ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು: ನಿರ್ವಹಣೆ ಹೇಗೆ?

Last Updated 5 ಜುಲೈ 2018, 4:03 IST
ಅಕ್ಷರ ಗಾತ್ರ

ಕಳೆದ ಎರಡು ತಿಂಗಳಲ್ಲಿ ಕರ್ನಾಟಕದಲ್ಲಿ 94 ಜನ ಸಿಡಿಲಿಗೆ ಬಲಿಯಾಗಿದ್ದಾರೆಂಬುದನ್ನು ತಿಳಿದಾಗ ತಳಮಳವಾಗುತ್ತದೆ. ಕುಟುಂಬಕ್ಕೆ ಆಸರೆಯಾದ ತಂದೆಯೋ, ಮಗನೋ ಸಿಡಿಲಿಗೆ ಜೀವ ಕಳೆದುಕೊಂಡಾಗ ಆ ಕುಟುಂಬಕ್ಕೆ ಆಗಬಹುದಾದ ಆಘಾತ, ನಷ್ಟ ಅಪಾರವಾದದ್ದು. ಆದರೆ ಈ ಸಿಡಿಲಮಾರಿಯಿಂದ ರಕ್ಷಣೆ ಕುರಿತು ಯಾವುದೇ ಪರಿಣಾಮಕಾರಿ ಕ್ರಮಗಳು ಇದುವರೆಗೂ ರೂಪುಗೊಂಡಿಲ್ಲ.

ಸಿಡಿಲು ಬಡಿದು ಸಾವು ನೋವು ಸಂಭವಿಸುವುದು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು. ಶೇ90ರಷ್ಟು ಸಾವುನೋವುಗಳು ಗ್ರಾಮೀಣ ಭಾಗಗಳಿಂದಲೇ ವರದಿಯಾಗುತ್ತವೆ. ಅದಕ್ಕೆ ಕಾರಣ ಸುಸ್ಪಷ್ಟ. ಕೃಷಿ ಮತ್ತು ಸಂಬಂಧಿತ ಕೆಲಸಗಳಲ್ಲಿ ತೊಡಗುವ ಗ್ರಾಮೀಣ ಜನ ಅನಿವಾರ್ಯವಾಗಿ ಮನೆಯಿಂದ ಹೊರಗೆ ಕೆಲಸ ಮಾಡಬೇಕಾಗುತ್ತದೆ. ಮಳೆ ಬರಲು ಶುರುವಾದರೆ, ಹೊಲ–ಗದ್ದೆಗಳ ಬಯಲಿನಲ್ಲಿ ಅವರಿಗೆ ಯಾವುದೇ ಆಸರೆ ಸಿಗದೆ ಮರಗಳಡಿಯಲ್ಲಿ ನಿಲ್ಲುವುದು ಸಾಮಾನ್ಯ. ಮರಗಳು ಸಿಡಿಲನ್ನು ಆಕರ್ಷಿಸುವುದರಿಂದ, ಅವುಗಳ ಕೆಳಗೆ ಆಶ್ರಯ ಪಡೆದವರು ಕ್ಷಣ ಮಾತ್ರದಲ್ಲಿ ಸಾವಿಗೀಡಾಗುತ್ತಾರೆ.

ಭಾರತದಲ್ಲಿ ಪ್ರತಿವರ್ಷ ಎರಡು ಸಾವಿರಕ್ಕೂ ಅಧಿಕ ಜನ ಸಿಡಿಲಿನ ವಿಕೋಪಕ್ಕೆ ಬಲಿಯಾಗುತ್ತಾರೆ. ಆದರೆ ಭಾರತಕ್ಕಿಂತ ಬಹು ವಿಸ್ತಾರವಾದ ಅಮೆರಿಕದಲ್ಲಿ ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಪ್ರತಿವರ್ಷ ಸುಮಾರು 35 ಮಂದಿ ಮಾತ್ರ. ಭಾರತದಂತಹ ದೇಶದಲ್ಲಿ ಚಂಡಮಾರುತ, ಪ್ರವಾಹ, ಭೂಕಂಪ, ಭೂಕುಸಿತ ಇತ್ಯಾದಿ ನೈಸರ್ಗಿಕ ವಿಕೋಪಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಹಾಗೆ ನೋಡಿದರೆ ಪ್ರತಿವರ್ಷ ಸಿಡಿಲಿನಿಂದ ಸಾಯುವವರ ಸಂಖ್ಯೆ ಉಳಿದೆಲ್ಲ ವಿಕೋಪಗಳಿಗಿಂತ ಹೆಚ್ಚೇ ಎಂದು ಹೇಳಬಹುದು. ಅದಕ್ಕೆ ತುರ್ತಾಗಿ ಆಗಬೇಕಾಗಿರುವುದು ಅದರಿಂದ ರಕ್ಷಣೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸುವುದು. ಶಾಲಾ ಪಠ್ಯಪುಸ್ತಕಗಳಲ್ಲಿ ಸಿಡಿಲು ಎಂದರೇನು, ಸಿಡಿಲಿನ ಮುನ್ಸೂಚನೆಯನ್ನು ಹೇಗೆ ತಿಳಿದುಕೊಳ್ಳಬೇಕು, ಅದನ್ನು ಬೇರೆಯವರಿಗೆ ಹೇಗೆ ತಲುಪಿಸಬೇಕು, ರಕ್ಷಣೆಯ ಕ್ರಮಗಳೇನು... ಹೀಗೆ ಅನೇಕ ವಿಷಯಗಳನ್ನು ಮಕ್ಕಳಿಗೆ ಪಾಠದ ರೂಪದಲ್ಲಿ ಹೇಳಿದಾಗ ಸಹಜವಾಗಿಯೇ ಅದರ ಅನಾಹುತಗಳಿಂದ ತಪ್ಪಿಸಿಕೊಳ್ಳುವುದರ ಬಗ್ಗೆ ಅರಿವಿರುತ್ತದೆ.

ಸಾಮಾನ್ಯವಾಗಿ ಮಕ್ಕಳು ತಾವು ಓದುವ ವಿಷಯಗಳನ್ನು, ಅದರಲ್ಲೂ ವಿಶೇಷವಾಗಿ ಕುತೂಹಲಕಾರಿ ವಿಷಯಗಳನ್ನು ಮನೆಯಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗೆಯೇ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ‍್ಯಕ್ರಮಗಳನ್ನು ಹಾಕಿಕೊಳ್ಳುವುದು ಬಹಳ ಮುಖ್ಯ.

ಸಿಡಿಲೆಂಬುದು ಮೋಡಗಳಿಂದ ಚಿಮ್ಮುವ ಅತಿ ಉಷ್ಣತೆಯ ವಿದ್ಯುತ್ ಪ್ರವಾಹ. ಭೂಮಿಯ ಉಷ್ಣತೆ, ಮೋಡಗಳ ಸಾಂದ್ರತೆ, ಗಾಳಿಯಲ್ಲಿನ ತೇವದ ಅಂಶ ಮುಂತಾದವನ್ನು ಆಧರಿಸಿ ಸಿಡಿಲಿನ ಮುನ್ಸೂಚನೆಯನ್ನು ಕೊಡುವಷ್ಟು ತಾಂತ್ರಿಕತೆಯೇನೊ ಬೆಳೆದಿದೆ. ಆದರೆ ಆ ಮುನ್ಸೂಚನೆಯ ಸಂದೇಶವನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನರಿಗೆ ಪಸರಿಸುವುದು ಸವಾಲಿನ ವಿಷಯ. ರಾಜ್ಯದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿ ಸಿಡಿಲು ವಿಕೋಪದ ನಿರ್ವಹಣೆಗೆ ಶ್ರಮಿಸುತ್ತಿದೆ.

ಸಿಡಿಲು ತಿಳಿವಳಿಕೆ ಮತ್ತು ಸಂರಕ್ಷಣೆಯ ಸಾಮಾನ್ಯ ಸೂತ್ರಗಳು ಹೀಗಿವೆ: ಗುಡುಗು–ಸಿಡಿಲು ಸಹಿತ ಮಳೆಯ ಸಂದರ್ಭದಲ್ಲಿ ಬಯಲಿನಲ್ಲಿ ನಿಲ್ಲಬಾರದು. ಫೋನನ್ನು ಉಪಯೋಗಿಸಬಾರದು. ಲೋಹದ ಯಾವುದೇ ವಸ್ತುವನ್ನು ಹಿಡಿದುಕೊಂಡಿರಬಾರದು. ಯಾವ ಆಶ್ರಯವೂ ಸಿಗದಿದ್ದ ವೇಳೆ ತಲೆಯನ್ನು ಮೊಣಕಾಲು ಮಧ್ಯೆ ಇಟ್ಟು ಕುಳಿತುಕೊಳ್ಳಬೇಕು ಅಥವಾ ಅಂಗಾತ ಮಲಗಬೇಕು. ವಾಹನಗಳಲ್ಲಿದ್ದರೆ, ಅಲ್ಲಿಯೇ ಕುಳಿತಿರಬೇಕು. ದೂರದಲ್ಲೆಲ್ಲೋ ಗುಡುಗಿ ಮಳೆಯಾಗುತ್ತಿದೆ, ನನಗೇನೂ ಆಗದು ಎಂದು ಉದಾಸೀನ ಮಾಡದೆ ರಕ್ಷಣೆ ಮಾಡಿಕೊಳ್ಳಬೇಕು, ಏಕೆಂದರೆ ಸಿಡಿಲು 20 ಕಿ.ಮೀ.ವರೆಗೂ ಪ್ರವಹಿಸಬಲ್ಲದು.

ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ನಿರ್ವಹಣೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಒಂದು ಮಗ್ಗುಲಾದರೆ, ಇದೆಲ್ಲವನ್ನೂ ಅಳವಡಿಸಿಕೊಂಡು ಸಿಡಿಲಿನ ವಿಕೋಪದಿಂದ ರಕ್ಷಣೆ ಪಡೆಯುವುದು ವಾಸ್ತವದಲ್ಲಿ ಬಹಳಮುಖ್ಯ. ದೂರದ ಹೊಲದಲ್ಲಿ ಕೆಲಸ ಮಾಡುವ ರೈತರ ಮೊಬೈಲ್‌ಗೆ ಸಿಡಿಲಿನ ಸೂಚನೆಯೊಂದು ಬಂತೆಂದು ಇಟ್ಟುಕೊಳ್ಳೋಣ. ಅವನು ತಕ್ಷಣ ಓಡಿ ಮನೆ ಸೇರಿಕೊಳ್ಳಲಾದೀತೆ? ಕುರಿಗಾಹಿಯೊಬ್ಬ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಎಲ್ಲಿ ಹೋಗಿ ಆಶ್ರಯ ಪಡೆಯಬೇಕು? ಆದ್ದರಿಂದ ಸಿಡಿಲಿನಿಂದ ರಕ್ಷಿಸಿಕೊಳ್ಳಲು ಬೇರೇನಾದರೂ ಮಾರ್ಗ ಹುಡುಕಲೇಬೇಕು.

ಈ ದಿಸೆಯಲ್ಲಿ ಸರ್ಕಾರ ಹೀಗೊಂದು ಯೋಜನೆಗೆ ಮುಂದಾಗಬಹುದೇನೋ! ಅದೆಂದರೆ ಇಡೀ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಒಂದು ಚದರ ಕಿ.ಮೀ.ಗೆ ಒಂದರಂತೆ ಕಾಂಕ್ರೀಟಿನ ಸಣ್ಣ ತಂಗುದಾಣವನ್ನು ನಿರ್ಮಿಸುವುದು. ಯಾವುದೇ ಪ್ರದೇಶದಲ್ಲಿ ಗುಡುಗು–ಸಿಡಿಲು– ಮಳೆಯ ಸೂಚನೆ ಕಂಡೊಡನೆ ಒಂದೆರಡು ನಿಮಿಷದಲ್ಲಿ ಅಂತಹ ತಂಗುದಾಣಕ್ಕೆ ತಲುಪಿ ಆಶ್ರಯ ಪಡೆಯಬಹುದು.

ನಮ್ಮ ರಾಜ್ಯದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ರಾಜ್ಯದ ಒಟ್ಟು ವಿಸ್ತೀರ್ಣ 1,91,791 ಚದರ ಕೀ.ಮೀ. ಅದರಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಗಳ 6000 ಚ.ಕೀ.ಮೀ.ಗಳು, ಅರಣ್ಯ ಪ್ರದೇಶದ 43,356 ಚ.ಕಿ.ಮೀ. ಹಾಗೂ ಜಲಾವೃತ ಪ್ರದೇಶಗಳ 16,376 ಚ.ಕೀ.ಮೀ.ಗಳನ್ನು ಹೊರತುಪಡಿಸಿದರೆ ಉಳಿದದ್ದು ಸುಮಾರು 1.26 ಲಕ್ಷ ಚ.ಕೀ.ಮೀ. ಪ್ರತಿ ಚ.ಕೀ.ಮೀ. ಒಂದರಂತೆ ಈ ಭೂಪ್ರದೇಶದಲ್ಲಿ ಒಂದು ಚದರ ವಿಸ್ತೀರ್ಣದ (ಅಂದರೆ 10x10 ಅಡಿ) ಕಾಂಕ್ರೀಟಿನ, ತೆರೆದ, ಅಂದರೆ ಬಾಗಿಲಿರದ ತಂಗುದಾಣವನ್ನು ನಿರ್ಮಿಸಬಹುದು. ಇಂದಿನ ನಿರ್ಮಾಣದ ವೆಚ್ಚದಲ್ಲಿ ಒಂದು ಲಕ್ಷ ರೂಪಾಯಿಗೆ ಒಂದು ತಂಗುದಾಣ ಕಟ್ಟಬಹುದು. ರಾಜ್ಯದೆಲ್ಲೆಡೆ ಪ್ರತಿ ಚ.ಕೀ.ಮೀ.ಗೆ ಒಂದರಂತೆ ಒಂದು ತಂಗುದಾಣವೆಂದರೆ ಒಟ್ಟು 1.26 ಲಕ್ಷ ತಂಗುದಾಣಗಳಾಯಿತು ಮತ್ತು ಅವುಗಳಿಗೆ ತಗಲುವ ಒಟ್ಟು ಖರ್ಚು ₹ 1,260 ಕೋಟಿ. ಹೊರನೋಟಕ್ಕೆ ಈ ಮೊತ್ತ ದೊಡ್ಡದೆನಿಸಿದರೂ ರಾಜ್ಯವ್ಯಾಪಿ ಕೈಗೊಳ್ಳುವ ಇಂತಹ ಮಹತ್ತರ ರೈತಸ್ನೇಹಿ ಯೋಜನೆಯ ಮುಂದೆ ಇದು ಸಣ್ಣ ಮೊತ್ತವೇ. ಪ್ರತಿವರ್ಷ ಸಿಡಿಲಿಗೆ ಬಲಿಯಾಗುವ ಗ್ರಾಮೀಣ ಮಿತ್ರರನ್ನು ರಕ್ಷಿಸಲು ಇದೊಂದು ಶಾಶ್ವತವಾದ ಕಾರ‍್ಯಕ್ರಮವಾದೀತು. ’ಸಣ್ಣ ಹೆಜ್ಜೆ - ದೊಡ್ಡ ಪರಿಣಾಮ’ ಎಂಬ ಹಾಗೆ ಇಂತಹ ಯೋಜನೆಗಳಿಂದ ಕರ್ನಾಟಕದಲ್ಲಿ ಹೊಸಗಾಥೆಗೆ ನಾಂದಿ ಹಾಡಬಹುದು.


ಲೇಖಕ: ಭೂವಿಜ್ಞಾನ ಪ್ರಾಧ್ಯಾಪಕ ಹಾಗೂ ನಿರ್ದೇಶಕ, ಐ.ಕ್ಯೂ.ಎ.ಸಿ., ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT