ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊಡಕು’ ಎಂಬ ಶುಭ ಹಾರೈಕೆ

ಎಲ್ಲ ತೊಡಕುಗಳು ನಿವಾರಣೆಯಾಗಲಿ ಎನ್ನುವುದು, ಯುಗಾದಿಯ ಮರುದಿನ ಆಚರಿಸುವ ವರ್ಷದ ತೊಡಕುವಿನ ಅಂತರಾರ್ಥ
Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಯುಗಾದಿ ಮರುದಿನದ ‘ವರ್ಷ ತೊಡಕು’ವಿನ ಪದ ನಿಷ್ಪತ್ತಿ ಮತ್ತು ಆಚರಣೆಯ ಬಗ್ಗೆ ಡಾ. ಟಿ.ಗೋವಿಂದರಾಜು ಅವರು ಜನಪದ ಹಿನ್ನೆಲೆಯನ್ನು ವಿವರಿಸುತ್ತ (ವಾ.ವಾ.,ಏ. 16), ‘ಕೆಲವರು ಹೊಸ ವರ್ಷದ ಆರಂಭದಲ್ಲಿ ಸೇವಿಸುವ ಅಡಗು (ಅಂದರೆ ಮಾಂಸ) ಎಂಬುದೇ ಕಾಲಾಂತರದಲ್ಲಿ ಅವರವರಿಗೆ ತೋಚಿದ ರೂಪದ ಅಪಭ್ರಂಶಗಳಾಗಿದೆ. ಇದು ಮಾಂಸ ಪ್ರಧಾನವಾದುದೆಂಬುದನ್ನು ಗ್ರಹಿಸಿದರೆ ಮಿಕ್ಕದ್ದು ತಾನೇ ಅರ್ಥವಾಗುತ್ತದೆ’ ಎಂದಿದ್ದಾರೆ. ಅವರ ಈ ಅಭಿಪ್ರಾಯ ಚರ್ಚಾಸ್ಪದವಾದುದು. ಈ ಬಗ್ಗೆ ಕೊಂಚ ವಿವರ ಅವಶ್ಯಕ.

ಯುಗಾದಿ ಎಂಬುದು ಒಂದು ಹಬ್ಬಕ್ಕಿಂತಲೂ ಮಿಗಿಲಾಗಿ ಕಾಲಗಣನೆಯ ಒಂದು ಘಟ್ಟ ಅಥವಾ ವಿಧಾನ. ಹಿಂದೂ ಸಂಪ್ರದಾಯದಲ್ಲಿ ಕಾಲಗಣನೆಯ ಈ ದಿನವನ್ನು (ಇದರಲ್ಲಿ ಎರಡು ಬಗೆಗಳಿವೆ- ಚಾಂದ್ರಮಾನ ಮತ್ತು ಸೌರಮಾನ) ಯುಗಾದಿ ಎಂಬ ಹೆಸರಿನಲ್ಲಿ ಪ್ರಥಮ ದಿನವನ್ನಾಗಿ ಆಚರಿಸುತ್ತಾರೆ. ಅಂದು ಯಾವುದೇ ಒಂದು ನಿರ್ದಿಷ್ಟ ದೇವರ ಪೂಜೆ ಇರುವುದಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಮುಖ್ಯವಾಗಿ ಪ್ರಕೃತಿ ಆಧಾರಿತವಾದ ಆಚರಣೆ ಇರುತ್ತದೆ.

ಯುಗಾದಿಯ ಮಾರನೆಯ ದಿನವನ್ನು ಕೆಲವೆಡೆ ‘ವರ್ಷ ತೊಡಕು’ ಎಂದೂ ಇನ್ನು ಕೆಲವು ಕಡೆಗಳಲ್ಲಿ ‘ವರ್ಷ ತುಡುಕು’, ‘ವರ್ಷ ದುಡುಕು’ ಎಂದೂ ಮತ್ತು ‘ವರ್ಷದ ಹೆಚ್ಚು’ ಎಂದೂ ಹೆಸರಿಸಿ ಆಚರಿಸುವುದುಂಟು. ಆ ದಿನ, ಗೋವಿಂದರಾಜು ಅವರು ಹೇಳಿರುವಂತೆ ಮಾಂಸಾಹಾರಿಗಳ ಮನೆಯಲ್ಲಿ ಮಾಂಸ ಪ್ರಧಾನವಾದ ಅಡುಗೆ ಇದ್ದರೆ, ಸಸ್ಯಾಹಾರಿಗಳ ಮನೆಯಲ್ಲಿ ಪಾಯಸ ಪ್ರಧಾನವಾದ ಸಿಹಿ ಅಡುಗೆ ಮಾಡುವುದು ವಾಡಿಕೆ (ಅವರು ಸ್ಥಿತಿವಂತರಾಗಿ ಇದ್ದರೆ ಮಾತ್ರ ಇದು ಇಬ್ಬರಿಗೂ ಅನ್ವಯಿಸುತ್ತದೆ). ಈ ‘ತೊಡಕು’ ಎಂಬ ಪದದ ನಿಷ್ಪತ್ತಿಯನ್ನು ‘ಅಡಗು’ (ಮಾಂಸ) ಎಂಬ ಪದದ ಮೂಲದಲ್ಲಿ ಕಂಡುಕೊಳ್ಳಲು ತಮ್ಮ ಬರಹದಲ್ಲಿ ಅವರು ಪ್ರಯತ್ನಿಸಿದ್ದಾರೆ.

ಪದ ಸಾಮ್ಯದ ವಾಸ್ತವ ದೃಷ್ಟಿಯಿಂದ ನೋಡಿ ದರೆ ‘ಅಡಗು’ವಿನಿಂದ ‘ತೊಡಕು’ ಅಪಭ್ರಂಶವಾಗಿ ಹೊಮ್ಮಿಬರುವುದು ದೂರಾನ್ವಯ ಮತ್ತು ಭಾಷಾ ಶಾಸ್ತ್ರದ ಪ್ರಕಾರ ಅಸಂಭವ. ಅಲ್ಲದೆ ಇವೆರಡೂ ಅಚ್ಚ ಕನ್ನಡ ಪದಗಳೇ ಆಗಿರುವುದರಿಂದ ರೂಪಾಂತರಕ್ಕೆ ಅವಕಾಶ ಕಡಿಮೆ ಅಥವಾ ಅದರ ಅವಶ್ಯಕತೆ ಇಲ್ಲ. ಯುಗಾದಿಯ ಮಾರನೆಯ ದಿನ ಹೊಸ ವರ್ಷದ ಸಂಭ್ರಮದ ದಿನವಾಗಿ, ಕಷ್ಟಗಳನ್ನು ಮರೆಯುವ ಕುರುಹಾಗಿ ಅನೇಕ ಬಗೆಯ ಮನರಂಜನೆಯ ಕಾರ್ಯಕ್ರಮಗಳು ಈ ಹಿಂದೆ ಇದ್ದವು. ಉದಾಹರಣೆಗೆ, ಗಟ ಆಟ (ಚೌಕಾಬಾರ ಅಥವಾ ಹುಣಸೆಪಚ್ಚಿ ಆಟ), ಹುಲಿಕಲ್ಲಿನ ಆಟ, ತೂಗುಯ್ಯಾಲೆ ಆಟ, ತೆಂಗಿನಕಾಯಿ ಒಡೆಯುವುದು ಮುಂತಾದವು (ಆಮೇಲೆ ಜೂಜು, ಇಸ್ಪೀಟಾಟದ ದಂಧೆ ಶುರುವಾಯಿತು). ಆ ದಿನದಂದು ವರ್ಷದ ತೊಡಕು, ಅಂದರೆ ಅಡ್ಡಿ, ಕಷ್ಟಗಳು ದೂರವಾಗಲೆಂದು ಹಾರೈಸುವ ಒಂದು ಆಶಾಭಾವವಾಗಿ ‘ತೊಡಕು’ ಅನ್ನು ಆಚರಿಸುವ ಪದ್ಧತಿ ಜಾರಿಗೆ ಬಂದಿದೆಯಲ್ಲದೆ ‘ಅಡಗು’ವಿನ ಅಥವಾ ‘ಮಾಂಸ’ ಸೇವನೆಯ ಕಾರಣದಿಂದಲ್ಲ.

ಇದೊಂದು ಭಾವಸಂಬಂಧಿಯಾದ ಪದ ಅನ್ನಬಹುದು. ಯಾಕೆಂದರೆ, ಮಾಂಸ ಸೇವನೆ ಇಲ್ಲದಿರುವ ಅನೇಕ ಜನಸಮುದಾಯಗಳು ಕೂಡ ಈ ‘ತೊಡಕು’ ಅನ್ನು ಆಚರಿಸುತ್ತವೆ. ‘ತೊಡಕು’ವಿಗೆ ‘ಮಾಂಸ’ ಎಂಬ ಅರ್ಥ ತೆಗೆದುಕೊಂಡರೆ, ಅಲ್ಲಿ ಈ ಪದ ಬಿದ್ದು ಹೋಗುತ್ತದೆ. ಅಂದರೆ, ಇಡೀ ಜನಪದ ಜನಸಮುದಾಯಕ್ಕೆ ಅನ್ವಯವಾಗುವುದಿಲ್ಲ. ಹಾಗಾಗಿ ತೊಡಕು= ಮಾಂಸ ಎಂಬುದು ಅರೆಸತ್ಯವಾಗುತ್ತದೆ. ಆದರೆ, ಭಾಷಾಶಾಸ್ತ್ರದಲ್ಲಿ ಈ ಬಗೆಯ ಅರೆಸತ್ಯಗಳಿಗೆ ಅವಕಾಶವಿರುವುದಿಲ್ಲ.

ಇನ್ನು ‘ವರ್ಷದ ಹೆಚ್ಚು’ ಎಂಬ ಪದದ ಬಗ್ಗೆ. ಹೆಚ್ಚು ಎಂಬುದು ಜನರ ಸಂಪತ್ತು, ಆಯುರಾರೋಗ್ಯ, ಸುಖಸಂಪತ್ತು ವೃದ್ಧಿಸಲಿ ಎಂಬರ್ಥದಲ್ಲಿ ಬಳಕೆಯಾಗು ತ್ತದೆ. ವರ್ಷಕಾಲದ ಮಾರನೆಯ ದಿನ ಹಾಗೆ ಹಾರೈಸು ವುದನ್ನು ‘ವರ್ಷದ ಹೆಚ್ಚು’ ಎಂದು ಹೆಸರಿಸಲಾಗಿದೆಯಲ್ಲದೆ ಅನ್ಯತ್ರ ಅಲ್ಲ. ಈ ಹಿಂದೆ ನಮ್ಮ ಹಳ್ಳಿಗಾಡು ಗಳಲ್ಲಿ ದವಸಧಾನ್ಯಗಳನ್ನು ಅಳೆಯುವಾಗ ಮೊದಲನೆಯ ಅಳತೆಯನ್ನು ‘ಒಂದು’ ಎಂಬುದಕ್ಕೆ ‘ಹೆಚ್ಚು’, ‘ಹೆಚ್ಚಳ’ ಎಂದೂ ‘ಮೂರು’ ಎಂಬುದಕ್ಕೆ ‘ಮತ್ತೊಂದು’ ಎಂದು ಹೆಸರಿಸಿ ಅಳತೆ ಮಾಡುತ್ತಿದ್ದುದು ವಾಡಿಕೆಯಲ್ಲಿತ್ತು (ಇದು ಪ್ರಾದೇಶಿಕವಾಗಿ ಭಿನ್ನ ವಾಗಿಯೂ ಇತ್ತು). ಒಟ್ಟಾರೆ ಇವೆಲ್ಲ ಮನುಷ್ಯ ಬದುಕಿಗೆ ಒಳಿತನ್ನು ಬಯಸುವ ಭಾವಸಂಬಂಧಿಯಾದ ಪದಗಳು ಮತ್ತು ಆಚರಣೆಗಳಾಗುತ್ತವೆಯೇ ಹೊರತು ಬೇರೇನಲ್ಲ.

ಅದೇ ‘ಹೆಚ್ಚುಕಟ್ಟಳೆ’ ಎಂಬುದು ನಮ್ಮ ಜನರ ಬಾಯಲ್ಲಿ ‘ತಿಥಿ’ಗೆ ಬದಲಾಗಿ ಬಳಕೆಯಾಗುತ್ತಿದ್ದ, ಇಂದಿಗೂ ಬಳಕೆಯಾಗುತ್ತಿರುವ ಪದವಾಗಿದೆ. ಇಲ್ಲಿ ‘ಕಟ್ಟಳೆ’ಗಳು ಅಂದರೆ ‘ನಿಯಮ’ಗಳು ಹೆಚ್ಚು ಎಂಬ ಅರ್ಥವಿದೆ. ಇಲ್ಲಿಯೂ ‘ಹೆಚ್ಚಿನ’ ಮನಃಸ್ಥಿತಿಯೇ ಕೆಲಸ ಮಾಡಿದರೂ ಪರಿಕಲ್ಪನೆ ಬೇರೆಯಾಗುತ್ತದೆ.

ಇಡಿಯಾಗಿ ಹೇಳುವುದಾದರೆ, ವರ್ಷದ ತೊಡಕೆಲ್ಲ ಈ ದಿನ (ವರ್ಷದ ತೊಡಕುವಿನ ದಿನ) ನಿವಾರಣೆಯಾಗಿ, ಜನಮನಕ್ಕೆ ಸುಖಸಮೃದ್ಧಿ ಬರಲಿ ಎಂಬುದು ಇದರ ಅಂತರಾರ್ಥವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ನೋಡಿದಾಗ ತೊಡಕು, ತಡಕು... ಈ ಎಲ್ಲ ಪದಗಳ ಮೂಲ ಅಡಗು=ಮಾಂಸ ಎಂದಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT