ಸುಮಾರು ನಾಲ್ಕು ದಶಕಗಳ ಹಿಂದಿನ ಕರಾವಳಿಯ ಒಂದು ಚಿತ್ರದತ್ತ ಮಗ್ಗುಲು ಬದಲಿಸೋಣ. 1983ರ ಕಡು ಸುಡು ಬೇಸಿಗೆ. ಆ ವರುಷ ತಡವಾಗಿ ಮಳೆಗಾಲ ಆರಂಭವಾಗಿತ್ತು. ಪಶ್ಚಿಮ ಕರಾವಳಿಗೆ ದೊಡ್ಡ ಹೊಡೆತ. ಹಳ್ಳ, ನದಿಗಳಲ್ಲಿ ನೀರಿನ ಹರಿವು ಕ್ಷೀಣವಾಗಿತ್ತು. ಕೆಲವು ನದಿಗಳ ಹರಿವು ಏಪ್ರಿಲ್ನಲ್ಲೇ ನಿಂತುಹೋಗಿತ್ತು. ಬಾವಿ, ಕೆರೆಗಳೆಲ್ಲ ಒಣಗಿ ತಳ ಕಂಡಿದ್ದವು. ಕುಡಿಯುವ ನೀರಿಗೆ ಹಾಹಾಕಾರ. ತೋಟಗಳೆಲ್ಲ ಉಸಿರೆಳೆದುಕೊಳ್ಳುತ್ತಿದ್ದುವು.

ಆಗ ಈಗಿದ್ದಷ್ಟು ಕೊಳವೆಬಾವಿಗಳ ಭರಾಟೆ ಎದ್ದಿರಲಿಲ್ಲ. ಮಣ್ಣು ಅಗೆಯುವ ಯಂತ್ರದ (ಜೆಸಿಬಿ) ಅಬ್ಬರವಿದ್ದಿರಲಿಲ್ಲ. ಅಂತರ್ಜಲದ ಮಟ್ಟ ಸ್ವಲ್ಪ ಕುಸಿದಿತ್ತೇ ಹೊರತು ಪಾತಾಳ ಸೇರಿರಲಿಲ್ಲ. ಜನರಲ್ಲಿ ನೆಲ, ನೀರಿನ ಕುರಿತು ಕನಿಷ್ಠ ಅರಿವಿದ್ದು ಬರವನ್ನು ನಿಭಾಯಿಸಿದ್ದರು. ಅವರಲ್ಲಿ ಜವಾಬ್ದಾರಿಗಳ ಎಚ್ಚರ ಇದ್ದುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಆ ನೀರಿನ ಬರದ ಸಂಕಷ್ಟವು ಈಗಲೂ ನೆನಪಾಗುತ್ತದೆ.

ಹೆಚ್ಚು ಬೇಡ, ಏಳೆಂಟು ವರುಷಗಳ ಹಿಂದಿನ ಕರಾವಳಿಯ ಚಿತ್ರದ ಹೊರಳು ನೋಟವನ್ನು ನೋಡೋಣ. ಆಗಿನ ಬರಕ್ಕಿಂತ ಭೀಕರವಾಗಿ ಕರಾವಳಿ ತತ್ತರಿಸಿತ್ತು. ಕುಡಿಯುವ ನೀರಿಗೂ ಆತಂಕವಿತ್ತು. ಕನ್ನಾಡಿನ ಬೇರೆ ಜಿಲ್ಲೆಗಳನ್ನು ಹೊರತುಪಡಿಸಿ ಕರಾವಳಿಯನ್ನೇ ಯಾಕೆ ಉಲ್ಲೇಖಿಸುತ್ತೇನೆಂದರೆ, ಇಲ್ಲಿ ‘ನೀರಿನ ಬರ’ ಎನ್ನುವ ಕಲ್ಪನೆಯೇ ಇಲ್ಲ! ಬದುಕಿನ ಪದಕೋಶದಲ್ಲೂ ಇಲ್ಲ! ನೀರಿಂಗಿಸುವ, ಜಲಮರು ಪೂರಣ, ಮಳೆನೀರು ಸಂಗ್ರಹ... ವಿಚಾರಗಳನ್ನು ಮಾತನಾಡಿದಾಗ ಗೇಲಿ ಮಾಡುತ್ತಾ ಹಣೆಯ ನೆರಿಗೆಗಳನ್ನು ತೋರಿದವರೆಷ್ಟೋ ಮಂದಿ! ‘ಕರಾವಳಿಯಲ್ಲೂ ನೀರಿಂಗಿಸುವ ವ್ಯವಸ್ಥೆ ಬೇಕಾ’ ಎಂದು ಕಟುಶಬ್ದಗಳಲ್ಲಿ ದನಿಯೇರಿಸಿದವರ ನೆನಪಿದೆ. ನೀರಿನ ಸಾಕ್ಷರತೆಯನ್ನು ಹಬ್ಬಿಸುವ ‘ಜಲಯೋಧರ’ ಕಾರ್ಯಗಳನ್ನು ಗಂಟಲಮೇಲಿನಿಂದಷ್ಟೇ ಶ್ಲಾಘಿಸಿದ್ದರು.

ಮೂರ್ನಾಲ್ಕು ವರುಷದ ಹಿಂದೆ ಕರಾವಳಿ ಮಾತ್ರವಲ್ಲ, ನಾಡಿನಾದ್ಯಂತ ಕೊಳವೆಬಾವಿಗಳ ವಿಫಲ ಕತೆಗಳಿಗೆ ಕಿವಿಯಾಗಿದ್ದೇವೆ. ನೀರಿನ ಅಗತ್ಯತೆ ಹೆಚ್ಚಾಗುತ್ತಿದೆ. ಬದುಕು ಒತ್ತಡವಾಗಿದೆ. ಬಹುಶಃ ರಾಜಸ್ಥಾನದಲ್ಲೂ ಇಷ್ಟೊಂದು ಒತ್ತಡ ಇರಲಾರದೇನೋ. ಯಾಕೆ ಹೇಳಿ? ನೀರಿನ ಬವಣೆಯನ್ನು ಅನುಭವಿಸಿದ ಕಾರಣ, ಅಲ್ಲಿ ನೀರನ್ನು ಎಚ್ಚರಿಕೆಯಿಂದ ಬಳಸುತ್ತಾರೆ! ನಮಗೀಗ ತೀರ್ಥದಂತೆ ಬಳಸುವ ದಿನಗಳು ಬಂದಿವೆ. ಮೊದಲು ಹಿರಿಯರು ಮಾಡಿಟ್ಟ ಪರಿಸರ ವ್ಯವಸ್ಥೆಗಳು ಚೆನ್ನಾಗಿದ್ದ ಸಮಯದಲ್ಲಿ ಬರ ಎನ್ನುವ ಶಬ್ದವೇ ಕೇಳಿದ್ದಿಲ್ಲ. ಈಗ ಬರ ಎನ್ನುವುದು ವರ್ಷಕ್ಕೊಮ್ಮೆ ಬರುವ ನಂಟ ಎನ್ನುವಂತಾಗಿದೆ. ಸರಿ, ಇಷ್ಟೆಲ್ಲಾ ಕಷ್ಟ ಯಾಕೆ ಬಂತು? ಭೂ ಒಡಲಿಂದ ನೀರನ್ನು ಮೊಗೆದು ಸ್ವೇಚ್ಛೆಯಿಂದ ಬಳಸಿದೆವು. ವ್ಯವಸ್ಥಿತವಾಗಿ ಕಾಡು ನಾಶ ಮಾಡಿದೆವು, ಮಾಡಿಸಿದೆವು, ಕಿಸೆ ತುಂಬಿಸಿಕೊಂಡೆವು. ಎಲ್ಲೆಲ್ಲಿ ಪ್ರಕೃತಿಯೇ ನೀರನ್ನಿಳಿಸಿಕೊಳ್ಳುತ್ತದೋ ಅಲ್ಲೆಲ್ಲ ಅಗೆಯುವ ಯಂತ್ರಗಳು ನುಗ್ಗಿ ನೀರಿನ ಮನೆಯನ್ನು ಧ್ವಂಸ ಮಾಡಿದಾಗ ಸೊಂಟಕ್ಕೆ ಕೈಯಿಟ್ಟು ನಕ್ಕೆವು, ಇತರರನ್ನು ನಗಿಸಿದೆವು.

ಇಷ್ಟೆಲ್ಲಾ ಋಣಾತ್ಮಕವಾಗಿ ಮಾತನಾಡುತ್ತಿದ್ದಾಗ, ಬರದ ನಡುವೆಯೂ ಬರವನ್ನು ಆಹ್ವಾನಿಸದ ಮಂದಿ ಎಷ್ಟಿಲ್ಲ? ಭೂಮಿಗೆ ನೀರನ್ನು ಕುಡಿಸಿ ಬದುಕಿನಲ್ಲಿ ನಗುವವರತ್ತ ಚಿತ್ತ ಹರಿಸಬೇಕಾಗಿದೆ. ಏನಿಲ್ಲವೆಂದರೂ ಒಂದೊಂದು ತಾಲ್ಲೂಕಿನಲ್ಲಿ ನಾಲ್ಕೈದು ಮಂದಿಯಾದರೂ ಜಲಮರುಪೂರಣ ಮಾಡಿಕೊಂಡು ನೆಮ್ಮದಿಯಾಗಿ ಇರುವವರು ಇದ್ದಾರೆ. ಅವರ ಕಾರ್ಯ ಎಂದೂ ಸದ್ದಾಗುವು ದಿಲ್ಲ. ಇಂತಹ ಯಶೋಗಾಥೆಗಳಿಗೆ ಬೆಳಕು ಹಾಕುವ, ಅವರೊಂದಿಗೆ ಮಾತುಕತೆ ಮಾಡುವ, ಮಾದರಿಗಳ ಪರಿಣಾಮಗಳತ್ತ ನೋಡುವ ಮನಃಸ್ಥಿತಿ ನಿರ್ಮಾಣವಾಗಬೇಕು.

ಪಂಚಾಯಿತಿಗಳು, ಯುವಕ ಸಂಘಗಳು, ಹಳೆವಿದ್ಯಾರ್ಥಿ ಸಂಘ, ಭಜನಾ ಸಂಘ, ಕಲಾ ಸಂಘಗಳು ಭೂಒಡಲಿಗೆ ನೀರಿಂಗಿಸುವ ಪ್ರಕ್ರಿಯೆಯನ್ನು ಮುಖ್ಯ ಅಜೆಂಡ ಆಗಿ ಇಟ್ಟುಕೊಳ್ಳಬೇಕು. ‘ನನ್ನ ಭೂಮಿಗೆ ನೀರು ಇಂಗಿಸಿದರೆ ನನಗೆ ಪ್ರಯೋಜನವಾದೀತೇ?’ ಇಂತಹ ಪ್ರಶ್ನೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಇಲ್ಲಿ ‘ನಾನು’ ಎನ್ನುವುದರ ಬದಲು ‘ನಾವು’ ಎಂದಾದರೆ ನೀರಿನ ಬರವನ್ನು ಓಡಿಸಬಹುದು. ಸಾಮೂಹಿಕ ಜನಜಾಗೃತಿಯಾಗಬೇಕು.

ಗುಡ್ಡದ ನೀರು ಹರಿದುಹೋಗದೆ ಅಲ್ಲಲ್ಲೇ ಇಂಗುವಂತೆ ಆದರೆ ಅದರ ಸುತ್ತುಮುತ್ತಲಿನ ಕೆಳ ಪ್ರದೇಶಗಳಲ್ಲಿ ಸಹಜ ವಾಗಿ ಅಂತರ್ಜಲ, ನೀರಿನ ಒರತೆ ವೃದ್ಧಿಯಾಗುತ್ತದೆ. ಗುಡ್ಡದಲ್ಲಿ ಬಿದ್ದ ನೀರನ್ನು ಹರಿದುಹೋಗದಂತೆ ಮಾಡುವುದು ಮೊದಲಾದ್ಯತೆಯ ಕೆಲಸವಾಗಬೇಕು. ಮೊದಲು ಪ್ರಕೃತಿಯೇ ಈ ಕೆಲಸ ಮಾಡುತ್ತಿತ್ತು. ಗುಡ್ಡದಲ್ಲಿ ನೀರು ಇಂಗದೆ ಆಚೀಚೆಗಿನ ತೋಡು, ನದಿಗಳು ಹೇಗೆ ಹರಿದಾವು? ನದಿಯಲ್ಲಿ ಬೇಸಿಗೆಯಲ್ಲೂ ನೀರಿದೆ ಎಂದಾದರೆ ಅಂತರ್ಜಲ, ಒರತೆಯಿದೆ ಎಂದರ್ಥ. ಗುಡ್ಡದ ನೆತ್ತಿಯಲ್ಲಿ ನೀರಿಂಗಿದರೆ ಅದುವೇ ಕೆಳಗಿನವರಿಗೆ ನೀರಿನ ಸೆಲೆ. ಈ ಸೆಲೆಯನ್ನು ಕೊಳವೆಬಾವಿ ಕೊರೆದು ಮುಚ್ಚಿದ್ದೇವೆ. ಮದಕ,
ಕಟ್ಟ ಮೊದಲಾದ ಪಾರಂಪರಿಕ ಜಲ ಸಂರಕ್ಷಣಾ ವಿಧಾನ ಗಳಿಗೆ ಮರುಜನ್ಮ ನೀಡಲೇಬೇಕು.

ಮಾಡುವವರಾರು? ನೀರಿಂಗಿಸಿ ಯಶಕಂಡ ಮಾದರಿ ಗಳು ಎಲ್ಲೆಲ್ಲಿ ಇವೆಯೋ ಅಲ್ಲಿಗೆ ಭೇಟಿ ನೀಡೋಣ. ನಮ್ಮ ನೆಲದಲ್ಲೂ ಅನುಷ್ಠಾನಿಸೋಣ. ಮುಂದೆ ಬರುವ ಮಳೆಯ ನೀರನ್ನು ಹರಿಯಕೊಡದೆ ಭೂಮಿಯಲ್ಲಿ ಇಂಗಿಸುವ ಪ್ರತಿಜ್ಞೆ ಮಾಡೋಣ. ನೀರಿನ ಯೋಧರನ್ನು ಸಿದ್ಧಗೊಳಿಸುವ ಕೆಲಸ
ಮಾಡೋಣ. ನೀರಿನ ಬರವನ್ನು ಮುಂದಿನ ವರುಷ ಬಾರದಂತೆ ತಡೆಯೋಣ. ಇದಕ್ಕೆಲ್ಲಾ ವಿಧಾನಸೌಧದತ್ತ
ದೀನನೋಟ ಬೀರಬೇಕಾದ್ದಿಲ್ಲ! ಹಕ್ಕುಗಳ ಬಗ್ಗೆ ಬೊಬ್ಬಿಡುತ್ತೇವೆ. ‘ಜವಾಬ್ದಾರಿ’ಗಳಿಗೆ ಯಾಕೆ ಜಾಣ ಕುರುಡು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.