ಮಂಗಳವಾರ, ಜೂನ್ 2, 2020
27 °C

ಚುರುಮುರಿ | ಡೋರ್‌ಲಾಕ್ ಡೌನ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಗಂಡ ಉತ್ತರ, ಹೆಂಡತಿ ದಕ್ಷಿಣ, ಮಕ್ಕಳು ಆಗ್ನೇಯ- ನೈರುತ್ಯ ದಿಕ್ಕಿಗೆ ತಿರುಗಿ ಮೊಬೈಲಿನಲ್ಲಿ ಮೈ ಮರೆತಿದ್ದರು.

ಮೊಬೈಲ್ ಬ್ಯಾಟರಿ ಆಫ್ ಆದಮೇಲೆ ಗಂಡ ಶಂಕ್ರಿ ಎಚ್ಚೆತ್ತುಕೊಂಡ, ಮೊಬೈಲ್ ದುಷ್ಪರಿಣಾಮ
ಗಳ ಬಗ್ಗೆ ಜಾಗೃತನಾದ.

‘ಛೇ, ಮನೆಹಾಳು ಮೊಬೈಲು... ಮೊಬೈಲ್ ಕಾಯಿಲೆಗೆ ಮದ್ದಿಲ್ಲ, ಅದರಿಂದ ಅಂತರ ಕಾಪಾಡಿಕೊಳ್ಳಿ’ ಎಂದು ಹೆಂಡತಿ, ಮಕ್ಕಳಿಗೆ ಬುದ್ಧಿ ಹೇಳಿದ.

ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ‘ಲಾಕ್‍ಡೌನ್ ಟೈಮಿನಲ್ಲಿ ಮೊಬೈಲ್ ಇಲ್ಲದೆ ಮನೇಲಿ ಟೈಂಪಾಸ್ ಆಗುತ್ತೇನ್ರೀ?’ ಹೆಂಡ್ತಿ ಸುಮಿ ತಿರುಗಿಬಿದ್ದಳು.

‘ಟಿ.ವಿ ನೋಡಿಕೊಂಡು ಪ್ರಪಂಚಜ್ಞಾನ ಬೆಳೆಸಿಕೊ’ ಎಂದ ಶಂಕ್ರಿ.

‘ಟಿ.ವಿ ಆನ್ ಮಾಡ್ಬೇಡ್ರಿ ನನಗೆ ಭಯ ಆಗುತ್ತೆ. ಕೊರೊನಾ ಸೋಂಕಿತರು, ಸತ್ತವರ ಸಂಖ್ಯೆ ಏರಿಕೆಯಾಗುವುದನ್ನು ನೋಡ್ತಿದ್ರೆ ನನ್ನ ಬಿ.ಪಿ ಏರುತ್ತೆ’.

‘ನೀನು ಕೆಡುವುದಲ್ಲದೆ, ಮೊಬೈಲ್ ಕೊಟ್ಟು ಮಕ್ಕಳನ್ನೂ ಕೆಡಿಸುತ್ತಿರುವೆ’.

‘ಮಕ್ಕಳಿಗೆ ಔಟ್‌ಡೋರ್ ಗೇಮ್ ಆಡಲು ಅವಕಾಶವಿಲ್ಲ, ಇನ್‌ಡೋರ್ ಆಡಲು ಆಟಗಾರರ ಜೊತೆಯಿಲ್ಲ. ಪಾಪ, ಇನ್ನೇನು ಮಾಡ್ತಾರೆ ಹೇಳಿ. ಗಲಾಟೆ ಮಾಡದೆ ತೆಪ್ಪಗಿರಲಿ ಅಂತ ಮೊಬೈಲ್ ಕೊಟ್ಟು ಕೂರಿಸಿದ್ದೀನಿ’.

‘ಲಾಕ್‍ಡೌನ್ ಸೆರೆವಾಸ ಯಾವತ್ತು ಮುಗಿಯುವುದೋ...’ ಶಂಕ್ರಿ ತಲೆ ಚಚ್ಚಿಕೊಂಡ.

‘ಆಚೆ ಹೋಗುವವರೆಲ್ಲಾ ಮನೆಯಲ್ಲಿ ಉಳಿಯೋವರೆಗೂ ಮುಗಿಯಲ್ಲರೀ’ ಅಂದಳು ಸುಮಿ.

‘ಲಾಕ್‍ಡೌನ್ ಆಯ್ತು, ಸೀಲ್‍ಡೌನ್ ಬಂತು, ಮುಂದೆ ಡೋರ್‌ಲಾಕ್ ಡೌನ್ ಮಾಡ್ತಾರೇನೋ’.

‘ಲಾಕ್‍ಡೌನ್‍ಗಿಂತಾ ಡೋರ್‌ಲಾಕ್ ಡೌನ್ ಕಠಿಣವಾಗಿರುತ್ತೇನ್ರೀ?’

‘ಹೌದು, ಎಲ್ಲರನ್ನೂ ಮನೆ ಒಳಗೆ ಕೂಡಿ, ಪೊಲೀಸರು ಡೋರ್‌ಲಾಕ್ ಮಾಡಿಕೊಂಡು ಕೀಲಿ ತಗೊಂಡು ಹೋಗ್ತಾರೆ, ಬಾಯಿ ಬಡಿದುಕೊಂಡ್ರೂ ಬಾಗಿಲು ತೆಗೆಯಲ್ಲ. ಯಾರಾದ್ರೂ ಕಿಟಕಿಯಲ್ಲಿ ಬಂದು ಊಟದ ಪ್ಯಾಕೆಟ್‌ ಕೊಟ್ಟರಷ್ಟೇ ಊಟ, ಇಲ್ಲಾಂದ್ರೆ ಉಪವಾಸ...’ ಹೆದರಿಸಿದ ಶಂಕ್ರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.