ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭೂಮಿಯ ಬಿಸಿಗೆ ತಂಪೆರೆವವರಾರು?

ಭವಿಷ್ಯದ ಪೀಳಿಗೆಗೆ ಭೂಮಿಯನ್ನು ಉಳಿಸಲು ಎಲ್ಲ ರಾಷ್ಟ್ರಗಳೂ ಜೊತೆಗೂಡಿ ಕಾರ್ಯನಿರ್ವಹಿಸುವ ತುರ್ತು ಇದೆ
Last Updated 28 ಮಾರ್ಚ್ 2023, 20:19 IST
ಅಕ್ಷರ ಗಾತ್ರ

ಬೇಸಿಗೆಯ ಬಿಸಿ ದಿನೇ ದಿನೇ ಏರುತ್ತಿದೆ. ಇದೇ ಸಮಯಕ್ಕೆ, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣದಿಂದ ಭೂಮಿಯು ತೀವ್ರ ಅಪಾಯದಲ್ಲಿರುವ ಕುರಿತಂತೆ ಪ್ರಪಂಚದ ಖ್ಯಾತ ವಿಜ್ಞಾನಿಗಳು ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವರದಿಯನ್ನು ಅಮೆರಿಕದ ಹೆಚ್ಚಿನ ಜನರು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎನ್ನಲಾದ ಸುದ್ದಿಯು ಕುತೂಹಲಕ್ಕೆ ಕಾರಣವಾಗಿದೆ.

ತಮಗೆ ಚಿರಪರಿಚಿತವಾದ ಉಷ್ಣಾಂಶ ಮಾಪನವಾದ ಫ್ಯಾರನ್‌ಹೀಟ್ ಬದಲು ಸೆಲ್ಸಿಯಸ್ ಅನ್ನು ಉಲ್ಲೇಖಿಸಿ ವಿಶ್ಲೇಷಣೆ ಮಾಡಿರುವ ಕಾರಣ, ವರದಿಯನ್ನು ಅರ್ಥೈಸಿಕೊಳ್ಳುವುದು ಕಠಿಣವಾಗುತ್ತಿದೆ ಎಂಬುದು ಬಹುತೇಕ ಅಮೆರಿಕನ್ನರ ಅಂಬೋಣ.

ವಿಶ್ವದಲ್ಲಿ ಅಮೆರಿಕ ಸೇರಿ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಉಷ್ಣಾಂಶವನ್ನು ಫ್ಯಾರನ್‌ ಹೀಟ್‌ನಲ್ಲಿ ಸೂಚಿಸುತ್ತವೆ. ಉಳಿದಂತೆ ಹೆಚ್ಚಿನ ದೇಶಗಳು ಫ್ಯಾರನ್‌ಹೀಟ್ ಬಳಕೆ ಬಿಟ್ಟು ಸೆಲ್ಸಿಯಸ್ ಅನ್ನು ಬಳಕೆ ಮಾಡಲು ರೂಢಿ ಮಾಡಿಕೊಂಡರೂ ಅಮೆರಿಕವು ತನ್ನ ಜಡತ್ವದ ಕಾರಣದಿಂದ ಫ್ಯಾರನ್‌ಹೀಟ್ ಬಳಕೆಯೇ ಸುಲಭ ಎನ್ನುತ್ತಿದೆ.

ವಿದ್ಯಾರ್ಥಿಗಳಿಗೆ ಉಷ್ಣಾಂಶ ಮಾಪನದ ಬಗ್ಗೆ ಪಾಠವಿದೆ. ಆದರೆ ಫ್ಯಾರನ್‌ಹೀಟ್ ಮತ್ತು ಸೆಲ್ಸಿಯಸ್ ಕುರಿತ ವಿಷಯ ಜನಸಾಮಾನ್ಯರಿಗೂ ಕುತೂಹಲ ಹುಟ್ಟಿಸುತ್ತದೆ. 1724ರಲ್ಲಿ ಜರ್ಮನಿಯ ಡೇನಿಯಲ್ ಗೇಬ್ರಿಯಲ್ ಫ್ಯಾರನ್‌ಹೀಟ್ ಎಂಬ ವಿಜ್ಞಾನಿ ಉಷ್ಣಾಂಶವನ್ನು ಅಳೆಯಲು ಅನ್ವೇಷಿಸಿದ ಮಾಪನವು ಫ್ಯಾರನ್‌ಹೀಟ್ ಎಂದೇ ಹೆಸರಾಯಿತು. 1742ರಲ್ಲಿ ಸ್ವೀಡನ್ ದೇಶದ ಅಂಡ್ರೆಸ್ ಸೆಲ್ಸಿಯಸ್ ಎಂಬ ವಿಜ್ಞಾನಿ ಉಷ್ಣಾಂಶವನ್ನು ಅಳೆಯಲು ಫ್ಯಾರನ್‌ಹೀಟ್‌ಗಿಂತಲೂ ಸುಧಾರಿತ ಮಾಪನವನ್ನು ಕಂಡುಹಿಡಿದ. ಆತನದೇ ಹೆಸರಿನಲ್ಲಿ ಅದು ಸೆಲ್ಸಿಯಸ್ ಎಂದೇ ಖ್ಯಾತವಾಯಿತು.

ಫ್ಯಾರನ್‌ಹೀಟ್ ಪದ್ಧತಿಯಲ್ಲಿ ನೀರಿನ ಘನೀಕರಿಸುವ (ಮಂಜುಗಡ್ಡೆಯಾಗುವ) ಬಿಂದು 32 ಡಿಗ್ರಿಯಾದರೆ ಕುದಿಯುವ ಬಿಂದು 212 ಡಿಗ್ರಿ. ಸೆಲ್ಸಿಯಸ್ ಪದ್ಧತಿಯಲ್ಲಿ ನೀರಿನ ಘನೀಕರಿಸುವ ಬಿಂದು 0 ಡಿಗ್ರಿಯಾದರೆ ಕುದಿಯುವ ಬಿಂದು 100 ಡಿಗ್ರಿ ಎಂದು ಬಳಕೆ ಮಾಡಿದ್ದು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತಿದ್ದ ಕಾರಣ ಸೆಲ್ಸಿಯಸ್ ಪದ್ಧತಿ ವಿಶ್ವದೆಲ್ಲೆಡೆ ಮಾನ್ಯತೆ ಪಡೆದು ಸ್ಟ್ಯಾಂಡರ್ಡ್ ಮಾಪನವಾಗಿ ಮಾನ್ಯವಾಯಿತು.

ವಿಶ್ವದ ಹೆಚ್ಚಿನ ದೇಶಗಳು ಸೆಲ್ಸಿಯಸ್ ಮತ್ತು ಫ್ಯಾರನ್‌ಹೀಟ್ ಎರಡೂ ಪದ್ಧತಿಗೆ ಹೊಂದಿಕೊಂಡಿವೆ. ವಾತಾವರಣದ ಬದಲಾವಣೆಗೆ ಸಂಬಂಧಿಸಿದ ವರದಿಯಲ್ಲಿ ಎರಡೂ ಮಾಪನಗಳನ್ನು ಬಳಕೆ ಮಾಡಿದರೆ ಅಮೆರಿಕದ ಎಲ್ಲಾ ಜನರಿಗೆ ತಿಳಿಯುತ್ತದೆ ಮತ್ತು ಇದರಿಂದ ಪರಿಸರ ಸಂರಕ್ಷಣೆಗೆ ಸಹಾಯವಾಗುತ್ತದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಇನ್ನು ನಮ್ಮ ನಿಮ್ಮ ಅಳಿವು ಉಳಿವಿನ ಪ್ರಶ್ನೆಯಾದ ಭೂಮಿಯ ತಾಪಮಾನ ಏರಿಕೆಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ, ವಿಶ್ವದ ಎಲ್ಲ ರಾಷ್ಟ್ರಗಳೂ ತಕ್ಷಣದ ತುರ್ತು ಕ್ರಮಗಳನ್ನು ತೆಗೆದುಕೊಂಡರೆ ಭೂಮಿಯನ್ನು ರಕ್ಷಿಸಲು ಸಾಧ್ಯ ಎನ್ನುತ್ತದೆ ಹವಾಮಾನ ಬದಲಾವಣೆ ಕುರಿತ ಇಂಟರ್‌ಗವರ್ನಮೆಂಟಲ್‌ ಪ್ಯಾನಲ್‌ (ಐಪಿಸಿಸಿ) ವರದಿ. ಈ ದೃಷ್ಟಿಯಿಂದ ಮುಂದಿನ ದಶಕವುನಿರ್ಣಾಯಕವಾದುದಾಗಿದೆ. ಎಲ್ಲ ರಾಷ್ಟ್ರಗಳೂ ಮೀಥೇನ್, ಇಂಗಾಲಾಮ್ಲ, ನೈಟ್ರಸ್ ಆಕ್ಸೈಡ್ ಮತ್ತು ಕೈಗಾರಿಕಾ ಅನಿಲಗಳಾದ ಹೈಡ್ರೊಫ್ಲೋರೊ ಕಾರ್ಬನ್‌ನಂತಹ ಹಸಿರುಮನೆ ಅನಿಲಗಳನ್ನು ದಾಖಲೆ ಪ್ರಮಾಣದಲ್ಲಿ ವಾತಾವರಣಕ್ಕೆ ಸೇರಿಸುತ್ತಿರುವುದು ನಿಸ್ಸಂದೇಹವಾಗಿದೆ ಎಂದು ವರದಿ ತಿಳಿಸುತ್ತದೆ.

ಪ್ರಸ್ತುತ ಜಾಗತಿಕ ಉಷ್ಣಾಂಶವು ಕೈಗಾರಿಕಾಪೂರ್ವ ಅವಧಿಗಿಂತ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚು ಇದ್ದು, 2030ಕ್ಕಿಂತ ಮುಂಚೆ ಈ ಪ್ರಮಾಣವು 1.5 ಡಿಗ್ರಿ ಸೆಲ್ಸಿಯಸ್ ಆಗಲಿದೆ. ಈ ಪ್ರಮಾಣವನ್ನು 2 ಡಿಗ್ರಿ ಸೆಲ್ಸಿಯಸ್ ಒಳಗೆ ಇಡಲು, ಪ್ರಸ್ತುತ ವಾತಾವರಣಕ್ಕೆ ಸೇರಿಸುತ್ತಿರುವ ಹಸಿರುಮನೆ ಅನಿಲಗಳನ್ನು 2030ರೊಳಗೆ ಶೇ 21 ಹಾಗೂ 2035ರೊಳಗೆ ಶೇ 35ರಷ್ಟು ತಗ್ಗಿಸಬೇಕು ಎಂದು ವರದಿ ತಿಳಿಸುತ್ತದೆ.

ಭೂಮಿಯ ತಾಪಮಾನ ಏರಿಕೆಯಿಂದ ಕಂಡು ಕೇಳರಿಯದಂತಹ ಚಂಡಮಾರುತ, ಬಿಸಿಗಾಳಿ, ಬರ, ಬಿಸಿಯಾದ ವಾತಾವರಣ, ವಾತಾವರಣದಲ್ಲಿ ತೀವ್ರ ಏರುಪೇರುಗಳು ಸಂಭವಿಸುತ್ತಿವೆ. ಯಾವುದೇ ತಪ್ಪುಗಳನ್ನು ಮಾಡಿರದ, ಪ್ರಸ್ತುತ ಜಗತ್ತಿಗೆ ಕಾಲಿಡುತ್ತಿರುವ ಕಂದಮ್ಮಗಳು ಹಾಗೂ ಭವಿಷ್ಯದ ಜನಾಂಗವು ಭೂಮಿಯ ಬಿಸಿಯೇರಿಕೆಯ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಾರ್ಷಿಕ 30 ಗಿಗಾ ಟನ್‍ನಷ್ಟು (ಒಂದು ಗಿಗಾ ಟನ್ 100 ಕೋಟಿ ಟನ್‍ಗೆ ಸಮ) ಇಂಗಾಲಾಮ್ಲವನ್ನು ವಾತಾವರಣಕ್ಕೆ ಸೇರಿಸಲಾಗುತ್ತಿದೆ. ಇದರಲ್ಲಿ ಅಗ್ರಸ್ಥಾನ ಪಡೆದ ಚೀನಾದ ಪಾಲು ಶೇ 30, ಅಮೆರಿಕದ ಪಾಲು ಶೇ 14 ಹಾಗೂ ಭಾರತದ ಪಾಲು ಶೇ 7ರಷ್ಟು ಆಗಿದೆ.

ಭವಿಷ್ಯದ ಜನಾಂಗಕ್ಕೆ ಭೂಮಿಯನ್ನು ಉಳಿಸುವ ಹೊಣೆ ಎಲ್ಲರದ್ದೂ ಆಗಿದೆ. ಈ ದಿಸೆಯಲ್ಲಿ ಎಲ್ಲ ರಾಷ್ಟ್ರಗಳೂ ಜೊತೆಗೂಡಿ ಕಾರ್ಯನಿರ್ವಹಿಸುವ ತುರ್ತು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT