಗಳು ಜಡತ್ವವನ್ನು ಕೊಡವಿ ಸಕ್ರಿಯವಾಗಿ ವಿಜ್ಞಾನಾರ್ಜನೆಯಲ್ಲಿ ತೊಡಗಬಲ್ಲರು. ಅವರ ಲವಲವಿಕೆಯೇ ಅವರಿಗೆ ಕೈಮರ. ವಿಜ್ಞಾನವು ಮಾಹಿತಿಗಳ ಸಂಗ್ರಹವಲ್ಲ. ಪ್ರಯೋಗಾಲಯವು ಪರಿಕರಗಳನ್ನು ಒಪ್ಪ ಓರಣವಾಗಿ ಇರಿಸಿದ ಒಂದು ವಸ್ತುಪ್ರದರ್ಶನ ಅಲ್ಲ. ಅಲ್ಲಿ ಸೂಕ್ಷ್ಮದರ್ಶಕಗಳು, ಗ್ಯಾಲ್ವನೋಮೀಟರ್‌, ಸ್ಪೆರೊಮೀಟರ್‌ ಅಂಥವೆಲ್ಲ ಮೆರೆದರೆ ಅನ್ವೇಷಣೆ, ಶೋಧ ಕಾರ್ಯ ಚುರುಕಾಗಿ ನಡೆದಿದೆ ಎಂದೇ ಅರ್ಥ! ಅಲ್ಲಿನ ಪ್ರತಿ ಪರಿಕರವೂ ವಿಜ್ಞಾನವನ್ನು ಸಂಭಾಷಿಸುತ್ತದೆ, ಬೋಧಿಸುತ್ತದೆ.

ಪ್ರಾತ್ಯಕ್ಷಿಕೆ ಜಾದೂ ಅಲ್ಲ. ಲಿಟ್ಮಸ್‌ ಕಾಗದವನ್ನು ಆಮ್ಲ ದ್ರವದಲ್ಲಿ ಅದ್ದಿದಾಗ ಕೆಂಪು, ಪ್ರತ್ಯಾಮ್ಲ ದ್ರವದಲ್ಲಿ ಅದ್ದಿದಾಗ ನೀಲಿ ಬಣ್ಣಕ್ಕೆ ತಿರುಗುವುದು ಸರಿ. ಆದರೆ ಮಕ್ಕಳು ಇಷ್ಟಕ್ಕೇ ದಂಗಾಗಿ, ಅದುವೇ ವಿಜ್ಞಾನವೆಂದು ಆನಂದಿಸಿದರೆ ಎಂತಹ ಎಡವಟ್ಟು! ಲಿಟ್ಮಸ್‌ ಕಾಗದದ ರಚನೆ, ಆಮ್ಲ ಅಥವಾ ಪ್ರತ್ಯಾಮ್ಲದೊಡನೆ ಅದರ ವರ್ತನೆ ತಿಳಿಯಬೇಕಲ್ಲವೇ? ಹಾಗೇಕೆ, ಅದೇ ಏಕೆ, ಅದೆಷ್ಟು ಎಂಬಂತಹ ಪ್ರಶ್ನೆಗಳು ಮಕ್ಕಳಲ್ಲಿ ಉದ್ಭವಿಸಿ ಉತ್ತರಗಳನ್ನು ಬೋಧಕರಿಂದ ಪಡೆದುಕೊಂಡಾಗಲೇ ವೈಜ್ಞಾನಿಕ ಚಿಂತನೆಗೆ, ವಸ್ತುನಿಷ್ಠ ವಿವೇಚನೆಗೆ ರೆಕ್ಕೆ.

ತಾವು ಕೈಗೊಂಡ ಪ್ರಯೋಗಗಳ ಯಶಸ್ಸು, ವೈಫಲ್ಯಗಳ ಬಗ್ಗೆ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಸಾಮೂಹಿಕ ಕಲಿಕೆ, ತಂಡಪ್ರಜ್ಞೆ ಮತ್ತು ಸಹಿಷ್ಣುತೆಯೂ ಅವರಲ್ಲಿ ರೂಢಿಗತವಾಗುತ್ತದೆ. ವಿಜ್ಞಾನ ಪ್ರಯೋಗ ಮತ್ತು ಇತರ ಕೌಶಲಗಳಿಗೆ ನೇರ ನಂಟಿದೆ. ಪ್ರಾಯೋಗಿಕ ತರಗತಿಗಳು ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಬದುಕಿಗೆ ಅಣಿಗೊಳಿಸುತ್ತವೆ.

ವಿಜ್ಞಾನವನ್ನೂ ಸೇರಿದಂತೆ ಮಕ್ಕಳಲ್ಲಿ ಕಲಿಕೆಯ ಪ್ರೀತಿಯನ್ನು ಸೃಜಿಸುವುದು ಶಿಕ್ಷಣ ಕ್ರಮದ ಮೊದಲ ಆದ್ಯತೆಯಾಗಬೇಕು. ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ- ಇವು ನಿಸ್ಸಂದೇಹವಾಗಿ ಈ ದಿಸೆಯಲ್ಲಿನ ವಿಜೃಂಭಣೆಯ ಮೆಟ್ಟಿಲುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT