ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಧಾರ್ಮಿಕ ಪರಿಭಾಷೆ ಮತ್ತು ನುಡಿಗಟ್ಟು

ಕೊಲ್ಲುವಂತೆ ಹೇಳುವುದು ಧರ್ಮವೇ? ಕೊಲ್ಲಿ ಎನ್ನುವವರು ಸಾಧು ಸಂತರೇ?
Last Updated 16 ಜನವರಿ 2022, 19:31 IST
ಅಕ್ಷರ ಗಾತ್ರ

ಕಳೆದ ತಿಂಗಳ ಕೊನೆಯ ವಾರದಲ್ಲಿ, ಹಿಂದೂಗಳಿಗೆ ಪವಿತ್ರವೆನಿಸಿರುವ ಗಂಗಾ ನದಿಯ ತಟದ ಹರಿದ್ವಾರದಲ್ಲಿ ‘ಧರ್ಮ ಸಂಸತ್’ ಎಂಬ ಕಾರ್ಯಕ್ರಮ ನಡೆಯಿತು. ಅಲ್ಲಿ ವೇದಿಕೆಯಲ್ಲಿ ‘ಸಾಧು-ಸಂತ’ರೆಂದು ಕರೆಯಲ್ಪಟ್ಟ ಹಲವು ಜನ ಹಾಜರಿದ್ದು, ಹಿಂದೂಗಳು ಶಸ್ತ್ರಧಾರಿಗಳಾಗಿ ಹಿಂದೂಯೇತರರ ಹತ್ಯೆಯ ಮೂಲಕ ‘ಮತಶುದ್ಧಿ’ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಅವರು ಬಹಿರಂಗ ಕರೆ ನೀಡಿದರು. ದೇಶದಲ್ಲಿ ಹಿಂದೆಂದೂ ಇಷ್ಟು ನಿರ್ಭೀತವಾಗಿ ನೀಡಲಾಗಿರದಿದ್ದ ಸಾಮೂಹಿಕ ಹತ್ಯೆಯ ಕರೆಯಿದು. ಇದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸರ್ಕಾರ ಸಂವಿಧಾನವನ್ನು ರಕ್ಷಿಸಬೇಕಾದ ತನ್ನ ಕರ್ತವ್ಯದಿಂದ ಹೇಗೆ ವಿಮುಖವಾಗಿದೆ ಎಂಬುದನ್ನು ಎ.ನಾರಾಯಣ ತಮ್ಮ ಲೇಖನದಲ್ಲಿ (ಪ್ರ.ವಾ., ಜ. 14) ವಿವರವಾಗಿ ಬರೆದಿದ್ದಾರೆ.

ಆದರೆ ಪ್ರಸ್ತುತ ವಿಷಯ ಸಂವಿಧಾನ ಪಾಲನೆಯ ‘ತಾಂತ್ರಿಕ’ ಆಯಾಮದೊಂದಿಗೇ ಅದರ ಹೃದಯ ಭಾಗಕ್ಕೆ ತಾಗಿದಂತಿರುವ ಇನ್ನೊಂದು ಬಹುಮುಖ್ಯ ಆಯಾಮವನ್ನೂ ಹೊಂದಿದೆ ಎಂಬುದನ್ನು ನಾವು ಗಮನಿಸಬೇಕು. ಅದು, ಯಾವುದನ್ನು ಧರ್ಮ ಎಂದು ಮತ್ತು ಸಾಧು ಸಂತರು ಎಂದರೆ ಯಾರು ಎಂಬುದನ್ನು ಮರೆತಂತಿರುವುದು. ನಾವು ಹಿಂದೂ ಧರ್ಮದ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ನಾವು ಹೆಮ್ಮೆಪಡುವ ಈ ಧರ್ಮ ಇನ್ನೊಬ್ಬರನ್ನು ಕೊಲ್ಲಲು ಹೇಳುತ್ತದೆಯೇ? ಕೊಲ್ಲಲು ಹೇಳುವವರನ್ನು ಈ ಧರ್ಮ ಸಾಧು ಸಂತರು ಎಂದು ಕರೆದಿದೆಯೇ?

ಕೆಲವರು ಹೇಳಬಹುದು, ಪುರಾಣಗಳಲ್ಲಿ ನಮ್ಮ ದೇವರುಗಳು ದುಷ್ಟರನ್ನು ಕೊಂದಿಲ್ಲವೇ? ಅವನ್ನೆಲ್ಲ ನಾವು ಹಬ್ಬಗಳಾಗಿ ಆಚರಿಸುವುದಿಲ್ಲವೇ? ನಮ್ಮ ಭಗವದ್ಗೀತೆಯೇ ಯುದ್ಧವನ್ನು ಸಮರ್ಥಿಸಿ, ಪ್ರೋತ್ಸಾಹಿಸುವುದಿಲ್ಲವೇ ಎಂದು. ಈ ಪ್ರಶ್ನೆಗಳನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲೂ ಹಲವರು ಕೇಳಿದರು; ಕೆಲವರು ಅನುಷ್ಠಾನಕ್ಕೂ ತಂದರು. ಅದು ಮುಗ್ಧರ ರಕ್ತ ಚೆಲ್ಲಿ ಪರಿಸ್ಥಿತಿಯನ್ನು ಬಿಗಡಾಯಿಸಿತೇ ವಿನಾ ಉದ್ದೇಶ ಈಡೇರಲಿಲ್ಲ. ಇದಕ್ಕೆ ಕಾರಣ, ಪುರಾಣವು ಇತಿಹಾಸವಲ್ಲ; ವರ್ತಮಾನವಂತೂ ಅಲ್ಲ.

ಇನ್ನು ಮನುಷ್ಯರು ದೇವರುಗಳಲ್ಲ, ಹಾಗೆಂದು ಭಾವಿಸಿದವರೇ ಈ ಪುರಾಣಗಳಲ್ಲಿ ‘ದುಷ್ಟ’ರೆಂದು ಕರೆಯಲ್ಪಟ್ಟು ಹತರಾದವರು. ಅದೇನೇ ಇರಲಿ, ಪುರಾಣಗಳ ಹಿಂದಿನ ಉದ್ದೇಶ ಮತ್ತು ಕಲ್ಪನಾಶೀಲತೆಯನ್ನು ರೂಪಿಸಿದ ಶಕ್ತಿಗಳೇ ಬೇರೆ. ಮುಖ್ಯ ಎಂದರೆ ಇವೆಲ್ಲ ಮನುಷ್ಯನ ‘ರಚನೆ’ಗಳು. ಹಾಗಾಗಿಯೇ ಪುರಾಣವು ಧರ್ಮದ ಭಾಗವಾಗಿದೆಯೇ ವಿನಾ ಅದೇ ಧರ್ಮವೆನಿಸಿಕೊಂಡಿಲ್ಲ. ಜೊತೆಗೆ ನಮ್ಮ ಧರ್ಮ ಸನಾತನವೆನಿಸಿಕೊಂಡು ಆದಿ ಮಾತ್ರವಲ್ಲದೆ ಅಂತ್ಯವನ್ನೂ ನಿರಾಕರಿಸಿ ಬೆಳೆದಿದೆ. ಸದಾ ವಿಕಾಸವನ್ನು ಹೊಂದುತ್ತಿದೆ.

ಆಧುನಿಕತೆಯ ಪರಿಣಾಮವಾಗಿ ಹೆಚ್ಚೆಚ್ಚು ಜನರು ತಮ್ಮನ್ನು ಧರ್ಮಾತೀತರೆಂದು ಘೋಷಿಸಿಕೊಂಡು ಹೆಮ್ಮೆಪಡುತ್ತಿದ್ದಾಗ, ಅವರ ಮಧ್ಯೆ ಇದ್ದೂ ತಮ್ಮನ್ನು ‘ಸನಾತನ ಹಿಂದೂ’ ಎಂದು ಕರೆದುಕೊಳ್ಳಲು ಹಿಂಜರಿಯದ ಗಾಂಧೀಜಿ ಹೇಳಿದ ಒಂದು ಬಹುಮುಖ್ಯ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅದೆಂದರೆ, ನಮ್ಮ ಧರ್ಮವು ಇತರ ಧರ್ಮಗಳಂತೆ ಶಾಸ್ತ್ರ ಗ್ರಂಥಗಳ ಧರ್ಮವಲ್ಲ. ಅದು ಋಷಿ ಮುನಿಗಳ, ಸಾಧು ಸಂತರ ಧರ್ಮ. ನಮ್ಮ ಧರ್ಮಕ್ಕೆ ಆಧಾರವಾಗಿವೆಯೆಂದು ಹೇಳಲಾಗುವ ವೇದೋಪನಿಷತ್ತು- ಪುರಾಣಗಳೂ ಸೇರಿದಂತೆ ಧರ್ಮ ಗ್ರಂಥಗಳೆಲ್ಲವೂ ಒಟ್ಟಿಗೇ ರೂಪುಗೊಂಡಂಥವಲ್ಲ. ಕಾಲಾನುಕಾಲಕ್ಕೆ ಒಂದಾದರ ಮೇಲೆ ಒಂದರಂತೆ- ನಂತರ ಬಂದುದು ಆ ಮೊದಲು ಬಂದುದನ್ನು ಪುನರ್‌ವ್ಯಾಖ್ಯಾನಿಸುತ್ತಾ ತಿದ್ದುತ್ತಾ ರೂಪಾಂತರಗೊಳಿಸುತ್ತಾ- ಬಂದಂಥವು.

ಇಲ್ಲದಿದ್ದರೆ ವೇದಗಳ ನಂತರ ವೇದಾಂತವೆಂಬುದು ಅಥವಾ ಉಪನಿಷತ್ತುಗಳು ಏಕೆ ಬರಬೇಕಿತ್ತು? ಅದ್ವೈತವೇಕೆ ಪ್ರಶ್ನಿತವಾಗಿ ನಾಲ್ಕಾರು ಆವೃತ್ತಿಗಳಾಗಿ ಬೆಳೆಯಬೇಕಿತ್ತು? ಬುದ್ಧ, ಮಹಾವೀರ, ನಾನಕರೂ ಮೂಡಿದ್ದು ಈ ನೆಲೆಯಲ್ಲಿಯೇ. ಇವೆಲ್ಲವೂ ನಂತರ ಜನಜೀವನದಲ್ಲಿ ಇಂಗುತ್ತಾ ದೇಶ ತಿರುಗುತ್ತಿದ್ದ ಸಾಧು ಸಂತರ ವಾಣಿಗಳ ಮೂಲಕ ಸಮಕಾಲೀನಗೊಳ್ಳುತ್ತ ಜನರ ಮಧ್ಯೆ ಧರ್ಮವೆನಿಸಿಕೊಳ್ಳುತ್ತಿದ್ದವು. ಹಾಗಾಗಿಯೇ ಬಲ್ಲವರು ಹಿಂದೂ ಧರ್ಮವನ್ನು ಒಂದು ಜೀವನರೀತಿ (a way of life) ಎಂದು ವರ್ಣಿಸುವರು. ಇನ್ನು ಕೆಲವರು ಹಲವು ಸಂಪ್ರದಾಯಗಳ ಒಕ್ಕೂಟ ಎನ್ನುವರು. ಆದರೆ ಇವರಾರೂ, ಇವರ ಯಾವ ಸಂಪ್ರದಾಯವೂ ಇನ್ನೊಬ್ಬರನ್ನು ಕೊಲ್ಲುವ ಮಾತಾಡಲಿಲ್ಲ. ಬದಲಿಗೆ ಗೆಲ್ಲುವ, ಸಹಬಾಳ್ವೆಯ ವಿದ್ಯೆ ಬೋಧಿಸಿದವು. ಇದರ ಮುಂದುವರಿಕೆಯಾಗಿಯೇ ನಮ್ಮ ಕಾಲದಲ್ಲಿ ಕಟ್ಟಾ ವೈಷ್ಣವರಾಗಿ ಬೆಳೆದರೂ ಕ್ರಿಸ್ತನಿಗೆ ಒಲಿದ, ಮಹಮ್ಮದರೊಡನೆ ಒಡನಾಡಿದ ಗಾಂಧಿ ಮೂಡಿದ್ದು, ಮಹಾತ್ಮರೆನಿಸಿದ್ದು.

ಇತಿಹಾಸವನ್ನು ವರ್ತಮಾನದ ಶಾಂತಿ-ನೆಮ್ಮದಿಗಳನ್ನು ಹೆಚ್ಚಿಸುವಂತೆ ವ್ಯಾಖ್ಯಾನಿಸುವುದು ಧರ್ಮವೆನಿಸಿಕೊಳ್ಳುತ್ತದೆಯೇ ವಿನಾ, ಹಳೆಯ ಹುಣ್ಣುಗಳನ್ನು ಮತ್ತೆ ತೆರೆಯ ಹೊರಡುವುದು ದುಷ್ಟ ರಾಜಕಾರಣ ಮಾತ್ರವೆನಿಸುತ್ತದೆ. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ರಾಜಕಾರಣ ಮಾಡುವವರು ಮಾಡಲಿ. ಆದರೆ ಅದನ್ನು ಧರ್ಮದ ಹೆಸರಲ್ಲಿ ಮಾಡುವುದು ಧರ್ಮಕ್ಕೆ ಮಾಡುವ ಅಪಚಾರ. ಅಂತಹ ಅಪಚಾರ ಮಾಡುವವರನ್ನು ಸಾಧು ಸಂತರೆಂದು ಕರೆಯುವುದು ನಮ್ಮ ಸಾಧು ಸಂತರ ಪರಂಪರೆಗೆ ಮಾಡುವ ಅಪಚಾರ. ಇದು ನಮ್ಮ ಧಾರ್ಮಿಕ ಪರಿಭಾಷೆಯನ್ನೇ, ನುಡಿಗಟ್ಟನ್ನೇ ತಲೆಕೆಳಗು ಮಾಡಿದರೂ ಗೊತ್ತಾಗದಷ್ಟು ಅಸೂಕ್ಷ್ಮರಾಗುವಂತಹ ಮಾಯಾ ರಾಜಕಾರಣ, ಇದಕ್ಕೆ ನಾವು ಮರುಳಾಗಿರುವುದೇ ನಮ್ಮ ಇಂದಿನ ದುರಂತವಾಗಿದೆ.

ನಾವು ಯಾವುದನ್ನಾದರೂ ದ್ವೇಷಿಸುತ್ತಾ ದ್ವೇಷಿಸುತ್ತಾ ನಾವೂ ಅದೇ ಆಗಿಬಿಡುತ್ತೇವಂತೆ. ನಾವೇ ನಮ್ಮ ಶತ್ರುಗಳಾಗಿ ಮಾರ್ಪಡುವ ಮಾಯಾಜಾಲಕ್ಕೆ ಇಂದು ಬಲಿಯಾದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT