ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆಯನ್ನು ಕೊಲ್ಲುತ್ತೀರೋ? ಬದುಕಿಸುತ್ತೀರೋ?

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದೆ ನಾನು ರಷ್ಯಾಕ್ಕೆ ಹೋಗಿದ್ದೆ. ನನಗೆ ರಷ್ಯನ್ ಭಾಷೆ ಬರುತ್ತಿಲ್ಲವಾದರೂ ರಷ್ಯನ್ ಆಕಾಶವಾಣಿಯನ್ನು ಆಲಿಸುವ ಆಸಕ್ತಿಯನ್ನು ಇರಿಸಿಕೊಂಡಿದ್ದೆ. ಹದಿನೈದು ನಿಮಿಷಗಳ ಸುದ್ದಿ ಬಿತ್ತರಣೆಯಲ್ಲಿ ಇಂಗ್ಲಿಷ್ ಪದಗಳು ಉಪಯೋಗವಾಗುತ್ತವೆಯೋ ಎನ್ನುವುದನ್ನು ತಿಳಿಯುವುದು ನನಗೆ ಬೇಕಾಗಿದ್ದಿತು.

ಇಂಗ್ಲಿಷ್ ಶಬ್ದಗಳು ಉಪಯೋಗವಾಗಿದ್ದರೆ ನನಗೆ ತಿಳಿಯುತ್ತಿತ್ತು. ಅಲ್ಲಿಯ ಆಕಾಶವಾಣಿಯನ್ನು ನಾನು ನಾಲ್ಕೈದು ದಿನ ಆಸ್ಥೆಯಿಂದ ಆಲಿಸಿದೆನಾದರೂ ಒಂದೂ ಇಂಗ್ಲಿಷ್ ಪದ ನನ್ನ ಕಿವಿಗೆ ಬೀಳಲಿಲ್ಲ. ಜಗತ್ತಿನ ಅನೇಕ ದೇಶಗಳ ಜನರು ತಮ್ಮ ಭಾಷೆಯ ಪರಿಶುದ್ಧತೆಯನ್ನು ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

ತಮ್ಮ ಭಾಷೆಗಳ ಬಗೆಗೆ ಭಾರಿ ಅಭಿಮಾನ ಇರಿಸಿಕೊಂಡಿರುವ ಜನರನ್ನು ನಾನು ಕಂಡಿದ್ದೇನೆ. ತಮ್ಮ ಭಾಷೆಯಲ್ಲಿ ಇಂಗ್ಲಿಷ್ ಪದಗಳ ಮಿಶ್ರಣ ಆಗುವುದನ್ನು ಫ್ರೆಂಚರು, ಜರ್ಮನ್ನರು, ರಷ್ಯನ್ನರು ಯಾರೊಬ್ಬರಿಗೂ, ತಮ್ಮ ಭಾಷೆ, ತನ್ನ ಪರಿಶುದ್ಧತೆಯನ್ನು ಕಳೆದುಕೊಂಡು ಕಲುಷಿತಗೊಳ್ಳುವುದು ಬೇಕಾಗಿಲ್ಲ. ಚೀನಿಯರು ಹಾಗೂ ಜಪಾನಿಯರು ಅಷ್ಟೇ ಏಕೆ, ಥಾಯ್ಲೆಂಡ್ ಜನರು ಕೂಡ ತಮ್ಮ ಭಾಷೆ ಕಲುಷಿತಗೊಳ್ಳುವುದನ್ನು ತಡೆದು ಅದು ಪರಿಶುದ್ಧವಾಗಿ ಉಳಿಯುವುದನ್ನು ನೋಡಿಕೊಳ್ಳಬೇಕೆನ್ನುತ್ತಾರೆ.

ತಮ್ಮ ಭಾಷೆಯ ಬಗೆಗೆ ಅಭಿಮಾನ ಇಲ್ಲದ ಜನರೆಂದರೆ ಕನ್ನಡಿಗರೊಬ್ಬರೇ ಎಂದು ತೋರುತ್ತದೆ. ತಮ್ಮ ಭಾಷೆಯನ್ನು ಕಳೆದುಕೊಂಡ ಜನರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಒಂದು ಲೆಕ್ಕದ ಪ್ರಕಾರ ಜಗತ್ತಿನಲ್ಲಿ ಈಗ 6,000 ಭಾಷೆಗಳು ಇವೆ. ಪ್ರಭಾವಿ ಭಾಷೆಗಳ ಒತ್ತಡದಿಂದ ಅವುಗಳಲ್ಲಿ ಎಷ್ಟೋ ಭಾಷೆಗಳು ಕಣ್ಮರೆ ಆಗತೊಡಗಿವೆ.

ಮುಂದಿನ ಒಂದು ನೂರು ವರ್ಷಗಳ ಅವಧಿಯಲ್ಲಿ ಜಗತ್ತಿನ ಎಂಬತ್ತರಷ್ಟು ಭಾಷೆಗಳು ಅಳಿದು, ಕಳೆದು ಹೋಗುತ್ತವೆಯೆಂದು ಭಾಷಾ ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಎಷ್ಟೋ ಭಾಷೆಗಳು ಈಗಾಗಲೇ ಅವಸಾನದ ಅಂಚಿಗೆ ಬಂದು ನಿಂತಿವೆ.
ಅವುಗಳ ಸ್ಥಿತಿ ಕನ್ನಡಕ್ಕೆ ಬರಬಾರದು. ಕನ್ನಡವನ್ನು ಉಳಿಸಿಕೊಳ್ಳುವುದೂ ಕನ್ನಡಿಗರ ಕೈಯಲ್ಲಿಯೇ ಇದೆ. ಕನ್ನಡ ಭಾಷೆ ಇಂದು- ನಿನ್ನೆಯದಲ್ಲ. ಅದಕ್ಕೆ ಪ್ರಾಚೀನ ಇತಿಹಾಸ ಇದೆ.

ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇಲ್ಲದಿದ್ದಾಗ ಕರ್ನಾಟಕದಲ್ಲಿ ಕನ್ನಡ ಇತ್ತು. ಇಂಗ್ಲಿಷಿನ ಮೊಟ್ಟಮೊದಲನೆಯ ಪುಸ್ತಕ, ಚಾಸರ್‌ನ `ಕ್ಯಾಂಟರ್‌ಬರೀ ಟೇಲ್ಸ್' ಹದಿನಾಲ್ಕನೆಯ ಶತಮಾನದಲ್ಲಿ ಬಂದರೆ, ಕನ್ನಡದ `ವೊಡ್ಡಾರಾಧನೆ' ಅದಕ್ಕಿಂತ ಏಳುನೂರು ವರ್ಷಗಳ ಹಿಂದೆಯೇ ಬಂದಿದೆ.

ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ. ಅದು, ಜಗತ್ತಿನ 15-20 ಹಳೆಯ ಭಾಷೆಗಳಲ್ಲಿ ಒಂದು. ಇದರ ಬಗೆಗೆ ಕನ್ನಡಿಗರಲ್ಲಿ ಸಹಜವಾದ ಅಭಿಮಾನ ಇರಬೇಕು. ಚೈತನ್ಯ ಕಳೆದುಕೊಂಡು ಸಾವಿನ ಸ್ಥಿತಿಯನ್ನು ತಂದುಕೊಂಡಿದ್ದ ಯಹೂದಿ ಭಾಷೆಗೆ ಇಸ್ರೇಲಿಗಳು ಬದುಕುವ ಮದ್ದು ನೀಡಿ ಅದಕ್ಕೆ ನವಚೇತನ ಒದಗಿಸಿಕೊಟ್ಟಿದ್ದಾರೆ. ಒಂದು ಭಾಷೆ ಬದುಕುವುದೂ ಸಾಯುವುದೂ ಆ ಭಾಷೆಯನ್ನು ಆಡುವವರ ಕೈಯಲ್ಲಿಯೇ ಇದೆ.

ಇದು ಗುಬ್ಬಿಯನ್ನು ತನ್ನ ಮುಷ್ಟಿಯಲ್ಲಿ ಮುಚ್ಚಿಕೊಂಡಿದ್ದ ಕಥೆಯಂತೆಯೇ ಇದೆ. ಅದು ಸತ್ತಿದೆಯೆಂದು ಹೇಳಿದರೆ ಅವನು ಅದನ್ನು ಪುರ‌್ರನೇ ಹಾರಿಬಿಡುತ್ತಾನೆ. ಅದು ಬದುಕಿದೆಯೆಂದು ಹೇಳಿದರೆ ಅವನು ಅದರ ಕತ್ತು ಹಿಸುಕಿ ಸಾಯಿಸುತ್ತಾನೆ. ಈಗ ಕನ್ನಡಿಗರ ಕೈಯಲ್ಲಿ ಕನ್ನಡದ ಸ್ಥಿತಿಯೂ ಅದೇ ರೀತಿಯಾಗಿದೆ. ಅವರು ಅದನ್ನು ಬದುಕಿಸುವ ಸಂಕಲ್ಪ ತೊಟ್ಟರೆ ಅದು ಬದುಕಿ ಉಳಿಯುತ್ತದೆ. ಬೆಳೆದು ವಿಜೃಂಭಿಸುತ್ತದೆ. ಇಲ್ಲದಿದ್ದರೆ ಅದು ಅವರ ಕಣ್ಣೆದುರಿನಲ್ಲಿಯೇ ಕಳೆದು ಕಣ್ಮರೆಯಾಗಿ ಹೋಗುತ್ತದೆ.

ಕನ್ನಡವನ್ನು ಬದುಕಿಸಬೇಕು, ಬೆಳೆಸಬೇಕು ಎನ್ನುವ ಸಂಕಲ್ಪವನ್ನು ಕನ್ನಡ ಜನ, ಅವರ ಸರ್ಕಾರ ಸಂಕಲ್ಪ ತೊಟ್ಟರೆ ಕನ್ನಡಕ್ಕೆ ವರ್ತಮಾನ ಹಾಗೂ ಭವಿಷ್ಯತ್ತು ಎರಡೂ ಇವೆ.ಕನ್ನಡಿಗರಲ್ಲಿ ಈಗ ಇಂಗ್ಲಿಷಿನ ಮೋಹ ಆವರಿಸಿಕೊಂಡಿದೆ. ಸಾಮಾನ್ಯ ಮನೆಗಳಲ್ಲಿ ಕೂಡ ಈಗ ಅವ್ವ, ಅಪ್ಪ ಪದಗಳು ಉಳಿದಿಲ್ಲ. ಹಳೆಯ ಅಲಂಕಾರಗಳೆಂಬಂತೆ ಅವು ಅಸಹ್ಯವೆನಿಸಿ, ಅವುಗಳ ಸ್ಥಳದಲ್ಲಿ ಮಮ್ಮಿ, ಡ್ಯಾಡಿ ಎಂಬ ಪದಗಳನ್ನು ತಂದುಕೊಂಡಿದ್ದೇವೆ.

ಮುಂಚಿನ ಮಾನವ ಸಂಬಂಧಗಳು ಈಗ ಉಳಿದಿಲ್ಲ. ಗಂಡಸರು, ಅವರು ಯಾರೇ ಇರಲಿ, ಅವರೆಲ್ಲರೂ ಈಗ ಅಂಕಲ್ ಆಗಿದ್ದಾರೆ. ಹೆಂಗಸರು ಯಾರೇ ಇರಲಿ, ಅವರೆಲ್ಲರೂ ಆಂಟಿ ಆಗಿದ್ದಾರೆ. ಈ ಪದಗಳು ಈಗ ಸ್ಥಿತಿವಂತರನ್ನು ಮಾತ್ರವಲ್ಲ, ಕೂಲಿ ಕುಂಬಳಿ ಮಾಡುವ ಜನರನ್ನು ಹಿಡಿದುಕೊಂಡು, ಅವರ ಶಬ್ದಕೋಶದಲ್ಲಿ ಸೇರಿಕೊಂಡಿವೆ. ದಿನನಿತ್ಯದ ನಮ್ಮ ಮಾತಿನಲ್ಲಿ ಇಂಗ್ಲಿಷ್ ಪದಗಳಿಗೆ ಪ್ರಾಮುಖ್ಯತೆ ಬಂದು ಕನ್ನಡ ಶಬ್ದಗಳು ಹಿಂದೆ ಸರಿಯತೊಡಗಿವೆ.

ನಾವು ನಮ್ಮ ಮಾತಿನಲ್ಲಿ ಕನ್ನಡ ಶಬ್ದಗಳನ್ನು ಹಿಂದಕ್ಕೆ ದೂಡಿ ಇಂಗ್ಲಿಷ್ ಪದಗಳನ್ನು ಹೆಚ್ಚು ಹೆಚ್ಚಾಗಿ ಬಳಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಭಾರತೀಯರಲ್ಲಿ, ತಾನು ಆಡುವ ಮಾತಿನಲ್ಲಿ ಇಂಗ್ಲಿಷ್ ಶಬ್ದಗಳನ್ನು ಉಪಯೋಗಿಸುವವರು ಕನ್ನಡ ಜನರನ್ನು ಬಿಟ್ಟರೆ ಬೇರೆ ಯಾರೊಬ್ಬರೂ ಇಲ್ಲ.

ಇಂಗ್ಲಿಷನ್ನು ತಮ್ಮ ಮಾತಿನಲ್ಲಿ ಉಪಯೋಗಿಸುವವರು ಸುಧಾರಿಸಿದ ಜನ ಎಂಬ ಹುಚ್ಚಿಗೆ ಬಿದ್ದು ಕನ್ನಡ ಜನರೇ ಕನ್ನಡವನ್ನು ಕೊಲ್ಲತೊಡಗಿದ್ದಾರೆ.ಕನ್ನಡ ಬಲ್ಲವರೊಡನೆ ಮಾತನಾಡುವಾಗಲೂ ತಮಗೆ ಇಂಗ್ಲಿಷ್ ಬರುತ್ತದೆ, ತಾವು ಸುಧಾರಿಸಿದವರು ಎನ್ನುವುದನ್ನು ತೋರಿಸಿಕೊಳ್ಳಲು ಅವರು ತಮ್ಮ ಬಟ್ಲರ್ ಇಂಗ್ಲಿಷಿನಲ್ಲಿಯೇ ಮಾತನಾಡಬೇಕೆನ್ನುತ್ತಾರೆ.

ದೈನಂದಿನ ಸುದ್ದಿಗಳನ್ನು ಪ್ರಕಟಿಸುವ ನಮ್ಮ ಹಲವಾರು ಪತ್ರಿಕೆಗಳು ಕನ್ನಡವನ್ನು ಕುಲಗೆಡಿಸತೊಡಗಿವೆ. ಕನ್ನಡ ಶಬ್ದಗಳನ್ನು ಉಪಯೋಗಿಸುವ ಕಡೆಯಲ್ಲಿಯೂ ಅವು ಇಂಗ್ಲಿಷ್ ಶಬ್ದಗಳನ್ನು ತಂದು ತುರುಕತೊಡಗಿವೆ. ಅನಿವಾರ್ಯವೆನ್ನುವ ಕಡೆಯಲ್ಲಿ ಅವು ಇಂಗ್ಲಿಷ್ ಶಬ್ದಗಳನ್ನು ಉಪಯೋಗಿಸಬಹುದು. ಆದರೆ ಅಂಥ ಅನಿವಾರ್ಯತೆಯೇನೂ ಇರುವುದಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳಲ್ಲಿ ಇಂಗ್ಲಿಷ್ ಶಬ್ದಗಳನ್ನು ಸಿಕ್ಕಾಪಟ್ಟೆಯಾಗಿ ತಂದು ತುರುಕತೊಡಗಿದ್ದಾರೆ. ಕನ್ನಡ ಭಾಷೆಯನ್ನು ಕೆಡಿಸಲು ಏನೆಲ್ಲ ಮಾಡಬೇಕೋ ಅದನ್ನು ಬಹು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಬಿತ್ತರಣೆಗೊಳ್ಳುತ್ತವೆ. ಅಲ್ಲಿ ಮಕ್ಕಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮುಖ್ಯ ಅಧ್ಯಾಪಕರು `ಮಕ್ಕಳೇ, ನೀವು ನಾಳೆ ನಿಮ್ಮ ಪೇರೆಂಟನ್ನು ಕರೆದುಕೊಂಡು ಬನ್ನಿ ಎನ್ನುತ್ತ, `ಈಗ ನೀವು ನಿಮ್ಮ ಕ್ಲಾಸಿಗೆ ಹೋಗಿ' ಎಂದು ಹೇಳುತ್ತಾರೆ. ಕನ್ನಡ ಭಾಷೆಯನ್ನು ಹಂಡಬಂಡಗೊಳಿಸುವ ಈ ಕೆಟ್ಟ ಕೆಲಸಕ್ಕೆ ಎಂದು ಕೊನೆ ಆಗುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT