ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಾಲದ ಸ್ಮರಣೆಯಲ್ಲಿ ಘನಮೌಲ್ಯದ ಅಭಿವ್ಯಕ್ತಿ

ವಿಶ್ವಸೃಷ್ಟಿಯ ಕೌತುಕದ ವಿದ್ಯಮಾನಗಳು ನಮ್ಮಲ್ಲಿ ಜೀವಚೈತನ್ಯವನ್ನು ಪೊರೆಯಬಲ್ಲವು
Last Updated 25 ನವೆಂಬರ್ 2021, 20:28 IST
ಅಕ್ಷರ ಗಾತ್ರ

ಬದುಕು ಹರಿವ ನದಿ. ನಿಂತರೆ ನೀರೂ ಕೊಳೆತು ನಾರುತ್ತದೆ! ಚಲನಶೀಲತೆಯೇ ಪರಮಸತ್ಯ ಮತ್ತು ಅಸ್ತಿತ್ವದ ಅಗತ್ಯ. ‘ಓಡು, ಇಲ್ಲದಿದ್ದರೆ ನಡೆ, ಅದೂ ಆಗದಿದ್ದಲ್ಲಿ ತೆವಳು. ಆದರೆ ನಿಂತಲ್ಲೇ ನಿಂತಿರಬೇಡ’ ಎಂದಿದ್ದಾರೆ ದಾರ್ಶನಿಕರೊಬ್ಬರು. ಜಗದಸತ್ಯವೆನಿಸುವ ಶರಣವಾಣಿ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಅಂದಿದೆ. ‘ಎಲ್ಲಿಯೂ ನಿಲ್ಲದಿರು...’ ಎಂದ ಕುವೆಂಪು, ‘ಸಂಚಾರಿಯಾಗು...’ ಎಂದ ಲಂಕೇಶರ ಮಾತುಗಳು ಧ್ವನಿಸುವುದು ಕೂಡ ‘ನಡೆದರಷ್ಟೇ ಬದುಕು’ ಎಂಬ ಸತ್ಯವನ್ನು!

ಇಲ್ಲಿ ಯಾವುದೂ ಸ್ಥಿರವಲ್ಲ. ನಿಶ್ಚಲವಾದರೆ ಅವಕ್ಕೆಲ್ಲಾ ಉಳಿವಿಲ್ಲ. ಬಣ್ಣ, ರೂಪ, ಆಕಾರ, ವಯಸ್ಸು, ಹಣ, ಆಸ್ತಿ, ಅಹಂಕಾರ, ಸಾಮ್ರಾಜ್ಯ, ದೇಶ, ಕೋಶ, ಭಾಷೆ ಎಲ್ಲವೂ ಒಂದು ದಿನ ಅಳಿದು ಹೋಗುತ್ತವೆ. ಆದರೆ ಬಗೆಬಗೆಯಾಗಿ ದಾಖಲಿಸಿದ ಸಾಧನೆಗಳು ಮಾತ್ರವೇ ಅಳಿಯುವ ಜೀವವನ್ನು ಕಾಲದ ಸ್ಮರಣೆಯಲ್ಲಿ ಉಳಿಸುತ್ತವೆ. ಪುನೀತ್‍ ರಾಜ್‌ಕುಮಾರ್‌ ಅವರ ಅಗಲಿಕೆಯಲ್ಲಿಯೂ ಇಂತಹ ಘನಮೌಲ್ಯದ ಅಭಿವ್ಯಕ್ತಿಯಾಗಿದೆ.

ಕಾಲಘಟ್ಟದ ಧಾವಂತದಲ್ಲಿ, ನಿತ್ಯದ ಗಡಿಬಿಡಿ, ದಣಿವು, ಮಾನಸಿಕ ಒತ್ತಡ, ತನ್ನನ್ನೂ ತನ್ನವರನ್ನೂ ಆಲಿಸಲು- ಧ್ಯಾನಿಸಲು ಸಮಯಾಭಾವದ ಸ್ಥಿತಿ. ‘ಟೈಮೇ ಇಲ್ಲ...’ ಎಂಬ ಮಾಮೂಲಿ ರೋದನೆಗಳಂತಹ ಬದುಕಿನ ವಿಪರ್ಯಾಸಗಳನ್ನೆಲ್ಲಾಕಟ್ಟಿಕೊಟ್ಟಿದ್ದ ನಾಟಕವೊಂದನ್ನು ಕಾಲೇಜು ದಿನಗಳಲ್ಲಿ ಅಭಿನಯಿಸಿದ ನೆನಪು, ನಾಟಕದ ಹೆಸರು ‘ಓಡುವವರು...!’ ಹೌದು, ಅದೀಗ ನಮ್ಮ ಜರೂರತ್ತು. ಕಾರಣ, ನಮ್ಮದು ವಿಪರೀತ ಭರದಲ್ಲಿ ಓಡುವ ಜಗತ್ತು. ನಾವೂ ಅದರೊಟ್ಟಿಗೆ ಓಡದಿದ್ದಲ್ಲಿ ಇದ್ದಲ್ಲೇ ಉಳಿಯುತ್ತೇವೆ ಅಥವಾ ಅಳಿಯುತ್ತೇವೆಂಬ ಭಯ. ಒಟ್ಟಾರೆ, ಇವತ್ತಿನ ಜಗದಲ್ಲಿ ವೇಗ ಮತ್ತು ನಿಖರತೆಗಳು ಗೆಲ್ಲುವ ಅಸ್ತ್ರಗಳು. ಹಾಗಾಗಿ ನಾವೆಲ್ಲಾ ಅವಸರದ ಶಿಶುಗಳು!

ಖಗೋಳ ವಿಜ್ಞಾನದ ಆರಂಭದ ದಿನಗಳಲ್ಲಿ ಪ್ಲೇಟೊ, ಟಾಲೆಮಿಯವರು ಭೂಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿ, ಭೂಮಿಯು ಸ್ಥಿರಕಾಯವೆಂಬ ಕಲ್ಪನೆಯನ್ನು ಹುಟ್ಟುಹಾಕಿದ್ದರು.ಕೋಪರ್ನಿಕಸ್‍ನ ನಂತರದಲ್ಲಿ ಸೌರಕೇಂದ್ರಿತ ಸಿದ್ಧಾಂತವು ಪ್ರತಿಪಾದಿಸಲ್ಪಟ್ಟಿತು. ವಾಸ್ತವವಾಗಿ ಅಸ್ತಿತ್ವದಲ್ಲಿರುವ ಪ್ರತಿಯೊಂದು ಆಕಾಶಕಾಯವೂ ಮತ್ತೊಂದು ಭಾರಯುತ ಕಾಯದ ಸುತ್ತ ಪರಿಭ್ರಮಣೆಯನ್ನು ಹೊಂದಿರುತ್ತದೆ, ಹೊಂದಿರಲೇಬೇಕು.

ನಮಗೆಲ್ಲಾ ಚಿಕ್ಕಂದಿನಿಂದಲೂ ವೇಗದ ಬಗ್ಗೆ ಅತೀವ ಆಸಕ್ತಿ ಮತ್ತು ಕುತೂಹಲವಿತ್ತು. ವೇಗವಾಗಿ ವಾಹನ ಓಡಿಸುವವನೇ ಉತ್ತಮ ಚಾಲಕ ಎಂಬ ತಪ್ಪುಗ್ರಹಿಕೆ ಆಗ. ಚುರುಕಿನ ಗೆಳೆಯನಿಗೆ ‘ಅವನದು ನೂರು ಮೈಲಿ ವೇಗ’ ಅನ್ನೋ ಹಣೆಪಟ್ಟಿ ಅಂಟಿಸಿದ್ದಿದೆ. ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಸುಖೋಯ್-30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ಜಗತ್ತನ್ನು ಬೆರಗುಗೊಳಿಸಿತ್ತು. ಇದು ಬುಲೆಟ್‍ ಟ್ರೈನ್‍ಗಳ ಜಮಾನ. ಮನಸು ವೇಗ ಬಯಸುತ್ತದೆ. ‘ನಿಧಾನವೇ ಪ್ರಧಾನ’ ಎಂಬ ಹಿರಿಯರ ಮಾತಿಗೀಗ ಬೆಲೆಯಿಲ್ಲ.

ಮೊದಮೊದಲು ಬೋಯಿಂಗ್-747 ವಿಮಾನದ ಗಂಟೆಗೆ 880 ಕಿ.ಮೀ. ವೇಗ ನಮ್ಮಲ್ಲೊಂದು ಅಚ್ಚರಿ ಹುಟ್ಟಿಸಿತ್ತು. ಸೂಪರ್ ಸಾನಿಕ್‍ಗಳ 2160 ಕಿ.ಮೀ./ಗಂಟೆ ವೇಗ ಸಾಮರ್ಥ್ಯದ ಕುರಿತು ಹಲವಾರು ರೋಚಕ ಕಥೆಗಳಿದ್ದವು. ಭೂಗುರುತ್ವವನ್ನು ಮೀರಿ ಮೇಲೇರಲು ರಾಕೆಟ್‍ಗಳು ಹೊಂದಿರಬೇಕಾದ ವಿಮೋಚನಾ ವೇಗದ ಬಗ್ಗೆ ಎಳೆಯರಿದ್ದಾಗ ನಮಗೆಲ್ಲಾ ನಂಬಿಕೆಯೇ ಹುಟ್ಟುತ್ತಿರಲಿಲ್ಲ. ಒಂದು ಸೆಕೆಂಡು ಟಕ್‍ಟಕ್ ಅನ್ನುವಷ್ಟರಲ್ಲಿ ರಾಕೆಟ್ 11.2 ಕಿ.ಮೀ. ದೂರಕ್ಕೆ ಚಿಮ್ಮುವುದೆಲ್ಲಾ ನಮ್ಮ ಊಹೆಗೆ ನಿಲುಕದ ಸಂಗತಿಯಾಗಿತ್ತು. ಆದರೆ ನಮಗರಿವಿಲ್ಲದಂತೆ ನಿಂತ ನೆಲವೇ ಭೂಕಕ್ಷೆಯಲ್ಲಿ ಕಣ್ಮಿಟುಕಿಸುವುದರೊಳಗೆ ಮೈಲುಗಟ್ಟಲೆ ಕ್ರಮಿಸಿರುತ್ತದೆ! ನಮ್ಮನ್ನೊಳಗೊಂಡ ಬ್ರಹ್ಮಾಂಡವೂ ಮಿಂಚಿನ ವೇಗದಲ್ಲಿ ಓಡುತ್ತಿದೆ.

ಭೂಮಿ, ಸೂರ್ಯ, ಚಂದ್ರರು ಸೇರಿದಂತೆ ಇತರ ಪ್ರತಿಯೊಂದು ಆಕಾಶ ಕಾಯವೂ ಮತ್ತೊಂದು ತೂಕದ ಕಾಯದ ಸುತ್ತ ನಿರ್ದಿಷ್ಟ ಕಕ್ಷಾವೇಗದಲ್ಲಿ ಪರಿಭ್ರಮಿಸುತ್ತದೆ. ಅಲ್ಲಿ ಗುರುತ್ವಬಲ ಮತ್ತು ರಾಶಿಗಳು ಕಾಯಗಳ ವೇಗ, ಕಕ್ಷೆ, ಪರಿಭ್ರಮಣಾವಧಿಗಳನ್ನು ನಿರ್ಧರಿಸುತ್ತವೆ. ನಕ್ಷತ್ರಪುಂಜಗಳ ಭ್ರಮಣೆಯು ತಮ್ಮ ಕೇಂದ್ರದ ಸುತ್ತಲಿರುತ್ತದೆ.

ನಮ್ಮ ಭೂಮಿ, ಸೌರಮಂಡಲ, ಗೆಲಾಕ್ಸಿ ಹೀಗೆ ನಮ್ಮನ್ನು ಹೊತ್ತ ವಿಶ್ವವೇ ಮಿಂಚಿನ ವೇಗದಲ್ಲಿ ಓಡುತ್ತಿದ್ದರೂ ಅವೆಂದಿಗೂ ಹಾದಿ ತಪ್ಪದೆ ಉರುಳಬೇಕಾದಲ್ಲೇ ಉರುಳುತ್ತವೆ! ಗಲಿಬಿಲಿಗೊಳ್ಳದ ಅಂಥಾ ನಿಖರವೂ ನಿರಂತರವೂ ಆದ ಚಲನೆಗೆ ಅಗತ್ಯ ಸಾಮರ್ಥ್ಯ ಎಲ್ಲಿಂದ ಬಂತು? ಒಂದೊಮ್ಮೆ ಅವು ಸುತ್ತಿಬರುವ ಪಥ ಮತ್ತು ಅವಧಿಯಲ್ಲಿ ಸಣ್ಣಪುಟ್ಟ ದೋಷಗಳಾದರೂ ಕಾಲಮಾನಗಳೇ ಏರುಪೇರಾಗ
ಬಹುದಿತ್ತು. ಆದರೆ ಹಾಗಾಗದು.

ಹೌದು, ನಮ್ಮದು ವೇಗದ ಜಮಾನ. ನಿತ್ಯದ ಜಂಜಡ, ಕಾರ್ಯಭಾರಗಳ ನಡುವೆ ಬಂಧುತ್ವವನ್ನು ಕಾಯ್ದುಕೊಂಡು ಮುಂದುವರಿಯಬೇಕಾದ ಸವಾಲಿದೆ. ವಿಶ್ವಸೃಷ್ಟಿಯ ಅಂತಹ ಕೌತುಕದ ವಿದ್ಯಮಾನಗಳು ನಮ್ಮ ವರ್ತಮಾನಕ್ಕೊಂದು ಗುರಿ, ಸ್ಪಷ್ಟತೆಯನ್ನು ಕರುಣಿಸಲಿ, ಬದುಕಿನ ಅಗಾಧ ಸಾಧ್ಯತೆಗಳನ್ನು ಎದುರಿಗೆ ತೆರೆದಿಟ್ಟು ಜೀವಚೈತನ್ಯವನ್ನು ನಮ್ಮಲ್ಲಿ ಸದಾಕಾಲ ಪೊರೆಯಲಿ ಎಂಬುದು ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT