ಕನ್ನಡ ಪುಸ್ತಕಗಳು ಜನರಿಗೆ ಹೆಚ್ಚಾಗಿ ತಲುಪದೇ ಇರುವುದಕ್ಕೆ ಪ್ರಕಾಶಕರ ಸೋಲು ಕಾರಣವೇ ಅಥವಾ ಲೇಖಕರ ಸೋಲೇ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಇದಕ್ಕೆ ಉತ್ತರ ಹುಡುಕುತ್ತಾ ಹೊರಟರೆ, ಪುಸ್ತಕೋದ್ಯಮ ಎಷ್ಟೊಂದು ಕತ್ತಲೆಯಿಂದ ತುಂಬಿದೆ ಎಂಬುದು ಅರಿವಿಗೆ ಬರುತ್ತದೆ.
ಇದಕ್ಕೆ ಪೂರಕವಾಗಿ ಇಲ್ಲೊಂದು ನಿದರ್ಶನವಿದೆ.ಒಮ್ಮೆ ಲೇಖಕಿಯೊಬ್ಬರು ತಮ್ಮ ಪುಸ್ತಕ ಪ್ರಕಟಣೆಗಾಗಿ ನಮ್ಮ ಪ್ರಕಾಶನ ಸಂಸ್ಥೆಯನ್ನು ಸಂಪರ್ಕಿಸಿದ್ದರು. ‘ನಿಮ್ಮ ಪುಸ್ತಕದ ಮುಖಬೆಲೆ ₹ 200 ಇದ್ದರೆ, ಅದನ್ನು 1,000 ಪ್ರತಿಗಳಿಗೆ ಲೆಕ್ಕ ಹಾಕಿದಾಗ ₹ 2 ಲಕ್ಷ ಆಗುತ್ತದೆ. ಈ ಹಣದ ಮೇಲೆ, ನಿಮಗೆ ಶೇ 10ರಷ್ಟು ರಾಯಧನ ಸಿಗುತ್ತದೆ’ ಎಂದು ವಿವರಿಸಿದಾಗ, ಅವರು ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡರು. ‘ಸರ್, ನನ್ನಿಂದ ಎರಡು ಲಕ್ಷ ರೂಪಾಯಿ ಕೊಡಲಾಗದು. ಒಂದು ಲಕ್ಷ ಕೊಡ್ತೀನಿ. ನನ್ನ ಪುಸ್ತಕ ಪ್ರಕಟಿಸಿ’ ಎಂದು ಮುಗ್ಧವಾಗಿ ಕೇಳಿದ್ದರು!
ಪುಸ್ತಕ ಪ್ರಕಟಣೆಗೆ ಸಂಬಂಧಿಸಿದಂತೆ, ಹೀಗೆ ದಾರಿ ತಪ್ಪಿದ ನೂರಾರು ಲೇಖಕರಿದ್ದಾರೆ. ಹಣ ಪಡೆದು ಪುಸ್ತಕ ಪ್ರಕಟಿಸುವ ಕೆಲಸ ನಡೆಯುತ್ತಿದೆ. ಹಾಗಿದ್ದರೆ, ಬರಹಗಾರರಿಂದಲೇ ಹಣ ಪಡೆದು ಪುಸ್ತಕ ಪ್ರಕಟಿಸುವುದು ತಪ್ಪೇ ಎಂಬ ಪ್ರಶ್ನೆ ಮೂಡುತ್ತದೆ. ಲಾಭವಿಲ್ಲದೆ ಯಾವ ಉದ್ಯಮವೂ ಚಲನಶೀಲವಾಗಿ ಇರದು. ಪುಸ್ತಕದ ನೂರು ಪ್ರತಿಗಳೂ ಮಾರಾಟವಾಗುವುದಿಲ್ಲ ಎಂದಾದರೆ, ಯಾರು ತಾನೆ ಮತ್ತೆ ಪುಸ್ತಕಕ್ಕೆ ಹಣ ಹೂಡುತ್ತಾರೆ? ಎಲ್ಲಿ ಹೊಸತನ ಇರುವುದಿಲ್ಲವೋ ಅಲ್ಲಿ ಹರಿಯುವಿಕೆಯೂ ಇರುವುದಿಲ್ಲ. ಕನ್ನಡ ಪುಸ್ತಕಲೋಕದಲ್ಲಿ ಆಗಿರುವುದೂ ಇದೇ.
ಒಬ್ಬ ಪ್ರಕಾಶಕನಿಗೆ ಇರುವ ಖರ್ಚುಗಳೇನು ಕಡಿಮೆಯೇ? ಪುಟ ವಿನ್ಯಾಸ, ಮುಖಪುಟ ವಿನ್ಯಾಸದ ಬಾಬ್ತು, ಲೇಖಕರ ರಾಯಧನ, ಮುದ್ರಣ ವೆಚ್ಚದ ಜೊತೆ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿದರೆ ಅದರ ವೆಚ್ಚ ಸೇರಿ 200 ಪುಟಗಳ ಪುಸ್ತಕಕ್ಕೆ ಭರ್ತಿ ₹ 1 ಲಕ್ಷ ಖರ್ಚಾಗುತ್ತದೆ. ಆ ಸಂದರ್ಭದಲ್ಲಿ 100 ಕೃತಿಗಳು ಮಾರಾಟವಾದವು ಎಂದಿಟ್ಟುಕೊಂಡರೂ ಅಲ್ಲಿಗೆ ಕೃತಿಯಿಂದ ಬರುವ ಆದಾಯ ₹ 20 ಸಾವಿರ. ಅದರಲ್ಲೂ ಮಾರಾಟಗಾರರಿಗೆ ರಿಯಾಯಿತಿ ನೀಡಬೇಕು. ಓದುಗರೂ ರಿಯಾಯಿತಿ ಬಯಸುತ್ತಾರೆ. ಇನ್ನುಳಿದಂತೆ ಸರ್ಕಾರದಿಂದ ಒಂದಷ್ಟು ಹಣ ಸಿಗುತ್ತದೆಯಾದರೂ ಅದು ಯಾವಾಗ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಹೀಗಾಗಿಯೇ ಲೇಖಕರಿಂದ ಹಣ ಪಡೆದು ಪುಸ್ತಕ ಪ್ರಕಟಿಸುವ ಕೆಲಸಕ್ಕೆ ಕೆಲವು ಪ್ರಕಾಶಕರು ಮುಂದಾಗಿದ್ದು, ಜೊತೆಗೆ ಆನ್‌ಲೈನ್ ಬಿಡುಗಡೆಯ ಮೊರೆ ಹೋಗಿದ್ದು.
ಕನ್ನಡ ಪುಸ್ತಕೋದ್ಯಮದ ಈ ಸ್ಥಿತಿಗೆ ಪ್ರಕಾಶಕರು ಮಾತ್ರ ಕಾರಣರಲ್ಲ, ಲೇಖಕರೂ ಕಾರಣ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಬರೆಯುವವರಿಗೆ ತಮ್ಮ ಓದುಗರು ಯಾರು ಅನ್ನುವ ಸ್ಪಷ್ಟತೆ ಇದ್ದಿದ್ದರೆ ಖಂಡಿತವಾಗಿಯೂ ಓದುಗರನ್ನು ತಲುಪಬಲ್ಲ ಮಾರ್ಗಗಳು ಸಿಕ್ಕಿಬಿಡುತ್ತಿದ್ದವು.
ಒಬ್ಬ ಲೇಖಕ ತಾನೆಷ್ಟು ಕೃತಿಗಳನ್ನು ಬರೆದೆ ಎಂಬುದಕ್ಕಿಂತ, ಒಂದು ಕೃತಿಯಿಂದ ಮತ್ತೊಂದು ಕೃತಿಗೆ ಓದುಗರ ಸಂಖ್ಯೆಯನ್ನು ಎಷ್ಟು ಹೆಚ್ಚಿಸಿಕೊಂಡೆ ಎಂದು ಲೆಕ್ಕ ಹಾಕುವುದು ಒಳ್ಳೆಯದು. ಈ ದಿಸೆಯಲ್ಲಿ ಯೋಚಿಸಲು ಹೆಚ್ಚಿನ ಲೇಖಕರಿಗೆ ಭಯವಿರುವಂತೆ ಕಾಣುತ್ತದೆ ಅಥವಾ ಓದುಗರನ್ನು ಹುಡುಕುವುದು ತಮ್ಮ ಕೆಲಸವಲ್ಲ ಎಂಬ ಧೋರಣೆಯೂ ಇರಬಹುದು. ತಿಂಗಳಿಗೆ ನೂರಿನ್ನೂರು ಕೃತಿಗಳು ಬಿಡುಗಡೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಕೃತಿಯಲ್ಲಿ ಸತ್ವ ಇದ್ದರೆ ಅದು ತನ್ನಿಂತಾನೇ ತನ್ನ ಓದುಗರನ್ನು ಹುಡುಕಿಕೊಳ್ಳುತ್ತದೆ ಎಂಬ ಮಾತು ಕ್ಲೀಷೆ ಎನಿಸುವುದಿಲ್ಲವೇ?
ಪ್ರಮುಖ ಲೇಖಕರು ಸಹ ಆರಂಭದಲ್ಲಿ ತಮ್ಮ ಕೃತಿಗಳನ್ನು ಓದುಗರಿಗೆ ತಲುಪಿಸಲು ಬಹಳಷ್ಟು ಸಾಹಸಗಳನ್ನು ಮಾಡಿದ್ದರು ಎನ್ನುವುದನ್ನು ಮರೆಯಬಾರದು. ಆಗ ಪ್ರಕಟಗೊಳ್ಳುತ್ತಿದ್ದ ಪುಸ್ತಕಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಮತ್ತು ಓದುಗರ ಸಂಖ್ಯೆ ದೊಡ್ಡದಿತ್ತು. ಉತ್ತಮ ಪುಸ್ತಕವನ್ನು ವಿಮರ್ಶಿಸಲು, ಪರಿಚಯಿಸಲು ಬಹುತೇಕ ಪತ್ರಿಕೆಗಳು ಮುಂದಾಗುತ್ತಿದ್ದವು. ಆದರೆ ಈಗ ಎಷ್ಟೋ ಪತ್ರಿಕೆಗಳಲ್ಲಿ ಅದಕ್ಕೆ ಆಸ್ಪದವಿಲ್ಲ. ಪರಿಸ್ಥಿತಿ ಹೀಗಿರುವಾಗ, ವರ್ಷಕ್ಕೆ ಬಿಡುಗಡೆಯಾಗುತ್ತಿರುವ ಎಂಟು ಸಾವಿರ ಕೃತಿಗಳ ಮಧ್ಯೆ ಒಳ್ಳೆಯ ಕೃತಿಯನ್ನು ಆರಿಸಿಕೊಳ್ಳುವ ಕಷ್ಟವನ್ನು ಓದುಗನಿಗೇ ಬಿಡುವುದು ಎಷ್ಟು ಸರಿ?
ಕೃತಿಗಳನ್ನು ಓದುಗರಿಗೆ ತಲುಪಿಸುವಲ್ಲಿ ಪ್ರಕಾಶಕ ಮಹಾ ಅಂದರೆ ಏನು ಮಾಡಬಹುದು? ಒಂದಷ್ಟು ಅಂಗಡಿಗಳಿಗೆ ಕಳುಹಿಸಬಹುದು, ಡಿಜಿಟಲ್ ಮಾಧ್ಯಮದ ಮೂಲಕ ಪ್ರಚಾರ ಮಾಡಬಹುದು, ಪೋಸ್ಟರ್‌ಗಳನ್ನು ಮುದ್ರಿಸಿ ಹಂಚಬಹುದು, ಕೇಳಿಕೊಂಡು ಬರುವ ಓದುಗರಿಗೆ ಶಿಫಾರಸನ್ನೂ ಮಾಡಬಹುದು. ಆದರೆ ಅಷ್ಟು ಮಾತ್ರದಿಂದ ಎಲ್ಲ ಓದುಗರನ್ನೂ ತಲುಪಲು ಅಥವಾ ಆತ ಒಂದೇ ಕೃತಿಯ ಬಗ್ಗೆ ಗಮನಹರಿಸಲು ಸಾಧ್ಯವೇ?
ಚಿತ್ರನಟರು ತಮ್ಮ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳಲು ಊರೂರು ಸುತ್ತುತ್ತಾರೆ. ಎಲ್ಲ ಪ್ರಚಾರ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಾರೆ. ಹಾಗೆಯೇ ಲೇಖಕರೂ ಈ ವಿಷಯದಲ್ಲಿ ಬದಲಾಗಲು ಇದು ಸಕಾಲ. ವಿವಿಧೆಡೆ ಪತ್ರಿಕಾಗೋಷ್ಠಿಗಳ ಮೂಲಕವಾದರೂ ತನ್ನ ಕೃತಿಯನ್ನು ಮರು ಬಿಡುಗಡೆಗೊಳಿಸಬೇಕು. ಹತ್ತಾರು ಚರ್ಚೆ, ಸಂವಾದಗಳಿಗೆ ಒಳಗಾಗಬೇಕು. ಅದನ್ನು ಬಿಟ್ಟು, ಕೃತಿ ಬಿಡುಗಡೆಗೊಂಡ ವಾರಕ್ಕೇ ಅದನ್ನು ಮರೆತು ಮತ್ತೊಂದು ಕೃತಿ ರಚನೆಯಲ್ಲಿ ತೊಡಗುವುದು ಒಳ್ಳೆಯ ನಡೆಯಲ್ಲ.
ಓದುಗರನ್ನು ಆಕರ್ಷಿಸಲು ಇಂಗ್ಲಿಷ್ ಪುಸ್ತಕಲೋಕ ರತ್ನಗಂಬಳಿ ಹಾಸಿ ಕೂತಿದೆ. ಒಂದಕ್ಕಿಂತ ಒಂದು ಆಕರ್ಷಕ ಯೋಜನೆ, ಯೋಚನೆಗಳನ್ನು ಅವರ ಮುಂದಿಟ್ಟು ಆಟ ಕಟ್ಟುತ್ತಿದೆ. ನಾವೂ ಆಡದಿದ್ದರೆ ಖಾಲಿ ಇರುವ ಜಾಗದಲ್ಲಿ ಅವರು ಆಟವಾಡಿಕೊಂಡು ಹೊರಡುತ್ತಾರಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.