ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಾವು ಎಂಬ ‘ಒಳ್ಳೆ ಸುದ್ದಿ’!

ಸಾವಿನ ಸುದ್ದಿಯ ಸುದೀರ್ಘ ನಿರೂಪಣೆ ತರವೇ?
Last Updated 11 ಜೂನ್ 2020, 1:59 IST
ಅಕ್ಷರ ಗಾತ್ರ

ನಾಲ್ಕೈದು ತಿಂಗಳ ಬಸುರಿ, ನಿರ್ಜೀವವಾಗಿ ಮಲಗಿದ್ದ ಪತಿಯ ಎದೆಯ ಮೇಲೆ ಮಲಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಅದನ್ನು ನೋಡುತ್ತಿರುವ ಲಕ್ಷಾಂತರ ಪ್ರೇಕ್ಷಕರಲ್ಲೂ ಕಣ್ಣೀರಧಾರೆ. ಆ ಒಂದು ಕ್ಷಣದ ವಿಡಿಯೊ ಪದೇ ಪದೇ ಬಿತ್ತರವಾಗುತ್ತಿರುತ್ತದೆ. ವೀಕ್ಷಕನ ಮನಸ್ಸಿನಲ್ಲೂ ಅದೇ ದೃಶ್ಯಾವಳಿ ಗಿರಕಿ ಹೊಡೆಯುತ್ತಲೇ ಇರುತ್ತದೆ. ಪ್ರತಿದಿನ ಮಾಡುವ ಕೆಲಸದಲ್ಲಾಗಲೀ ನೋಡುವ ಇತರ ಕಾರ್ಯಕ್ರಮಗಳಲ್ಲಾಗಲೀ ಆತನ ಮನಸ್ಸು ಲೀನವಾಗುವುದೇ ಇಲ್ಲ. ‘ಛೇ, ಈ ವಿಧಿ ಎಷ್ಟು ಕ್ರೂರ’, ‘ಆ ದೇವರು ಇಷ್ಟು ನಿರ್ದಯಿಯಾಗಬಾರದು’, ‘ಈ ಪ್ರಪಂಚವೇ ಇಷ್ಟು’ ಎಂಬಂಥ ಉದ್ಗಾರಗಳಲ್ಲಿ ಅಂತಹವರ ಪ್ರತಿಕ್ರಿಯೆ ಅಡಕವಾಗಿರುತ್ತದೆ.

ಚಿತ್ರನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ ದ ಕ್ಷಣದಿಂದ ಹಿಡಿದು ಸುಮಾರು 30 ಗಂಟೆಗಳಷ್ಟು ಕಾಲ ಕನ್ನಡದ ಬಹುಪಾಲು ಸುದ್ದಿ ವಾಹಿನಿಗಳಲ್ಲಿ ಈ ಸಾವಿನ ಮತ್ತು ತದನಂತರದ ವಿಧಿವಿಧಾನಗಳ ದೃಶ್ಯಗಳೇ ರಾರಾಜಿಸುತ್ತಿದ್ದವು. ಆ ಸಾವಿನ ಸೂತಕದ ಛಾಯೆ ನೋಡುಗರ ಮನೆಗೂ ಹಬ್ಬಿತ್ತು. ಸಾವಿನ ಸುದ್ದಿಯ ಸುದೀರ್ಘ ನಿರೂಪಣೆ ಇದೇ ಹೊಸತಲ್ಲ. ಚಿತ್ರನಟ ಅಂಬರೀಷ್, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿನ ಸಂದರ್ಭದಲ್ಲೂ ಇಂತಹುದೇ ಪ್ರಕ್ರಿಯೆಗೆ ಸಾಕ್ಷಿಯಾಗಿದ್ದೇವೆ. ಈ ಎಲ್ಲ ಸಂದರ್ಭಗಳಲ್ಲೂ ಪ್ರೇಕ್ಷಕರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡ ಚಾನೆಲ್‍ಗಳು ‘ಒಳ್ಳೆ ಸುದ್ದಿ’ ಸಿಕ್ಕಿದ ಸಂಭ್ರಮದಲ್ಲಿ, ತಮ್ಮೆಲ್ಲಾ ಬೀಟ್‍ಗಳನ್ನು ಮರೆತು, ‘ಪಂಚಭೂತಗಳಲ್ಲಿ ಲೀನವಾದ...’ ಎಂಬ ಹೆಡ್‍ಲೈನ್ ಕೊಡುವವರೆಗೂ ಕ್ಯಾಮೆರಾ ಆಫ್ ಮಾಡಲೇ ಇಲ್ಲ.

ಟಿ.ವಿ. ತೆರೆಯ ಮೇಲೆ ಪಾರ್ಥಿವ ಶರೀರದ ನೇರಾನೇರ ದೃಶ್ಯಾವಳಿ, ಆ ವ್ಯಕ್ತಿಯ ಕುಟುಂಬಸ್ಥರ ಅಥವಾ ಆತ್ಮೀಯರ ಕಣ್ಣೀರ ಚಿತ್ರಣಗಳದೇ ಅಬ್ಬರ. ಪ್ರೇಕ್ಷಕರ ಮನಕಲಕುವ ಇಂತಹ ಚಿತ್ರಣಗಳನ್ನೇ ಹುಡುಕುವ ವರದಿಗಾರ ಹಾಗೂ ಛಾಯಾಗ್ರಾಹಕ. ಪ್ರೇಕ್ಷಕರೂ ಅಷ್ಟೆ, ಯಾರ ಭಾವನೆ ಹೇಗಿದೆ ಎಂಬುದನ್ನೇ ಕಣ್ಣುಬಿಟ್ಟು ನೋಡುವ ಹಾಗೂ ಹುಡುಕುವ ಪ್ರಕ್ರಿಯೆಯಲ್ಲೇ ತೊಡಗಿರುತ್ತಾರೆ. ಪ್ರೇಕ್ಷಕರು ಏನು ಕೇಳುತ್ತಾರೋ ಅದನ್ನೇ ನಾವು ನೀಡುತ್ತಿರುವುದು ಎಂಬ ಮಾಧ್ಯಮಗಳ ವಾದಕ್ಕೆ ವೀಕ್ಷಕರ ಈ ವರ್ತನೆ ಪುಷ್ಟಿ ಕೊಡುತ್ತದೆ.

ಜನಪ್ರಿಯ ವ್ಯಕ್ತಿಯೊಬ್ಬನ ಸಾವಿನ ಸುದ್ದಿಗೆ ಪತ್ರಿಕೋದ್ಯಮದಲ್ಲಿ ಖಂಡಿತಾ ಮನ್ನಣೆ ಇರುತ್ತದೆ. ಆದರೆ ಪ್ರಶ್ನೆ ಇರುವುದು, ಸಾವಿನ ಪೂರ್ತಿ ವಿಧಿವಿಧಾನಗಳೇ ದಿನಪೂರ್ತಿ ವಿಜೃಂಭಿಸಬೇಕೇ, ಯಾವುದೇ ವ್ಯಕ್ತಿಯ ಭಾವನೆಗಳನ್ನು ಇಷ್ಟು ಗಾಢವಾಗಿ ಕಾಡುವ ದೃಶ್ಯಗಳನ್ನು ಮಾಧ್ಯಮಗಳು ನೀಡಬೇಕೇ ಎನ್ನುವುದರಲ್ಲಿ. ಅದು ಪ್ರೇಕ್ಷಕರ ಮನಸ್ಸಿನ ಮೇಲೆ ಮೂಡಿಸುವ ಆತಂಕ, ಅಭದ್ರತೆಯಂತಹ ದುಷ್ಪರಿಣಾಮಗಳು ಏನಿರಬಹುದು?

ಮಾಧ್ಯಮದಲ್ಲಿ ಪದೇ ಪದೇ ಬಿತ್ತರವಾಗುವ ಸಾವಿನ ದೃಶ್ಯಾವಳಿಗಳು ಅಥವಾ ಅಪರಾಧದ ಸುದ್ದಿಗಳು ಪ್ರೇಕ್ಷಕರ ಮೇಲೆ ಎರಡು ರೀತಿಯ ಪರಿಣಾಮಗಳನ್ನು ಬೀರಬಲ್ಲವು ಎಂಬುದನ್ನು 1972ರಲ್ಲಿ ಅಮೆರಿಕದ ಮಾಧ್ಯಮ ವಿಶ್ಲೇಷಕ ಜಾರ್ಜ್ ಗರ್ಬನರ್ ಮತ್ತು ಅವರ ತಂಡದವರು ‘ಕಲ್ಟಿವೇಷನ್ ಅನಾಲಿಸಿಸ್’ ಎನ್ನುವ ಸಿದ್ಧಾಂತದಲ್ಲಿ ಮಂಡಿಸಿದ್ದಾರೆ. ಟಿ.ವಿ. ಮಾಧ್ಯಮ ಜನರ ಮೇಲೆ ಬೀರುವ ಪರಿಣಾಮದ ಕುರಿತ ಹಲವಾರು ಪರಿಕಲ್ಪನೆಗಳೊಂದಿಗೆ ‘ಹೀನ ಪ್ರಪಂಚ’ (ಮೀನ್ ವರ್ಲ್ಡ್) ಎಂಬ ಪರಿಕಲ್ಪನೆಯನ್ನೂ ಅವರು ಮುಂದಿಡುತ್ತಾರೆ. ಅದರ ಪ್ರಕಾರ, ಅಪರಾಧ ಅಥವಾ ಸಾವುನೋವಿನ ದೃಶ್ಯಾವಳಿಗಳನ್ನು ನಿರಂತರವಾಗಿ ವೀಕ್ಷಿಸಿದ ಪ್ರೇಕ್ಷಕರು, ಯಾವ ಕ್ಷಣದಲ್ಲಾದರೂ ಕೆಟ್ಟದ್ದು ಸಂಭವಿಸಬಹುದು ಎಂಬ ಮನೋಭಾವವನ್ನು ಹೊಂದುತ್ತಾರೆ. ಇದು, ತಮ್ಮ ಸಂಗಡಿಗರನ್ನೂ ಪ್ರಪಂಚವನ್ನೂ ಅಪನಂಬಿಕೆಯಿಂದ ನೋಡುವಂತೆ ಅವರನ್ನು ಪ್ರೇರೇಪಿಸುತ್ತದೆ.

ತಾತ್ಕಾಲಿಕ ಮನೋವ್ಯಾಕುಲವನ್ನೂ ದೀರ್ಘಕಾಲದ ಮಾನಸಿಕ ಪರಿಣಾಮವನ್ನೂ ಬೀರಬಲ್ಲ, ಪ್ರೇಕ್ಷಕರ ಹಾಗೂ ದುಃಖಿತರ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡ ಸಾವಿನ ಸುದ್ದಿ ನಿರೂಪಣೆಯ ಕಡಿವಾಣಕ್ಕೆ ಯಾವುದೇ ನಿಯಂತ್ರಣ ವ್ಯವಸ್ಥೆಯಿಲ್ಲ ಎಂಬುದು ವಿಪರ್ಯಾಸ.

ಭಾರತದಲ್ಲಿ ಮನರಂಜನೆ ಹಾಗೂ ಇತರ ಕಾರ್ಯಕ್ರಮಗಳಿಗೆ ಬಿಸಿಸಿಸಿ (ಬ್ರಾಡ್‍ಕಾಸ್ಟಿಂಗ್ ಕಂಟೆಂಟ್ ಕಂಪ್ಲೇಂಟ್ಸ್‌ ಕೌನ್ಸಿಲ್), ಜಾಹೀರಾತುಗಳಿಗೆ ಎಎಸ್‍ಸಿಐ (ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್‌ ಇಂಡಿಯಾ), ಪತ್ರಿಕೆಗಳಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸಿನಿಮಾಗಳಿಗೆ ಸಿಬಿಎಫ್‍ಸಿ (ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಷನ್‌) ಎಂಬ ವ್ಯವಸ್ಥೆಗಳಿವೆ. ಆದರೆ ಸುದ್ದಿವಾಹಿನಿಗಳಿಗೆ ಅಂತಹ ನಿಯಂತ್ರಣ ವ್ಯವಸ್ಥೆಯಿಲ್ಲ. ಎನ್‍ಬಿಎಸ್‍ಎ (ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್‌ ಅಥಾರಿಟಿ) ಇದ್ದರೂ ಅದು ಸ್ವಯಂಪ್ರೇರಿತ ನಿಯಂತ್ರಣ ವ್ಯವಸ್ಥೆ ಆದಕಾರಣ ಅದಕ್ಕೆ ಯಾವುದೇ ಕಾನೂನಾತ್ಮಕ ಬೆಂಬಲ ಇಲ್ಲ.

ಕಾನೂನಾತ್ಮಕ ನಿಯಂತ್ರಣ ವ್ಯವಸ್ಥೆಗಳು ಪ್ರಜಾಸತ್ತಾತ್ಮಕ ಸುದ್ದಿ ನಿರೂಪಣಾ ಸ್ವಾತಂತ್ರ್ಯವನ್ನು ಖಂಡಿತಾ ಮೊಟಕುಗೊಳಿಸಬಲ್ಲವು. ಆದರೆ ಯಾವುದೇ ನಿಯಂತ್ರಣ ವ್ಯವಸ್ಥೆಯಿಲ್ಲದ ವ್ಯವಸ್ಥೆ ಅಪಾಯಕಾರಿಯೂ ಆಗಬಲ್ಲದು. ಪ್ರಸ್ತುತ ಕೆಲವು ಟಿ.ವಿ. ಚಾನೆಲ್‌ಗಳಿಗೆ ಬೇಕಾಗಿರುವುದು ಮನಃಸಾಕ್ಷಿಯೆಂಬ ನಿಯಂತ್ರಣ ವ್ಯವಸ್ಥೆ ಅಥವಾ ಪ್ರೇಕ್ಷಕನ ಭಾವನೆಗಳ ಜೊತೆಗೆ ಆಟವಾಡುವ ಕಾರ್ಯಕ್ರಮಗಳ ನೇರಪ್ರಸಾರಕ್ಕೆ ಕಾನೂನಾತ್ಮಕ ಅಂಕಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT