ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ ಆಗಿರುವುದು ಬುರ್ಖಾ ಅಲ್ಲ!

ಅಕ್ಷರ ಗಾತ್ರ

ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಅಲ್ಲಿ ಇನ್ನಷ್ಟು ಬಾಂಬ್ ದಾಳಿಗಳು ನಡೆಯಲಿವೆ ಎನ್ನುವ ಸೂಚನೆ ಇದ್ದುದರಿಂದ ಕಟ್ಟೆಚ್ಚರ ವಹಿಸಿ, ಜನರನ್ನು ಎಲ್ಲೆಡೆ ತಪಾಸಣೆಗೆ ಒಳಗಾಗಿಸುವಾಗ ಉದ್ಭವಿಸಿದ ತೊಡಕು ಎಂದರೆ, ಅಲ್ಲಿನ ಮುಸ್ಲಿಂ ಮಹಿಳೆಯರು ಅಡಿಯಿಂದ ಮುಡಿಯವರೆಗೆ ಮುಚ್ಚಿಕೊಂಡಿದ್ದ ನಿಕಾಬ್‌. ನಿಕಾಬ್‌ ತೊಟ್ಟ ವ್ಯಕ್ತಿ ಸ್ತ್ರೀಯೋ ಪುರುಷನೋ ಎಂಬುದನ್ನೂ ಕಂಡುಹಿಡಿಯಲು ಆಗದ ಪರಿಸ್ಥಿತಿ. ಈ ತುರ್ತು ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ನಿಕಾಬ್‌ ಅನ್ನು ಶ್ರೀಲಂಕಾ ಸರ್ಕಾರ ನಿಷೇಧಿಸಿದೆ. ಕೂಡಲೇ ನೆರೆರಾಷ್ಟ್ರವಾದ ಭಾರತದಲ್ಲಿಯೂ ಈ ಕುರಿತು ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ಈ ಚರ್ಚೆಯಲ್ಲಿ ನಾವು ತೊಡಗುವ ಮುಂಚೆ ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳಿವೆ. ‘ಬುರ್ಖಾ’ ಬೇರೆ, ‘ನಿಕಾಬ್’ ಬೇರೆ. ಬುರ್ಖಾ ಎಂದರೆ ಮೈಯನ್ನು ಮುಚ್ಚುವಂತೆ ಹೊದ್ದುಕೊಳ್ಳುವ ಬಟ್ಟೆ, ನಿಕಾಬ್ ಎಂದರೆ ಕಣ್ಣನ್ನಷ್ಟೇ ಬಿಟ್ಟು ತಲೆ, ಮುಖ ಎಲ್ಲವನ್ನೂ ಮರೆಮಾಡಿಕೊಳ್ಳುವ ಬಟ್ಟೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೇಳಿರುವುದು: ‘ತುರ್ತು ನಿರ್ಬಂಧಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸಲು ಅಡ್ಡಿಯಾಗುವ ಯಾವುದೇ ಬಗೆಯಲ್ಲಿ ಮುಖ ಮುಚ್ಚುವುದನ್ನು ನಿಷೇಧಿಸಲಾಗಿದೆ’. ಇಲ್ಲಿ ಎಲ್ಲಿಯೂ ‘ಮುಸ್ಲಿಂ’ ಎಂದಾಗಲೀ ‘ಮಹಿಳೆಯರು’ ಎಂದಾಗಲೀ ಹೇಳಿಲ್ಲ.

ಅಷ್ಟರಲ್ಲಿಯೇ ಹಿಂದೂ ಜಾಗೃತ ಸಂಘವೊಂದು, ಭಾರತದಲ್ಲಿಯೂ ಮುಸ್ಲಿಂ ಮಹಿಳೆಯರು ತೊಡುವ ಬುರ್ಖಾವನ್ನು ಸರ್ಕಾರ ನಿಷೇಧಿಸಬೇಕು ಎಂಬ ಮನವಿಯನ್ನು ಮಾಡಿಕೊಂಡಿದೆ.ಉತ್ತರ ಭಾರತದಲ್ಲಿ ಹಲವಾರು ಮುಸ್ಲಿಮೇತರ ಸಮುದಾಯಗಳಲ್ಲಿಯೂ ಇಂಥಿಂಥವರ ಎದುರಿನಲ್ಲಿ ಮತ್ತು ಸಾರ್ವಜನಿಕವಾಗಿಸ್ತ್ರೀಯರು ಪೂರ್ತಿ ಮುಖ ಮುಚ್ಚುವ ಹಾಗೆ ಸೆರಗನ್ನು ಎಳೆದುಕೊಂಡಿರಬೇಕು ಎಂಬ ವಾಡಿಕೆ ಇದೆ. ಬೇಸಿಗೆಯಲ್ಲಿ ದೆಹಲಿ, ಉತ್ತರ ಕರ್ನಾಟಕ, ಚೆನ್ನೈಯಂಥ ಪ್ರಖರ ಬಿಸಿಲಿನ ಪ್ರದೇಶಗಳಲ್ಲಿ ಹೊರಗೆ ಓಡಾಡುವ ಎಲ್ಲ ಸ್ತ್ರೀಯರು ಕಣ್ಣು ಮಾತ್ರ ಕಾಣುವಂತೆ ಬಟ್ಟೆಯನ್ನು ಸುತ್ತಿಕೊಂಡಿರುತ್ತಾರೆ. ನಿಯಮಾನುಸಾರವೇ ಧರಿಸಿದಾಗ ಮುಖವೇ ಗುರುತಿಗೆ ಸಿಗದಂತೆ ಮಾಡುವ ಹೆಲ್ಮೆಟ್‍ಗಳಿವೆ, ಒಳಗಿರುವವರ ಗುರುತು ಸುಲಭವಾಗಿ ಸಿಗಬೇಕು ಎಂದು ಕಾರುಗಳಿಗೆ ಬಣ್ಣದ ಗಾಜುಗಳನ್ನು ಹಾಕಬಾರದು ಎಂಬ ನಿಯಮವಿದೆ. ಭದ್ರತೆಯ ದೃಷ್ಟಿಯಿಂದ ‘ಮುಖ ಮುಚ್ಚಿಕೊಳ್ಳುವುದನ್ನು’ ನಿಷೇಧಿಸುವುದಾದರೆ ಯಾರಿಗೂಅಭ್ಯಂತರವಿರದು. ಆದರೆ ಇದರಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ಮಾತ್ರ ಗುರಿಯಾಗಿಸಿಕೊಂಡು ದೇಶಭಕ್ತಿಯನ್ನು ಮೆರೆದರೆ ಕಷ್ಟವಾಗುತ್ತದೆ.

ಶ್ರೀಲಂಕಾದ ಅತ್ಯುನ್ನತ ಇಸ್ಲಾಮಿಕ್‌ ವಿದ್ವಾಂಸರ ಸಂಸ್ಥೆಯಾದ ಆಲ್ ಸಿಲೋನ್ ಜಮಿಯತ್‌ ಉಲ್‌ ಉಲೆಮಾ,ಭದ್ರತೆಯ ನೆಲೆಯಲ್ಲಿ ಅಧ್ಯಕ್ಷರ ಆದೇಶವನ್ನು ಬೆಂಬಲಿಸಿದೆ. ಆದರೆ ಇದನ್ನು ಶಾಸನ ಮಾಡುವುದು ಬೇಡ ಎಂದಿದೆ. ‘ಮುಸ್ಲಿಂ ಸಮುದಾಯದಲ್ಲಿ ಇದರ ಕುರಿತು ಸಕಾರಾತ್ಮಕ ಧೋರಣೆ ಮೂಡುವಂತೆ ನಾವೇ ಮಾಡುತ್ತೇವೆ’ ಎಂದಿದ್ದಾರೆ ಸಂಸ್ಥೆಯ ಶೇಕ್ ಅಕ್ರಮ್ ನೂರಾಮಿತ್.

ಇವರ ಮಾತಿಗೆ ಕುರಾನಿನ ಬೋಧನೆಯ ಬೆಂಬಲವೂ ಸಿಗಲಿದೆ. ಕುರಾನಿನಲ್ಲಿ ಎಲ್ಲಿಯೂ ‘ಬುರ್ಖಾ’ ಪದದ ಬಳಕೆಯಿಲ್ಲ. ಸಾರ್ವಜನಿಕ ಕ್ಷೇತ್ರಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು ಎಂಬ ನಿರ್ದೇಶನ ಸ್ತ್ರೀ ಮತ್ತು ಪುರುಷ ಇಬ್ಬರಿಗೂ ಇದೆ. ಇದು ಅವರು ತೊಡುವ ಬಟ್ಟೆಬರೆಗೂ ಅನ್ವಯಿಸುತ್ತದೆ. ಸ್ತ್ರೀಯರ ಉಡುಪಿನ ಬಗ್ಗೆ ಹೆಚ್ಚು ನಿರ್ದಿಷ್ಟವಾದ ಮಾತು ಬರುವುದು ಕುರಾನಿನ ಒಂದೇ ಒಂದು ಆಯಾದಲ್ಲಿ (24:31). ಅದರಲ್ಲಿ, ಸ್ತ್ರೀಯರು ಪರಪುರುಷರ ಎದುರು ‘ತಮ್ಮ ದೃಷ್ಟಿಯನ್ನು ಕೆಳಗಿರಿಸಿಕೊಳ್ಳಲಿ, ಗುಪ್ತಾಂಗಗಳನ್ನು ಮರೆಮಾಡಿರಲಿ, ತಮ್ಮ ಶೃಂಗಾರವನ್ನು ತೋರಿಸದಿರಲಿ, ಸ್ವಯಂಸಹಜವಾಗಿ ಪ್ರಕಟವಾಗುವ, ಎಂದರೆ ಕೈ, ಪಾದ, ತಲೆ, ಮುಖ್ಯ ಅಂಗಾಂಗಗಳ ಹೊರತಾಗಿ ಬೇರೆ ಅಂಗಾಂಗಗಳನ್ನು ಪ್ರದರ್ಶಿಸದಿರಲಿ, ಎದೆಯ ಮೇಲೆ ಮೇಲುಹೊದಿಕೆ ಹಾಕಿಕೊಂಡಿರಲಿ’ ಎಂಬ ರೀತಿಯ ಮಾರ್ಗದರ್ಶನವಿದೆ. ಇಲ್ಲಿ ಎಲ್ಲಿಯೂ ತಲೆ, ಮುಖವನ್ನೂ ಮುಚ್ಚಿಕೊಂಡಿರಲಿ ಎಂದು ಹೇಳಿಲ್ಲ. ಹೀಗಾಗಿ, ಈ ಕುರಿತು ವಿವಿಧ ಮುಸ್ಲಿಂ ರಾಷ್ಟ್ರಗಳಲ್ಲಿ ವಿವಿಧ ರೀತಿಯ ಪದ್ಧತಿಗಳು ಜಾರಿಯಲ್ಲಿವೆ. ಮುಸ್ಲಿಂ ಮಹಿಳೆಯ ಗೌರವವನ್ನು ಲೆಕ್ಕಿಸುವ, ಆಕೆಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ರೀತಿಯಲ್ಲಿ ಇದನ್ನು ಅರ್ಥೈಸುವ ಮಹಿಳಾಪರ ಧೋರಣೆಗಳೂ ಇವೆ; ಇನ್ನೊಂದು ಕಡೆ ಕುರಾನಿನ ಬೋಧನೆಯನ್ನು ತಮ್ಮದೇ ಆದ ಸ್ತ್ರೀವಿರೋಧಿ ರೀತಿಯಲ್ಲಿ ವಿಸ್ತರಿಸಿಕೊಂಡು ಅದನ್ನು ಅವರ ಮೇಲೆ ಹೇರಿರುವ ಉದಾಹರಣೆಗಳೂ ಇವೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಮುಸ್ಲಿಂ ಮಹಿಳಾ ಮುಖಂಡರು, ಜನಸಾಮಾನ್ಯ ಮಹಿಳೆಯರು ಭಾಗವಹಿಸಿದ್ದಾರೆ. ಅವರು ಯಾರೂ ಈಗಿನ ಕೆಲವರ ಹಾಗೆ ಕಣ್ಣನ್ನಷ್ಟೇ ಬಿಟ್ಟು ಬುರ್ಖಾ, ನಿಕಾಬನ್ನು ತೊಟ್ಟಿದ್ದು ಕಾಣುವುದಿಲ್ಲ. ಬಹುಶಃ ಅರೇಬಿಯಾದಲ್ಲಿ ಆರಂಭವಾಗಿ ಜಾಗತಿಕ ಸಂದರ್ಭದಲ್ಲಿ ನಿರ್ಬಂಧನಾತ್ಮಕ ರೂಪವನ್ನು ಪಡೆದ ಪದ್ಧತಿಯು ಈಗ ಸಾರ್ವತ್ರಿಕ ಚರ್ಚೆಗೆ ಗ್ರಾಸವಾಗಿದೆ. ಇದು ಸಂಸ್ಕೃತಿಯ ಪ್ರತೀಕವೇ ವಿನಾ ಇಸ್ಲಾಮಿನ ಸಮ್ಮತ ವ್ಯಾಖ್ಯಾನದಿಂದ ರೂಪಿತವಾಗಿರುವ ಪದ್ಧತಿಯಲ್ಲ ಎಂಬ ಅರಿವು ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ವ್ಯಾಪಕವಾಗಿ ಮೂಡಿದಷ್ಟೂ ಈ ಸಮಸ್ಯೆಗೆ ಪರಿಹಾರ ಸುಲಭ ಮತ್ತು ಪರಿಣಾಮಕಾರಿಯಾದೀತು. ಇದರಿಂದ ಮುಸ್ಲಿಂ ಮಹಿಳೆಯರಿಗೇ ಒಳಿತಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT