ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜಾಣ ನಡೆಯಿಂದ ಕನ್ನಡದ ಉಳಿವು!

ಕನ್ನಡದ ಕಡ್ಡಾಯಕ್ಕಾಗಿ ಕಾನೂನು ಮಾಡಿ ಎಂದು ಹೋರಾಡುವ ಬದಲು ಕನ್ನಡದ ನೆಲದಲ್ಲಿ ಬಾಳ್ವೆ ಮಾಡಲು ಕನ್ನಡದ ಬಳಕೆ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸುವುದೊಳಿತು
Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅರೆಭಾಷೆಯ ಒಂದು ನಾಟಕವನ್ನು ಇತ್ತೀಚೆಗೆ ನೋಡಿದೆ. ಅರೆಭಾಷೆಯೆಂದರೆ ಕೊಡಗು ಮತ್ತು ಸುಳ್ಯ ಪ್ರದೇಶದಲ್ಲಿ ಗೌಡರ ಭಾಷೆ ಎಂದೇ ಹೆಸರು ಪಡೆದಿರುವ ಭಾಷೆ. ಅರೆಭಾಷೆಗೆಂದೇ ರಚಿತವಾಗಿರುವ ಅಕಾಡೆಮಿಯವರು ನಾಟಕವನ್ನು ಪ್ರಸ್ತುತಪಡಿಸಿದ್ದರು. ಅರೆಭಾಷೆಗೂ ಕನ್ನಡಕ್ಕೂ ಅಂತಹ ವ್ಯತ್ಯಾಸ ಇದ್ದಂತೆ ಕಾಣಲಿಲ್ಲ. ನಾಟಕ ಸಂಪೂರ್ಣವಾಗಿ ಅರ್ಥವಾಯಿತು. ಕನ್ನಡದಂತೆಯೇ ಕಾಣುವ, ಸೀಮಿತ ಜನರ ಬಾಯಲ್ಲಾಡುವ ಇಂತಹ ಭಾಷೆಗೂ ಒಂದು ಅಕಾಡೆಮಿಯ ಅಗತ್ಯವಿದೆಯೇ ಅಂತ ಒಂದು ಕ್ಷಣ ಅನಿಸಿದರೂ ಅವರು ಆ ಭಾಷೆಯ ಉಳಿವಿಗಾಗಿ ಪಡುತ್ತಿರುವ ಕಷ್ಟವನ್ನು ನೋಡಿ ಹೆಮ್ಮೆಯಾಯಿತು.

ಇದೇ ರೀತಿ, ಕನ್ನಡದ ಇತರ ಉಪಭಾಷೆಗಳಾದ ಸಿದ್ಧಿ, ಸಾಂಕೇತಿ, ಕೊಡವ, ಹವ್ಯಕ, ಸೋಲಿಗ ಮುಂತಾದ ಭಾಷೆಗಳನ್ನಾಡುವ ಜನ ತಮ್ಮ ಭಾಷೆಯ ಉಳಿವಿಗಾಗಿ ಅನೇಕ ಕಮ್ಮಟಗಳನ್ನು, ಸಮ್ಮೇಳನಗಳನ್ನು ಮತ್ತು ಭಾಷಾಕೂಟಗಳನ್ನು ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಒಂದು ಮುಖ್ಯಭಾಷೆಯ ಶಕ್ತಿ ಮತ್ತು ಬೆಳವಣಿಗೆ ಅದರ ಉಪಭಾಷೆಗಳ ಒಳ ಗೊಳ್ಳುವಿಕೆ ಮತ್ತು ಅವುಗಳನ್ನು ಬಳಸುವ ಜನರ ಸಂಸ್ಕೃತಿಯ ಉಳಿವಿನ ಮೇಲೆ ನಿಂತಿರುತ್ತದೆ. ಈ ದೃಷ್ಟಿಯಿಂದ ಕನ್ನಡದ ಉಪಭಾಷೆಗಳು ನಿರಂತರವಾಗಿ ಉಳಿಯುವುದು ಕನ್ನಡದ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಉಪಭಾಷೆಗಳ ಉಳಿವಿಗಾಗಿ ಜನ ಇಷ್ಟೆಲ್ಲಾ ಕಸರತ್ತು ಮಾಡುತ್ತಿರುವಾಗ ಕರ್ನಾಟಕದ ಮಣ್ಣಲ್ಲಿ ಕನ್ನಡವೇ ಅವಜ್ಞೆಗೆ ಒಳಗಾಗುತ್ತಿರುವ ಸುದ್ದಿಗಳು ಕಳವಳವನ್ನು ಉಂಟುಮಾಡುತ್ತವೆ. ಬೆಳಗಾವಿಯಲ್ಲಿ ಕನ್ನಡ ಧ್ವಜದ ಬಗ್ಗೆ ನಿರಂತರವಾಗಿ ಮೂಡುತ್ತಿರುವ ಗೊಂದಲಗಳು, ಎಂಇಎಸ್ ಉಪಟಳ, ಗಡಿ ಪ್ರದೇಶ ಗಳಲ್ಲಿ ಕನ್ನಡ ಶಾಲೆಗಳು ಸೊರಗುತ್ತಿರುವುದು... ಇವೆಲ್ಲ ಆಘಾತಕಾರಿ ಸಂಗತಿಗಳೇ.

ಕರ್ನಾಟಕದಲ್ಲಿ ನೆಲೆ ಕಂಡುಕೊಂಡು ಇಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡ ಜನ ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸದೆ ಇರುವುದು ಅಕ್ಷಮ್ಯ ಅಪರಾಧ. ಇಂತಹ ಜನ ಕನ್ನಡವನ್ನು ಬಳಸಲೇಬೇಕೆಂಬ ಅನಿವಾರ್ಯವನ್ನು ಸೃಷ್ಟಿಸುವುದು ನಮ್ಮ ಜಾಣ್ಮೆಯ ನಡೆಯಾಗಬೇಕು.

ನಮ್ಮಲ್ಲಿಗೆ ಕೆಲವು ಅನ್ಯಭಾಷಿಕ ರೋಗಿಗಳು ಬರುತ್ತಾರೆ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿರುತ್ತಾರೆ. ನಮ್ಮೊಡನೆ ಮಾತನಾಡುವಾಗ ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಆದರೆ ವೈದ್ಯರು ನಿರಂತರವಾಗಿ ಕನ್ನಡದಲ್ಲೇ ಮಾತನಾಡಿಸಿದಾಗ ಅಥವಾ ತಮಗೆ ಬೇರೆ ಭಾಷೆ ಬರುವುದೇ ಇಲ್ಲವೆಂಬಂತೆ ವರ್ತಿಸಿದಾಗ ಅಂತಹ ರೋಗಿಗಳ ಬಾಯಿಂದ ನಿಧಾನವಾಗಿ ಕನ್ನಡ ಹೊರಬರುತ್ತದೆ. ಏಕೆಂದರೆ ಸರಿಯಾಗಿ ಅರ್ಥವಾಗದೆ ವೈದ್ಯರು ತಪ್ಪು ಚಿಕಿತ್ಸೆ ನೀಡಿಬಿಟ್ಟರೆ!

ಬೆಂಗಳೂರಿನಲ್ಲಿ ಬಹಳ ಹಿಂದೆ ನಾನೇ ನೋಡಿದ ಘಟನೆ. ಒಂದು ಪುಟ್ಟ ಅಂಗಡಿಗೆ ಮಲಯಾಳಿ ಗಿರಾಕಿಯೊಬ್ಬ ಬರುತ್ತಾನೆ. ಅವನ ಜೊತೆ ಮೊದಲಿಗೆ ಅಂಗಡಿಯವನು ಕನ್ನಡದಲ್ಲೇ ಮಾತನಾಡುತ್ತಾನೆ. ಸ್ವಲ್ಪ ದಿನ ಕಳೆದ ಮೇಲೆ ನೋಡಿದರೆ ಅಂಗಡಿಯವನು ಆ ಗಿರಾಕಿಯ ಜೊತೆ ಹರಕುಮುರುಕು ಮಲಯಾಳಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿ ಸೋಜಿಗ ವಾಗುತ್ತದೆ. ಹೀಗೆ ಮಾಡಿದರೆ ಕನ್ನಡ ಉದ್ಧಾರವಾಗುವುದು ಹೇಗೆ? ಕನ್ನಡದ ಅಸ್ಮಿತೆ ಉಳಿಯುವುದು ಹೇಗೆ?

ಸರೋಜಿನಿ ಮಹಿಷಿ ವರದಿಯ ಪ್ರಕಾರ, ಯಾವುದೇ ವ್ಯಕ್ತಿ 15 ವರ್ಷಗಳಷ್ಟು ಕಾಲ ಕರ್ನಾಟಕ ದಲ್ಲಿ ನೆಲೆಸಿದರೆ ಆ ವ್ಯಕ್ತಿಯನ್ನು ಕರ್ನಾಟಕದ ಪ್ರಜೆ ಮತ್ತು ಕನ್ನಡಿಗ ಎಂದು ಗುರುತಿಸಬೇಕು. ಆದರೆ ಇಲ್ಲೇ ಹುಟ್ಟಿ ಇಲ್ಲೇ ಬೆಳೆದವರೂ ಕನ್ನಡದ ಗಂಧವೇ ಇಲ್ಲದಂತೆ ವರ್ತಿಸುವುದು ಒ‍ಪ್ಪುವಂತಹ ಸಂಗತಿಯಲ್ಲ.

ನನ್ನ ವಿದ್ಯಾರ್ಥಿನಿಯೊಬ್ಬಳು ವೈದ್ಯಕೀಯ ಪದವಿ ಪೂರೈಸಿದ ಮೇಲೆ ವಿದಾಯದ ಧನ್ಯವಾದ ಹೇಳಲು ಬಂದಿದ್ದಳು. ನನ್ನ ಜೊತೆಯಿದ್ದ ನನ್ನ ಸ್ನೇಹಿತರೊಬ್ಬರು, ಸ್ಫುಟವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಅವಳನ್ನು ನೋಡಿ, ವೈದ್ಯರಾದವರು ಇಷ್ಟೊಂದು ಚೆನ್ನಾಗಿ ಕನ್ನಡ ಮಾತನಾಡುವುದು ಅಪರೂಪ ಎಂದು ಹೇಳಿ ಅವಳ ಊರನ್ನು ಕೇಳಿದರು. ಅವಳು ದೆಹಲಿ ಎಂದಾಗ ಅವರಿಗೆ ಆಶ್ಚರ್ಯವಾಯಿತು. ಶಿವಮೊಗ್ಗೆಗೆ ಬಂದ ಮೇಲೆ ಅವಳು ಕನ್ನಡ ಕಲಿತು ನಿರರ್ಗಳವಾಗಿ ಮಾತನಾಡುತ್ತಿದ್ದಳು. ಇಂತಹ ಪ್ರಸಂಗಗಳು ಕನ್ನಡ ಬೆಳೆಯುವ ಬಗ್ಗೆ ಇರುವ ಉತ್ಕಟವಾದ ಮೋಹವನ್ನು ಇಮ್ಮಡಿಗೊಳಿಸುತ್ತವೆ.

ಕನ್ನಡದ ಅಸ್ಮಿತೆ ಕರ್ನಾಟಕದಲ್ಲಿ ಮೊಳಗ ಬೇಕೆಂದರೆ ನಾವು ಅದನ್ನು ಹೆಚ್ಚುಹೆಚ್ಚಾಗಿ ದಿನನಿತ್ಯದ ವ್ಯವಹಾರದಲ್ಲಿ ಬಳಸಬೇಕು. ಇಂಗ್ಲಿಷ್‌ ಭಾಷೆಯನ್ನು ಬಳಸುವಾಗ ತಪ್ಪಾದರೆ ಕೀಳರಿಮೆಯೆಂದು ಭಾವಿಸುವ ನಾವು, ನಮ್ಮ ಮಕ್ಕಳು ಕನ್ನಡವನ್ನು ತಪ್ಪಾಗಿ ಉಚ್ಚರಿಸಿದಾಗ ಮುಜುಗರ ಪಟ್ಟುಕೊಳ್ಳದಿರುವುದು ಆಭಾಸದಂತೆ ಕಾಣುತ್ತದೆ.

ಕನ್ನಡದ ಕಡ್ಡಾಯಕ್ಕಾಗಿ ಕಾನೂನು ಮಾಡಿ ಎಂದು ಹೋರಾಡುವ ಬದಲು ಕನ್ನಡದ ನೆಲದಲ್ಲಿ ಬಾಳ್ವೆ ಮಾಡಲು ಕನ್ನಡದ ಬಳಕೆ ಅನಿವಾರ್ಯ ಎಂಬ ವಾತಾವರಣವನ್ನು ಸೃಷ್ಟಿಸಿದರೆ ಕನ್ನಡ ಮತ್ತಷ್ಟು ಸಮೃದ್ಧಿಯಾಗುತ್ತದೆ. ಹಿಂಜರಿಕೆ ಇಲ್ಲದೆ ಎಲ್ಲಾ
ಸಂದರ್ಭಗಳಲ್ಲೂ ಕನ್ನಡವನ್ನೇ ಬಳಸುತ್ತಾ ಹೋದರೆ ಪಬ್ಬುಗಳಲ್ಲಿ, ಮಾಲುಗಳಲ್ಲಿ, ಐ.ಟಿ ಪಾರ್ಕುಗಳಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಕೂಡ ಕನ್ನಡದ ಕಲರವ ಕೇಳುವಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT