ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಕನ್ನಡದ ಭವಿಷ್ಯ: ಇಂಗ್ಲಿಷ್‌ನ ಅಗತ್ಯ‌

ಯಾವುದೇ ಭಾಷೆಗೆ ಹೊಸ ತೊರೆ ಯಾವುದೆಂದರೆ, ಅನುವಾದದ ಮೂಲಕ ಬೇರೆ ಭಾಷೆಗಳಿಂದ ಹರಿದು ಬರುವ ಹೊಸ ಅರಿವು ಅಥವಾ ಚಿಂತನೆ
Last Updated 22 ಏಪ್ರಿಲ್ 2021, 21:50 IST
ಅಕ್ಷರ ಗಾತ್ರ

ಏಪ್ರಿಲ್ 23 ಅನ್ನು ವಿಶ್ವ ಇಂಗ್ಲಿಷ್ ಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ, ಇಂಗ್ಲಿಷ್ ಭಾಷೆಯ ಹೆಸರಾಂತ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ಅವರ ಜನ್ಮದಿನ ಮತ್ತು ಸಾವಿನ ದಿನ ಕೂಡ ಹೌದು. ಪ್ರಪಂಚದಾದ್ಯಂತ ನಾಟಕಕಾರರಿಗೆ ಪ್ರೇರಣೆಯಾದ ಷೇಕ್ಸ್‌ಪಿಯರ್‌ಗೆ ಈ ಮೂಲಕ ಒಂದು ಅರ್ಥಪೂರ್ಣ ಮತ್ತು ಸಾಂದರ್ಭಿಕ ನುಡಿನಮನ. ವಿಶ್ವಸಂಸ್ಥೆಯು 2010ರಿಂದ ಆರಂಭಿಸಿದ ಈ ದಿನಾಚರಣೆಯ ಮೂಲ ಉದ್ದೇಶ, ಪ್ರಪಂಚದಲ್ಲಿ ಬಹುಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಉತ್ತೇಜಿಸುವುದಾಗಿದೆ.

ಪ್ರಸ್ತುತ, ಪ್ರಪಂಚದಾದ್ಯಂತ ಸುಮಾರು 135 ಕೋಟಿ ಜನ ಇಂಗ್ಲಿಷ್ ಮಾತನಾಡಬಲ್ಲರು. ಇವರಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್ ಮಾತೃಭಾಷೆಯಲ್ಲದಿದ್ದರೂ ಎರಡನೇ ಭಾಷೆಯಾಗಿ ಪ್ರಸಕ್ತ ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಕಲಿಯುತ್ತಿರುವ ಭಾಷೆಯಾಗಿದೆ. ಇದಕ್ಕೆ ಮುಖ್ಯ ಕಾರಣ, ಇಂಗ್ಲಿಷ್ ಇಂದು ಇಂಟರ್ನೆಟ್, ವಿಜ್ಞಾನ, ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳ ಮುಖ್ಯಭಾಷೆಯಾಗಿ, ಜೊತೆಗೆ ದೇಶಗಳ ನಡುವೆ ಸಂವಹನ ಸೇತುವೆಯಾಗಿ ಕೆಲಸ ಮಾಡುತ್ತಿರುವುದು.

ಕೆಲವೊಮ್ಮೆ ಇಂಗ್ಲಿಷ್‌ಗೆ ಅನಗತ್ಯ ಮಹತ್ವ ಕೊಡುತ್ತಿದ್ದೇವೆ ಎಂದು ಅನ್ನಿಸುವುದು ಸಹಜ. ಈ ಪ್ರಸ್ತುತತೆಯಲ್ಲಿ, ಕನ್ನಡಿಗರು ಇಂಗ್ಲಿಷ್ ಕಲಿಯಬೇಕಾದ ಅಗತ್ಯವಿದೆಯೇ, ಒಂದುವೇಳೆ ಅವಶ್ಯವಿದ್ದಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆಯೇ ಎನ್ನುವುದನ್ನು ಪುನರ್‌ ವಿಮರ್ಶಿಸುವ ಅಗತ್ಯವಿದೆ.

ಇಂದು, ಇಂಗ್ಲಿಷ್ ಕಲಿಯುವ ಅಗತ್ಯಕ್ಕೆ ಸಾರ್ವಜನಿಕ ಮನ್ನಣೆಯಿದೆ ಎನ್ನುವುದರ ಕುರುಹಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅಣಬೆಗಳಂತೆ ಕಾಣಿಸಿಕೊಳ್ಳುತ್ತಿವೆ. ವ್ಯವಹಾರಕ್ಕೆ ಅಥವಾ ಉದ್ಯೋಗಕ್ಕೆ ಅಗತ್ಯ
ಎಂದು ಪರಿಗಣಿಸಲಾದ ಭಾಷೆಯನ್ನು ಕಲಿಕಾ ಮಾಧ್ಯಮದ ಸ್ಥಾನಕ್ಕೆ ಏರಿಸಿ ಹಾಗೂ ಅದಕ್ಕಾಗಿ ಮಾತೃಭಾಷೆಯನ್ನು ಅಸ್ಪೃಶ್ಯಗೊಳಿಸಬೇಕಾದ ಅಗತ್ಯಇದೆಯೇ ಎನ್ನುವ ಪ್ರಶ್ನೆಗೆ, ಖಂಡಿತವಾಗಿಯೂ ಇಲ್ಲ ಎನ್ನಬಹುದು. ಯಾಕೆಂದರೆ, ಮಾತೃಭಾಷೆಯಲ್ಲಿ ಕಲಿತ ವಿಷಯ ಹೆಚ್ಚು ಅಂತರ್ಗತವಾಗುತ್ತದೆ ಎಂದು ವಿವಿಧ ಅಧ್ಯಯನಗಳು ಹೇಳುತ್ತವೆ. ಆದರೆ, ಕನ್ನಡದ ಸದೃಢ ಭವಿಷ್ಯಕ್ಕಾಗಿ ಇಂಗ್ಲಿಷ್ ಭಾಷೆಯ ಅರಿವು ಕೂಡ ಅಷ್ಟೇ ಅತ್ಯಗತ್ಯ.

ಮೂಲತಃ, ಯಾವುದೇ ಭಾಷೆಯೆನ್ನುವುದು ಹರಿಯುವ ನದಿಯಂತೆ. ಹೊಸ ತೊರೆಗಳು ಸೇರಿ
ಕೊಳ್ಳುತ್ತಾ ನದಿಯನ್ನು ವಿಶಾಲವಾಗಿಸುವಂತೆ, ಬೇರೆ ಭಾಷೆಗಳ ಜ್ಞಾನದ ಸೇರ್ಪಡೆ ನಮ್ಮ ಭಾಷೆಯನ್ನು
ಸಮೃದ್ಧಗೊಳಿಸುತ್ತದೆ. ತದ್ವಿರುದ್ಧವಾಗಿ, ಭಾಷೆ ನಿಂತ ನೀರಾದಾಗ ಅದರ ಅಂತ್ಯ ಆರಂಭವಾಗುತ್ತದೆ. ಈ ದಿಸೆಯಲ್ಲಿ, ಭಾಷೆಗೆ ಹೊಸ ತೊರೆ ಯಾವುದೆಂದರೆ, ಅನುವಾದದ ಮೂಲಕ ಬೇರೆ ಭಾಷೆಗಳಿಂದ ಹರಿದು ಬರುವ ಹೊಸ ಅರಿವು ಅಥವಾ ಚಿಂತನೆ. ಅದರಂತೆಯೇ, ಕನ್ನಡಿಗರಿಗೆ ವಿವಿಧ ಭಾಷೆಗಳ ಮುಖ್ಯ ಕೊಂಡಿ ಇಂಗ್ಲಿಷ್. ಈ ರೀತಿ, ಸದ್ಯ ಪ್ರಪಂಚದ ಜ್ಞಾನ ಭಂಡಾರದ ಕೀಲಿಕೈ ಇಂಗ್ಲಿಷಿನಲ್ಲಿದೆ. ಆದ್ದರಿಂದ, ಜ್ಞಾನಾರ್ಜನೆಗೆ ಇಂಗ್ಲಿಷ್ ಕಲಿಕೆ ಇಂದು ನಮಗೆ ಬಹಳ ಮಹತ್ವವೆನಿಸುತ್ತದೆ.

ಕಲಿಯಲು ಇಂಗ್ಲಿಷ್ ಅಂತಹ ಕಷ್ಟದ ಭಾಷೆಯೇನಲ್ಲ. ಇದು ಬಹಳ ಸರಳವಾದ ವ್ಯಾಕರಣ ಮತ್ತು ವಾಕ್ಯ ರಚನೆ ಹೊಂದಿದೆ. ಜೊತೆಗೆ, ನಮಗೇನೂ ಬ್ರಿಟಿಷ್, ಅಮೆರಿಕನ್ ಅಥವಾ ಆಸ್ಟ್ರೇಲಿಯನ್ ಉಚ್ಚಾರಣೆ ಕಲಿಯುವ ಅಗತ್ಯವಿಲ್ಲ. ಸ್ಪಷ್ಟ ಉಚ್ಚಾರಣೆಯ ಗೋಳು ಮೂಲ ಭಾಷಿಕರಿಗಿರಲಿ. ನಾವು ಇಂಗ್ಲಿಷ್‌ ಅನ್ನು ಭಾರತೀಯ ಭಾಷೆಯ ಧಾಟಿಯಲ್ಲಿ ಮಾತನಾಡಿದರೆ ತಪ್ಪೇನಿಲ್ಲ. ಇಲ್ಲಿ ನಮ್ಮ ಮುಖ್ಯ ಗುರಿ, ಆ ಭಾಷೆಯಲ್ಲಿರುವ ಜ್ಞಾನವನ್ನು ಕನ್ನಡೀಕರಿಸಿ ನಮ್ಮದಾಗಿಸಿಕೊಳ್ಳುವುದು.

ಈ ವಿಷಯದಲ್ಲಿ ನಾವಿನ್ನೂ ಬಹಳ ಹಿಂದುಳಿದಿದ್ದೇವೆ. ಉದಾಹರಣೆಗೆ, ಫ್ರೆಂಚ್, ಜರ್ಮನ್, ಚೈನೀಸ್ ಅಥವಾ ಜಪಾನೀಸ್ ಭಾಷೆಗಳ ವರ್ತಮಾನದ ಸ್ಥಿತಿಯನ್ನು ಗಮನಿಸಿದರೆ, ಬೇರೆ ಭಾಷೆಯಲ್ಲಿ ಲಭ್ಯವಿರುವ ಜ್ಞಾನವು ತಕ್ಷಣ ಅನುವಾದದ ಮೂಲಕ ಆಯಾ ಭಾಷಿಕರಿಗೆ ಲಭಿಸುತ್ತದೆ. ಹೀಗೆ, ಈ ಭಾಷೆಗಳು ವಿವಿಧ ಜ್ಞಾನಶಾಖೆಯ ಮಾಹಿತಿಯ ವಿಷಯದಲ್ಲಿ ಸದಾ ನವೀಕರಣಗೊಳ್ಳುತ್ತಿವೆ.

ಅದೇ ಮಾದರಿಯಲ್ಲಿ ಕನ್ನಡದಲ್ಲೂ ಸಮರ್ಥ ವಿದ್ವಾಂಸರು ಈ ಅನುವಾದದ ಕೆಲಸದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. ಆದರೆ, ದುರದೃಷ್ಟವಶಾತ್ ನಮ್ಮಲ್ಲಿನ್ನೂ ಸಾಹಿತಿಗಳಿಗಿರುವ ಮನ್ನಣೆ ಅನುವಾದಕರಿಗೆ ಸಿಗುತ್ತಿಲ್ಲ. ಒಂದು ಕೃತಿಯ ಉತ್ತಮ ಅನುವಾದವು ಸಾಹಿತ್ಯ ಸೃಷ್ಟಿಯಷ್ಟೇ ಕ್ಲಿಷ್ಟಕರ ಕೆಲಸ ಹಾಗೂ ಗಂಭೀರವಾಗಿ ಪರಿಗಣಿಸಬೇಕಾದ ಬರಹ. ಯಾಕೆಂದರೆ, ಅನುವಾದಕ ಮೂಲ ಬರಹದ ಆಶಯವನ್ನು ತನ್ನದಾಗಿಸಿಕೊಳ್ಳದಿದ್ದರೆ, ಅನುವಾದ ಅಷ್ಟು ಪರಿಣಾಮಕಾರಿಯಾಗಲಾರದು.

ಅದೇ ರೀತಿ, ಕನ್ನಡದ ಬರಹ ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಕೂಡ ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಬಹಳ ಮುಖ್ಯ. ಕನ್ನಡದ ಐತಿಹಾಸಿಕ ಸಾಹಿತ್ಯ ಪರಂಪರೆಯೊಂದಿಗೆ, ಇಂಗ್ಲಿಷಿನಲ್ಲಿ ಲಭ್ಯ
ವಿರುವ ಬೇರೆ ಬೇರೆ ಭಾಷೆಗಳ ಸಾಹಿತ್ಯ, ಬರವಣಿಗೆ ಶೈಲಿ, ಆಲೋಚಿಸುವ ಕ್ರಮಗಳ ವೈಶಿಷ್ಟ್ಯವನ್ನು ಗುರುತಿಸಿಕೊಂಡು, ಇವುಗಳ ನಡುವೆ ತನ್ನತನವನ್ನು ರೂಪಿಸಿಕೊಳ್ಳುವುದು ಒಳ್ಳೆಯ ಕ್ರಮ.

ಹಾಗಾಗಿ, ಇಂಗ್ಲಿಷ್‌ ಅನ್ನು ಕಲಿಯೋಣ. ಆ ಮೂಲಕ ಅಲ್ಲಿರುವ ಜ್ಞಾನವನ್ನು ನಮ್ಮದಾಗಿಸಿ
ಕೊಂಡು, ಕನ್ನಡವನ್ನು ಇನ್ನಷ್ಟು ಸಮೃದ್ಧವಾಗಿ ಬೆಳೆಸೋಣ ಎನ್ನುವುದು ವಿಶ್ವ ಇಂಗ್ಲಿಷ್ ಭಾಷಾ ದಿನಾಚರಣೆಯ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT