ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶಾಲಾ ಶಿಕ್ಷಣ ಮುಕ್ತಗೊಳಿಸುವೆಡೆಗೆ

ಪರ್ಯಾಯ ಶಿಕ್ಷಣಕ್ಕೆ ಎನ್ಐಒಎಸ್ ಭರವಸೆಯ ಆಶಾಕಿರಣವಾಗಿದೆ
Last Updated 30 ಜುಲೈ 2021, 19:45 IST
ಅಕ್ಷರ ಗಾತ್ರ

ಚಿಕ್ಕಪುಟ್ಟ ವೃತ್ತಿನಿರತರು, ಅನೇಕ ಕೂಲಿ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ದೃಷ್ಟಿಯಿಂದ ಸಾವಿರಾರು ರೂಪಾಯಿ ಡೊನೇಶನ್ ನೀಡಿ ಅವರನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿದ್ದರು. ಕೋವಿಡ್ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ಕಾರಣ ಕೆಲವರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ, ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಆದರೆ ಕೆಲವು ಶಾಲೆಗಳಲ್ಲಿ ಬಾಕಿ ಶುಲ್ಕ ಪಾವತಿಸದೇ ವರ್ಗಾವಣೆ ಪತ್ರ ನೀಡುತ್ತಿಲ್ಲ.

ಇಂತಹ ಪೋಷಕರೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ತಮ್ಮ ಮಗನ ಶಾಲೆಯ ಶುಲ್ಕದ ಬಾಕಿ ಕಟ್ಟಲಾಗದೆ ವರ್ಗಾವಣೆ ಪತ್ರ ಪಡೆಯಲು ವಿಫಲರಾಗಿ, ಮಗನ ವಿದ್ಯಾಭ್ಯಾಸ ಮೊಟಕಾಗುವ ಸ್ಥಿತಿ ನೆನೆದು ಕಂಗಾಲಾಗಿದ್ದರು. ಮಗನ ಶಿಕ್ಷಣವನ್ನು ಮುಕ್ತ ಶಾಲಾ ಶಿಕ್ಷಣದ ರಾಷ್ಟ್ರೀಯ ಸಂಸ್ಥೆಯಲ್ಲಿ (National Institute of Open Schooling- NIOS) ಮುಂದುವರಿಸುವ ಅವಕಾಶ ಇರುವ ವಿಚಾರ ತಿಳಿದು, ಅದರಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಕ್ರಮ ಕೈಗೊಂಡು ನಿಶ್ಚಿಂತರಾದರು.

ಅನಿವಾರ್ಯ ಕಾರಣಗಳಿಂದ ಶಾಲೆಗೆ ದಾಖಲಾಗದ, ಶಾಲೆ ಬಿಟ್ಟ ಮಕ್ಕಳಿಗೆ ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಶಿಕ್ಷಣ ಮುಂದುವರಿಸಲು ಕೇಂದ್ರ ಸರ್ಕಾರದಿಂದ ಸ್ಥಾಪಿತವಾದ ಎನ್ಐಒಎಸ್ ಪರಿಹಾರವಾಗಬಲ್ಲದು ಎಂಬ ವಿಷಯ ಅನೇಕರಿಗೆ ತಿಳಿಯದು. ಮಕ್ಕಳು ತಮ್ಮ ವಯೋಮಾನಕ್ಕೆ ಅನುಗುಣವಾಗಿ ಶಿಕ್ಷಣ ಹಾಗೂ ವೃತ್ತಿ ಸಂಬಂಧಿತ ಕೌಶಲಗಳ ಗಳಿಕೆಗೆ ಎನ್ಐಒಎಸ್ ಭರವಸೆಯ ಆಶಾಕಿರಣವಾಗಿದೆ. 1979ರಲ್ಲಿ ಸಿಬಿಎಸ್ಇ ಅಡಿ ಕಾರ್ಯನಿರ್ವಹಣೆ ಆರಂಭಿಸಿದ ಎನ್ಐಒಎಸ್, 1989ರ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ಶಾಲಾ ಶಿಕ್ಷಣದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡದಾದ ಮುಕ್ತ ಕಲಿಕಾ ವ್ಯವಸ್ಥೆಯನ್ನು ಹೊಂದಿರುವ ಸಂಸ್ಥೆಯಿಂದ ದೇಶದಾದ್ಯಂತ ಈವರೆಗೆ 27 ಲಕ್ಷಕ್ಕೂ ಅಧಿಕ ಜನ ವಿವಿಧ ಹಂತಗಳ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ– 2020ರಲ್ಲಿ ಎನ್ಐಒಎಸ್ ಜಾಲವನ್ನು ವಿಸ್ತರಿಸಿ ಸಶಕ್ತಗೊಳಿಸುವ, ರಾಜ್ಯ ಹಂತದಲ್ಲಿಯೂ ಮುಕ್ತ ಶಿಕ್ಷಣ ನೀಡುವ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾವ ಇದೆ. ಪ್ರಸ್ತುತ ಮೈಸೂರಿನ ಜೆಎಸ್ಎಸ್ ಸಂಸ್ಥೆಯು ಹತ್ತನೇ ತರಗತಿಗೆ ಮುಕ್ತ ಶಿಕ್ಷಣ ನೀಡುವ ಕೇಂದ್ರವಾಗಿದ್ದು, ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಯ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ.

ಎನ್ಐಒಎಸ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಎ, ಬಿ, ಸಿ ಎಂಬ ಮೂರು ಹಂತಗಳಲ್ಲಿ ನೀಡಲಾಗುತ್ತದೆ. ಸಾಮಾನ್ಯ ಶಾಲೆಗಳ 3ನೇ ತರಗತಿಗೆ ಸಮನಾದ ‘ಎ’ ಹಂತಕ್ಕೆ 7+ ವರ್ಷ ಆದವರು, 5ನೇ ತರಗತಿಗೆ ಸಮನಾದ ‘ಬಿ’ ಹಂತಕ್ಕೆ 9+ ವರ್ಷ ಆದವರು ಮತ್ತು 8ನೇ ತರಗತಿಗೆ ಸಮನಾದ ‘ಸಿ’ ಹಂತಕ್ಕೆ 12+ ವರ್ಷ ಆದವರು ಪ್ರವೇಶ ಪಡೆಯಬಹುದಾಗಿದೆ. ‘ಸಿ’ ಹಂತ ಪೂರೈಸಿದವರು 10ನೇ ತರಗತಿಯ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು ಅಥವಾ 14+ ವರ್ಷ ಆದ ಯಾವುದೇ ಪೂರ್ವ ವಿದ್ಯಾರ್ಹತೆ ಇಲ್ಲದ ಹದಿಹರೆಯದವರು ಹಾಗೂ ವಯಸ್ಕರು ‘ಸ್ವ-ಕಲಿಕೆಗೆ ಸಮರ್ಥನಾಗಿದ್ದೇನೆ’ ಎಂಬ ಘೋಷಣೆಯೊಂದಿಗೆ ಹತ್ತನೇ ತರಗತಿಗೆ ನೇರ ಪ್ರವೇಶ ಹೊಂದಬಹುದು. 15+ ವರ್ಷ ಆಗಿದ್ದು ಎನ್ಐಒಎಸ್‌ನಿಂದ ಅಥವಾ ದೇಶದ ಯಾವುದೇ ಅಧಿಕೃತ ಬೋರ್ಡ್‌ನಲ್ಲಿ ಹತ್ತನೇ ತರಗತಿ ಪಾಸಾದವರು 12ನೇ ತರಗತಿಗೆ ಸಮನಾದ ಕೋರ್ಸ್‌ಗೆ ದಾಖಲಾಗಲು ಅವಕಾಶ ಇದೆ.

ಎಲ್ಲಾ ಕೋರ್ಸ್‌ಗಳಲ್ಲಿ ಶೈಕ್ಷಣಿಕ ವಿಷಯಗಳ ಜೊತೆ ಕೃಷಿ, ವಾಣಿಜ್ಯ, ವ್ಯಾಪಾರ, ಎಂಜಿನಿಯರಿಂಗ್, ತಂತ್ರಜ್ಞಾನ, ಕಂಪ್ಯೂಟರ್ ಸಂಬಂಧಿತ ವೃತ್ತಿಪರ ಕೋರ್ಸ್‌ಗಳನ್ನು ಕಲಿಯಲು ಅವಕಾಶ ಇದೆ. ಎನ್ಐಒಎಸ್ ಕೋರ್ಸ್‌ಗಳಲ್ಲಿ 12ನೇ ತರಗತಿ ಪ್ರಮಾಣಪತ್ರ ಪಡೆದವರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಇದೆ.

ಕೋವಿಡ್‌ನಿಂದ ಉಂಟಾಗಿರುವ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗೆ ಮುಕ್ತ ಶಿಕ್ಷಣದ ಜಾಲವನ್ನು ಸದುಪಯೋಗಪಡಿಸಿಕೊಳ್ಳಲು ಇದು ಸಕಾಲ. ವಿವಿಧ ಕಾರಣಗಳಿಂದ ಶಾಲೆ ಬಿಟ್ಟ ಅನೇಕರು ಎನ್ಐಒಎಸ್ ಮೂಲಕ ಶಿಕ್ಷಣ ಪಡೆದು ವೈದ್ಯ, ಎಂಜಿನಿಯರ್, ಉದ್ಯಮಿ, ಉದ್ಯೋಗಿ ಆದ ಯಶಸ್ಸಿನ ಉದಾಹರಣೆಗಳು ಎನ್ಐಒಎಸ್ ಜಾಲತಾಣದಲ್ಲಿವೆ.

ಶಾಲೆಗೆ ಭೌತಿಕವಾಗಿ ಹಾಜರಾಗಿಯೇ ಕಲಿಯಬೇಕು ಎಂಬ ಮಿತಿಯಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈ ರೀತಿ ಕಲಿಯುವ ಹಕ್ಕಿನಿಂದ ಏಕೆ ವಂಚಿತರಾಗಬೇಕು ಎಂದು ತತ್ವಶಾಸ್ತ್ರಜ್ಞ ಇವಾನ್ ಇಲ್ಲಿಚ್‍ ಅವರು ತಮ್ಮ ‘ಡಿ–ಸ್ಕೂಲಿಂಗ್ ಸೊಸೈಟಿ’ ಪುಸ್ತಕದಲ್ಲಿ ಪ್ರಶ್ನಿಸುತ್ತಾರೆ. ಎಲ್ಲರೂ ಶಿಕ್ಷಣ ಪಡೆಯಲು ಸಾಧ್ಯವಾಗುವಂತಹ ಶಾಲೆಗಳ ರೀತಿಯಲ್ಲಿ ಕಾರ್ಯನಿರ್ವಹಿಸುವ ಪರ್ಯಾಯ ಸಂಸ್ಥೆಗಳನ್ನು ಕಟ್ಟುವ ಅವಶ್ಯಕತೆಯನ್ನು ಇಲ್ಲಿಚ್ ಪ್ರತಿಪಾದಿಸುತ್ತಾರೆ.

ಅದರಂತೆ, ಉತ್ತಮ ಮೂಲ ಸೌಕರ್ಯ ಹೊಂದಿ ಔಪಚಾರಿಕ ಶಿಕ್ಷಣ ನೀಡುತ್ತಿರುವ ದೊಡ್ಡ ಶಾಲೆಗಳು ಎನ್ಐಒಎಸ್ ಜೊತೆ ಕೈಜೋಡಿಸಿ, ಶಿಕ್ಷಣವಂಚಿತ ಮಕ್ಕಳು ಶಿಕ್ಷಣ ಮುಂದುವರಿಸಲು ಸಾಧ್ಯವಾಗುವಂತೆ ಕಾರ್ಯನಿರ್ವಹಿಸಲು ಅಗತ್ಯವಾದ ವ್ಯವಸ್ಥೆ, ಅನುಕೂಲಗಳನ್ನು ಕಲ್ಪಿಸಬೇಕಿದೆ.

ಲೇಖಕ: ಹಿರಿಯ ಸಹಾಯಕ ನಿರ್ದೇಶಕ,ಡಿ.ಎಸ್.ಇ.ಆರ್.ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT