ಹದಿನಾರರಿಂದ ಹದಿನೆಂಟು ವರ್ಷದೊಳಗಿನ ಆರೋಪಿಗಳನ್ನು ವಯಸ್ಕರಂತೆ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ಸೇರಿದಂತೆ ಉಗ್ರ ಶಿಕ್ಷೆ ನೀಡಬೇಕೆಂಬ ಬೇಡಿಕೆ ದೇಶದೆಲ್ಲೆಡೆ ಎದ್ದ ಪರಿಣಾಮ ಜಾರಿಯಾದ 2015ರ ಬಾಲನ್ಯಾಯ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದರಲ್ಲಿ ಸರ್ಕಾರ ಎಡವಿದಂತಿದೆ. ಘೋರಾಪರಾಧ ಮಾಡುವ 16–18 ವರ್ಷದ ಒಳಗಿನ ಆರೋಪಿಗಳನ್ನು ಏನು ಮಾಡಬೇಕೆಂಬ ವಿವರಣೆ ಕಾಯ್ದೆಯ ಕಲಂ 15ರಲ್ಲಿ ಇದೆ.

ಸಾಮಾನ್ಯವಾಗಿ 18 ವರ್ಷದೊಳಗಿನ ಎಲ್ಲ ಬಾಲಾರೋಪಿಗಳನ್ನೂ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತದೆ. ಇವರನ್ನು ವಿಚಾರಣೆ ನಡೆಸುವ ಅಧಿಕಾರ ಮಂಡಳಿಯು ಹೊಂದಿರುತ್ತದೆ. ಆದರೆ, 16ರಿಂದ 18 ವರ್ಷದೊಳಗಿನ ಆರೋಪಿಗಳ ವಿಚಾರದಲ್ಲಿ ಮಂಡಳಿಯ ಪಾತ್ರ ಭಿನ್ನವಾಗಿದೆ. ಘೋರಾಪರಾಧ ಮಾಡಿದ್ದಾರೆ ಎನ್ನಲಾದ ಈ ವಯೋಮಾನದ ಮಕ್ಕಳ ಮಾನಸಿಕ ಪಕ್ವತೆ ಬಗ್ಗೆ ತಜ್ಞರ ಸಮಿತಿ ಮೂಲಕ ಅಧ್ಯಯನ ಮಾಡಿಸಬೇಕು. ತಜ್ಞರ ಸಮಿತಿಯಲ್ಲಿ ಒಬ್ಬ ಮನೋವಿಜ್ಞಾನಿ, ಸಮಾಜ ವಿಜ್ಞಾನಿ ಇರಬೇಕು. ಇಂತಹವರ ಪಟ್ಟಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಕಚೇರಿಯು ತಯಾರಿಸಿ ಮಂಡಳಿಗೆ ನೀಡಿರಬೇಕು. ತಜ್ಞರನ್ನು ಮಂಡಳಿ ಗುರುತಿಸಬೇಕು. ಆಪ್ತ ಸಮಾಲೋಚನೆ, ವಿಶ್ಲೇಷಣೆ ಮೂಲಕ ಆರೋಪಿ ಮಕ್ಕಳ ಮಾನಸಿಕ ಸ್ಥಿಮಿತ, ಪಕ್ವತೆ ಬಗ್ಗೆ ಮಂಡಳಿಗೆ ವರದಿ ನೀಡುವುದು ಈ ಸಮಿತಿಯ ಜವಾಬ್ದಾರಿ.

ಘೋರ ಆರೋಪ ಎದುರಿಸುವ ಮಕ್ಕಳ ಪಾಲಿಗೆ ತಜ್ಞರ ಸಮಿತಿ ನೀಡುವ ವರದಿ ಅಥವಾ ಪ್ರಮಾಣಪತ್ರ ಬಹಳ ಮುಖ್ಯ. ಅವರ ಭವಿಷ್ಯ ಇದರ ಮೇಲೆ ನಿಂತಿದೆ. ಅಪರಾಧ ಮಾಡಲು ಪೂರಕವಾದ ಪಕ್ವತೆ ಅವರಿಗೆ ಇತ್ತು ಎಂದಾದರೆ ಮಕ್ಕಳನ್ನು ಮಂಡಳಿಯು ಜಿಲ್ಲಾ ಮಕ್ಕಳ ನ್ಯಾಯಾಲಯಕ್ಕೆ (ಸೆಷನ್ಸ್ ನ್ಯಾಯಾಲಯ) ವರ್ಗಾಯಿಸಬೇಕು. ಅಲ್ಲಿ ಈ ಮಕ್ಕಳನ್ನು ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಿ ತೀರ್ಪು ನೀಡಲಾಗುತ್ತದೆ.

ಆರೋಪಿತ ಕೃತ್ಯ ನಡೆಸುವಾಗ ಮಕ್ಕಳಿಗೆ ಪಕ್ವತೆ ಇರಲಿಲ್ಲ ಎಂದಾದರೆ, ಅಂತಹ ಮಕ್ಕಳನ್ನು ಮಂಡಳಿಯೇ ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ. ಇಲ್ಲಿ ಈ ವಯೋಮಾನದ ಬಾಲಾರೋಪಿಗಳ ಭವಿಷ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಬಹಳ ಮಹತ್ವ ಪಡೆದಿದೆ.

ಆದರೆ, ಹೊಸ ಬಾಲನ್ಯಾಯ ಕಾಯ್ದೆ ಜಾರಿಯಾಗಿ 20 ತಿಂಗಳು ಕಳೆದಿವೆ. ಮಾದರಿ ನಿಯಮಗಳು 2016ರ ಸೆಪ್ಟೆಂಬರ್ನಲ್ಲಿ ಜಾರಿಯಾಗಿವೆ. ಆದರೆ, ಘೋರಾರೋಪ ಎದುರಿಸುವ 16–18 ವಯೋಮಾನದವರನ್ನು ವಿಚಾರಣೆ ನಡೆಸುವ ಮಕ್ಕಳ ನ್ಯಾಯಾಲಯವು ಇನ್ನೂ ಸ್ಥಾಪನೆಯಾಗಿಲ್ಲ. ಜಿಲ್ಲೆಗೆ ಒಂದರಂತೆ ಸೆಷನ್ಸ್ ಅಧಿಕಾರವಿರುವ ನ್ಯಾಯಾಲಯವನ್ನು ಈಗಾಗಲೇ ನಿಯೋಜಿಸಬೇಕಿತ್ತು. ಈ ನ್ಯಾಯಾಲಯಕ್ಕೆ ಬಾಲನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಮನೋವಿಜ್ಞಾನದಲ್ಲಿ ವಿಶೇಷ ತರಬೇತಿ ಪಡೆದ ನ್ಯಾಯಾಧೀಶರು ನೇಮಕವಾಗಬೇಕಿತ್ತು.

ಪ್ರಸ್ತುತ ಸೆಷನ್ಸ್ ನ್ಯಾಯಾಲಯವೇ ಈ ಪಾತ್ರವನ್ನು ನಿಭಾಯಿಸುತ್ತದೆ ಎಂದೇ ಭಾವಿಸಬೇಕು. ಈ ಪ್ರಕ್ರಿಯೆ ಬಗ್ಗೆ ಬಾಲನ್ಯಾಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇನ್ನೂ ಸ್ಪಷ್ಟತೆ ಇಲ್ಲ. ಒಂದೇ ತರಹದ ಪ್ರಕರಣಕ್ಕೆ ಎರಡು ಬಾಲನ್ಯಾಯ ಮಂಡಳಿಗಳು ಭಿನ್ನವಾದ ತೀರ್ಪು ನೀಡಿರುವ ಉದಾಹರಣೆ ಇದೆ.

ಬಾಲನ್ಯಾಯ ಮಂಡಳಿಯ ಅಧ್ಯಕ್ಷರು ಹಿರಿಯ ಶ್ರೇಣಿ ನ್ಯಾಯಾಧೀಶರಾಗಿರುವುದರಿಂದ ಘೋರಾರೋಪ ಎದುರಿಸುವ ಮಕ್ಕಳನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ಆದೇಶವೇ ಹೊರಬೀಳುತ್ತದೆ. ಮಂಡಳಿಯಲ್ಲಿರುವ ಇಬ್ಬರು ಸದಸ್ಯರು ಇದನ್ನು ಪ್ರಶ್ನಿಸಿದ ಉದಾಹರಣೆಗಳೇ ಇಲ್ಲ.

ಘೋರಾರೋಪ ಎದುರಿಸುವ 16-18 ವರ್ಷದೊಳಗಿನವರನ್ನು ಹೇಗೆ ವಿಚಾರಣೆ ನಡೆಸಬೇಕೆನ್ನುವ ಮಾರ್ಗದರ್ಶನಗಳು ಈಗ ಬಾಲನ್ಯಾಯ ಮಂಡಳಿ ಮುಂದೆ ಇಲ್ಲ. ಆದುದರಿಂದಲೇ, ಒಂದೇ ಪ್ರಕರಣಕ್ಕೆ ಬಾಲನ್ಯಾಯ ಮಂಡಳಿಗಳು ಭಿನ್ನವಾದ ತೀರ್ಮಾನ ತೆಗೆದುಕೊಂಡರೆ ಆಶ್ಚರ್ಯವಿಲ್ಲ. ತಜ್ಞರ ಪಟ್ಟಿಯೂ ಜಿಲ್ಲೆಗಳಲ್ಲಿ ಇನ್ನೂ ಸಿದ್ಧವಿಲ್ಲ.

ಹಾಲಿ ಸೇವೆ ಸಲ್ಲಿಸುತ್ತಿರುವ ಬಾಲನ್ಯಾಯ ಮಂಡಳಿಗಳ ಸದಸ್ಯರ ಅವಧಿ ಇದೇ ತಿಂಗಳಲ್ಲಿ ಮುಗಿಯಲಿದೆ; ಹೊಸ ಸದಸ್ಯರು ನೇಮಕವಾಗಲಿದ್ದಾರೆ.
ಅವರಿಗೆ ತರಬೇತಿ ಕಡ್ಡಾಯ. 16–18 ವಯೋಮಾನದ ಮಕ್ಕಳ ವಿಚಾರದಲ್ಲಿ ಕೂಲಂಕಷವಾದ ಚರ್ಚೆಯ ಅಗತ್ಯವಿದ್ದು ಬಾಲನ್ಯಾಯ ಮಂಡಳಿಗಳಲ್ಲಿ ಆದಷ್ಟು ನ್ಯಾಯಯುತವಾದ ತೀರ್ಮಾನ ತೆಗೆದುಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಸದಸ್ಯರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರಾದ ನ್ಯಾಯಾಧೀಶರಿಗೂ ತರಬೇತಿ ನೀಡಿದರೆ ಅದು ಬಹಳ ಪರಿಣಾಮಕಾರಿಯಾಗಲಿದೆ. ನ್ಯಾಯಾಧೀಶರು ಮತ್ತು ಸದಸ್ಯರ ನಡುವೆ ಸಾಮರಸ್ಯ ಬೆಸೆಯಲು ಮತ್ತು ಕಾಯ್ದೆ ಜಾರಿಗೆ ಅನುಕೂಲ ವಾತಾವರಣ ಸೃಷ್ಟಿಸಲು ಇದು ಪೂರಕ.

ಬಾಲನ್ಯಾಯ ಕಾಯ್ದೆಯ ಸಮರ್ಪಕ ಜಾರಿಯ ಉಸ್ತುವಾರಿಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನೀಡಲಾಗಿದೆ. 2015ರ ಕಾಯ್ದೆಯಲ್ಲಿ ಈ ಅಂಶ ಹೊಸದಾಗಿ ಸೇರ್ಪಡೆಯಾಗಿದ್ದು, ಆಯೋಗವು ನಿಯಮಿತವಾಗಿ ಬಾಲನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಬೇಕು. ಆದರೆ, ಆಯೋಗವು ಇನ್ನೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ.

2015ರಲ್ಲಿ ಬಾಲನ್ಯಾಯ ಕಾಯ್ದೆ ರಚನೆಯಾದ ಮೇಲೆ ಘೋರಾರೋಪಿಗಳ ವಿಚಾರಣೆ ಕುರಿತು ಸೃಷ್ಟಿಯಾದ ಗೊಂದಲ ಇನ್ನೂ ಬಗೆಹರಿದಿಲ್ಲ. ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ನ್ಯಾಯಾಂಗವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಈಗ ಇದೆ.

ಲೇಖಕ: ಮಕ್ಕಳ ಹಕ್ಕುಗಳ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.