ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕುಲದ ಬಗ್ಗೆ ಕನಕನ ಬಗೆ

Last Updated 21 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಭಾರತದ ಮಹಾಕಾವ್ಯ ಸಂಸ್ಕೃತದ ಮಹಾಭಾರತವನ್ನು ಅನುಸರಿಸಿ ಕನ್ನಡದಲ್ಲಿ ಆದಿಕವಿ ಪಂಪ ಬರೆದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಎರಡು ಪ್ರಸಂಗಗಳಿವೆ. ಒಂದು, ಕರ್ಣನು ತನ್ನ ಅಸ್ತ್ರವಿದ್ಯಾ ಪ್ರೌಢಿಮೆಯನ್ನು ಪ್ರದರ್ಶಿಸುವಾಗ ದ್ರೋಣನು, ‘ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ ಮಾತನಾಡುವುದಾದರೆ, ನಿನಗೂ ಅರಿಕೇಸರಿಗೂ (ಅರ್ಜುನ) ಯಾವ ಸಮಾನತೆಯಿದೆ?’ ಎಂದಾಗ ದುರ್ಯೋಧನನು, ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ’ (ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಾನೆ.

ಇನ್ನೊಂದು, ವೀರಪಟ್ಟದ ವಿಚಾರದಲ್ಲಿ ಭೀಷ್ಮನಿಂದ ಕುಲನಿಂದೆಗೆ ಒಳಗಾದ ಕರ್ಣನು, ‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ’ ಎಂದು ನನ್ನಿಯನ್ನು ನುಡಿಯುತ್ತಾನೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕುಲವನ್ನು ತಿರಸ್ಕರಿಸುವ, ಒಪ್ಪಿಕೊಳ್ಳುವ, ಆಚರಿಸುವ ಸಂಕೀರ್ಣ ಪರಂಪರೆ ಬೆಳೆದುಬಂದಿದೆ.

ಈ ಹಿನ್ನೆಲೆಯನ್ನಿಟ್ಟು ಕುಲದ ವಿಚಾರವನ್ನು ದಾಸ ಪರಂಪರೆಯಿಂದ ನೋಡುವುದಾದರೆ, ಭಕ್ತಿಪಂಥವಾಗಿ ಹುಟ್ಟಿಕೊಂಡ ಹರಿದಾಸ ಸಾಹಿತ್ಯವು ವಚನ ಚಳವಳಿಯ ಮುಂದುವರಿದ ಭಾಗವಾಗಿ ಪಂಡಿತ ಭಾಷೆಯನ್ನು ತಿರಸ್ಕರಿಸಿ, ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ವೈಚಾರಿಕ ಸಂಗತಿಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಬಿತ್ತುತ್ತಾ ಹೋಯಿತು. ಈ ಮೂಲಕ ದಾಸರು ವ್ಯಕ್ತಿಯ ಅಂತರಂಗವನ್ನು ಶುದ್ಧೀಕರಿಸಲು ಪ್ರಥಮ ಆದ್ಯತೆ ಕೊಟ್ಟರು. ಸಮಾಜದ ಕೊಳೆಯನ್ನು ತೊಳೆಯಲು ಶ್ರಮಿಸಿದರು. ಅಂತಹವರಲ್ಲಿ ಸಂತಕವಿ ಕನಕದಾಸ ಕೂಡ ಒಬ್ಬರು.

ತಿಮ್ಮಪ್ಪನು ವಿಜಯನಗರ ಸಾಮ್ರಾಜ್ಯದಲ್ಲಿ ದಂಡ ನಾಯಕನಾಗಿ ಬೆಳೆದು, ಆಧ್ಯಾತ್ಮಿಕ ನವಚೈತನ್ಯ ಹರಿದಂತೆ ಕನಕದಾಸರಾದರು, ಕುಲದ ಹಂಗನ್ನು ತೊರೆದರು.

ಒಮ್ಮೆ, ಕನಕದಾಸರನ್ನು ಎಂದೂ ನೋಡದ ಚಿನ್ನಪ್ಪನು ಭಿಕ್ಷುಕನಂತೆ ಬರುತ್ತಿದ್ದ ಕನಕದಾಸರನ್ನೇ, ‘ಏ ದಾಸಯ್ಯ, ನಿನಗೇನಾದರೂ ಕನಕದಾಸರು ಯಾರೆಂಬುದು ಗೊತ್ತೇ? ಅವರೀಗ ಎಲ್ಲಿದ್ದಾರೆ ಹೇಳು’ ಎಂದು ಕೇಳಲು, ಕನಕದಾಸರು ‘ಅದನ್ನು ನಾನು ಹೇಗೆ ಬಲ್ಲೆ? ಆತ ಹಿಂದೆ ಬರುವ ಯಾತ್ರಿಕರ ಮುಂದೆ ಮತ್ತು ಮುಂದೆ ಹೋಗುವ ಯಾತ್ರಿಕರ ಹಿಂದೆ ಇದ್ದಾನೆ’ ಎಂದು ಉತ್ತರಿಸಿ ಮುಂದೆ ನಡೆದರು. ಈ ಘಟನೆ ಕನಕದಾಸರ ಇಡೀ ವ್ಯಕ್ತಿತ್ವವನ್ನು ಹಿಡಿದಿಟ್ಟಿದೆ. ‘ಯಾತ್ರಿಕರು’ ಎಂದಾಗ ಕುಲದ ಮಾತೇ ಬರುವುದಿಲ್ಲ. ಅಲ್ಲದೆ ಇಲ್ಲಿ ‘ನಾಯಕ’ ಮತ್ತು ‘ಅನುಯಾಯಿ’ಗಳಿಗೆ ಸ್ಥಾನವೇ ಇಲ್ಲ.

ಭಾರತದ ಮಟ್ಟಿಗೆ ಧಾನ್ಯಗಳಿಗೆ ಜೀವತುಂಬಿ ರೂಪಕಾತ್ಮಕ ಚಿತ್ರಣ ಮಾಡಿರುವುದು ಕನಕದಾಸರೊಬ್ಬರೆ. ಅವರು ತಮ್ಮ ‘ರಾಮಧಾನ್ಯ ಚರಿತ್ರೆ’ಯಲ್ಲಿ ವ್ರೀಹಿ (ಭತ್ತ) ಮತ್ತು ರಾಗಿಯ ನಡುವಿನ ಸಂಘರ್ಷದ ಕತೆ ಹೇಳುವ ಮೂಲಕ ‘ಕುಲ’ದ ವಿಚಾರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಪವಿತ್ರ ಕಾರ್ಯಗಳಲ್ಲಿ ರಾಗಿಯನ್ನು ಉಪಯೋಗಿಸಲಾಗದ್ದೆಂದು ಭತ್ತವು (ಮೇಲ್ವರ್ಗ) ರಾಗಿಯನ್ನು (ಕೆಳವರ್ಗ) ಮೂದಲಿಸಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಾಗ, ರಾಮನ ನೇತೃತ್ವದಲ್ಲಿ ರಾಗಿಗೆ ಜಯ ಸಿಕ್ಕುತ್ತದೆ. ‘ರಾಮಧಾನ್ಯ’ ಎಂದು ಹೆಸರಾಗುತ್ತದೆ. ಪ್ರತಿಭೆ, ಗುಣ, ನಡತೆಗಳ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಕೇ ಹೊರತು ಆತನ ಜಾತಿಯಿಂದಲ್ಲ ಎಂಬುದು ‘ರಾಮಧಾನ್ಯ ಚರಿತ್ರೆ’ಯ ರೂಪಕಾತ್ಮಕ ಅರಿವು.

ಸಮಾಜದಲ್ಲಿರುವ ತರತಮಗಳನ್ನು ಕನಕದಾಸರು ತಮ್ಮ ಸಾತ್ವಿಕ ಕೋಪದಿಂದ ತಿದ್ದಲು ಪ್ರಯತ್ನಿಸಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಸರಳ ಭಾಷೆಯ ಮೂಲಕ ಆಧ್ಯಾತ್ಮಿಕ ವಿಷಯಗಳೊಂದಿಗೆ ವೈಜ್ಞಾನಿಕ ವಿಚಾರಗಳನ್ನು ಬಿತ್ತಿ ಕುಲದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ‘ಕುಲಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ’, ‘ಆತ್ಮ ಯಾವ ಕುಲ, ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ’ ಎಂದು ಸಮಾಜವನ್ನುಪ್ರಶ್ನಿಸುವಲ್ಲಿಯೇ ಪರಿಹಾರವನ್ನೂ ಸೂಚಿಸಿರುವುದು ಕನಕದಾಸರ ಜಾಣ್ಮೆಯೂ ಆಗಿದೆ. ಅಲ್ಲದೆ, ‘ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ’ ಎಂದು ಗಂಭೀರವಾದ ಪ್ರಶ್ನೆಯನ್ನು ಕುಲದ ಹೆಸರಿನಲ್ಲಿ ಸಂಘರ್ಷ ಮಾಡುವ ಸಮಾಜಘಾತುಕರಿಗೆ ಕೇಳಿದ್ದಾರೆ. ಆದರೆ, ಉತ್ತರ...?

ನಾಗರಿಕ ಸಮಾಜ ಬೆಳೆದಂತೆ ನಮ್ಮ ಅವಿವೇಕ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಪುನಃ ಪುನಃ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವೆ. ಸಮಾಜದ ತರತಮಗಳ ನಿವಾರಣೆಗೆ ಕಾನೂನಿನಲ್ಲಿ ಕಠಿಣ ನಿಯಮಗಳಿದ್ದರೂ ‘ಹೃದಯದ ನಿಯಮ’ ಬಹಳ ಮುಖ್ಯ. ಆದರೆ ಅಜ್ಞಾನ, ಅಂಧಕಾರ, ಅಧಿಕಾರ, ಅಹಂಕಾರ, ಅಂತಸ್ತು, ಜಾತಿಪ್ರತಿಷ್ಠೆಗಳೇ ಮುನ್ನೆಲೆಗೆ ಬರುತ್ತಿರುವುದು ದುರಂತ. ಕುಲದ ಪರಿಣಾಮ ದ್ರೋಣ- ಭೀಷ್ಮರಿಂದ ಕರ್ಣನು ನಿಂದೆಗೆ ಒಳಗಾದದ್ದು, ಗುರು ದ್ರೋಣರು ಏಕಲವ್ಯನ ಬೆರಳನ್ನು ಕಸಿದುಕೊಂಡದ್ದು, ಮೇಲ್ವರ್ಗದ ಸಮಾಜವು ಅಂಬೇಡ್ಕರ್ ಅವರನ್ನು ಅಪಮಾನಗಳಿಗೆ ಗುರಿಮಾಡಿದ್ದು, ಈ ಎಲ್ಲವೂ ಸಮಾಜವು ತಿದ್ದಿಕೊಳ್ಳಲು ಇರುವ ಮಹತ್ವದ ನಿದರ್ಶನಗಳು. ಆದರೆ ಇವುಗಳತ್ತ ಲಕ್ಷ್ಯಮಾಡದ ಅದೆಷ್ಟೋ ಕುಲನಿಂದಕರು ಈ ಸಮಾಜದಲ್ಲಿದ್ದಾರೆ. ಇವರನ್ನು ಜಯಿಸುತ್ತಲೇ ಸಾಧಕರ ಸಾಲಿನಲ್ಲಿ, ಕೊನೆಪಕ್ಷ ಉತ್ತಮ ಮನುಷ್ಯರಾಗಿ ಬದುಕಲು ಕಲಿಯಬೇಕು, ಬದುಕಲು ಬಿಡಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ.

ಕೇವಲ ಸಂಕೇತಗಳಿಗಾಗಿ ಜಯಂತಿಗಳನ್ನು ಆಚರಿಸುವ ಬದಲು ಒಳ್ಳೆಯ ಸಂಕಲ್ಪ ಮಾಡಲು ಜಯಂತಿಗಳನ್ನು ಆಚರಿಸಬೇಕು.

ಲೇಖಕ: ಶಾಸಕ, ಮೂಡಿಗೆರೆ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT