ಬುಧವಾರ, ಜನವರಿ 20, 2021
27 °C
ಜಂಕ್‌ಫುಡ್‌ನಿಂದ ದೇಹಕ್ಕೆ ಹಾನಿಯಾದರೆ, ಜಂಕ್ ಮಾಹಿತಿಯಿಂದ ಮನಸ್ಸಿಗೆ ಹಾನಿ

ಸಂಗತ: ಮಾಹಿತಿ ಅಜೀರ್ಣಕ್ಕಿದೆ ಡಯಟ್‌!

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ನೂರಾರು ಸ್ವಾದಿಷ್ಟ ಖಾದ್ಯಗಳನ್ನು ನಮ್ಮ ಮುಂದಿಟ್ಟರೆ, ನಮ್ಮ ದೇಹ ಎಷ್ಟನ್ನು ಸ್ವೀಕರಿಸಬಹುದು? ನಾಲಿಗೆಗೆ ರುಚಿಯಾಗಿದೆಯೆಂದು ಅತಿಯಾಗಿ ತಿಂದರೆ, ಅಜೀರ್ಣ, ಆಲಸ್ಯ, ಬೊಜ್ಜು ಅಥವಾ ಅನಾರೋಗ್ಯ ನಮ್ಮನ್ನು ಕಾಡಬಹುದು. ಈ ದೈಹಿಕ ಸಮಸ್ಯೆಗೆ ಪರಿಹಾರವಾಗಿ, ಡಯಟ್‌ಗೆ ಮೊರೆ ಹೋಗುವವರಿದ್ದಾರೆ.

ಅದೇ ರೀತಿ, ದಿನದ 24 ಗಂಟೆಗಳೂ ಲಭ್ಯವಿರುವ ಟಿ.ವಿ ಅಥವಾ ಇಂಟರ್ನೆಟ್ ಆಧಾರಿತ ಮೊಬೈಲ್ ಫೋನಿನ ದೃಶ್ಯಮಾಹಿತಿಗಳಿಗೆ ತೆರೆದುಕೊಳ್ಳುವ ನಮ್ಮ ಮನಸ್ಸು ಎಷ್ಟನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳಬಹುದು? ಅಧಿಕ ಮಾಹಿತಿಯಿಂದ ಉಂಟಾಗುವ ಮಾನಸಿಕ ಅಜೀರ್ಣತೆಗೆ ಪರಿಹಾರದ ಡಯಟ್ ಇದೆಯೇ?

ಅಗಾಧ ಪ್ರಮಾಣದ ಮಾಹಿತಿಯ ಲಭ್ಯತೆಯಿಂದ ಉದ್ಭವವಾಗಿರುವ ಸಮಸ್ಯೆಗಳ ಕುರಿತಾದ ಕೆಲವು ಅಧ್ಯಯನಗಳ ಅಂಕಿಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಉದಾಹರಣೆಗೆ, ಅಂತರ್ಜಾಲ ಪ್ರಪಂಚದಲ್ಲಿ ಸದ್ಯಕ್ಕೆ ಲಭ್ಯವಿರುವ ಸಿನಿಮಾಗಳನ್ನು ವೀಕ್ಷಿಸಲು, ಒಬ್ಬ ವ್ಯಕ್ತಿಗೆ ಸುಮಾರು 4.7 ಕೋಟಿ ವರ್ಷಗಳು ಬೇಕಾಗುತ್ತವೆ. ಕಳೆದ ಎರಡು ವರ್ಷಗಳಲ್ಲಿ ಕೇವಲ ಗೂಗಲ್‌ನಲ್ಲಿ ಸಂಗ್ರಹವಾದ ಮಾಹಿತಿಯು ಮನುಷ್ಯನ ಒಟ್ಟು ಇತಿಹಾಸದಲ್ಲಿ ಸಂಗ್ರಹವಾದ ಮಾಹಿತಿಗೆ ಸಮ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಅಥವಾ ಟಿ.ವಿ ವೀಕ್ಷಣೆಯಲ್ಲಿ ನಾವು ಒಂದು ಮಾಹಿತಿಯಲ್ಲಿ 10 ಸೆಕೆಂಡೂ ಕಳೆಯದೆ ಬದಲಾಯಿಸುತ್ತಿರುತ್ತೇವೆ. ಹದಿಹರೆಯದ ಮಕ್ಕಳು ಪ್ರತೀ 6 ನಿಮಿಷಕ್ಕೆ ಒಂದು ಮೆಸೇಜ್ ಕಳುಹಿಸುತ್ತಿರುತ್ತಾರೆ. ಹೆಚ್ಚು ಸಮಯ ಅಂತರ್ಜಾಲದಲ್ಲಿ ಕಾಲ ಕಳೆಯುವ ಹದಿಹರೆಯದವರಲ್ಲಿ ಆತ್ಮಹತ್ಯಾ ಪ್ರವೃತ್ತಿ ಕಂಡು ಬರುತ್ತಿದೆ. ಇದಲ್ಲದೆ, ದಿನಕ್ಕೆ ಹಲವಾರು ಬಾರಿ ಟಿ.ವಿ ಚಾನೆಲ್‌ಗಳನ್ನು ಬದಲಾಯಿಸುತ್ತಿರುತ್ತೇವೆ ಅಥವಾ ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಮ್‌, ವಾಟ್ಸ್‌ಆ್ಯಪ್‌ಗಳಿಗೆ ಭೇಟಿ ನೀಡುತ್ತಲೇ ಇರುತ್ತೇವೆ.

ಹಾಗೆ ನೋಡಿದರೆ, ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಿರುವುದು ಒಳ್ಳೆಯದೆ. ಕೊರೊನಾ ವೈರಾಣು ಜಗತ್ತನ್ನು ಸ್ತಬ್ಧಗೊಳಿಸಿದಾಗ, ಆಡಳಿತ ವ್ಯವಸ್ಥೆ, ತರಗತಿಗಳು, ಆಫೀಸುಗಳು... ಎಲ್ಲವನ್ನೂ ಕೈಹಿಡಿದು ನಡೆಸಿದ್ದು ಅಂತರ್ಜಾಲ ಸೌಲಭ್ಯವೇ ಮತ್ತು ಮನೆಯಲ್ಲಿ ಸಮಯ ಕಳೆಯಲು ನಮಗೆ ಸಹಕರಿಸಿದ್ದು ಟಿ.ವಿ ಚಾನೆಲ್‌ಗಳೇ. ಆದರೂ, ಈ ಅಧಿಕ ಮಾಹಿತಿ ಲಭ್ಯತೆಯ ಇತಿಮಿತಿ ಅರಿತುಕೊಳ್ಳುವುದು ಅಗತ್ಯ.

ಯಾಕೆಂದರೆ, ಮನುಷ್ಯನ ಮೆದುಳು ಒಂದು ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನಷ್ಟೇ ಸ್ವೀಕರಿಸಬಹುದು. ಈ ಮಿತಿಯನ್ನು ದಾಟಿದಾಗ, ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ, ನಮಗೆ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ ಮತ್ತು ಒಂದು ಸಣ್ಣ ನಿರ್ಧಾರ ಕೂಡ ದೊಡ್ಡ ಅಗ್ನಿಪರೀಕ್ಷೆಯಂತೆ, ಸವಾಲಾಗಿ ಪರಿಣಮಿಸುತ್ತದೆ.

ನಾವಿಂದು ಮಾಹಿತಿ ಓವರ್‌ಲೋಡ್‌ನಿಂದ ಬಳಲುತ್ತಿದ್ದೇವೆ. ಮನಸ್ಸಿಗೆ ಅತಿಯಾದ ಮಾಹಿತಿಯು ಮಾನಸಿಕ ಒತ್ತಡ ಮತ್ತು ಅನಿಶ್ಚಿತತೆಯನ್ನು ತರುತ್ತದೆ. ಅಂದರೆ, ಆಯ್ಕೆಗಳು ಹೆಚ್ಚಾದಂತೆ, ನಮ್ಮ ಗೊಂದಲವೂ ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ಅಗಾಧ ಮಾಹಿತಿಯು ನಮ್ಮ ಏಕಾಗ್ರತೆ ಮತ್ತು ಗಮನವನ್ನು ವಿಚಲಿತಗೊಳಿಸುತ್ತದೆ. ನಾವಿಂದು, ಸಂಕೀರ್ಣವಾದ ಅಗಾಧ ಮಾಹಿತಿ ರಾಶಿಯನ್ನು ಕಡಿಮೆ ಸಮಯದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ಸಾವಧಾನದಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ.

ಹಾಗಿದ್ದರೂ, ನಾವ್ಯಾಕೆ ಮಾಹಿತಿ ಸಂಗ್ರಹದಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ? ಎಂಐಟಿಯ ಸೆಂಟರ್ ಫಾರ್ ಸಿವಿಕ್ ಮೀಡಿಯಾದ ನಿರ್ದೇಶಕ ಎಥಾನ್ ಜುಕರ್‌ಮನ್ ಪ್ರಕಾರ, ಈ ಗೀಳಿನ ಹಿಂದಿರುವ ಮುಖ್ಯ ಕಾರಣಗಳೆಂದರೆ, ನಮ್ಮನ್ನು ಕಾಡುವ ಒಂಟಿತನ, ‘ತಿಳಿದಿದೆ’ ಎಂದು ಪೋಸ್ ಕೊಡುವ ಸಲುವಾಗಿ ಮತ್ತು ಮಾಹಿತಿಯ ನಿರಂತರ ಲಭ್ಯತೆ. ಮುಖ್ಯವಾಗಿ ದೃಶ್ಯರೂಪದಲ್ಲಿರುವ ಮಾಹಿತಿಯಿಂದ ನಮ್ಮ ವಿಮರ್ಶಾತ್ಮಕ ಚಿಂತನಾ ಕೌಶಲ ದುರ್ಬಲಗೊಳ್ಳುತ್ತದೆ. ಇಲ್ಲಿ ನಮಗೆ ಅರಿವಾಗಬೇಕಾದ ಸತ್ಯವೆಂದರೆ, ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ತಿಳಿಯಲು ನಮಗೆ ಸಾಧ್ಯವಿಲ್ಲ, ಸಮಯವಿಲ್ಲ, ಜೊತೆಗೆ ಅಗತ್ಯವೂ ಇಲ್ಲ.

ನಮ್ಮ ದೇಹಕ್ಕೆ ಜಂಕ್‌ಫುಡ್ ಹೇಗೆ ಹಾನಿ ಮಾಡುತ್ತದೆಯೋ ಹಾಗೇ ಜಂಕ್ ಮಾಹಿತಿಯು ಮನಸ್ಸಿಗೆ ಹಾನಿ ಮಾಡುತ್ತದೆ. ಇಲ್ಲಿನ ಮುಖ್ಯ ಪ್ರಶ್ನೆ, ಈ ಮಾಹಿತಿಯ ಪ್ರವಾಹದ ಅಪಾಯ ಎದುರಿಸಲು ನಮ್ಮ ಮಕ್ಕಳನ್ನು ಸಿದ್ಧಪಡಿಸಿದ್ದೇವೆಯೇ? ಅಗಾಧ ಮಾಹಿತಿ ಲಭ್ಯತೆ ನಮ್ಮನ್ನು ಉತ್ತಮ ಚಿಂತಕರನ್ನಾಗಿಸಿದೆಯೇ? ಖಂಡಿತವಾಗಿಯೂ ಇಲ್ಲ. ಮಾಹಿತಿ ಲಭ್ಯತೆಯು ನಮ್ಮನ್ನು ಸದಾ ಬ್ಯುಸಿಯಾಗಿಟ್ಟು, ಸೃಜನಾತ್ಮಕ ಆಲೋಚನೆಗಳೊಂದಿಗೆ ಒಂಟಿಯಾಗಿರಲು ಬಿಡದೆ ಗೊಂದಲ ಸೃಷ್ಟಿಸುತ್ತದೆ. ಹಾಗಾಗಿ, ಮಾಹಿತಿ ಜಗತ್ತಿಂದು ನಮ್ಮನ್ನು ತೋರಿಕೆಯ ಚಿಂತಕರನ್ನಾಗಿಸಿದೆ. ಆದ್ದರಿಂದಲೇ, ನಮ್ಮ ನಡುವೆ ಕಡಿಮೆ ಸಂವಾದಗಳು ನಡೆಯುತ್ತಿವೆ, ಜಾಸ್ತಿ ಜಗಳಗಳಾಗುತ್ತಿವೆ, ಜನರ ಧ್ರುವೀಕರಣವಾಗುತ್ತಿದೆ. ಉದಾಹರಣೆಗೆ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ಸಮರ್ಥಿಸುವ ಗುಂಪುಗಳಲ್ಲಿಯೇ ಹೆಚ್ಚು ಸಮಯ ಕಳೆಯುತ್ತೇವೆ. ಜೀವನದ ಕುರಿತು ಅವಾಸ್ತವಿಕ ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ಮಾಹಿತಿಯ ನಡುವೆಯೂ ಜನರಲ್ಲಿ ಸಾಮಾಜಿಕ ಆತಂಕ, ಪ್ರತ್ಯೇಕತೆಯ ಭಾವನೆ ಮತ್ತು ಒಂಟಿತನ ಹೆಚ್ಚಾಗುತ್ತಿದೆ. ಆದ್ದರಿಂದ, ಅನಗತ್ಯ ಮಾಹಿತಿ ಬೇಟೆಯಿಂದ ಮುಕ್ತಿ ಪಡೆದಷ್ಟೂ ಮನಸ್ಸಿಗೆ ಹಿತ ಮಾತ್ರವಲ್ಲ, ಅರ್ಥಪೂರ್ಣವಾಗಿ ಬದುಕಲು ಸಹಾಯಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು