ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಗನ್ ಪ್ರಕರಣದ ಪಾಠಗಳು...

Last Updated 3 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಪೆರುಮಾಳ್ ಮುರುಗನ್ ಎಂಬ ತಮಿಳು ಲೇಖಕರು ತಮ್ಮೆಲ್ಲ ಕೃತಿಗಳನ್ನೂ ಹಿಂತೆಗೆ­ದು­ಕೊಂಡು ತಮ್ಮ ‘ಸಾವನ್ನು’ ಘೋಷಿಸಿದ ಸುದ್ದಿ ಇನ್ನೂ ಜನಮಾನಸದಲ್ಲೇ ಇದೆ. ಇದು ದುಃಖವೋ, ನೋವೋ ಹೇಳಲಾಗದ ಸ್ಥಿತಿ. ಒಬ್ಬ ಲೇಖಕನ ‘ಸಾವಿನ’ ಸುದ್ದಿ ಹೊತ್ತ ಸಮಾಜಕ್ಕೆ ಇದು ಪ್ರಗತಿಯೋ, ವಿಗತಿಯೋ ಅಥವಾ ನಾವಿ­ರುವ ಸಮಾಜದ ಅಧೋಗತಿಯೋ ಅರ್ಥವಾ­ಗದ ಘಟ್ಟದಲ್ಲಿ ನಾವಿದ್ದೇವೆ. ಯಾಕೆ ಈ ಒಂದು ಘಟನೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಅಥವಾ ಬೆಂಬಲ ವ್ಯಕ್ತವಾಗುತ್ತಿಲ್ಲ? ಇದು ಭಯವೋ, ಅಂಧತ್ವವೋ, ಅಶಕ್ತಿಯೋ? ನಾವೇಕೆ ಹೀಗೆ ದನಿ ಕಳೆದುಕೊಂಡಿದ್ದೇವೆ?

ಇದು ಪೆರುಮಾಳ್ ಒಬ್ಬರ ‘ಸಾವು’ ಖಂಡಿತಾ ಅಲ್ಲ. ಭಾರತದ ಪ್ರತಿಯೊಬ್ಬ ಸಾಹಿತಿ, ಕಲಾವಿದ ಮತ್ತು ಸಂಸ್ಕೃತಿ ಹಾಗೂ ಪರಂಪರೆಯ ಸಾವು. ಸಾಹಿತಿಗಳು, ನಾಟಕಕಾರರು, ರಂಗಭೂಮಿ ಇವೆಲ್ಲ ನನ್ನ ದೃಷ್ಟಿಯಲ್ಲಿ ಸಮಾಜವನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸಿ, ಅದರ ಪ್ರತಿಗಾಮಿತನ­ವನ್ನು, ವೈರುಧ್ಯಗಳನ್ನು, ಅಂಧಾನುಕರಣೆಗಳನ್ನು, ತಾರತಮ್ಯ ಹಾಗೂ ತಪ್ಪುಗಳನ್ನು ಎತ್ತಿ ತೋರಿ­ಸುವ ಮಾಧ್ಯಮ. ಈ ಕೆಲಸ ಹಿಂದಿನಿಂದಲೂ ಆಗು­ತ್ತಲೇ ಇದೆ. ವಿರೋಧಗಳ ಸ್ವರೂಪ ಹೀಗಿತ್ತೆ? ನನ್ನ ಅನಿಸಿಕೆಯ ಪ್ರಕಾರ ಹಿಂದೆ ಜನ ಹಾಗೂ ಸಾಹಿತಿಗಳ ನಡುವೆ ಒಂದು ಸಂವಾದ ಸಾಧ್ಯ­ವಿತ್ತು. ಜನ ಒಂದು ಕೃತಿಯನ್ನು ಒಪ್ಪುತ್ತಿದ್ದರು ಅಥವಾ ಬಿಡುತ್ತಿದ್ದರು. ಮುಟ್ಟುಗೋಲು ಹಾಕಿ­ಕೊಂಡ ನಿದರ್ಶನಗಳು ಇವೆಯಾದರೂ, ಹಾಗೆ ಆದಾಗ ಪ್ರತಿರೋಧ ಇದ್ದೇ ಇರುತ್ತಿತ್ತು. ಮುಟ್ಟು­ಗೋಲು ಹಾಕಿಕೊಂಡ ಕೃತಿಯನ್ನೂ ಜನ ಹುಡುಕಿ ಓದುತ್ತಿದ್ದರು. ಚರ್ಚೆಗಳಾಗುತ್ತಿದ್ದವು.

ಹಾಗೆ ನೋಡಿದರೆ, ಕಾಲ ಸರಿದಂತೆ ನಾವು ಹೆಚ್ಚು ಪಕ್ವವಾಗಬೇಕಿತ್ತು. ಹೌದು, ಹಿಂದೆ ಬಹಳ ಸುಲಭವಾಗಿ ಮಾತನಾಡಿಬಿಡುತ್ತಿದ್ದ ಮಾತು ಇಂದು ಆಡುವ ಮುನ್ನ ನಾವೆಲ್ಲ ಯೋಚಿಸ­ಬೇಕಿದೆ. ಇನ್ನೊಬ್ಬರನ್ನು ಲೇವಡಿ ಮಾಡುತ್ತಿದ್ದೇ­ವೆಯೇ ಅಥವಾ ಸಮಾಜದ ಒಳಗಿನ ವೈರುಧ್ಯ­ಗ­ಳನ್ನು ಬೆಳಕಿಗೆ ತರುತ್ತಿದ್ದೇವೆಯೇ ಎನ್ನುವ ಬಗ್ಗೆಯೂ ಕಲಾವಿದರು, ಸಾಹಿತಿಗಳು ಯೋಚಿ­ಸುವ ಅವಶ್ಯಕತೆ ಖಂಡಿತಾ ಇದೆ. ಆದರೆ, ಪ್ರಜಾ­ಪ್ರಭುತ್ವದ ನೆರಳಿನಲ್ಲಿ ಒಬ್ಬ ಲೇಖಕನ ಅಭಿವ್ಯಕ್ತಿ­ಯನ್ನು ಕಸಿದುಕೊಳ್ಳುವ ಹಕ್ಕು, ವಿರೋಧಿಸುವ ಗುಂಪುಗಳಿಗೆ ಯಾವತ್ತು ವರ್ಗಾವಣೆಯಾಯಿತು ಎನ್ನುವುದು ನಮ್ಮ ಗಮನಕ್ಕೆ ಬರಲೇ ಇಲ್ಲವಲ್ಲ!

ಆದರೆ, ಇಂದು ಇರುವ ಪರಿಸ್ಥಿತಿ ನೋಡಿದರೆ ಮುಂದಿನ ದಿನಗಳ ಬಗ್ಗೆ ಬಹಳ ಆತಂಕ ಹುಟ್ಟು­ತ್ತದೆ. ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿವೆ. ಮಠದ ವ್ಯವಸ್ಥೆ ಕುರಿತು ಪ್ರಶ್ನೆ ಎತ್ತು­ತ್ತಲೇ ಅದರ ಅನಿವಾರ್ಯವನ್ನೂ ಒಪ್ಪುವ ‘ಸತ್ತವರ ನೆರಳು’ ನಾಟಕವನ್ನು ‘ಮನೋಹರ ಗ್ರಂಥ ಮಾಲೆ’ಯ ಜಿ.ಬಿ. ಜೋಶಿಯವರು ಬರೆದು, ಪ್ರಕಟಿಸಿದ ನಂತರ ಬಿ.ವಿ. ಕಾರಂತರಂಥ ನಿರ್ದೇಶಕರು ದಾಸರ ಪದಗಳನ್ನು ಅಳವಡಿಸಿ ಇಂದು ರಂಗದ ಮೇಲೆ ತರಲು ಸಾಧ್ಯವಿತ್ತೇ? ಬಸವಣ್ಣನನ್ನು, ಬಿಜ್ಜಳನನ್ನು ಆತ್ಮಾವ­ಲೋಕ­ನದ ಬೆಳಕಿನಲ್ಲಿ ನೋಡುವ ಲಂಕೇಶರ ‘ಸಂಕ್ರಾಂತಿ’ ಇಂದು ರಂಗಭೂಮಿಯನ್ನೇರಲು ಸಾಧ್ಯವಿತ್ತೆ?

ಒಂದು ಕೃತಿಯ ‘ಲೈಫ್‌’ ಎಷ್ಟು? ಪೆರುಮಾಳ್ ಮುರುಗನ್ ಬರೆದದ್ದಾದರೂ ಏನು? ತಿರುಚಂಗೋಡು ದೇವಾಲಯದಲ್ಲಿರುವ ನಿಯೋಗ ಪದ್ಧತಿಯನ್ನು ತನ್ನ ಕಾದಂಬರಿಯ ಅಂಶವಾಗಿಸಿದ್ದು. ಕಾದಂಬರಿಯ ಪಾತ್ರದಲ್ಲಿ ನಿಯೋಗವೇ ಪ್ರಮುಖವಾಗಿ ದೇವಾಲಯ ಹಿನ್ನೆಲೆಯಲ್ಲಿದೆಯೋ, ಅಥವಾ ದೇವಾಲಯವೇ ಪ್ರಮುಖವಾಗಿ ನಿಯೋಗ ಹಿನ್ನೆಲೆಯಲ್ಲಿದೆಯೋ ನನಗೆ ತಿಳಿಯದು. ಆದರೆ, ಈ ತೆರನ ಪದ್ಧತಿಗಳನ್ನು ನಮ್ಮ ಧರ್ಮಗ್ರಂಥಗಳು ಹಿಂದೆಯೇ ಒಳಗೊಂಡಿ­ದ್ದವಲ್ಲ? ನಮ್ಮ ಪೂರ್ವಸೂರಿಗಳಿಗೆ ಎಂಥಾ ಪ್ರಬುದ್ಧತೆ ಇತ್ತಲ್ಲ?

ನಮ್ಮ ‘ಸ್ಪಂದನ’ ತಂಡದಿಂದ ಎಪ್ಪತ್ತರ ದಶಕ­ದಲ್ಲಿ ಹಿಂದಿ ನಾಟಕಕಾರ ಸುರೇಂದ್ರ ವರ್ಮರ ‘ಸೂರ್ಯ ಕೆ ಅಂತಿಮ್ ಕಿರಣ್‌ ಸೆ ಪಹಲೆ ಕಿರಣ್‌ ತಕ್’ (ಸೂರ್ಯನ ಕೊನೆಯ ಕಿರಣದಿಂದ ಮೊದಲ ಕಿರಣದವರೆಗೆ) ನಾಟಕದ ಕನ್ನಡ ಅವತರಣಿಕೆಯನ್ನು (ಅನು: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ) ರಂಗಕ್ಕೆ ಅಳವಡಿಸಿದ್ದೆವು. ಅದರಲ್ಲಿ ನಿಯೋಗ ಪದ್ಧತಿಯ ಉಲ್ಲೇಖ ಇದೆ. ರಾಜ ತನ್ನ ರಾಜ್ಯಕ್ಕೊಬ್ಬ ವಾರಸುದಾರ ಬೇಕು ಎನ್ನುವ ಕಾರ­ಣಕ್ಕೆ ರಾಣಿಯನ್ನು ನಿಯೋಗ ಪದ್ಧತಿಯಿಂದ ಮಗ­ನನ್ನು ಪಡೆಯಲು ಒಪ್ಪಿಸುತ್ತಾನೆ. ಮೊದಮೊದ­ಲಿಗೆ ಆಕೆ ವಿರೋಧಿಸಿದರೂ ನಂತರ ಅವನ ಒತ್ತಾಯಕ್ಕೆ ಮಣಿದು ಆ ಧರ್ಮ-ಸಮ್ಮತಿಯುಳ್ಳ ಪದ್ಧತಿಗೆ ಒಪ್ಪುತ್ತಾಳೆ.

ಸೂರ್ಯನ ಕೊನೆಯ ಕಿರಣ ಅಂದರೆ ಸಂಜೆಯಾದ ನಂತರದಿಂದ ಆಕೆ ತನ್ನ ಇಷ್ಟದ ಒಬ್ಬನ ಜೊತೆ ರಾತ್ರಿ ಕಳೆಯಬೇಕು. ಮರು­ದಿನ ಸೂರ್ಯನ ಮೊದಲ ಕಿರಣ ಭೂಮಿ ಸೋಕುವ ಮುನ್ನ ಆಕೆ ಅಲ್ಲಿಂದ ಹೊರಟಿರಬೇಕು. ತನ್ನ ಬಲವಂತದ ಮದುವೆಗೆ ಮುನ್ನ ಆಕೆಯ ಜೀವ­ನದಲ್ಲಿ ಇದ್ದ ಪ್ರೇಮಿಯ ಜೊತೆ ಕಾಲ ಕಳೆದು ಮರಳಿ ಅರಮನೆಗೆ ಬಂದ ಆಕೆ ತಾನು ತಲುಪಿದ ಉನ್ಮಾದದ ಚರಮ ಸ್ಥಿತಿಯನ್ನು ರಾಜನ ಮುಂದೆ ಹೇಳುತ್ತಾಳೆ. ಇಂದು ಈ ನಾಟಕವನ್ನು ಆಡಲು ಸಾಧ್ಯವಿದೆಯೆ ಎಂದು ಯೋಚಿಸಿದರೆ ನನಗೆ ಚಿಂತೆಯೆನಿಸುತ್ತದೆ.
ಕನ್ನಡದ ಹಿರಿಯ ಲೇಖಕ ಶಂಕರ ಮೊಕಾಶಿ ಪುಣೇಕರರ ‘ಅವಧೇಶ್ವರಿ’ಯಲ್ಲೂ ನಿಯೋಗದ ಪಾತ್ರ ಹಿರಿದಾಗಿದೆ. ಇಂದು ಅವರು ಈ ಪುಸ್ತಕ­ವನ್ನು ಬಿಡುಗಡೆ ಮಾಡಲು ಸಾಧ್ಯವಿತ್ತೆ ಎಂದು ಆತಂಕವಾಗುತ್ತದೆ.

ಇಂದು ನಮ್ಮ ನಡುವೆ ಅಕ್ಷರಸ್ಥರು ಹೆಚ್ಚಿದ್ದಾರೆ ಆದರೆ ಅವರ ಮನಸ್ಸುಗಳು ಅರಳುತ್ತಿಲ್ಲ. ಜ್ಞಾನ­ವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಅಕ್ಷರ ನಮಗೆ ಕೊಡಲಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂಥಾ ಒಂದು ಲೋಪ ಹೇಗೆ ಆಯಿತು? ಒಂದು ಭಿನ್ನ ದೃಷ್ಟಿಕೋನವನ್ನೂ ಒಪ್ಪಿಕೊಳ್ಳದ ಪರಿಸ್ಥಿತಿಗೆ ಹೇಗೆ ಬಂದೆವು? ಯಾವಾಗ ಬಂದೆವು?

ಕಾರಣಗಳು ಹಲವಾರು ಇರಬಹುದು. ನಿಜ­ವಾಗಿ ನೋಡಬೇಕೆಂದರೆ ಪ್ರಕೃತಿ­ದತ್ತ­ವಾದ ಯಾವ ನಡಾವಳಿಯೂ ಸಮಾಜದ ಕೆಲವು ಜಿಡ್ಡಿನ ಕಟ್ಟುಪಾಡುಗಳಿಗೆ ಒಳಪಡುವುದು ಸಾಧ್ಯವಿಲ್ಲ. ಆದರೆ ‘ಸಮಾಜ’ ಎನ್ನುವುದು ಕಲಿತ­ವರ ಸಹಿಷ್ಣುತೆಯ ಪ್ರತೀಕವಾಗಿ ಇರಬೇಕೆ ವಿನಾ ಮುಗ್ಧರ ಮನಸ್ಸನ್ನು ಕೆರಳಿಸುವ ಸಾಧನ­ವಾಗ­ಬಾರದು.

ಪೆರುಮಾಳ್ ಮುರುಗನ್ ತಮ್ಮೆಲ್ಲ ಕೃತಿಗ­ಳನ್ನು ಒತ್ತಡಕ್ಕೆ ಒಳಗಾಗಿ ಹಿಂತೆಗೆದುಕೊಂಡಿ­ದ್ದಾರೆ, ಅವರ ವಿವಾದಾಸ್ಪದ ಕೃತಿ ‘ಮಾದೊರು ಬಾಗನ್’ ಅನ್ನೂ ಸೇರಿಸಿ. ಇದು ನಮಗೊಂದು ಕನ್ನಡಿಯಾಗಲಿ. ಪಿ. ಮುರುಗನ್ ಎಂಬ ಹೆಸರಿನ ಶಿಕ್ಷಕನೂ ಇರಲಿ, ಆದರೆ ಪೆರುಮಾಳ್ ಮುರುಗನ್ ಮತ್ತೆ ಜೀವಂತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT