ಜಿಂಕೆ ಮಾಂಸ ತಿಂದ ಪ್ರಕರಣ; ನಾಲ್ವರು ಸಿಬ್ಬಂದಿ ಅಮಾನತು
ಮೈಸೂರು, ಸೆ. 9 – ಚಾಮರಾಜನಗರ ಜಿಲ್ಲೆಯ ಪುಣಜನೂರು (ಕೊಳ್ಳೇಗಾಲ ತಾಲ್ಲೂಕು) ಮತ್ತು ಬಂಡೀಪುರ (ಗುಂಡ್ಲುಪೇಟೆ ತಾಲ್ಲೂಕು) ಸಂರಕ್ಷಿತ ಅರಣ್ಯದಲ್ಲಿ ಜಿಂಕೆ ಮಾಂಸ ಬೇಯಿಸಿ ತಿಂದಿರುವ ಎರಡು ಪ್ರಕರಣಗಳಲ್ಲಿ ಕರ್ತವ್ಯನಿರತ ಅರಣ್ಯ ಸಿಬ್ಬಂದಿಯೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಕೊಳ್ಳೇಗಾಲ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶವನ್ನು ವೀಕ್ಷಿಸಲು ದೆಹಲಿಯಿಂದ ಬಂದಿದ್ದ ವಿಶ್ವ ವನ್ಯಜೀವಿ ನಿಧಿ ಮಂಜೂರಿಗೆ ಸಂಬಂಧಿಸಿದ ಪ್ರತಿನಿಧಿಗಳು ಪುಣಜನೂರು ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ, ಅರಣ್ಯ ಸಿಬ್ಬಂದಿಯೇ ಸತ್ತ ಜಿಂಕೆಯ ಮಾಂಸವನ್ನು ಬೇಯಿಸಿಕೊಂಡು ತಿನ್ನುವುದು ಪತ್ತೆಯಾಗಿದೆ.
***
ಚುನಾವಣಾ ಸಮೀಕ್ಷೆಗೆ ತಡೆಯಾಜ್ಞೆ ಇಲ್ಲ
ನವದೆಹಲಿ, ಸೆ. 9 (ಪಿಟಿಐ)– ಫಲಿತಾಂಶ ಪೂರ್ವ ಸಮೀಕ್ಷೆ ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಕಟಿಸುವುದರ ಮೇಲಿನ ‘ವಿವಾದಾತ್ಮಕ’ ನಿಷೇಧ ಜಾರಿಗೆ ಮಧ್ಯಂತರ ತಡೆ ಆಜ್ಞೆ ನೀಡಬೇಕೆಂಬ ಚುನಾವಣಾ ಆಯೋಗದ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿತು. ವಿವಾದವನ್ನು ಸಂವಿಧಾನ ಪೀಠದ ಪರಿಶೀಲನೆಗೆ ಒಪ್ಪಿಸಲಾಗಿದ್ದು, ಬರುವ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಆನಂದ ಅವರ ನೇತೃತ್ವದಲ್ಲಿನ ಮೂವರು ಸದಸ್ಯರ ಪೀಠವು ಇಂದು ಮಧ್ಯಾಹ್ನ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು.