ಶನಿವಾರ, ಮೇ 15, 2021
26 °C

ಬಾಹ್ಯ ಒತ್ತಡವಲ್ಲ ಆಂತರ್ಯ ಮಿಡಿಯಬೇಕು

ಕೆ. ರತ್ನಪ್ರಭಾ Updated:

ಅಕ್ಷರ ಗಾತ್ರ : | |

Deccan Herald

ನಾನು ಸಿ.ಎಸ್‌ ಆದ ಹೊಸತು. ಟ್ವಿಟರ್‌ನಲ್ಲಿ ಹಲವು ಯುವಕರು ಅವರ ಸಮಸ್ಯೆಗಳ ಬಗೆಗೆ ನನ್ನ ಗಮನ ಸೆಳೆಯುತ್ತಿದ್ದರು. ಅಂಥವರಲ್ಲಿ ಶಹಾಪುರದ ಯುವಕನೂ ಒಬ್ಬ. ಆತ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿದ್ದ. ನೇಮಕಾತಿ ಆದೇಶವೂ ಬಂದಿತ್ತು. ಆದರೆ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅಲೆದಾಡುತ್ತಲೇ ಇದ್ದ.

ನಮ್ಮ ರಾಜ್ಯದ ಕೆಪಿಎಸ್‌ಸಿಯು ಯುಪಿಎಸ್‌ಸಿ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆದರೆ ಫಲಿತಾಂಶದ ನಂತರದ ಇಡಿಯ ವ್ಯವಸ್ಥೆ ಇನ್ನಷ್ಟು ಚುರುಕುಗೊಳ್ಳಬೇಕು. ಯುಪಿಎಸ್‌ಸಿಯಲ್ಲಿ ಎಲ್ಲವೂ ಕರಾರುವಕ್ಕಾಗಿ ಆಗುವಂತೆ ಇಲ್ಲಿಯಾಕೆ ಆಗುವುದಿಲ್ಲ? ಒಂದಷ್ಟು ಪ್ರಮಾಣಪತ್ರಗಳಿಗಾಗಿ ಅಭ್ಯರ್ಥಿಗಳು ಯಾಕೆ ಅಲೆಯಬೇಕು? ನಂತರವೂ ಅದೆಷ್ಟೆಲ್ಲ ಗೊಂದಲದ ಗೂಡು... ಅದೇ ಬೇರೆ ಚರ್ಚೆಯಾದೀತು...

ಆ ಹುಡುಗನ ಹೆಸರು ಚೇತನ್‌ ಭಂಡಾರಿ ಎಂದಾಗಿತ್ತು. ಕಲಬುರ್ಗಿ ಕಚೇರಿಗೆ ಫೋನ್‌ ಮಾಡಿ, ಹುಡುಗನ ಸಿಂಧುತ್ವ ವಿಳಂಬವಾಗಲು ಕಾರಣವೇನೆಂದು ವಿಚಾರಿಸಲು ಸೂಚಿಸಿದ್ದೆ. ಅದಾದ ನಂತರ ಎರಡು ಮೂರು ದಿನಗಳ
ಲ್ಲಿಯೇ ಸಿಂಧುತ್ವ ಪ್ರಮಾಣಪತ್ರ ಚೇತನ್‌ಗೆ ದೊರೆಯಿತು.

ಆ ಹುಡುಗನಂಥದ್ದೇ ಸಮಸ್ಯೆ ಸವಿತಾ ಎಂಬ ಯುವತಿಯದು. ಚೇತನ್‌ ತನ್ನ ಸಮಸ್ಯೆ ಪರಿಹಾರವಾದ ಬಗೆಯನ್ನು ಸವಿತಾಗೆ ತಿಳಿಸಿದ್ದ. ಸವಿತಾ ಸಹ ಟ್ವಿಟರ್‌ ಮೂಲಕ ನನ್ನನ್ನು ಸಂಪರ್ಕಿಸಿದಳು. ಅವಳ ವಿಷಯದಲ್ಲಿಯೂ ಯಾವ ಸಮಸ್ಯೆಗಳೂ ಇರಲಿಲ್ಲ. ಆದರೆ ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಕೆಲಸ ಮುಂದೂಡುತ್ತಲೇ ಹೋಗುತ್ತಿತ್ತು.

ಇವರಿಬ್ಬರ ವಿಷಯದಲ್ಲಿಯೂ ಕೇವಲ ದೂರವಾಣಿ ಮೂಲಕದ ಸೂಚನೆಗೆ ಕೆಲಸ ಚುರುಕುಗೊಂಡಿತ್ತು. ಇದರ ಅರ್ಥ, ತಾಂತ್ರಿಕವಾಗಿ ಅವರ ಸಿಂಧುತ್ವ ಪ್ರಮಾಣಪತ್ರ ನೀಡುವಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ವಿಳಂಬಕ್ಕೆ ಗುರು
ತರವಾದ ಕಾರಣಗಳೂ ಇರಲಿಲ್ಲ. ಇವರಿಬ್ಬರ ಸಮಸ್ಯೆಯೇನೋ ಪರಿಹಾರವಾಯಿತು. ಆದರೆ ಹೀಗೆ ಇನ್ನೆಷ್ಟು ಯುವ ಜನರು ಉದ್ಯೋಗ ಕೈಗೆ ಸಿಕ್ಕಾಗಲೂ ಪ್ರಮಾಣಪತ್ರಗಳಿಲ್ಲದೆ ಪರದಾಡಬೇಕಾಗುತ್ತದೆ.

ಸವಿತಾಳಿಗೂ ಪ್ರಮಾಣಪತ್ರ ದೊರೆತ ಮೇಲೆ, ಅವಳು ಇಡೀ ವಿಷಯವನ್ನು ರಾಯಚೂರಿನಲ್ಲಿ ತನ್ನಮ್ಮನಿಗೆ ವಿವರಿಸಿದಳು. ಪ್ರಧಾನ ಕಾರ್ಯದರ್ಶಿಯವರ ಪ್ರವೇಶದಿಂದ ಈ ಕೆಲಸ ಸುಲಭವಾಯಿತು ಎಂದು ಹೇಳಿದಾಗ ಅವರಮ್ಮನಿಗೆ ಕಣ್ಣಲ್ಲಿ ನೀರು.

ಅವರು ರಾಯಚೂರಿನಲ್ಲಿ ಡಿ ಗ್ರೂಪ್‌ನಲ್ಲಿ ಸಹಾಯಕಿ ಹುದ್ದೆಗೆ ಆಯ್ಕೆಯಾಗಿದ್ದರು. ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಹುಡುಕಿ ಕೊಡುವ ಕೆಲಸವನ್ನು ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದಾಗ ಮಾಡಿದ್ದೆ. ಅಂಥ ಫಲಾನುಭವಿಗಳಲ್ಲಿ ಸವಿತಾ ತಾಯಿಯೂ ಒಬ್ಬರಾಗಿದ್ದರು.

ಮಹಿಳೆಯರಿಗೆ ಕೆಲಸವನ್ನು ಕೊಡುವುದರಲ್ಲಿ ಎರಡು ವಿಷಯಗಳಿವೆ. ಒಂದು, ಅವರು ಕುಟುಂಬದ ಅಗತ್ಯಕ್ಕಾಗಿ ದುಡಿಯುತ್ತಾರೆ. ಅವರಿಗಿದು ಕೇವಲ ದುಡಿಮೆ ಅಥವಾ ಗಳಿಕೆ ಮಾತ್ರ ಆಗಿರುವುದಿಲ್ಲ. ಮಹಿಳೆಯರಿಗೆ ಕೆಲಸವೆನ್ನುವುದು ಶ್ರದ್ಧೆಯ ಕಾಯಕ. ಅವರಿಗೆ ಕಾಯಕವೇ ಕೈಲಾಸವೆನ್ನುವುದು ಸುಳ್ಳಲ್ಲ. ಎರಡನೆಯದು, ಮಹಿಳೆಯರು ಕೆಲಸಕ್ಕೆ ಯಾವಾಗಲೂ ನಿಷ್ಠರಾಗಿರುತ್ತಾರೆ, ಕೃತಜ್ಞರಾಗಿರುತ್ತಾರೆ. ಅವರಿಗದು ಆರ್ಥಿಕ ಭದ್ರತೆಯೊಂದಿಗೆ ಸಾಮಾಜಿಕ ಸ್ಥಾನಮಾನವನ್ನೂ ನೀಡಿರುತ್ತದೆ.

ಭಾರತೀಯ ಕೌಟುಂಬಿಕ ಮನಸ್ಥಿತಿಯಲ್ಲಿ ಮಹಿಳೆಯರನ್ನು ಈಗಲೂ ಮನೆವಾರ್ತೆಗೆ ಬಂದ ಕಾರ್ಮಿಕಳಂತೆಯೇ ಭಾವಿಸಲಾಗುತ್ತದೆ. ಮದುವೆಯಾಗಿದ್ದರಂತೂ ಅವಳ ಅಸ್ತಿತ್ವವೇ ಹರಿದುಹಂಚಿಹೋಗುತ್ತದೆ. ಅತ್ತೆ ಮನೆಯವರನ್ನು ಪೊರೆಯಲು, ಗಂಡನ ಕಾಳಜಿ ಮಾಡಲು, ಮಕ್ಕಳ ಜವಾಬ್ದಾರಿ ಹೊರಲು ಬಂದವಳೆಂದೇ ಆಕೆಯನ್ನು ಪರಿಗಣಿಸಲಾಗುತ್ತದೆ. ಹಾಗೆಯೇ ನಡೆಸಿಕೊಳ್ಳಲಾಗುತ್ತದೆ. ಆದರೆ ಕೆಲಸದ ಸ್ಥಳದಲ್ಲಿ ಹಾಗಲ್ಲ, ಅವರಿಗೊಂದು ಹೊಸ ಅಸ್ತಿತ್ವ ನೀಡುತ್ತದೆ. ಆ ಅಸ್ತಿತ್ವಕ್ಕೆ ಹೊಸ ಮೆರುಗು ನೀಡಲೆಂದೇ ಹೆಚ್ಚು ಹೆಚ್ಚು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಮಾತಿಗೆ ಒಂದಷ್ಟು ಅಪವಾದಗಳು ದೊರೆಯಬಹುದು. ಆದರೆ ಅದಕ್ಕೂ ಕೌಟುಂಬಿಕ ಕಾರಣಗಳಿರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ.

ಚೇತನ್ ಮತ್ತು ಸವಿತಾಗೆ ಅವರವರ ಪ್ರಮಾಣಪತ್ರಗಳು ದೊರೆತವು. ಆದರೆ ನನ್ನಲ್ಲಿ ಒಂದು ಪ್ರಶ್ನೆ ಉಳಿದೇಹೋಯಿತು. ಈ ಬಾಹ್ಯ ಒತ್ತಡವಿರದಿದ್ದರೆ ಆ ಇಬ್ಬರೂ ಅಭ್ಯರ್ಥಿಗಳು ಇನ್ನೆಷ್ಟು ದಿನಗಳವರೆಗೆ ಅಲೆಯಬೇಕಾಗುತ್ತಿತ್ತು? ಈ ಸಮಸ್ಯೆ ಇವರಿಬ್ಬರದ್ದು ಮಾತ್ರವಲ್ಲವಲ್ಲ! ಉಳಿದವರ ಕತೆ ಏನು?

ಆಗ ಒಂದು ಸುತ್ತೋಲೆ ಹೊರಡಿಸಿದೆ. ಸಿಂಧುತ್ವ, ಜಾತಿ ಪ್ರಮಾಣ ಪತ್ರ ಮುಂತಾದವುಗಳಿಗೆ ಸಂಬಂಧಿಸಿದ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು. ಈ ಪ್ರಮಾಣಪತ್ರಗಳಿಂದಾಗಿಯೇ ಅವರ ಉದ್ಯೋಗಾವಕಾಶದ ಸ್ಥಿತಿ ಡೋಲಾಯಮಾನವಾಗಿರಬಾರದಲ್ಲ. ಎಲ್ಲ ಜಿಲ್ಲಾಡಳಿತಗಳಿಗೂ ತ್ವರಿತವಾಗಿ ಈ ಕೆಲಸಗಳನ್ನು ಪೂರ್ಣಗೊಳಿಸಲು ಸೂಚಿಸಲಾಯಿತು.

ಆದರೂ ಒಂದು ಕೆಲಸ ಮುಗಿಸಲು ಹೀಗೆ ಮೇಲಧಿಕಾರಿಗಳು, ಹಿರಿಯ ಅಧಿಕಾರಿಗಳು ಒತ್ತಡ ತರಬೇಕೇ? ಬಾಹ್ಯ ಒತ್ತಡ ಹೆಚ್ಚಾದಾಗ ಮಾತ್ರ ಕೆಲಸಗಳು ಚುರುಕುಗೊಳ್ಳುವುದು ಸರಿಯಲ್ಲ. ಯಾರಿಗಾದರೂ ಒಳಿತಾಗುವಂತಿದ್ದರೆ ಅದಕ್ಕೆ ಆಂತರ್ಯದ ಒತ್ತಡ ಹೆಚ್ಚಾಗಬೇಕು. ಉದ್ಯೋಗಾವಕಾಶಗಳ ವಿಷಯ ಬಂದಾಗಲಂತೂ ಅದು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ್ದಾಗಿರುವುದಿಲ್ಲ. ಒಂದು ಕುಟುಂಬದ ವಿಷಯವಾಗಿರುತ್ತದೆ. ಕೆಲಸ ಕೇವಲ ದುಡಿಮೆಯಾಗಬಾರದು. ಕಾಯಕವಾಗಬೇಕು. ಆಗ ಇಂಥ ಬಾಹ್ಯ ಒತ್ತಡಗಳಿಗಿಂತ ಆಂತರ್ಯದ ಎಚ್ಚರಿಕೆಯೇ ಹೆಚ್ಚು ಕೆಲಸ ಮಾಡಿಸುತ್ತದೆ.

ಯುಪಿಎಸ್‌ಸಿಗೆ ಸಂಬಂಧಿಸಿದ ಅಭ್ಯರ್ಥಿಗಳ ಎಲ್ಲ ಪ್ರಮಾಣಪತ್ರಗಳು ಕರಾರುವಾಕ್ಕಾಗಿ ಸಿಗುತ್ತವೆ. ನಿಗದಿತ ದಿನಾಂಕದಂದು ಎಲ್ಲ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಅವರಂತೆಯೇ ಉಳಿದವರೂ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೆಪಿಎಸ್‌ಸಿ ಸಹ ಕಾರ್ಯನಿರತವಾಗಬೇಕು. ಮೊದಲೆಲ್ಲ ಹೆಚ್ಚಿನ ಬಜೆಟ್‌ ಇರುತ್ತಿರಲಿಲ್ಲ. ಜನರಿಗೆ ಸಹಾಯವಾಗುವಂಥ ಯೋಜನೆಗಳೂ ಕಡಿಮೆಯಿರುತ್ತಿದ್ದವು. ಇದೀಗ ಕಾಲ ಬದಲಾಗಿದೆ. ಸಾಕಷ್ಟು ಯೋಜನೆಗಳಿವೆ. ಹಣಕಾಸಿನ ಸ್ಥಿತಿಯೂ ಚೆನ್ನಾಗಿಯೇ ಇದೆ. ಹೀಗಿದ್ದಾಗ ಸರ್ಕಾರದ ವ್ಯವಸ್ಥೆಯಾಗಿರುವ ಆಡಳಿತ, ಅಧಿಕಾರಿಗಳು ಜನಪರವಾಗಿ ಶ್ರಮಿಸಬೇಕು. ಜನರ ನಡುವೆ ಹೋದರೆ, ಅವರ ಕಷ್ಟಗಳಿಗೆ ಸ್ಪಂದಿಸಿದರೆ ಒಳಿತಾಗುತ್ತದೆ. ಒಳಿತನ್ನು ಮಾಡುವ ಮನಸ್ಸಿರಬೇಕು. ಬಾಹ್ಯ ಒತ್ತಡ ಬಂದ ಮೇಲೆ ಆದೇಶ ಪಾಲಿಸುವ ಬುದ್ಧಿಯಷ್ಟೇ ಇದ್ದರೆ ಸಾಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು