ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ಜಯಂತಿ: ಬೀಸು ಹೇಳಿಕೆಗಳು ಎಷ್ಟು ಸರಿ?

ಸಂವಿಧಾನದ ಆಶಯ ಉಳಿದೀತು ಹೇಗೆ?
Last Updated 9 ಜುಲೈ 2018, 19:58 IST
ಅಕ್ಷರ ಗಾತ್ರ

ಊರ ಒಳಗಣ ಬಯಲು

ಊರ ಹೊರಗಣ ಬಯಲೆಂದುಂಟೆ?

ಊರೊಳಗೆ ಬ್ರಾಹ್ಮಣ ಬಯಲು

ಊರ ಹೊರಗೆ ಹೊರಬಯಲೆಂದುಂಟೆ?

ಎಲ್ಲಿ ನೋಡಿದರೂ ಬಯಲೊಂದೆ

-ಬೊಂತಾದೇವಿ

ಮೇಲಿನ ವಚನ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಪ್ರಶ್ನಿಸುತ್ತದೆ. ಸಮತೆಯ ಕುರಿತು ಮಾತನಾಡುತ್ತದೆ. ಇದು ಶರಣ, ಶರಣೆಯರು ಹನ್ನೆರಡನೆಯ ಶತಮಾನದಲ್ಲಿ ರೂಪಿಸಿದ ವಚನ ಚಳವಳಿಗೆ ಒಂದು ಉದಾಹರಣೆ. ಸಮಾನತೆಯನ್ನು, ಜೀವಪರ ಮನಸ್ಸನ್ನು ಕಟ್ಟಿದ ವಚನ ಚಳವಳಿಯು ಎಲ್ಲಾ ಬಗೆಯ ಜಾತೀಯತೆಯನ್ನು ಧಿಕ್ಕರಿಸುತ್ತದೆ. ಹೀಗಿರುವಾಗ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯವನ್ನು ಪ್ರತಿಪಾದಿಸಿದ, ಬೋಧಿಸಿದ ಶಂಕರಾಚಾರ್ಯರ ಜಯಂತಿಯನ್ನು ವಚನ ಚಳವಳಿಯ ಕೇಂದ್ರಬಿಂದು ಬಸವಣ್ಣನ ಜಯಂತಿಯ ಜೊತೆ ಜೊತೆಗೆ ಆಚರಿಸಲು ತಾತ್ವಿಕವಾಗಿ ಮತ್ತು ವಾಸ್ತವದಲ್ಲಿ ಸಾಧ್ಯವಿಲ್ಲ. ಇದೆಲ್ಲ ಗೊತ್ತಿದ್ದೂ ಶಂಕರ ಜಯಂತಿ ಯಾಕೆ ಬೇಡ, ನಿಲ್ಲಿಸುವುದಿದ್ದರೆ ಎಲ್ಲವನ್ನೂ ನಿಲ್ಲಿಸಿ (‘ವಾದ’ದ ಬಾಣ ಸರ್ಕಾರದ ಕಡೆ ತಿರುಗಲಿ’, ಸಂಗತ, ಜುಲೈ 9) ಎಂಬರ್ಥದ ಬೀಸು ಹೇಳಿಕೆಗಳನ್ನು ಕೊಡುವುದು ಎಷ್ಟು ಸರಿ?

ಐತಿಹಾಸಿಕ ಚಳವಳಿಗಳು, ಘಟನೆಗಳು, ವ್ಯಕ್ತಿಗಳ ಅಧ್ಯಯನ, ಇತಿಹಾಸದ ಎಲ್ಲಾ ಸಂಕೀರ್ಣತೆ, ಜಟಿಲತೆಗಳ ಅರಿವಿಲ್ಲದೆ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪ್ರೀತಿ ನಾಗರಾಜ ಅವರ ವಿತಂಡವಾದವು ವಾದಕ್ಕಾಗಿ ವಾದ ಎನ್ನುವಂತಿದೆ. ‘ಶಂಕರ ಜಯಂತಿ ಬೇಡವೆಂದರೆ ಸರ್ಕಾರವನ್ನು ನೇರವಾಗಿ ಪ್ರಶ್ನಿಸಲಿ, ಅದುಬಿಟ್ಟು ಶಂಕರಾಚಾರ್ಯರನ್ನು ಬಯ್ಯಬೇಡಿ’ ಎಂದು ಲೇಖಕಿ ತಾಕೀತು ಮಾಡುತ್ತಾರೆ. ಸರ್ಕಾರವು ಯಾವಕಾರಣಕ್ಕೆ ಶಂಕರ ಜಯಂತಿ ಮಾಡಬಾರದು ಎನ್ನುವುದನ್ನು ಸ್ಪಷ್ಟಪಡಿಸಲು ಶಂಕರಾಚಾರ್ಯರ ಬ್ರಾಹ್ಮಣ್ಯ ಸಿದ್ಧಾಂತ, ಅವರ ಬ್ರಹ್ಮಸೂತ್ರದ ಟೊಳ್ಳುತನ, ಸಮಾಜಕ್ಕೆ ಯಾವುದೇ ಬಗೆಯಲ್ಲಿ ಸಹಾಯವಿಲ್ಲದ ಪಾಂಡಿತ್ಯ ಇತ್ಯಾದಿಗಳನ್ನೆಲ್ಲ ಹೇಳಬೇಕಾಗುತ್ತದೆ. ಇದರ ಹೊರತು ಶಂಕರಾಚಾರ್ಯರನ್ನು ಅನಗತ್ಯವಾಗಿ ಹೀಗಳೆಯುವ ತುಡಿತ ಯಾರಿಗೂ ಇಲ್ಲ.

ಶಂಕರಾಚಾರ್ಯರು ಪ್ರತಿಪಾದಿಸಿದ ಅನೇಕ ವಿಚಾರಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾದುವು. ಶಂಕರ ಜಯಂತಿ ಆಚರಿಸುವ ಮೂಲಕ ಈ ಸಿದ್ಧಾಂತವನ್ನು ಪುರಸ್ಕರಿಸಿದಂತಾಗುತ್ತದೆ ಎನ್ನುವುದು ಸರ್ಕಾರಕ್ಕೆ ಗೊತ್ತಿರಬೇಕಿತ್ತು. ಇದನ್ನು ಪ್ರಭುತ್ವಕ್ಕೆ ನೆನಪಿಸಿಕೊಟ್ಟರೆ ಅದು ವೈಯಕ್ತಿಕ ಹೀಗಳಿಕೆ ಹೇಗಾಗುತ್ತದೆ?

ಐವತ್ತರ ದಶಕದಲ್ಲಿ ಆಗಿನ ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಅವರು ಕಾಶಿಯಲ್ಲಿ ಬ್ರಾಹ್ಮಣ ಪುರೋಹಿತರ ಪಾದಪೂಜೆ ಮಾಡಿದಾಗ ಅದನ್ನು ಲೋಹಿಯಾ ಅವರುಕಟುವಾದ ಶಬ್ದಗಳಿಂದ ಟೀಕಿಸಿದ್ದರು. ರಾಷ್ಟ್ರಪತಿಯ ಈನಡೆ ಹೇಗೆ ಸಂವಿಧಾನವಿರೋಧಿ, ಅದು ಹೇಗೆ ನೂರಾರುಜಾತಿಗಳನ್ನು ಅವಮಾನ ಮಾಡಿದಂತೆ ಎಂದು ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಆಗ ಮಾಧ್ಯಮಗಳು ಲೋಹಿಯಾ ಅವರನ್ನು ‘ಹುಚ್ಚ’ ಎಂಬಂತೆ ಬಿಂಬಿಸಿದರೆ ಇತರರು ಲೋಹಿಯಾ ಅವರನ್ನು ನಿರ್ಲಕ್ಷಿಸಿದರು. ಪ್ರಜ್ಞಾವಂತರ ಆ ನಿರ್ಲಕ್ಷ್ಯ ಮತ್ತು ಉಡಾಫೆಯ ಫಲವೇ ಇಂದು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಆದಿಯಾಗಿ ಎಲ್ಲರೂಅಂಗಿ ಬಿಚ್ಚಿಕೊಂಡು ಮಠಗಳಿಗೆ ಹೋಗಿ ಗುರುಗಳು, ಸ್ವಾಮಿಗಳ ಕಾಲಿಗೆ ಬೀಳುವುದು ಸಾಮಾನ್ಯವಾಗಿದೆ ಮತ್ತು ಅಂಗೀಕೃತವಾಗಿದೆ. ಇದನ್ನು ವಿರೋಧಿಸಿದವರನ್ನು, ಪ್ರಜಾಪ್ರಭುತ್ವ ಉಳಿಸಿ ಅಂತ ಕೇಳುವವರನ್ನೇ ಹುಚ್ಚರಂತೆ ನೋಡಲಾಗುತ್ತಿದೆ. ಅಸ್ಪೃಶ್ಯತೆ, ಜಾತಿ ತಾರತಮ್ಯ ಪ್ರತಿಪಾದಿಸುವ ಶಂಕರಾಚಾರ್ಯರ ಜಯಂತಿ ಆಚರಿಸುವ ನಿರ್ಧಾರವೂ ಅಷ್ಟೇ, ಸಂವಿಧಾನವಿರೋಧಿ ನಿರ್ಧಾರ. ಇದು ಕಾರ್ಯರೂಪಕ್ಕೆ ಬಂದರೆ ಸಂವಿಧಾನದ ಆಶಯ ಉಳಿದೀತು ಹೇಗೆ? ಇದರಿಂದ ಶಂಕರ ಮಠಗಳ ಜಾತೀಯತೆ, ಸಂವಿಧಾನವಿರೋಧಿ ನಡಾವಳಿಗಳನ್ನು ಸರ್ಕಾರವೇ ಪುರಸ್ಕರಿಸಿದಂತಾಗುವುದಿಲ್ಲವೇ ಎಂದು ಕಳಕಳಿಯಿಂದ ಪ್ರಶ್ನಿಸುವವರನ್ನೇ ಹೀಗಳೆಯುವುದು ‘ಕಿಲ್ಲಿಂಗ್ ದ ಮೆಸೆಂಜರ್’ ತರವಷ್ಟೆ.

ಅಂಬೇಡ್ಕರ್ ಅವರು ಹೇಳಿದ ‘Constitution is not a mere lawyers document, it is a vehicle of Life, and its spirit is always the spirit of Age’ ಎಂಬ ಮಾತುಗಳನ್ನು ಮರೆತವರು ಪ್ರಜಾಪ್ರಭುತ್ವವಾದಿಗಳಾಗಿರಲು ಸಾಧ್ಯವಿಲ್ಲ.

-ಬಿ. ಶ್ರೀಪಾದ ಭಟ್, ಬೆಂಗಳೂರು

ಹೌದು, ಜಯಂತಿಗಳೇಕೆ?

‘ವಾದ’ದ ಬಾಣ ಸರ್ಕಾರದ ಕಡೆ ತಿರುಗಲಿ’ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳು ಮತ್ತು ಪ್ರತಿಪಾದನೆ ಸಮಂಜಸವಾಗಿವೆ.

ನಮ್ಮ ರಾಷ್ಟ್ರ ‘ಸೆಕ್ಯುಲರ್’ ತತ್ವವನ್ನು ಅಳವಡಿಸಿಕೊಂಡಿದೆ. ಎಂದರೆ ಯಾವುದೇ ಮತ (ರಿಲಿಜನ್) ಹಾಗೂ ಮತಾಚಾರಣೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಪಾದಿಸುವ, ಪೋಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ, ವಿಭಿನ್ನ ಮತಗಳು, ಜಾತಿ ಉಪಜಾತಿಗಳು, ಪ್ರಾರ್ಥನೆ– ಪೂಜಾ ವಿಧಾನಗಳು, ಸಂಪ್ರದಾಯ, ಆಚರಣೆ ಇತ್ಯಾದಿಗಳಿರುವ ಭಾರತದಲ್ಲಿ ಯಾವುದೇ ಸರ್ಕಾರವು ಜಯಂತಿ, ಉತ್ಸವ ಮುಂತಾದವುಗಳನ್ನು ಪೋಷಿಸುವುದು ಸಂವಿಧಾನದ ಆಶಯಗಳಿಗೆ ಸಂಗತವಾಗುವುದಿಲ್ಲ.

ಸರ್ಕಾರಗಳು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯ ದಿನಾಚರಣೆಗಳ ಹೊರತಾಗಿ ಬೇರೆ ಯಾವುದೇ ಜಾತಿ, ಮತ, ಪಂಥ, ನಂಬಿಕೆಗಳನ್ನು ಪ್ರತಿಪಾದಿಸಿದವರ ಜಯಂತಿಯನ್ನು ಆಚರಿಸಲು ಮುಂದಾಗಬಾರದು. ಎಲ್ಲವನ್ನೂ ಎಲ್ಲರನ್ನೂ ಸಮಭಾವದಿಂದ ನೋಡುವ ನೆಪದಲ್ಲಿ ಸರ್ಕಾರವೇ ಇಂಥ ಆಚರಣೆಗಳಿಗೆ ಮುಂದಾದರೆ, ವರ್ಷದ 365 ದಿವಸಗಳು ಸಾಲದಾಗುತ್ತವೆ.

ರಜೆ ಘೋಷಣೆ ವಿಚಾರದಲ್ಲೂ ಸರ್ಕಾರಗಳು ಇಂಥದ್ದೇ ಧೋರಣೆಯನ್ನು ಅನುಸರಿಸಬೇಕಾಗಿದೆ. ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವಗಳಂಥ ರಾಷ್ಟ್ರೀಯ ಹಬ್ಬದ ದಿನಗಳನ್ನು ಬಿಟ್ಟು ಬೇರೆ ಎಲ್ಲಾ ರಜೆಗಳನ್ನೂ ರದ್ದು ಮಾಡಬೇಕು.

-ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಶ್ನಾರ್ಹ ತೀರ್ಮಾನ

ಸರ್ಕಾರಗಳು ಒಂದು ವರ್ಗದ ನಾಯಕಅಥವಾ ಸಂತರ ಜಯಂತಿಯನ್ನು ಆಚರಿಸಿದಲ್ಲಿ ಅಥವಾ ಆಚರಿಸಲು ಪ್ರೋತ್ಸಾಹಿಸಿದಲ್ಲಿ ಇತರ ವರ್ಗದವರನ್ನು ಕಡೆಗಣಿಸಿದಂತಾಗಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗುವುದು ಸಹಜ. ನಮ್ಮ ಸಮಾಜದಲ್ಲಿ ಸಹಸ್ರಾರು ದಾರ್ಶನಿಕರು ಆಗಿ ಹೋಗಿದ್ದಾರೆ. ಅವರೆಲ್ಲರ ಜಯಂತಿಗಳನ್ನು ಮಾಡುತ್ತಾ ಹೋದರೆ ಖಜಾನೆ ಖಾಲಿಯಾದೀತು.

ಒಂದಷ್ಟು ಮಂದಿಯ ಸಂತೋಷಕ್ಕಾಗಿ, ಸ್ವಹಿತ ಸಂರಕ್ಷಣೆಗಾಗಿ ಜಯಂತಿಗಳು ಬಳಕೆಯಾಗುತ್ತಿವೆ. ಎಂಬುದು ಸ್ಪಷ್ಟವಾಗಿದೆ. ಗಾಂಧಿ ಜಯಂತಿ, ವಿವೇಕಾನಂದ ಜಯಂತಿಯ ಉದ್ದೇಶಗಳು ಈಡೇರಿವೆಯೇ? ಸರ್ಕಾರದ ನಿರ್ಧಾರ ಪ್ರಶ್ನಾರ್ಹ!

-ಬಿ. ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT