ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಬಂದಿದೆ ಗ್ರಹಣ, ವೀಕ್ಷಿಸಿ, ಸಂಭ್ರಮಿಸಿ

ತೊರೆಯಿರಿ ಮೌಢ್ಯ, ಅರಿಯಿರಿ ವೈಜ್ಞಾನಿಕ ಮಾಹಿತಿ
Last Updated 24 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಇಂದು (ಮಂಗಳವಾರ) ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದೆ. ವಿಶ್ವದ ಕೆಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಲಿರುವ ಈ ಪಾರ್ಶ್ವ ಸೂರ್ಯಗ್ರಹಣವು ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಸುಮಾರು ಶೇ 15ರಷ್ಟು ಪ್ರಮಾಣದಲ್ಲಿ ಗೋಚರಿಸಲಿದೆ. ಸಂಜೆ 5.12ಕ್ಕೆ ಪ್ರಾರಂಭವಾಗಿ 5.49ಕ್ಕೆ ಮುಕ್ತಾಯವಾಗಲಿದೆ. 2019ರ ಡಿಸೆಂಬರ್‌ನಲ್ಲಿ ಸಂಭವಿಸಿದ ಪೂರ್ಣ ಕಂಕಣ ಸೂರ್ಯಗ್ರಹಣ ಬಹಳಷ್ಟು ಸದ್ದು ಮಾಡಿತ್ತು ಮತ್ತು ಜನರು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಿ ಸಂತಸಪಟ್ಟಿದ್ದರು.

ಗ್ರಹಣ ಎಂದಕೂಡಲೇ ಕೆಲವರು ಈಗಲೂ ಭಯ, ಆತಂಕಕ್ಕೆ ಒಳಗಾಗುತ್ತಾರೆ. ಈ ಸಂಬಂಧ ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ಸಾಗಿವೆ. ಗ್ರಹಣ ವೀಕ್ಷಣೆ ಹಾಗೂ ಆ ಸಮಯದಲ್ಲಿ ಆಹಾರ ಸೇವನೆಯಂಥ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜನವಿಜ್ಞಾನ ಸಂಘಟನೆಗಳು 1994ರಿಂದಲೂ ನಡೆಸುತ್ತಿವೆ. ಇಂತಹ ಪ್ರಯತ್ನಗಳು ತಕ್ಕಮಟ್ಟಿಗೆ ಫಲ ಕೊಟ್ಟಿವೆ. ಈಗ ಗ್ರಹಣ ಎಂದಾಕ್ಷಣ ಅದರಲ್ಲಿಯೂ ಸೂರ್ಯಗ್ರಹಣ ಎಂದಕೂಡಲೇ ‘ಗ್ರಹಣ ವೀಕ್ಷಿಸುವ ಕನ್ನಡಕಗಳಿವೆಯೇ?’ ಎಂಬ ಕರೆಗಳು ಬರುತ್ತವೆ. ಆದರೂ ಸೂರ್ಯಗ್ರಹಣ ಎನ್ನುವುದು ಅಪಾಯದ ಸಂಕೇತ, ಕೇಡಿನ ಸಂಕೇತ ಎಂದು ಹೇಳುವವರು ಈಗಲೂ ನಮ್ಮ ನಡುವೆ ಇದ್ದಾರೆ. ಪ್ರಕೃತಿಯಲ್ಲಿ ಸಂಭವಿಸುವ ವಿಕೋಪಗಳಿಗೂ ಗ್ರಹಣಗಳಿಗೂ ತಳುಕು ಹಾಕಿ ಭಯ ಉಂಟು ಮಾಡುವವರ ಸಂಖ್ಯೆ ಕಡಿಮೆ ಆಗಿದೆಯಾದರೂ ಅವರ ಹಾವಳಿ ಸಂಪೂರ್ಣವಾಗಿ ನಿವಾರಣೆ ಆಗಿಲ್ಲ.

ಸೂರ್ಯಗ್ರಹಣದಲ್ಲಿ ಪಾರ್ಶ್ವ, ಸಂಪೂರ್ಣ ಹಾಗೂ ಕಂಕಣ ಸೂರ್ಯಗ್ರಹಣ ಎಂಬ ಮೂರು ವಿಧಗಳಿವೆ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡುವುದರಿಂದ ಹಗಲಿನಲ್ಲೂ ಕತ್ತಲೆಯ ವಾತಾವರಣ ಉಂಟಾಗುತ್ತದೆ. ಇದೇ ಸಂದರ್ಭದಲ್ಲಿ ಡೈಮಂಡ್ ರಿಂಗ್‌ನಂತಹ ದೃಶ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಸಂಪೂರ್ಣ ಸೂರ್ಯಗ್ರಹಣ ಉಂಟಾ ಗುವ ಮೊದಲು ಅದು ಪಾರ್ಶ್ವ ಸೂರ್ಯಗ್ರಹಣವೂ ಆಗಿರುತ್ತದೆ. ಕಂಕಣ ಸೂರ್ಯಗ್ರಹಣ ಸಂಭವಿಸಿದಾಗ ಚಂದ್ರನು ಸೂರ್ಯನನ್ನು ಸಂಪೂರ್ಣ ಮರೆ ಮಾಡದೆ ಕೇಂದ್ರ ಭಾಗವನ್ನು ಮಾತ್ರ ಆವರಿಸಿಕೊಂಡು ಸುತ್ತಲ ಪ್ರದೇಶವನ್ನು ಹಾಗೆಯೇ ಬಿಡುವ ಕಾರಣ, ಅದು ಸಹ ಒಂದು ಹೊಳೆಯುವ ಉಂಗುರದಂತೆ ಕಾಣುತ್ತದೆ. ಇದು ಸಂಭವಿಸುವ ಮೊದಲಿಗೆ ಅದು ಪಾರ್ಶ್ವ ಗ್ರಹಣವೂ ಆಗಿರುತ್ತದೆ.

2019ರ ಡಿ. 26ರಂದು ಕೊಡಗಿನಲ್ಲಿ ಸಂಪೂರ್ಣ ಕಂಕಣ ಸೂರ್ಯಗ್ರಹಣ ಗೋಚರವಾಗಿತ್ತು. ಆ ದಿನ ರಾಜ್ಯ, ದೇಶ, ವಿದೇಶದ ಖಗೋಳಾಸಕ್ತರು ಕೊಡಗಿಗೆ ಭೇಟಿ ನೀಡಿ ಗ್ರಹಣದ ವೀಕ್ಷಣೆ, ಸಂಭ್ರಮ, ಅಧ್ಯಯನ ಕೈಗೊಂಡಿದ್ದರು. ವಿಜ್ಞಾನ ಸಂಘಟನೆಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದವು. ಕೊಡಗು ಜಿಲ್ಲಾಡಳಿತವೂ ಈ ಕಂಕಣ ಸೂರ್ಯಗ್ರಹಣ ವೀಕ್ಷಣಾ ಕಾರ್ಯಕ್ರಮಕ್ಕೆ ನೆರವಾಗಿತ್ತು. ಸೂರ್ಯ, ಭೂಮಿ, ಚಂದ್ರರ ಚಲನೆಯಿಂದಾಗಿ ಗ್ರಹಣಗಳು ಸಂಭವಿಸುತ್ತವೆ, ಈ ಚಲನೆಯ ಸಂದರ್ಭದಲ್ಲಿ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯನಿಂದ ಎಷ್ಟು ದೂರ ಇರುತ್ತಾನೆ ಎಂಬುದರ ಮೇಲೆ ಅದು ಸಂಪೂರ್ಣವೋ ಕಂಕಣವೋ ಆಗುತ್ತದೆ. ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಹುಣ್ಣಿಮೆಯ ದಿನ ಚಂದ್ರಗ್ರಹಣವೂ ಸಂಭವಿಸುತ್ತದೆ.

ಗ್ರಹಣದ ವೈಜ್ಞಾನಿಕ ಹಿನ್ನೆಲೆ ತಿಳಿದಿದ್ದರೂ ಶಾಲಾ ಪಠ್ಯಪುಸ್ತಕದಲ್ಲಿಯೂ ಈ ಬಗ್ಗೆ ಮಾಹಿತಿ ಇದ್ದರೂ ಗ್ರಹಣದ ಬಗ್ಗೆ ಜನರಲ್ಲಿ ಭಯ, ಆತಂಕ ಬೇರುಬಿಟ್ಟಿದೆ. ಆಗಿಂದಾಗ್ಗೆ ಸಂಭವಿಸುವ ಇಂಥ ಗ್ರಹಣಗಳ ಸಂದರ್ಭ ದಲ್ಲಿ ಜನರಲ್ಲಿ ಜಾಗೃತಿ ಹಾಗೂ ವೈಜ್ಞಾನಿಕ ದೃಷ್ಟಿಕೋನ ಮೂಡಿಸುವುದು ಅಗತ್ಯ.

ಗ್ರಹಣದ ಸಂದರ್ಭದಲ್ಲಿ ಆಹಾರ ವಿಷಮಯ ವಾಗುತ್ತದೆ, ಆದಕಾರಣ ಆಹಾರ ಹಾಗೂ ನೀರನ್ನು ಹೊರಗೆ ಚೆಲ್ಲಬೇಕೆಂದು ಹೇಳುವವರು ಇದ್ದಾರೆ. ಅಂಥವರಿಗೆ ಕೆರೆ, ಟ್ಯಾಂಕ್‌ಗಳ ನೀರಿನ ಬಗ್ಗೆ ವಿವರಿಸಿದರೆ ತಿಳಿವಳಿಕೆ ಮೂಡಬಹುದು. ಕೆಲವು ನಕ್ಷತ್ರದವರಿಗೆ ದೋಷವಿದೆ ಎಂದು ಪರಿಹಾರ ಸೂಚಿಸುವವರೂ ಇದ್ದಾರೆ. ಅದನ್ನು ನಂಬುವ ಮೊದಲು ಅದರ ಬಗ್ಗೆ ಚಿಂತನೆ ಮಾಡುವುದು ಅಪೇಕ್ಷಣೀಯ. ಮನುಷ್ಯನಿಗೂ ಸಾವಿರಾರು ಬೆಳಕಿನ ವರ್ಷಗಳ ದೂರವಿರುವ ನಕ್ಷತ್ರಗಳಿಗೂ ನಿಜವಾಗಲೂ ಸಂಬಂಧವಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಗ್ರಹಣವನ್ನು ಸುರಕ್ಷಿತ ಕನ್ನಡಕಗಳ ಮೂಲಕವೇ ವೀಕ್ಷಿಸಬೇಕು. ಈ ಬಾರಿ, 2019ರಂತೆ ದೊಡ್ಡ ಪ್ರಮಾಣದಲ್ಲಿ ಸುರಕ್ಷಿತ ಕನ್ನಡಕಗಳು (ಸೋಲಾರ್ ಫಿಲ್ಟರ್ಸ್) ಲಭ್ಯವಿಲ್ಲದಿದ್ದರೂ ಈ ಹಿಂದೆ ಸಂಗ್ರಹಿಸಿದ್ದ ಕನ್ನಡಕಗಳು ಸುರಕ್ಷಿತ ಸ್ಥಿತಿಯಲ್ಲಿದ್ದರೆ ಅವನ್ನೇ ಉಪಯೋಗಿಸಬಹುದು. ಸಂಜೆಯ ಸಮಯ ಹಾಗೂ ಮೋಡದ ಸಮಸ್ಯೆ ಇದ್ದರೂ ತಯಾರಾಗಿರುವುದು ಒಳಿತು.

ಪಾರ್ಶ್ವವಿರಲಿ, ಪೂರ್ಣವಿರಲಿ, ಕಂಕಣವಿರಲಿ, ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ತಿಳಿದುಕೊಂಡು ಸುರಕ್ಷಿತವಾಗಿ ವೀಕ್ಷಿಸುವ, ಗ್ರಹಣದ ಸಂದರ್ಭದಲ್ಲಿ ಆಹಾರ ಉತ್ಸವವನ್ನು ನಡೆಸುವ ಮೂಲಕ ಸೂರ್ಯೋತ್ಸವ ನಡೆಯಲಿ, ತನ್ಮೂಲಕ ವೈಜ್ಞಾನಿಕ ಚಿಂತನೆ ಹರಡಿ, ಜನರಲ್ಲಿ ಅರಿವು ಹೆಚ್ಚಾಗಲಿ, ಮೌಢ್ಯಾಚರಣೆಗಳು ದೂರವಾಗಲಿ.

ಲೇಖಕ: ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT