ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಸುಳ್ಳಿನ ದಾಳಿಯನ್ನು ಸೋಲಿಸೋಣ

ಸೆ. 28, ವಿಶ್ವ ಸುದ್ದಿ ದಿನ– ಸತ್ಯದೆಡೆಗಿನ ಪತ್ರಿಕೋದ್ಯಮದ ಬದ್ಧತೆ ನೆನೆಯುವ ದಿನ
–ಬ್ರಾಂಕೊ ಬರ್ಕಿಚ್‌, ಮರಿಯಾ ರೆಸ್ಸಾ
Published : 24 ಸೆಪ್ಟೆಂಬರ್ 2024, 21:19 IST
Last Updated : 24 ಸೆಪ್ಟೆಂಬರ್ 2024, 21:19 IST
ಫಾಲೋ ಮಾಡಿ
Comments

ಪ್ರಿಯ ಓದುಗರೇ,

ಯಾವುದು ಪುನರಾವರ್ತನೆಯಾಗದಿರಲಿ ಎಂದು ಒಂದೊಮ್ಮೆ ನಾವು ಆಶಿಸಿದ್ದೆವೋ ಅಂತಹದ್ದೇ ಪರೀಕ್ಷೆಗಳಿಗೆ 2024ನೇ ಇಸವಿಯು ನಮ್ಮ ಆಧುನಿಕ ಸಮಾಜಗಳನ್ನು ಹಲವು ವಿಧದಲ್ಲಿ ಮುಖಾಮುಖಿಯಾಗಿಸಿದೆ. 

ಜಗತ್ತಿನಾದ್ಯಂತ ನಿರಂಕುಶ ಪ್ರಭುತ್ವಗಳ ನೇತಾರರು ಮತ್ತು ಮಹತ್ವಾಕಾಂಕ್ಷೆ ಹೊಂದಿರುವ ಸರ್ವಾಧಿಕಾರಿಗಳು ಗಡಿ, ಜನಾಂಗ, ಧರ್ಮ ಎಲ್ಲವನ್ನೂ ಮೀರಿ ಸ್ವಾತಂತ್ರ್ಯಕ್ಕೆ ಬಹಿರಂಗವಾಗಿಯೇ ಸವಾಲು ಒಡ್ಡುತ್ತಿದ್ದಾರೆ. ಆಧುನಿಕ ಸಂಘರ್ಷಗಳು ಇಡೀ ಭೂಗೋಳವನ್ನೇ ವ್ಯಾಪಿಸಿವೆ ಮತ್ತು ಅಗಾಧವಾದ ವ್ಯಾಪ್ತಿ ಹಾಗೂ ಶಕ್ತಿಯನ್ನು ಹೊಂದಿರುವ ಮಾಹಿತಿಯ ಹರವಿನಲ್ಲಿ ಈ ಸಂಘರ್ಷ ನಡೆಯುತ್ತಿದೆ. ಹೊಸ ತಂತ್ರಜ್ಞಾನಗಳು ಹಾಗೂ ಹೊಸ ವೇದಿಕೆಗಳು ಅವರ ಯುದ್ಧಭೂಮಿಗಳಾಗಿದ್ದು, ನಮ್ಮ ಭವಿಷ್ಯವನ್ನು–ಬಹುತೇಕ ಸಲ ನಮ್ಮ ಸಮ್ಮತಿ ಇಲ್ಲದೆ ಮತ್ತು ಇಚ್ಛೆಗೆ ವಿರುದ್ಧವಾಗಿ– ನಿರ್ಧರಿಸುವ ಸಾಧನಗಳೂ ಆಗಿವೆ.

ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ, ನಮ್ಮ ನಾಗರಿಕತೆಗಳು ಕಟ್ಟಿಕೊಟ್ಟಿರುವ ಸ್ವಯಂ ಪ್ರಮಾಣೀಕೃತ ಮೌಲ್ಯಗಳನ್ನು ರಕ್ಷಿಸುವ ಬಹುದೊಡ್ಡ ಕರ್ತವ್ಯವು ಪತ್ರಿಕೋದ್ಯಮದ, ಅಂದರೆ ಸತ್ಯಸಂಗತಿ, ಸಾಕ್ಷ್ಯ ಆಧಾ
ರಿತ ಹಾಗೂ ವಿಶ್ವಾಸಾರ್ಹ ಸುದ್ದಿ ನೀಡುವ ಮಾಧ್ಯಮಗಳ ಮೇಲಿದೆ. ನಮ್ಮ ಓದುಗರು, ವೀಕ್ಷಕರು ಮತ್ತು ಸಮು
ದಾಯಗಳೊಂದಿಗಿನ ಪವಿತ್ರ ಬಾಂಧವ್ಯವನ್ನು ಗೌರವಿ
ಸುವುದಕ್ಕಾಗಿ ಜಗತ್ತಿನಾದ್ಯಂತ ಪತ್ರಕರ್ತರಾದ ನಾವು ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದಿದ್ದೇವೆ.

ನಾವು ಬರೆದ ಸುದ್ದಿಗಳು, ವಿಶೇಷ ವರದಿಗಳು ಜನರ ಜೀವಗಳನ್ನು ಉಳಿಸಿದಾಗ, ಜನರ ನಡುವಿನ ಸಂಬಂಧವನ್ನು ಸುಧಾರಿಸಿದಾಗ ಮತ್ತು ಕಷ್ಟದ ಸಮಯದಲ್ಲಿ ಅವು ನಮಗೆ ಮಾರ್ಗದರ್ಶನ ಮಾಡು
ವಾಗ ನಮಗೆ ಆಗುವ ಸಂತೋಷ ಕೂಡ ಆಗಾಗ ತಪ್ಪು ಮಾಹಿತಿಗಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ಇದು ನಂಬಿಕೆಯನ್ನು ನಾಶ ಮಾಡುವುದಲ್ಲದೆ, ನಾವೆಲ್ಲರೂ ಒಂದಾಗಿ ಬದುಕುವ ನಮ್ಮ ಸಾಮರ್ಥ್ಯವನ್ನೇ ಕುಂದಿಸುತ್ತದೆ. ಪರಿಸ್ಥಿತಿ ಈಗ ಎಲ್ಲಿಗೆ ಬಂದಿದೆ ಎಂದರೆ, ಸತ್ಯದ ಅರ್ಥವೂ ಆಕ್ರಮಣಕ್ಕೆ ತುತ್ತಾಗುತ್ತಿದೆ!

ಹಾಗಿದ್ದರೂ, ಈ ಸಂಕಷ್ಟದ ದಿನಗಳು ಕೂಡ ನಮಗೆ ಉತ್ತೇಜನಕಾರಿಯಾಗಿವೆ ಮತ್ತು ಭರವಸೆದಾಯಕವಾಗಿವೆ. ವ್ಯವಸ್ಥೆಗಳು ಕುಸಿಯುತ್ತಿರುವ ಮತ್ತು ಮೂಲಭೂತ ಸತ್ಯಗಳು ಒತ್ತಡದಲ್ಲಿರುವ ಈ ಸಂದರ್ಭದಲ್ಲಿ ನಾವು ಅತ್ಯಂತ ನಿಷ್ಠುರವಾಗಿದ್ದೇವೆ ಎಂಬುದನ್ನು ಜಗತ್ತಿನ ಮಾಧ್ಯಮಗಳು ತೋರಿಸಬೇಕು. ನಮ್ಮ ನಿಲುವುಗಳು ಹೇಗಿರಬೇಕೆಂದರೆ, ಸುಳ್ಳು ಮಾಹಿತಿಗಳ ಅಭಿಯಾನಗಳು, ನಿರಂತರವಾದ ದಾಳಿಗಳು ಮತ್ತು ಸುಳ್ಳಿನ ಪ್ರವಾಹಗಳನ್ನು ಸಮರ್ಥವಾಗಿ ಎದುರಿಸುವಂತಿರಬೇಕು.

ಇವೆಲ್ಲ ಆಕಸ್ಮಿಕವಾಗಿ, ಗೊತ್ತುಗುರಿ ಇಲ್ಲದೆ ನಡೆಯುವ ದಾಳಿಗಳಲ್ಲ. ಇವೆಲ್ಲವೂ ನಮ್ಮ ವ್ಯವಸ್ಥೆಯ ಮೌಲ್ಯಗಳು, ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ನಮಗಿರುವ ಕನಿಷ್ಠ ಅರಿವಿನ ವಿರುದ್ಧ ನಡೆಯುತ್ತಿರುವ ಯುದ್ಧದ ಭಾಗ. ನಮ್ಮಲ್ಲಿ ಮೌಲ್ಯಗಳು ಇಲ್ಲದಿದ್ದರೆ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಗುರುತಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ನಮ್ಮಲ್ಲಿ ನಾಗರಿಕತೆಯೂ ಉಳಿಯುವುದಿಲ್ಲ. 

ಸೆಪ್ಟೆಂಬರ್‌ 28, ವಿಶ್ವ ಸುದ್ದಿ ದಿನ. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಇರುವ ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳಾದ ನಾವು ಒಟ್ಟಾಗಿ, ಓದುಗರಾದ ನಿಮಗೆ ಸುದ್ದಿ, ಸತ್ಯಸಂಗತಿ, ಉತ್ತರದಾಯಿತ್ವ, ಸಾರ್ವಜನಿಕ ಸೇವೆ, ಮಾನವೀಯತೆ, ವಿಮರ್ಶೆ, ಸ್ವಾತಂತ್ರ್ಯ, ನೈತಿಕತೆ ಮತ್ತು ಸಮುದಾಯಗಳಿಗೆ ಸಂಬಂಧಿಸಿದಂತೆ ನಮ್ಮ ಶಾಶ್ವತವಾದ ಬದ್ಧತೆಯನ್ನು ದೃಢೀಕರಿಸುತ್ತೇವೆ.

ಈ ಮೇಲಿನ ಎಲ್ಲಾ ಪದಗಳು ಆಳವಾದ ಅರ್ಥವನ್ನು ಹೊಂದಿವೆ. ನಮಗೆ ಇವು ಬಹಳ ಮುಖ್ಯ.

ಈಗ ನಮ್ಮ ಮುಂದೆ ಇರುವುದು ಒಂದೇ ಆಯ್ಕೆ: ಸುದ್ದಿ ಮಾಧ್ಯಮಗಳಾದ ನಾವು, ನಮ್ಮ ಪವಿತ್ರವಾದ ಕರ್ತವ್ಯವನ್ನು ಮುಂದುವರಿಸುತ್ತೇವೆ. ನಾವು ವರದಿ ಮಾಡುವ ಸುದ್ದಿಗಳು ಯಾವಾಗಲೂ ಸತ್ಯಸಂಗತಿ ಆಧಾರಿತವಾಗಿರಲಿವೆ ಮತ್ತು ಆ ಸತ್ಯವನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ.

ಪ್ರಿಯ ಓದುಗರೇ, ಮುಂದುವರಿದು ನಾವು ನಿಮಗೆ ನೀಡುವ ಭರವಸೆ ಏನೆಂದರೆ, ನಾವು ಎಂದಿಗೂ ತಾಳ್ಮೆಗೆಡುವುದಿಲ್ಲ, ಕೈ ಚೆಲ್ಲುವುದೂ ಇಲ್ಲ. ಸತ್ಯಕ್ಕಾಗಿ ನಡೆಸಲಾಗುತ್ತಿರುವ ಹೋರಾಟವು ನಮ್ಮೆಲ್ಲರ ಭವಿಷ್ಯಕ್ಕಾಗಿನ ಹೋರಾಟವೂ ಹೌದು ಎಂಬುದನ್ನು ನಾವು ಬಲ್ಲೆವು.

ಪ್ರಕ್ಷುಬ್ಧ ಪರಿಸ್ಥಿತಿಯ ಇತಿಹಾಸ ಇರುವ ಕಡೆಗಳಲ್ಲೆಲ್ಲ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಸಹೋದ್ಯೋಗಿಗಳು ಹತಾಶರಾಗಬೇಕಿಲ್ಲ. ನೀವು ಏಕಾಂಗಿಗಳಲ್ಲ. ನಾವು ಹೊಂದಿರುವ ಧ್ಯೇಯವು ನಮ್ಮೆಲ್ಲರನ್ನೂ ಒಟ್ಟುಗೂಡಿಸುತ್ತದೆ. ಗದ್ದಲ ಮತ್ತು ಹಿಂಸಾಚಾರ ಕ್ರಮೇಣ ಕಡಿಮೆಯಾಗಲಿವೆ. ಸತ್ಯ ಆಧಾರಿತ ಪರಿಸ್ಥಿತಿ, ಸಭ್ಯ ನಡವಳಿಕೆಗಳು ಮರಳಲಿವೆ. ಈ ಬೆಳವಣಿಗೆಗಳು ತಕ್ಷಣಕ್ಕೆ ಆಗದಿರಬಹುದು; ಆದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಅಂತಹ ವಾತಾವರಣ ನಿರ್ಮಾಣವಾಗಲಿದೆ. ಸದ್ಯ, ಇದಕ್ಕಾಗಿ ಪ್ರತಿ ದಿನದ ಪ್ರತಿ ಗಂಟೆ, ಪ್ರತಿ ಕ್ಷಣವೂ ನಾವು ಹೋರಾಡುತ್ತೇವೆ. 

2024ರ ವಿಶ್ವ ಸುದ್ದಿ ದಿನದ ಸಂದರ್ಭದಲ್ಲಿ, ನಾವು ಮೊದಲಿನಿಂದಲೂ ಇಲ್ಲಿ ಏಕೆ ಇದ್ದೇವೆ ಎಂಬುದನ್ನು ಮರೆಯದಿರೋಣ, ನಮ್ಮ ಓದುಗರೊಂದಿಗೆ ಮತ್ತು ನಮ್ಮ ಅಂತರಾತ್ಮದೊಂದಿಗೆ ಸತ್ಯವನ್ನು ಹಂಚಿಕೊಂಡ ಖುಷಿಯನ್ನು ಉಳಿಸಿಕೊಳ್ಳಲು ಪರಸ್ಪರ ನೆರವಾಗೋಣ.

ಲೇಖಕರು: ಬ್ರಾಂಕೊ ಬರ್ಕಿಚ್‌– ದಕ್ಷಿಣ ಆಫ್ರಿಕಾದ ಡೈಲಿ ಮ್ಯಾವೆರಿಕ್‌ ಪತ್ರಿಕೆಯ ಮುಖ್ಯ ಸಂಪಾದಕ ಮತ್ತು ‘ಸತ್ಯವನ್ನು ಆಯ್ಕೆ ಮಾಡಿ’ ಅಭಿಯಾನದ ರೂವಾರಿ. 

ಮರಿಯಾ ರೆಸ್ಸಾ– ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಫಿಲಿಪ್ಪೀನ್ಸ್‌ನ ರ‍್ಯಾಪ್ಲರ್‌.ಕಾಮ್‌ನ
ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT