‘ನಮ್ಮ ನಡೆ, ಅಂತರಂಗದ ಕಡೆಗೆ’ ಹೆಸರಿನ ವಿಶಿಷ್ಟ ಪಾದಯಾತ್ರೆ (ಧಾರವಾಡದಲ್ಲಿ ಡಿ. 27ರಿಂದ 31ರವರೆಗೆ), ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು, ವಿದ್ಯಾರ್ಥಿಗಳು ಜೊತೆಯಾಗಿ ನಡೆಸುವ, ನಿತ್ಯ 10 ಕಿ.ಮೀ. ಕ್ರಮಿಸುವ ಪಾದಯಾತ್ರೆ. ಹಳ್ಳಿಗಳಿಗೆ ತೆರಳಿ, ಗ್ರಾಮೀಣರ ಬದುಕು, ಸಾಧನೆ, ಬವಣೆ ಹಾಗೂ ಬೇಕು–ಬೇಡಗಳ ಬಗ್ಗೆ ಚಿಂತನ–ಮಂಥನ ನಡೆಸಲಿದ್ದೇವೆ. ಇದು ಚಿಂತೆ ಮತ್ತು ಚಿಂತನೆಯ ಮಧ್ಯೆ ಸಾಗುವ ಆತ್ಮಾವಲೋಕನದ ಒಂದು ಹೆಜ್ಜೆ.

ನಾವು ಹಳ್ಳಿಗರ ಸಾಂಗತ್ಯದಲ್ಲಿ, ನಿಧಾನಕ್ಕೆ ನಿಸರ್ಗ ನಡಿಗೆ ಮಾಡಿದಾಗ, ಹಂಚಿಕೊಂಡು ಉಂಡಾಗ, ನಿತ್ಯದ ಅವರ ದೈಹಿಕ ಶ್ರಮದ ಕೆಲಸಗಳನ್ನು ಗಮನಿಸಿದಾಗ, ಹಳ್ಳಿಗರ ಮೌಖಿಕ ಕಥಾನಕಗಳನ್ನು, ಅನುಭವಾಮೃತವನ್ನು ಅನುಭವಿಸಿದಾಗ, ಆ ಕೇಳ್ಮೆಗೆ ಸಾತ್ವಿಕತೆ ಸಿದ್ಧಿಸುತ್ತದೆ. ಅಂತರಂಗದ ನಡಿಗೆ, ಹಳ್ಳಿ ಮತ್ತು ಹಳ್ಳಿಗರ ಬದುಕಿನ ರಮ್ಯ ಕಲ್ಪನೆಯ ನಿರೂಪಣೆಯಾಗದೆ, ಕೊರತೆಗಳ ನಡುವೆಯೇ ಪುಟಿದೇಳುವ ಶ್ರಮಜೀವಿಗಳ, ಪರಸ್ಪರ ಅವಲಂಬಿತ ಬದುಕಿನ ಮಾದರಿಗಳನ್ನು ಬೆಳಕಿಗೆ ತರುತ್ತದೆ.

ನಡಿಗೆಯಲ್ಲಿ ಭಾಗಿಯಾಗುವ ನಮ್ಮಲ್ಲಿನ ಅನೇಕರು ನಾಯಕತ್ವದ, ವೃತ್ತಿಪರ ಉದ್ಯೋಗಗಳಲ್ಲಿ ಪಳಗಿದವರು. ಪರಿಸ್ಥಿತಿಗಳನ್ನು ವಿಶ್ಲೇಷಿಸಿ, ಸಮಸ್ಯೆಯನ್ನು ಸಂಶೋಧಿಸಿ, ಅದಕ್ಕೊಂದು ಪರಿಹಾರ ಸೂಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವವರು. ಅಂತರಂಗದೆಡೆಗಿನ ನಮ್ಮ ನಡಿಗೆ, ಸಮಸ್ಯೆಗಳನ್ನು ಪರಿಹರಿಸುವ ಮನಃಸ್ಥಿತಿಯಿಂದ, ಅವುಗಳನ್ನು ಹೇಗಿವೆಯೋ ಹಾಗೇ ನೋಡುವ ದೃಷ್ಟಿಯನ್ನು ಕಲಿಸಿಕೊಡುತ್ತದೆ.

ಹಳ್ಳಿಯವರೊಂದಿಗೆ ಜೊತೆಯಾಗಿ ನಡೆದಾಗ, ಒಂದು ಹೊಸ ಸಾಧ್ಯತೆಯ ಅನಾವರಣವಾಗುತ್ತದೆ. ಆಗ, ಅಭಿವೃದ್ಧಿ ಎನ್ನುವುದು ಹೇರಿಕೆಯಂತೆ ಭಾಸವಾಗುವುದಿಲ್ಲ. ಬದಲಾಗಿ, ಒಂದು ಸಹಜ ಸಂವಾದ–ಸಂಭಾಷಣೆಯಂತೆ ಸಹಭಾಗಿತ್ವದಲ್ಲಿ ವಿಕಸಿತಗೊಳ್ಳುತ್ತದೆ. ಇದು ಮೇಲಿಂದ ಕೆಳಕ್ಕೆ ಬಂದು ತಲಪಿದ ಮಾದರಿಯಂತಿರದೆ, ಪರಸ್ಪರರ ಸಂವಹನದಿಂದ ಉತ್ಪನ್ನವಾದ, ಜೀವದ್ರವ್ಯದ ಅನುಕರಣೀಯ ಪ್ರಯೋಗದಂತಿರಬಹುದು.

ಸಮುದಾಯಗಳು ಸ್ವತಃ ಜ್ಞಾನದ ಭಂಡಾರವಾಗಿರುತ್ತವೆ. ಜ್ಞಾನವು ತಲೆಮಾರುಗಳಿಂದ, ಭೂಮಿ, ಹವಾಮಾನ, ಅಭಾವಗಳು ಮತ್ತು ಸಾಮಾಜಿಕ ಸಂರಚನೆಯ ಬಂಧಗಳನ್ನು ನಿರ್ವಹಿಸುತ್ತಾ, ತಲೆತಲಾಂತರದಿಂದ ಬೆಳೆದು ಬಂದಿರುತ್ತದೆ. ಭಿನ್ನ ಭಿನ್ನ ವಿಚಾರಗಳು, ಜ್ಞಾನದ ಶಾಖೆಗಳು, ಪರಸ್ಪರ ಪೂರಕವಾಗಿ, ಸಮನ್ವಯತೆ ಸಾಧಿಸುತ್ತವೆ ಎಂಬುದನ್ನು ಅಂತರಂಗದ ನಡಿಗೆ ಮೂಲಕ ಅನ್ವೇಷಿಸುವ ಹೆಬ್ಬಯಕೆ ನಮ್ಮೆಲ್ಲರದ್ದು.

ಆಂತರಿಕ ನಡಿಗೆಯು ನಮ್ಮ ದೇಹಾಲಸ್ಯ ಮತ್ತು ಮನಸ್ಸಿನ ಉದ್ವೇಗವನ್ನು ಶಮನಗೊಳಿಸುತ್ತದೆ. ಚಿತ್ತ ಚಾಂಚಲ್ಯವನ್ನು ತೊಲಗಿಸಿ, ಮನಸ್ಸನ್ನು ಲಯಬದ್ಧಗೊಳಿಸಿ, ಏಕಾಗ್ರತೆ ಸಾಧಿಸಲು, ಶ್ರುತಿಬದ್ಧಗೊಳಿಸುತ್ತದೆ.
ಮನಸ್ಸು ಸ್ಥಿರವಾದಾಗ, ನಾವು ಪ್ರತಿಕ್ರಿಯಾತ್ಮಕವಾಗಿ ವರ್ತಿಸದೆ, ಹೆಚ್ಚು ಗ್ರಹಿಸುವ ಮನಃಸ್ಥಿತಿ ಉಳ್ಳವರಾಗುತ್ತೇವೆ. ಇದು ನಮ್ಮ ನಂಬಿಕೆಯ ತಳಹದಿಯನ್ನು ಅಲ್ಲಾಡಿಸುವ ಮತ್ತು ಇರುಸುಮುರುಸು ಉಂಟು ಮಾಡುವ, ಗ್ರಾಮೀಣ ಪರಿಸ್ಥಿತಿಗಳನ್ನು ಎದುರಿಸಿದಾಗ, ಪ್ರಸಂಗಾವಧಾನ ಮೆರೆಯಲು ಸಹಕಾರಿ.

ನನ್ನ ಅನುಭವದಲ್ಲಿ, ದಿನಗಳು ಕಳೆದಂತೆ, ಈ ನಡಿಗೆಯಲ್ಲಿ ಭಾಗವಹಿಸಿದವರ ಗ್ರಹಿಕೆ, ಸಹಜವಾಗಿ ಹೆಚ್ಚುತ್ತಾ ಹೋಗಿದೆ. ಹೇರಿಕೆಯ ಆತ್ಮಾವಲೋಕನವಲ್ಲದೆ, ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಪ್ರೇರೇಪಿಸಿದೆ. ‘ಕೊಡುವಿಕೆ’ ಆಂತರಿಕ ನಡಿಗೆಯ ಇನ್ನೊಂದು ಮಹತ್ವದ ಕಲಿಕೆ. ವ್ಯಾವಹಾರಿಕ ಬಂಧಗಳಾಚೆ, ಮನುಷ್ಯ ಸಂಬಂಧಗಳು ಮುಖ್ಯ. ಹೀಗಾಗಿ, ಮನುಷ್ಯ ಸಂಬಂಧಗಳ ಅನುರಣನದ ಆಲಿಸುವಿಕೆಗೆ, ಹೆಚ್ಚಿನ ಸಮಯ ನಡಿಗೆಯಲ್ಲಿ ಮೀಸಲಿದೆ.

ದೇಹ ದಣಿಯುತ್ತದೆ. ವೇಗ ನಿಧಾನಗೊಳ್ಳುತ್ತದೆ. ನಮಗೆ ನಮ್ಮಯ ಉಸಿರು, ನಿಲುವು ಮತ್ತು ನಮ್ಮೊಳಗಿನ ಲಯದ ಅರಿವಾಗುತ್ತದೆ. ಕ್ರಮಿಸುತ್ತಿರುವ ಹಾದಿ ‘ಸಮಯ’ವನ್ನು ನೀಡುತ್ತದೆ; ಆಧುನಿಕ ಜೀವನ ನೀಡಲಾಗದ ಅಮೂಲ್ಯ ಸಮಯವದು. ಆ ಸಮಯದಲ್ಲಿ ಮನಸ್ಸು ಗಡಿಬಿಡಿ, ತುರ್ತಿನ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸುತ್ತದೆ. ಮೌನ ಕಸಿವಿಸಿ ಉಂಟು ಮಾಡದೆ ಹಿತಕಾರಿ ಎನಿಸುತ್ತದೆ. ಹೀಗೆ, ನಮ್ಮ ಆಂತರಿಕ ನಡಿಗೆ, ಹೊಸ ವಿಷಯಗಳಿಗೆ ತೆರೆದುಕೊಳ್ಳುವ ಮೂಲಕ, ಅನುಭಾವದ ಮೂಲಕ ಸಾರ್ಥಕವಾಗುತ್ತದೆ.

‘ಅಂತರಂಗದ ನಡಿಗೆ’ ಪರಿಹಾರವನ್ನು ಕಂಡುಕೊಳ್ಳುವ ಗುರಿ ಹೊಂದಿಲ್ಲ. ಬದಲಿಗೆ, ಜನರಲ್ಲಿ ವಿವೇಚನೆಯನ್ನು ಉದ್ದೀಪಿಸುವ ಉದ್ದೇಶ ಹೊಂದಿದೆ. ವೇಗ, ಮಾನದಂಡ ಮತ್ತು ನಿರ್ದೇಶನ ಒಳಗೊಂಡು ನಡೆಯುವ ಈ ಜಗತ್ತಿನಲ್ಲಿ, ಈ ತರಹದ ನಡಿಗೆಯನ್ನು ಆಯ್ಕೆ ಮಾಡಿಕೊಂಡು, ಸಮಸ್ಯೆಗಳಿಗೆ ಕಿವಿಯಾಗುತ್ತಾ, ಗ್ರಹಿಕೆಯನ್ನು ಸೂಕ್ಷ್ಮಗೊಳಿಸುತ್ತ ಸಾಗುವುದೇ, ಒಂದು ಶಾಂತ ಪ್ರತಿರೋಧದ ಮಾರ್ಗವೂ ಆಗಿದೆ.

ನಾವು ಕಂಡುಕೊಂಡ, ನಮ್ಮೊಳಗಿನ ಈ ಸ್ಪಷ್ಟತೆಯಿಂದ ಅರ್ಥವತ್ತಾದ ಕ್ರಿಯೆಗಳು ಹೊರಹೊಮ್ಮಲಿವೆ ಎಂಬ ನಂಬಿಕೆಯೊಂದಿಗೆ, ತಾಳಿಕೆ ಮತ್ತು ಬಾಳಿಕೆಯ ಅಭಿವೃದ್ಧಿಗಿಂತ, ಸಂಬಂಧಗಳನ್ನು ಬಾಳಿಸುವ ಮೂಲಕ, ಅಭಿವೃದ್ಧಿ ಸಾಧನೆ ಗುಣಮಟ್ಟದ್ದು ಎಂಬ ಭಾವವನ್ನು ಸ್ವಭಾವವಾಗಿಸುವ ಪುಟ್ಟ ಪ್ರಯತ್ನವೇ ಈ ಆಂತರಿಕ ನಡಿಗೆ.

ಗೌಜು ಗದ್ದಲಗಳಿಂದ ದೂರವಿರಲು ಅವಕಾಶವೊಂದನ್ನು ನಮಗಾಗಿ ಸೃಷ್ಟಿಸುವ ಇರಾದೆ ಮತ್ತು ಯಾವುದೇ ಕಾರ್ಯಸೂಚಿಗಳಿಲ್ಲದೆ, ಗ್ರಾಮ್ಯ ಜೀವನದ ಸೊಗಡನ್ನು ಎದುರುಗೊಳ್ಳುವ ಮಹದಾಸೆ ನಮ್ಮದಾಗಿದೆ. ಇಂತಹ ನಡಿಗೆಯಿಂದ, ನಾವು ಪಡೆದಿದ್ದು ಏನು ಎನ್ನುವುದು ತಕ್ಷಣಕ್ಕೆ ತಿಳಿಯದೆ ಹೋದರೂ, ನಿಧಾನಕ್ಕೆ ಅದು, ನಮ್ಮ ಮನಸ್ಸಿನಾಳದಲ್ಲಿ ಬೀರಿದ ಪರಿಣಾಮವನ್ನು ಅಳೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.