ಸೋಮವಾರ, ಸೆಪ್ಟೆಂಬರ್ 28, 2020
21 °C

ಸಂಗತ | ವರ್ಚುವಲ್‌ ಕೋರ್ಟ್‌ ಮತ್ತು ಕಲಾಪ ಕ್ಷಮತೆ

ಕೆ.ಬಿ.ಕೆ.ಸ್ವಾಮಿ Updated:

ಅಕ್ಷರ ಗಾತ್ರ : | |

ವರ್ಚುವಲ್ ನ್ಯಾಯಾಲಯ

‘ಮುಕ್ತ ನ್ಯಾಯಾಲಯಗಳಲ್ಲಿನ ವಿಚಾರಣೆಯು ವಸ್ತುನಿಷ್ಠ, ಆರೋಗ್ಯಕರ ನ್ಯಾಯವಿತರಣಾ ವ್ಯವಸ್ಥೆಗೆ ಅನಿವಾರ್ಯ. ರಹಸ್ಯದ ಕತ್ತಲೆಯಲ್ಲಿನ ವಿಚಾರಣೆಗಳಲ್ಲಿ ವಿಧವಿಧದ ಕೆಟ್ಟ ಹಿತಾಸಕ್ತಿಗಳು ವಿಜೃಂಭಿಸುತ್ತಿರುತ್ತವೆ. ಪ್ರಚಾರವೇ ನ್ಯಾಯವಿತರಣಾ ವ್ಯವಸ್ಥೆಯ ಆತ್ಮ. ಇದು ನ್ಯಾಯ ವಿತರಕನ ಆತ್ಮಾವಲೋಕನಕ್ಕೂ ಊರೊಟ್ಟಿನ ವಿಮರ್ಶೆಗೂ ಒಳಗಾಗುತ್ತದೆ’ ಎಂದು ತತ್ವಜ್ಞಾನಿ ಜೆರ್ಮಿ ಬೆಂಥಾಮ್ ಪ್ರತಿಪಾದಿಸಿದ್ದರು.

ಸಂಧಾನ, ಮಧ್ಯಸ್ಥಿಕೆ, ಲೋಕ್‌ ಅದಾಲತ್ ತರಹದ ವಿಭಿನ್ನ ರೀತಿಯ ಚಟುವಟಿಕೆಗಳು ನ್ಯಾಯಾಲಯದ ಸಾಂಪ್ರದಾಯಿಕ ವಿಚಾರಣೆಗೆ ಮಹತ್ವದ ಬದಲಾವಣೆಗಳನ್ನು ತಂದಿವೆ. ನ್ಯಾಯ ವಿತರಣೆಯ ವೇಗವನ್ನು ಹೆಚ್ಚಿಸಲು 2005ರಲ್ಲಿ ಇ- ಕೋರ್ಟ್‌ ಯೋಜನೆಯನ್ನು ದೇಶವ್ಯಾಪಿ ಜಾರಿಗೊಳಿಸಲಾಯಿತು. 21,000 ನ್ಯಾಯಾಲಯಗಳ ಪೈಕಿ 14,249 ನ್ಯಾಯಾಲಯಗಳನ್ನು
2015ರ ವೇಳೆಗೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದೆ. ನ್ಯಾಯಾಲಯದ ಆವರಣದಲ್ಲಿ ಕಿಯೋಸ್ಕ್‌ಗಳು, ಮೊಬೈಲ್ ಆ್ಯಪ್, ರಿಯಲ್ ಟೈಮ್ ಬೇಸಿಸ್‌ನಲ್ಲಿ ಮಾಹಿತಿ ಒದಗಿಸುವ ವೆಬ್ ಜಾಲ ಬಳಕೆಗೆ ಬಂದಿವೆ. ಆಯ್ದ ಕ್ರಿಮಿನಲ್ ಪ್ರಕರಣಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯೂ ನಡೆಯುತ್ತಿದೆ.

ಉನ್ನತ ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ ಮಾಡುವ ಮತ್ತು ವಿಚಾರಣಾ ನ್ಯಾಯಾಲಯಗಳ ಕಲಾಪಗಳನ್ನು ಚಿತ್ರೀಕರಿಸುವ ದಿಸೆಯಲ್ಲಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದಲ್ಲಿನ ತೀರ್ಪು ಮಹತ್ವದ್ದೆನಿಸಿದೆ. ಸಾಮಾನ್ಯವಾಗಿ ಎಲ್ಲಾ ನ್ಯಾಯಾಲಯಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ. ಆದರೆ, ಮೂಲ ಸೌಕರ್ಯದ ಕೊರತೆಯಿಂದ ಅನೇಕ ಸಂದರ್ಭಗಳಲ್ಲಿ ಅದು ಸಾಧ್ಯವಾಗದೇ ಇರಬಹುದು.

ಸುಧಾರಣೆಗಳಿಗೆ ವಕೀಲರೂ ಹಂತಹಂತವಾಗಿ ಒಗ್ಗಿಕೊಂಡಿದ್ದಾರೆ. ಕೋವಿಡ್ ಪರಿಣಾಮವಾಗಿ ನ್ಯಾಯಾಲಯಗಳಲ್ಲಿನ ಭೌತಿಕ ಕಲಾಪಗಳು ನಿಂತಿವೆ. ಸುಪ್ರೀಂ ಕೋರ್ಟ್‌ನಿಂದ ತಾಲ್ಲೂಕು ಮಟ್ಟದ ನ್ಯಾಯಾಲಯಗಳವರೆಗೂ ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ಒತ್ತು ನೀಡುತ್ತಿರುವುದು ಸಾಂಪ್ರದಾಯಿಕ ಶೈಲಿಯ ವಕೀಲಿ ಕಸುಬಿಗೆ ದೊಡ್ಡ ಪೆಟ್ಟು ನೀಡಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು, ಸಾರ್ವಜನಿಕ ಹಿತಾಸಕ್ತಿ ಅರ್ಜಿ, ತುರ್ತು ಎಂದು ಭಾವಿಸಲಾದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸಿವಿಲ್, ಕ್ರಿಮಿನಲ್, ಅಪಘಾತ ಪರಿಹಾರ, ಇನ್ನಿತರ ಪ್ರಕರಣಗಳಲ್ಲಿ ಸಾಕ್ಷಿಗಳ ಭೌತಿಕ ಹಾಜರಾತಿಯನ್ನು ಕಡೆಗಣಿಸಲಾಗದು. ಇಂತಹ ಪ್ರಕರಣಗಳ ವಿಚಾರಣೆಗಳು ಸಂಪೂರ್ಣವಾಗಿ ನಿಂತಿವೆ. ಸೋಂಕಿನ ಭೀತಿಯಿಂದ ಪ್ರಕರಣಗಳ ಭೌತಿಕ ವಿಚಾರಣೆಗೆ ನ್ಯಾಯಾ ಲಯಗಳು ಹಿಂದೇಟು ಹಾಕುತ್ತಿವೆ. ವರ್ಚುವಲ್ ಕೋರ್ಟ್‌ಗಳ ಮೇಲಿನ ಅವಲಂಬನೆ ಸೀಮಿತ ಫಲಿತಾಂಶವನ್ನು ಮಾತ್ರ ನೀಡಬಲ್ಲದು. ಅದನ್ನೇ ಪ್ರಧಾನವಾಗಿ ಬಳಸಲು ಸೂಕ್ಷ್ಮ ತೊಡಕುಗಳಿವೆ.

ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ಸಾಕ್ಷಿದಾರರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ನ್ಯಾಯಾಲಯವು ಸಾಕ್ಷ್ಯದ ಮೌಲ್ಯವನ್ನು ಗುರುತಿಸುವ ಪರಿಪಾಟವಿದೆ. ಇಂತಹ ಸೂಕ್ಷ್ಮಗಳನ್ನು ವಿಡಿಯೊ ಕಲಾಪದಲ್ಲಿ ಕಂಡುಕೊಳ್ಳಲಾಗದು. ಕೌಟುಂಬಿಕ ವಿವಾದ, ಕಾನೂನು ಸಂಘರ್ಷಕ್ಕೀಡಾದ ಎಳೆಯರು, ಲೈಂಗಿಕ ದೌರ್ಜನ್ಯ ಮತ್ತು ಸ್ತ್ರೀಯರ ಗುರುತನ್ನು ಗೋಪ್ಯವಾಗಿ ಇಡಬೇಕಾದಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರು ಖಾಸಗಿಯಾಗಿ ನಡೆಸುವ ಇನ್- ಕ್ಯಾಮೆರಾ ವಿಚಾರಣಾ ಪದ್ಧತಿಯನ್ನು ಕೈಬಿಟ್ಟು ವಿಡಿಯೊ ಕಲಾಪ ನಡೆಸಲು ಶಾಸನಾತ್ಮಕ ತೊಡಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮೊಟಕಾದ, ಸಾರ್ವಜನಿಕ ಹಿತಾಸಕ್ತಿಯ, ತುರ್ತು ಪರಿಹಾರ ಬಯಸುವ ಮತ್ತು ರಾಜಿಯಾಗಬಹುದಾದ ಪ್ರಕರಣಗಳಲ್ಲಿ ವ್ಯವಹರಿಸಿದಂತೆ ಇತರ ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಬಗೆಹರಿಸಲಾಗದು. ಭೌತಿಕ ಕಲಾಪಗಳು ನಿಂತಷ್ಟೂ ವಕೀಲರ ಕಸುಬು ಕೂಡ ಬಿಕ್ಕಟ್ಟಿಗೆ ತುತ್ತಾಗುತ್ತದೆ. ನ್ಯಾಯ ವಿತರಣಾ ವ್ಯವಸ್ಥೆಯ ಭಾಗವಾದ ನ್ಯಾಯಾಧೀಶರು, ಸರ್ಕಾರಿ ವಕೀಲರು, ನ್ಯಾಯಾಲಯದ ಸಿಬ್ಬಂದಿಗೆ ಗಳಿಕೆಯ ಮತ್ತು ಸಾಂಸ್ಥಿಕ ಭದ್ರತೆಯಿದೆ. ಪರ್ಯಾಯ ಉಪಾಯಗಳನ್ನು ಕಂಡುಕೊಂಡು ಶೀಘ್ರದಲ್ಲೇ ಭೌತಿಕ ಕಲಾಪಗಳನ್ನು ಆರಂಭಿಸದೇ ಹೋದರೆ ಒಂದು ಸಮೂಹದ ಬದುಕುವ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಅಂದಾಜಿನ ಪ್ರಕಾರ, ದೇಶದ ಒಟ್ಟು ಜಿಡಿಪಿಯ ಕುಸಿತಕ್ಕೆ 0.5 ಪ್ರತಿಶತದಷ್ಟು, ಕಟ್ಲೆಗಳ ವಿಚಾರಣೆಯ ವಿಳಂಬ ಕಾರಣ ಎಂಬ ಅಭಿಪ್ರಾಯವಿದೆ.

ವಿಪರ್ಯಾಸವೆಂದರೆ, ದೇಶವು ಅಂತರ್ಜಾಲದ ವೇಗದಲ್ಲಿ ಪ್ರಪಂಚದಲ್ಲಿ 131ನೆಯ ಸ್ಥಾನದಲ್ಲಿದೆ. ಇದನ್ನು ನೆಚ್ಚಿಕೊಂಡು ಪೂರ್ಣಾವಧಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪಗಳನ್ನು ನಡೆಸುವುದು ನಗೆಪಾಟಲಿಗೆ ಗುರಿಯಾಗುತ್ತದೆ. ಯಾರ ನೆರವನ್ನೂ ಯಾಚಿಸದೆ ವೈಯಕ್ತಿಕವಾಗಿ ಪ್ರಕರಣವನ್ನು ನಡೆಸುವವರು ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಕಾನೂನು ಹೋರಾಟ ಮಾಡುವವರಿಗೆ ದಿಢೀರ್ ಬದಲಾವಣೆಗಳಿಂದ ತೀವ್ರ ತೊಡಕಾಗುತ್ತದೆ.

ನ್ಯಾಯಾಲಯಗಳಿಗೆಂದೇ ಅನಿಯಮಿತ ಮತ್ತು ಸಮರ್ಪಿತ ಬ್ರಾಡ್ ಬ್ಯಾಂಡ್ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಒಳಿತು.

ಸಂಕೀರ್ಣ ಪ್ರಜಾಪ್ರಭುತ್ವದಲ್ಲಿ ಭೌತಿಕ ಯಾಲಯಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಅಪಾಯಕಾರಿ. ಲಾಕ್‌ಡೌನ್‌ನಿಂದ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳ ವಿಲೇವಾರಿಯಾಗದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ. ಹೀಗೆ ಬಾಕಿ ಉಳಿದಿರುವ ಲಕ್ಷಾಂತರ ಕಡತಗಳ ಹಿಮಾಲಯವನ್ನು ಏರಿ ನ್ಯಾಯದ ಹೊಂಗಿರಣವು ಹೇಗೆ ಮೂಡಲಿದೆ ಎಂಬುದೇ ಕುತೂಹಲದ ಸಂಗತಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು