ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕರಗಿತೇ ‘ಅಹಿಂದ’ ಮತಬ್ಯಾಂಕ್‌?

ಹೊಸ ಆಲೋಚನೆಯೊಂದಿಗೆ ರಂಗಕ್ಕೆ ಇಳಿಯದಿದ್ದರೆ ಕಾಂಗ್ರೆಸ್‌ಗೆ ಚೇತರಿಕೆ ಕಷ್ಟ
Last Updated 12 ಡಿಸೆಂಬರ್ 2019, 1:41 IST
ಅಕ್ಷರ ಗಾತ್ರ

2018ರ ವಿಧಾನಸಭಾ ಚುನಾವಣೆಯ ನಂತರ ಉಂಟಾಗಿದ್ದ ಅತಂತ್ರ ಪರಿಸ್ಥಿತಿ, ಅನರ್ಹರಾಗಿದ್ದ ಶಾಸಕರ ಉಪಚುನಾವಣೆಯ ಫಲಿತಾಂಶದೊಂದಿಗೆ ಸ್ಥಿರತೆಯತ್ತ ಹೊರಳಿದೆ. ವಿಧಾನಸಭೆಯಲ್ಲಿ ಬಿಜೆಪಿ ಬಲ 117ಕ್ಕೆ ಏರಿದೆ. ಕಾಂಗ್ರೆಸ್ ಬಲ 68ಕ್ಕೆ ಕುಸಿದಿದೆ. ಅಭಿವೃದ್ಧಿಯ ಮಂತ್ರದ ಮರೆಯಲ್ಲಿ ವ್ಯಕ್ತಿಗತ ಮಹತ್ವಾಕಾಂಕ್ಷೆಯೇ ಆದ್ಯತೆ ಗಳಿಸಿದರೆ ಅತಂತ್ರ ಸ್ಥಿತಿ ಮರುಕಳಿಸಲೂಬಹುದು.

2004ರಿಂದ ನಿರಂತರ ಅಸ್ಥಿರತೆಯಲ್ಲೇ ಸಾಗಿದ್ದ ಕರ್ನಾಟಕದ ವಿಧಾನಸಭೆಗೆ ಸ್ಥಿರತೆ ಬಂದದ್ದು 2013ರ ಚುನಾವಣೆಯಲ್ಲಿ. ದೇವರಾಜ ಅರಸು ನಂತರ ‘ಅಹಿಂದ’ ರಾಜಕಾರಣದ ಉತ್ತರಾಧಿಕಾರಿ ಎನಿಸಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್, 122 ಶಾಸಕರ ಬೆಂಬಲದೊಂದಿಗೆ ಅಧಿಕಾರ ಸೂತ್ರ ಹಿಡಿಯಿತು. ಅತಂತ್ರ ಸ್ಥಿತಿಯ ಫಲವನ್ನು ಕಾಲಕಾಲಕ್ಕೆ ಅನುಭವಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರು ‘ಬಿಜೆಪಿಯ ಒಡಕಿನಿಂದ ಕಾಂಗ್ರೆಸ್‌ಗೆ ಲಾಭವಾಯಿತು. ಇಲ್ಲದಿದ್ದರೆ ಆಗಲೂ ಕಾಂಗ್ರೆಸ್ 90ರ ಗಡಿ ದಾಟುತ್ತಿರಲಿಲ್ಲ’ ಎಂದು ಅನೇಕ ಸಲ ಹೇಳಿದ್ದಾರೆ. ಬಿಜೆಪಿ- ಕೆಜೆಪಿ- ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮತಗಳಿಕೆಯ ಅಂಕಗಣಿತವೂ ಅದನ್ನೇ ಹೇಳುತ್ತದೆ.

2013ರಲ್ಲಿ 122 ಶಾಸಕರೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ, 2018ರ ಚುನಾವಣೆಗೆ ಅಣಿಯಾದಾಗ ಅವರೊಂದಿಗೆ 137 ಶಾಸಕರಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಒಡೆದಿದ್ದರು. ಪಕ್ಷೇತರರನ್ನೂ ಬುಟ್ಟಿಗೆ ಹಾಕಿಕೊಂಡಿದ್ದರು. ಕೆಜೆಪಿಯಿಂದ ಗೆದ್ದಿದ್ದ ಬಿ.ಆರ್‌.ಪಾಟೀಲ, ಬಿಜೆಪಿಯ ಆನಂದ ಸಿಂಗ್ ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಚಿಹ್ನೆಯಡಿ ಕಣಕ್ಕೆ ಇಳಿದ 137 ಶಾಸಕರಲ್ಲಿ ಗೆದ್ದವರು 59 ಮಂದಿ ಮಾತ್ರ. ಅಂದರೆ, ಶೇ 41ರಷ್ಟು. ಜಿ.ಪರಮೇಶ್ವರ ಸೇರಿದಂತೆ 2013ರ ವಿಧಾನಸಭೆಯಲ್ಲಿ ಇಲ್ಲದ 21 ಶಾಸಕರು ಗೆದ್ದಿದ್ದರಿಂದ ಕಾಂಗ್ರೆಸ್‌ ಲೆಕ್ಕ 80ಕ್ಕೆ ಬಂದಿತು. ಅನರ್ಹರಾಗಿದ್ದವರ ಹೊಡೆತದಿಂದ ಈ ಸಂಖ್ಯೆ ಈಗ 68ಕ್ಕೆ ಇಳಿದಿದೆ.

ಈ ನಡುವೆ ನಡೆದ ಲೋಕಸಭಾ ಚುನಾವಣೆಯಲ್ಲೂ ರಾಜ್ಯ ಕಾಂಗ್ರೆಸ್‌ಗೆ ಮರ್ಮಾಘಾತ ಆಯಿತು. ಬಿಜೆಪಿಯು ದಾಖಲೆಯ 178 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇಲುಗೈ ಸಾಧಿಸಿತು. ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಪ್ರತಿನಿಧಿಸುವ ಬಾದಾಮಿ, ಬಬಲೇಶ್ವರ, ಭಾಲ್ಕಿ, ಹಳಿಯಾಳ, ಚಿತ್ತಾಪುರ, ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಆಗ ಕಾಂಗ್ರೆಸ್‌ನಲ್ಲೇ ಇದ್ದ ‘ಅನರ್ಹ’ ಶಾಸಕರು ಪ್ರತಿನಿಧಿಸುತ್ತಿದ್ದ ಗೋಕಾಕ್‌, ಚಿಕ್ಕಬಳ್ಳಾಪುರ, ಯಶವಂತಪುರ, ಕೆ.ಆರ್‌.ಪುರಂ ಇಲ್ಲೆಲ್ಲ ಬಿಜೆಪಿ ಭರ್ಜರಿ ಮುನ್ನಡೆ ಗಳಿಸಿತ್ತು.ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್‌ ನಾಯಕ ಕೃಷ್ಣ ಬೈರೇಗೌಡ ಈ ಒಳಹೊಡೆತವನ್ನು ಬಿಚ್ಚಿಟ್ಟಿದ್ದರು.

ಲೋಕಸಭೆ ಹಾಗೂ ಇದೀಗ ನಡೆದ ಉಪಚುನಾವಣೆ ಎರಡರಲ್ಲೂ ಬಿಜೆಪಿ ಶೇ 50ರಷ್ಟು ಮತ ಗಳಿಸಿದೆ. 5 ವರ್ಷ ‘ಅಹಿಂದ’ ಪರ ಆಡಳಿತ ನಡೆಸಿದ ತರುವಾಯ ಕಾಂಗ್ರೆಸ್ ಈ ಪರಿಯ ಹೊಡೆತ ತಿಂದದ್ದು ಏಕೆ?

ಬಿಜೆಪಿ ಈಗ ಮೇಲ್ವರ್ಗದ, ನಗರಕೇಂದ್ರಿತ ಪಕ್ಷವಾಗಿ ಉಳಿದಿಲ್ಲ. ದೇಶದ ಇತರ ಭಾಗಗಳಲ್ಲಿ ಆಗಿರುವಂತೆ ಕರ್ನಾಟಕದಲ್ಲೂ ಬಿಜೆಪಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯದ ಮತಬುಟ್ಟಿಗೆ ದೊಡ್ಡಪ್ರಮಾಣದಲ್ಲಿಯೇ ಲಗ್ಗೆ ಇಟ್ಟಿದೆ. ಯುವಜನರ ಮೇಲೆ ಜಾತಿಭಾವ ಮೀರಿ ಮೋದಿ ಪ್ರಭಾವ ಬೆಳೆದಿರುವುದು ಕಾಂಗ್ರೆಸ್‌ನ ನೆಲೆಯನ್ನು ಅಲುಗಾಡಿಸಿದೆ. ಯಡಿಯೂರಪ್ಪ ಅವರ ಪ್ರಭಾವವು ಲಿಂಗಾಯತ ಸಮುದಾಯದ ಒಳಗಿರುವ ಅನೇಕ ಕಾಯಕ ಸಮಾಜಗಳನ್ನು ಬಿಜೆಪಿಯೊಂದಿಗೆ ಜೋಡಿಸಿದೆ. ‘ಲಿಂಗಾಯತ- ಮಾದಿಗ- ವಾಲ್ಮೀಕಿ’ ಸಂಯೋಜನೆಯು ಉತ್ತರ, ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ಗೆಲ್ಲುವ ಸೂತ್ರ ಒದಗಿಸಿದೆ. ಇದೀಗ ಅನರ್ಹತೆಯ ಹೆಸರಲ್ಲಿ ಕುರುಬ, ಒಕ್ಕಲಿಗ ನಾಯಕರು ಸೇರ್ಪಡೆಯಾಗಿರುವುದು ಪಕ್ಷಕ್ಕೆ ಪ್ರಾದೇಶಿಕವಾಗಿ, ಸಾಮಾಜಿಕವಾಗಿ ಇದ್ದ ಕೊರತೆಯನ್ನು ಒಂದಿಷ್ಟಾದರೂ ನೀಗಿಸಿದೆ. ಬಿಜೆಪಿಯ ಈ ಒಟ್ಟು ಬೆಳವಣಿಗೆಯಿಂದ ಕಾಂಗ್ರೆಸ್‌ಗೆ ಇಡಿಯಾಗಿ ಉಳಿದಿರುವುದು ಅಲ್ಪಸಂಖ್ಯಾತ ಮತಬ್ಯಾಂಕ್ ಮಾತ್ರ.

ಹಿಂದೊಮ್ಮೆ ಕಾಂಗ್ರೆಸ್‌ ನಾಯಕ ಬಿ.ಎಲ್‌.ಶಂಕರ್ ‘ಕಾಂಗ್ರೆಸ್‌ನ ಮೂಲ ನೆಲೆಯೇ ಅಹಿಂದ ಮತವರ್ಗ. ಆದರೆ, ಕಾಂಗ್ರೆಸ್‌ನಲ್ಲಿ ಹಾಗೆ ಗುರುತಿಸುವ ಪರಿಪಾಟ ಇರಲಿಲ್ಲ. ಬಡವರು, ಗರೀಬಿ ಎಂದು ಗುರುತಿಸಲಾಗುತ್ತಿತ್ತು. ಅಹಿಂದ ಎಂದು ಗುರುತಿಸಲು ಆರಂಭಿಸಿ
ದ್ದರಿಂದ ಅಷ್ಟೊ- ಇಷ್ಟೊ ಬರುತ್ತಿದ್ದ ಮೇಲ್ವರ್ಗದ ಮತಗಳೂ ದೂರ ಸರಿದವು’ ಎಂದಿದ್ದರು. ಹೊಸ ಆಲೋಚನೆ, ಹೊಸ ಸಮೀಕರಣದೊಂದಿಗೆ ರಂಗಕ್ಕೆ ಇಳಿಯದಿದ್ದರೆ ಸದ್ಯಕ್ಕೆ ಕಾಂಗ್ರೆಸ್‌ಗೆ ಚೇತರಿಕೆ ಕಷ್ಟ.

ಮುಖ್ಯಮಂತ್ರಿಯಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರದು ಪಕ್ಷದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮುಂಚೂಣಿ ಪಾತ್ರ. ಹಾಗಾಗಿ ಕುಸಿತದ ಹೊಣೆಗಾರಿಕೆ ಅವರದೇ ಆಗುತ್ತದೆ. ಆ ಪಕ್ಷವು ಮೂಲ- ವಲಸಿಗ ಎಂದು ಒಡೆದುಹೋಗಿರುವುದು, ಇದೇ ಕಾಲಘಟ್ಟದಲ್ಲಿ ಹೈಕಮಾಂಡ್ ದುರ್ಬಲವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT