ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಪ್ರವೇಶ ಸಾಂವಿಧಾನಿಕ ಹಕ್ಕಲ್ಲವೇ?

ಅಸ್ಪೃಶ್ಯತೆಯಂಥ ಮಾನವ ವಿರೋಧಿ ಅಂಶಗಳಿಗೆ ಕನಿಷ್ಠ ಮಟ್ಟದ ಹಿಂಜರಿಕೆ ಉಂಟುಮಾಡಲಾದರೂ ಇಂತಹ ‘ಪ್ರವೇಶ’ಗಳು ಅನಿವಾರ್ಯವಾಗುತ್ತವೆ
Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಅಕ್ಟೋಬರ್ 23ರ ಸಂಚಿಕೆಯಲ್ಲಿ ಪ್ರಕಟವಾದ ‘ಅನುರಣನ’ ಅಂಕಣದಲ್ಲಿ ನಾರಾಯಣ ಎ. ಅವರು ಶಬರಿಮಲೆ ದೇವಸ್ಥಾನ ಪ್ರವೇಶದ ಹೋರಾಟ ಕುರಿತಂತೆ ‘ಶಬರಿಮಲೆಯಲ್ಲಿ ಸಮಾನತೆಯನ್ನು ಪ್ರತಿಪಾದಿಸುವವರು ಮಾಡಬಹುದಾದ ಸ್ವಾಭಿಮಾನದ ಕೆಲಸ ಅಂದರೆ ಆ ಕ್ಷೇತ್ರವನ್ನು ಬಹಿಷ್ಕರಿಸುವುದು ಮತ್ತು ಸಮಾನತೆಯನ್ನು ಗೌರವಿಸುವವರೆಲ್ಲರೂ ಈ ಬಹಿಷ್ಕಾರದಲ್ಲಿ ಪಾಲ್ಗೊಳ್ಳಿರಿ ಅಂತ ಜಾಗೃತಿ ಸೃಷ್ಟಿಸುವುದು’ ಎಂದು ಬರೆದಿದ್ದಾರೆ.

ಪಂಕ್ತಿಭೇದದ ಬಗ್ಗೆ ಬರೆಯುತ್ತಾ ‘ನಿಮ್ಮ ಜೊತೆ ಕುಳಿತು ಊಟ ಮಾಡಲು ನಮಗೆ ಇಷ್ಟವಿಲ್ಲ ಎಂದು ಪ್ರತಿಪಾದಿಸುವ ವರ್ಗದ ಜತೆ, ಇಲ್ಲ ಇಲ್ಲ ನಾವು ನಿಮ್ಮ ಜೊತೆಯಲ್ಲೇ ಕುಳಿತು ತಿನ್ನಬೇಕು ಅಥವಾ ನೀವು ನಮ್ಮೊಂದಿಗೆ ಬಂದು ಕುಳಿತುಕೊಳ್ಳಬೇಕು ಎಂದು ದುಂಬಾಲು ಬೀಳುವುದೇಕೆ’ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಭಾರತದ ಭೂಮಿಕೆಯನ್ನು ಬಲ್ಲಂತಹ ಎಂಥವರಿಗಾದರೂ ಇವು ತಕ್ಷಣಕ್ಕೆ ಸತ್ಯವೆಂದು ಅನ್ನಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ಆಳದಲ್ಲಿ ಗೊತ್ತೇ ಆಗದಂತಹ ಅಸ್ಪೃಶ್ಯತಾ ಆಚರಣೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎಂಬುದನ್ನು ಕಡೆಗಣಿಸಲು ಸಾಧ್ಯವೇ?

ಭಾರತದಲ್ಲಿ ಅಘೋಷಿತವಾದ ಬಹಿಷ್ಕಾರ ಸದ್ದಿಲ್ಲದೆ ನಡೆದುಕೊಂಡು ಬರುತ್ತಲೇ ಇದೆ. ಇಲ್ಲಿ ಎಲ್ಲರೂ ಎಲ್ಲ ಮನೆಗಳಿಗೂ ಪ್ರವೇಶ ಮಾಡಲು ಸಾಧ್ಯವಿಲ್ಲ. ಎಲ್ಲ ದೇವಸ್ಥಾನಗಳು ಎಲ್ಲರಿಗೂ ಮುಕ್ತವಾಗಿಲ್ಲ. ಮಠ ಮಾನ್ಯಗಳ ಸಾಂಪ್ರದಾಯಿಕತೆಗೆ ಕೆಲವರು ಮಾತ್ರ ವಾರಸುದಾರರಾಗಿ ಮುಂಬಡ್ತಿ ಪಡೆಯುತ್ತಲೇ ಬರುತ್ತಿದ್ದಾರೆ. ಇಂದಿಗೂ ದೇಶದ ಬಹುಪಾಲು ಆಸ್ತಿ ತುಳಿತಕ್ಕೊಳಗಾದವರ ಕೈಸೇರಲು ಸಾಧ್ಯವೇ ಆಗುತ್ತಿಲ್ಲ. ಹೀಗಿರುವಾಗ ದೇವಸ್ಥಾನ ಮತ್ತು ಪಂಕ್ತಿಭೇದವನ್ನು ಬಹಿಷ್ಕರಿಸಬೇಕು ಎನ್ನುವುದರಲ್ಲಿ ಈ ಹಿಂದಿನ ಸನಾತನತೆಯನ್ನು ಬೆಂಬಲಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮಾನತೆಯ ಕಣ್ಣಿಗೆ ದೂಳೆರಚಿದಂತೆ ಆಗುವುದಿಲ್ಲವೇ?

ದೇವಸ್ಥಾನ ಪ್ರವೇಶ ಮಾಡಬೇಕಿರುವುದು ಮತ್ತು ಪಂಕ್ತಿಭೇದ ಮರೆತು ಊಟಕ್ಕೆ ಜೊತೆಯಾಗಬೇಕಿರುವುದು ತಾವು ನಂಬಿದ ಪ್ರಬಲ ಮೌಢ್ಯಗಳ ನಿವಾರಣೆಗಲ್ಲ; ‘ದೇವರು ನಮ್ಮವನೇ; ನಾವು ಮಾತ್ರ ದೇವರಿಗೆ ಹತ್ತಿರವಾಗಲು ಅರ್ಹರು’ ಎಂದು ಬೀಗುವ ಮನಸ್ಥಿತಿಗಳ ದೂಳೀಪಟಕ್ಕೆ ಇವೆರಡೂ ಆಗಲೇಬೇಕು. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧಗೊಂಡಿರುವುದರ ಹಿಂದೆ ಬರೀ ಶುದ್ಧಿ, ಮಲಿನತೆಯ ಪ್ರಶ್ನೆ ಇಲ್ಲ; ಈ ದೇಶ ಎದುರಿಸುತ್ತಿರುವ ಪುರುಷ ಪ್ರಧಾನತೆ ಮತ್ತು ಅಸಮಾನ ನೆಲೆಗಳ ಅನಾವರಣವಿದೆ.

ಇದು ನಿಜಕ್ಕೂ ಸಂವಿಧಾನ ಬಯಸುವ ಸಮಾನತೆಯ ಅಂಶಕ್ಕೆ ವಿರುದ್ಧವಾದುದು. ‘ಎಲ್ಲಿ ನಿಮಗೆ ಪ್ರವೇಶವಿಲ್ಲವೋ ಅದನ್ನು ನೀವು ಬಹಿಷ್ಕರಿಸಬೇಕು’ ಎನ್ನುವುದು ಸತ್ಯ; ಆದರೆ ಭಾರತವು ನಂಬಿಕೆಗಳ ಆಗರ. ಇಂತಹ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಒಂದು ವರ್ಗ ಸದಾ ಶ್ರೇಷ್ಠತೆಯ ವ್ಯಸನದಲ್ಲಿ ತೇಲುತ್ತಾ ಮುಳುಗುತ್ತಾ ಬರುತ್ತಿದೆ. ಇದಕ್ಕೆ ಅಂತ್ಯ ಕಾಣಿಸಬೇಕೆಂದರೆ ಈ ನಡೆ ಅನಿವಾರ್ಯ. ಎಲ್ಲವೂ ಎಲ್ಲರಿಗೂ ಮುಕ್ತವಾದ ನಂತರ, ಆಯ್ಕೆಯ ಪ್ರಶ್ನೆಯನ್ನು ಅವರವರಿಗೇ ಬಿಡೋಣ.

‘ರಕ್ತದಲ್ಲಿ ತೊಯ್ದ ಸ್ಯಾನಿಟರಿ ನ್ಯಾಪ್‍ಕಿನ್ ಧರಿಸಿ ಸ್ನೇಹಿತರ ಮನೆಗೆ ಹೋಗಲು ಹಿಂಜರಿಯುವ ಮುಟ್ಟಾದ ಮಹಿಳೆಯರು ದೇವಸ್ಥಾನವನ್ನು ಅಪವಿತ್ರಗೊಳಿಸಬಹುದೇ?’ ಎಂದಿರುವ ಸ್ಮೃತಿ ಇರಾನಿ ಅವರ ಮಾತು ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಮುಟ್ಟಾದ ಮಹಿಳೆಯರು ಸ್ನೇಹಿತರ ಮನೆಗೇ ಹೋಗಲು ಹಿಂಜರಿಯುತ್ತಾರೆಂದ ಮೇಲೆ ದೇವಸ್ಥಾನಕ್ಕೆ ಹೋಗುತ್ತಾರೆಯೇ ಎನ್ನುವ ಕನಿಷ್ಠ ಅಂಶವಾದರೂ ಅವರ ಗಮನಕ್ಕೆ ಬರಬೇಡವೇ? ಅಷ್ಟಕ್ಕೂ ‘ಮುಟ್ಟಿಲ್ಲದೆ ಹುಟ್ಟೇ ಇಲ್ಲ’ ಎನ್ನುವ ಸವಕಲು ಹೇಳಿಕೆಯಾದರೂ ನೆನಪಿಗೆ ಬರಬೇಡವೇ?

ಮೇಲ್ಜಾತಿ ಮನೆಗಳ ಹಬ್ಬ, ಮದುವೆ, ತಿಥಿ ಸಂದರ್ಭಗಳಲ್ಲಿ ಪಾತ್ರೆ ಹಿಡಿದು ಊಟ ತರಲು ನಮ್ಮ ಅಜ್ಜಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಪಾತ್ರೆ ಹಿಡಿದು ಮನೆ ಮುಂದೆ ಬಂದಿದ್ದೇ ತಡ ನನ್ನ ಅಜ್ಜಿಯನ್ನು ‘ಲೇ ಕೆಂಪೋರಿ ಕೊಟ್ಟಿಗೆ ಕಡೆಗೆ ಬಾ’ ಎಂದು ಕರೆದು ಅಲ್ಲಿ ನಮ್ಮ ಪಾತ್ರೆಗಳಿಗೆ ಅವರ ಕೈ ತಾಕದಂತೆ ಊಟ ಹಾಕುತ್ತಿದ್ದರು. ನಾನೇನಾದರೂ ಒಂದು ಹೆಜ್ಜೆ ಮುಂದುವರಿದರೆ ಗದರಿಸಿ ಕಳಿಸುತ್ತಿದ್ದರು.

ತಕ್ಷಣವೇ ಅಜ್ಜಿ ನನ್ನ ಪ್ರಮಾದವನ್ನು ತಿದ್ದುವಂತೆ ‘ಹಂಗೆಲ್ಲ ಹೋಗ್ಬಾರದು ಕಣಪ್ಪ, ಅವರ್‍ನ ನಾವು ಮುಟ್ಟುಕೋವಂಗಿಲ್ಲ’ ಎಂದು ತಿದ್ದಿ ಕರೆದುಕೊಂಡು ಹಿಂದಿರುಗುತ್ತಿದ್ದಳು. ಇದು ಬಾಲ್ಯದ ಘಟನೆ. ಆದರೆ ಈಗಲೂ ಅವರ ಮನೆ ಹತ್ತಿರ ಆಕಸ್ಮಿಕವಾಗಿ ಭೇಟಿ ಕೊಟ್ಟಾಗ ಮನಸ್ಸು ಅದೇ ತಪ್ಪಿತಸ್ಥ ಭಾವನೆಯಿಂದ ಎಲ್ಲಿ ನಿಲ್ಲಬೇಕು, ಎಲ್ಲಿ ಕೂರಬೇಕು ಎನ್ನುವ ಗೊಂದಲಕ್ಕೆ ಬೀಳುತ್ತದೆ. ಇದೊಂದು ರೀತಿಯಲ್ಲಿ ಕರಗತವಾದ ಅಸ್ಪೃಶ್ಯತೆಯ ಸೋಂಕಿನ ಮನಸ್ಥಿತಿ. ಇದು ಸದಾ ನಮ್ಮೊಂದಿಗಿರಬೇಕೇ? ಇಂತಹ ಮಾನವ ವಿರೋಧಿ ಅಂಶಗಳಿಗೆ ಕನಿಷ್ಠ ಮಟ್ಟದ ಹಿಂಜರಿಕೆ ಉಂಟುಮಾಡಲಾದರೂ ಇಂತಹ ಪ್ರವೇಶಿಕೆಗಳು ಅನಿವಾರ್ಯವಾಗುತ್ತವೆ.

ಕೊಲ್ಲಾಪುರದ ಸಾಹು ಮಹಾರಾಜರು ಒಮ್ಮೆ ಅಸ್ಪೃಶ್ಯನೊಬ್ಬನಿಗೆ ಹೋಟೆಲ್ ತೆರೆಯಲು ಸಹಾಯ ಮಾಡಿ, ‘ನನ್ನ ಬಳಿ ಬರುವ ಯಾರೇ ಆದರೂ ಮೊದಲು ಅಸ್ಪೃಶ್ಯನ ಹೋಟೆಲ್‍ಗೆ ಪ್ರವೇಶ ನೀಡಿ ಅಲ್ಲಿ ಚಹಾ ಕುಡಿದು ನಂತರ ಬಂದು ನನ್ನನ್ನು ಕಾಣುವುದು’ ಎಂದು ಆದೇಶವನ್ನು ಹೊರಡಿಸುತ್ತಾರೆ. ಈ ಆದೇಶವು ಸರಿಯಾಗಿ ಪಾಲನೆ ಆಗದಿದ್ದಾಗ ಸ್ವತಃ ಮಹಾರಾಜರೇ ಈ ಕಾರ್ಯಕ್ಕೆ ಮುಂದಾಗಿ ಇನ್ನಿತರರಿಗೆ ಮಾದರಿಯಾಗುತ್ತಾರೆ.

ಆನಂತರ ಅನಿವಾರ್ಯವಾಗಿ ಇತರೆ ಮೇಲ್ವರ್ಗದವರು ಅಲ್ಲಿ ಚಹಾ ಕುಡಿದು ಅರಮನೆಗೆ ಪ್ರವೇಶ ಮಾಡಲು ಪ್ರಾರಂಭಿಸುತ್ತಾರೆ. ಇದೊಂದು ರೀತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದ ಆಶಯವಾಗಿತ್ತು. ಇಂತಹ ಮನಸ್ಥಿತಿಯಿಂದಾಗಿಯೇ ಮಹಾರಾಜರು ಮುಂದೆ ಬ್ರಾಹ್ಮಣೇತರರಿಗೆ ಶೇ 50 ಮೀಸಲಾತಿಯನ್ನು ಜಾರಿಗೆ ತಂದರು. ಇದನ್ನೇ ಮಾದರಿಯಾಗಿಟ್ಟುಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರು ಶೇ 75 ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಇಂದು ಎಲ್ಲ ಸಮುದಾಯಗಳು ಮೀಸಲಾತಿಯ ನೆಲೆಯಲ್ಲಿವೆ.

ಈ ‘ಪ್ರವೇಶ’, ಜಾತಿ ರೋಗ ಮನಸ್ಥಿತಿಯ ಬುಡವನ್ನು ಕೊಂಚ ಅಲುಗಾಡಿಸಲು ಸಹಾಯಕವಾಗುತ್ತಾ ಸಾಗುತ್ತಿದೆ. ದೇಗುಲ ಪ್ರವೇಶ ಮತ್ತು ಸಹಪಂಕ್ತಿ ಭೋಜನದ ಕಾರ್ಯಕ್ರಮಗಳನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು ಒಳಿತೇನೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT