ಸುಮಾರು ಐವತ್ತು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿರುವ ನನಗೆ ಭಾರತೀಯ ಶಿಕ್ಷಣ ಕ್ಷೇತ್ರದ ಬಗ್ಗೆ, ಮುಖ್ಯವಾಗಿ ಪ್ರವೇಶ ಹಾಗೂ ಪರೀಕ್ಷೆಗಳಲ್ಲಿ ಸ್ವಲ್ಪಮಟ್ಟಿಗೆ ಸದಾ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಒಂದಷ್ಟು ಗೊತ್ತಿತ್ತು: ಖಾಸಗಿ ಶಾಲಾ– ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊಡಬೇಕಾದ ಲಕ್ಷಗಟ್ಟಲೆ ಹಣ, ಪ್ರಶ್ನೆಪತ್ರಿಕೆಗಳ ಸೋರಿಕೆ, ತಮ್ಮ ಶಾಲೆಗೆ ಉತ್ತಮ ಫಲಿತಾಂಶ ಬರಲೆಂದು ಶಿಕ್ಷಕರು, ಪ್ರಾಂಶುಪಾಲರೇ ಪರೀಕ್ಷೆಗಳಲ್ಲಿ ನಕಲು ಮಾಡಲು ವಿದ್ಯಾರ್ಥಿಗಳನ್ನು ಉತ್ತೇಜಿಸುವುದು, ಅಂಕಪಟ್ಟಿಯ ತಿದ್ದುವಿಕೆ ಇತ್ಯಾದಿ.

ಆದರೆ, ‘ಸರ್ಕಾರಿ ಶಾಲೆಗೆ ‘ಖಾಸಗಿ’ ಮಕ್ಕಳು’ ಸುದ್ದಿಯನ್ನು (ಪ್ರ.ವಾ., ಜೂನ್ 21) ಓದಿದ ನಂತರ, ಈ ವ್ಯವಸ್ಥೆ ಬಗ್ಗೆ ನನಗೇನೂ ಗೊತ್ತಿಲ್ಲ ಎನಿಸಿತು. ಅಷ್ಟು ಕಲ್ಪನಾಶಕ್ತಿ ನನಗಿಲ್ಲ.

ಹತ್ತು ವಿದ್ಯಾರ್ಥಿನಿಯರು ಒಂದು ಖಾಸಗಿ ಶಾಲೆಯಲ್ಲಿ ಒಂಬತ್ತು ವರ್ಷ ಓದಿ ಹತ್ತನೇ ತರಗತಿಗೆ ಹೋದಾಗ ಮತ್ತು ಕಟ್ಟಬೇಕಾದ ಹಣವನ್ನು ಕಟ್ಟಿದ ನಂತರ ಅದೇ ಶಾಲೆಗೆ (ಪೋಷಕರಿಗೆ ತಿಳಿಸದೆ) ಹತ್ತಿರದಲ್ಲಿರುವ ಸರ್ಕಾರಿ ಶಾಲೆಗೆ ಅವರನ್ನು ‘ಅನಾಥ’ ಮಕ್ಕಳು ಎಂದು ಹೇಳಿ ಸೇರಿಸಿ, ವರ್ಷಾಂತ್ಯದ ಪರೀಕ್ಷೆಗೆ ಅವರನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂದು ಪ್ರವೇಶ ಪತ್ರ ಕೊಟ್ಟು, ಅವರು ಆ ಶಾಲೆಯಲ್ಲೇ ಪರೀಕ್ಷೆ ತೆಗೆದುಕೊಳ್ಳಲು ಹೇಳುತ್ತದೆ; ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಫೇಲಾದ ನಂತರ ಪೋಷಕರಿಗೆ ಆ ‘ರಹಸ್ಯ’ ಗೊತ್ತಾಗುತ್ತದೆ ಎಂಬ ಘಟನೆಯನ್ನು ಈಗಲೂ ನಂಬಲಾಗುತ್ತಿಲ್ಲ. ಇದು ಹೇಗೆ ಸಾಧ್ಯ? ಈ ಪ್ರಶ್ನೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಖಾಸಗಿ ಶಾಲೆಯಲ್ಲಿ ಪ್ರತಿದಿನ ತರಗತಿಗಳಲ್ಲಿ ಹಾಜರಾತಿ ತೆಗೆದುಕೊಳ್ಳುವಾಗ ತಮ್ಮ ಶಾಲೆಯಲ್ಲಿ ಸೇರಿರದ ವಿದ್ಯಾರ್ಥಿನಿಯರ ಹಾಜರಾತಿಯನ್ನು ಹೇಗೆ ಗುರುತಿಸುತ್ತಿದ್ದರು? ಆಂತರಿಕ ಪರೀಕ್ಷೆಗಳು ನಡೆದಾಗ ಈ ಹತ್ತು ವಿದ್ಯಾರ್ಥಿನಿಯರ ಅಂಕಗಳನ್ನು ಎಲ್ಲಿ, ಹೇಗೆ ಗುರುತಿಸುತ್ತಿದ್ದರು? ಹಾಗೆಯೇ, ಇಡೀ ವರ್ಷ 10 ವಿದ್ಯಾರ್ಥಿನಿಯರು ತರಗತಿಗಳಿಗೆ ಬರದೇ ಇರುವುದು (ಆಗ ಅವರು ‘ತಮ್ಮ’ ಖಾಸಗಿ ಶಾಲೆಯಲ್ಲಿರುತ್ತಿದ್ದರು) ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ಬರಲಿಲ್ಲವೆ?

ಒಂದು ದಿನವೂ ತರಗತಿಗಳಿಗೆ ಬರದ ವಿದ್ಯಾರ್ಥಿನಿಯರಿಗೆ ಸರ್ಕಾರಿ ಶಾಲೆಯಿಂದ ಪ್ರವೇಶ ಪತ್ರ ಹೇಗೆ ಕೊಡಲಾಯಿತು? ಅಂದರೆ, ಈ ಅವ್ಯವಹಾರದಲ್ಲಿ ಖಾಸಗಿ ಶಾಲೆಯೊಡನೆ ಸರ್ಕಾರಿ ಶಾಲೆಯೂ ಶಾಮೀಲಾಗಿ ಇರಲೇಬೇಕು. ಈ ಅವ್ಯವಹಾರ ಅಥವಾ ಘೋರ ಅಪರಾಧ ಎಷ್ಟು ವರ್ಷಗಳಿಂದ ನಡೆಯುತ್ತಿದೆ? ಈ ಬಗೆಯ ಅಪರಾಧ ಕೃತ್ಯಗಳು ಇತರ ಶಾಲಾ– ಕಾಲೇಜುಗಳಲ್ಲಿಯೂ ನಡೆಯುತ್ತಿವೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಮೂಲಾಗ್ರ ತನಿಖೆ ಮಾಡಬೇಕು. ಏಕೆಂದರೆ, ಈ ಕೃತ್ಯ ಪೋಷಕರು, ವಿದ್ಯಾರ್ಥಿನಿಯರು ಮತ್ತು ಸರ್ಕಾರ, ಇವೆಲ್ಲವುಗಳ ಮೇಲೆ ಎಸಗಿರುವ ಕ್ರೂರ ಅಪರಾಧ. ತನಿಖೆ ಆದಷ್ಟು ಬೇಗ ಆಗಿ, ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ‘ಆದಷ್ಟು ಬೇಗ’ ಎಂದು ಹೇಳುತ್ತಿರುವುದು ಏಕೆಂದರೆ, ಈಗಾಗಲೇ ಕೆಲವು ಸಾಮಾಜಿಕ ಜಾಲತಾಣಗಳು ಈ ಕೃತ್ಯಕ್ಕೆ ‘ಕೋಮುವಾದ’ದ ಬಣ್ಣ ಬಳಿಯಲು ಪ್ರಯತ್ನಿಸುತ್ತಿವೆ. ತನಿಖೆ ತಡವಾದಷ್ಟೂ ಈ ವಿಷಯವು ರಾಜಕಾರಣಿಗಳ ಪರಸ್ಪರ ಕೆಸರು ಎರಚಾಟಕ್ಕೆ ಬಲಿಯಾಗುತ್ತದೆ.

ಎರಡು, ಮೂರು ದಶಕಗಳಿಂದ ಶಿಕ್ಷಣ ಇಲಾಖೆಯ ಬಗ್ಗೆ ಹಾಗೂ ಅದರ ನೀತಿ– ನಿಯಮಗಳ ಕುರಿತು ಒಂದು ಬಗೆಯ ದಿವ್ಯ ನಿರ್ಲಕ್ಷ್ಯವು ಖಾಸಗಿ ಶಾಲಾ–ಕಾಲೇಜುಗಳಲ್ಲಿ ಕಂಡುಬರುತ್ತಿದೆ.

ಸುಮಾರು ಹದಿನೈದು ವರ್ಷಗಳ ಹಿಂದೆ ಇಂತಹುದೇ ಅವ್ಯವಹಾರವು ಬೆಳಕಿಗೆ ಬಂದಿತ್ತು. ಸಾಗರದ ಒಂದು ಪ್ರತಿಷ್ಠಿತ ಕಾಲೇಜಿನಿಂದ ಫೆಬ್ರುವರಿಯಲ್ಲಿ ಹಾಜರಾತಿ ಕಮ್ಮಿ ಇದೆಯೆಂದು ಪರೀಕ್ಷೆಗೆ ಪ್ರವೇಶ ಪತ್ರ ದೊರೆಯದ ವಿದ್ಯಾರ್ಥಿಗಳು ಅಲ್ಲಿಯೇ ಹತ್ತಿರದಲ್ಲಿ ಇದ್ದ ಆನಂದಪುರದಲ್ಲಿ ಹೊಸದಾಗಿ ಆರಂಭಗೊಂಡಿದ್ದ ಖಾಸಗಿ ಕಾಲೇಜಿಗೆ (ವರ್ಷಾಂತ್ಯದಲ್ಲಿ) ಸೇರಿ, ಆ ಕಾಲೇಜಿನಿಂದ ಪ್ರವೇಶ ಪತ್ರ ಪಡೆದಿದ್ದರೂ ಪರೀಕ್ಷೆಗೆ ಹಾಜರಾಗಲು ತಮ್ಮ ಹಿಂದಿನ ಕಾಲೇಜಿಗೇ ಬರುತ್ತಿದ್ದರು.

ಒಂದು ವರ್ಷ ಪರೀಕ್ಷಕರಿಗೆ ಈ ವಿಷಯ ತಿಳಿದು, ಆನಂತರ ಆ ಅವ್ಯವಹಾರದ ಬಗ್ಗೆ ಪತ್ರಿಕೆಯೊಂದು ದೀರ್ಘ ಲೇಖನವನ್ನು ಪ್ರಕಟಿಸಿತು. ಅದರ ಪರಿಣಾಮ, ಖಾಸಗಿ ಕಾಲೇಜಿಗೆ ಕೊಟ್ಟಿದ್ದ ಮಾನ್ಯತೆಯನ್ನು ಕುವೆಂಪು ವಿಶ್ವವಿದ್ಯಾಲಯ ಹಿಂತೆಗೆದುಕೊಂಡಿತು ಹಾಗೂ ಆ ಹೊಸ ಖಾಸಗಿ ಕಾಲೇಜು ಮುಚ್ಚಿತು.

ಇಂತಹ ಪರಿಸ್ಥಿತಿಗೆ ಕಾರಣಗಳೇನು ಎಂದು ಚಿಂತಿಸುತ್ತಾ ಹೋದರೆ ಮತ್ತೊಂದು ಕಗ್ಗಂಟು ಎದುರಾಗುತ್ತದೆ. ಮುಖ್ಯ ಕಾರಣ, ಎಲ್ಲಾ ಸರ್ಕಾರಗಳೂ ಪಕ್ಷಾತೀತವಾಗಿ 1980ರಿಂದ ಶಿಕ್ಷಣ ಇಲಾಖೆಯನ್ನು ಗಂಭೀರವಾಗಿ ಪರಿಗಣಿಸದಿರುವುದು. ಸರ್ಕಾರಗಳ ನಿರ್ಲಕ್ಷ್ಯದಿಂದಾಗಿಯೇ ಸರ್ಕಾರಿ ಶಾಲಾ– ಕಾಲೇಜುಗಳು ಶಿಕ್ಷಕರಿಲ್ಲದೆ, ಅವಶ್ಯಕವಾದ ಅನುದಾನವಿಲ್ಲದೆ ಸೊರಗುತ್ತಿವೆ. ಖಾಸಗಿ ಶಾಲಾ– ಕಾಲೇಜುಗಳು ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿಸುತ್ತವೆ. ಈ ಕಗ್ಗಂಟನ್ನು ಬಿಡಿಸಲು ಸಾಧ್ಯವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.