ಮಂಗಳವಾರ, ಮಾರ್ಚ್ 21, 2023
23 °C

25 ವರ್ಷಗಳ ಹಿಂದೆ: ಭಾನುವಾರ, 18 ಜನವರಿ 1998

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ವಿರುದ್ಧ ಎಚ್ಚರಕ್ಕೆ ಸೋನಿಯಾ ಕರೆ
ಪಣಜಿ, ಜ. 17–
‘ಅನಾದಿ ಕಾಲದಿಂದಲೂ ಕಾಪಾಡಿಕೊಂಡಿರುವ ಮೂಲಭೂತ ಮೌಲ್ಯ, ಸಿದ್ಧಾಂತ ಹಾಗೂ ಜಾತ್ಯತೀತತೆ ಒಂದು ಕಡೆ ಹಾಗೂ ಧಾರ್ಮಿಕ ಭಾವನೆಗಳ ದುರುಪಯೋಗ ಇನ್ನೊಂದು ಕಡೆ ಪ್ರಸಕ್ತ ಚುನಾವಣೆಯಲ್ಲಿ ಮುಖಾಮುಖಿ ಸಂಘರ್ಷಕ್ಕೆ ಇಳಿದಿವೆ. ಆದಕಾರಣ ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಆತ್ಯಂತ ಕ್ಲಿಷ್ಟಕರ’ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರದ ಪ್ರಮುಖರಾದ ಸೋನಿಯಾ ಗಾಂಧಿ ಹೇಳಿದ್ದಾರೆ.

‘ಸೌಹಾರ್ದ ವಾತಾವರಣ ಹಾಗೂ ಅಭಿವೃದ್ಧಿ ಬಯಸುವ ಸುಭದ್ರತೆ ಪರವಾದ ಶಕ್ತಿಗಳು ಹಾಗೂ ಧಾರ್ಮಿಕ ಭಾವನೆಗಳ ಕಿಚ್ಚು ಹಬ್ಬಿಸಿ ಯಾವುದೇ ರೀತಿಯಿಂದಾದರೂ ಸರಿಯೆ ಅಧಿಕಾರ ಹಿಡಿಯಬೇಕೆಂಬ ಶಕ್ತಿಗಳ ನಡುವೆ ಜನರು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಶಕ್ತಿಗಳ ಬಗ್ಗೆ ಜನರು ಎಚ್ಚರ ವಹಿಸಬೇಕು’ ಎಂದು ಇಲ್ಲಿನ ಆಜಾದ್ ಮೈದಾನದ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಸೋನಿಯಾ ನುಡಿದರು.

‘ಕನಿಷ್ಠ ಮೂಲಭೂತ ಅಗತ್ಯಗಳಾದ ನೀರು, ವಿದ್ಯುತ್ ಮತ್ತು ಆಹಾರ ದೊರಕುವ ವಾತಾವರಣ ಕಲ್ಪಿಸುವ ಮಾನವಂತ ಬದುಕು ಭಾರತದ ಬಡವರ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯೆ, ಉದ್ಯೋಗ, ಆರೋಗ್ಯ ಮತ್ತು ಆರ್ಥಿಕ ಪ್ರಗತಿ ಎಲ್ಲರ ಹಕ್ಕು’ ಎಂದು ಪ್ರತಿಪಾದಿಸಿದರು.

ಸಂಪನ್ಮೂಲ ಸದ್ಬಳಕೆಗೆ ಕಲಾಂ ಕರೆ
ಧಾರವಾಡ, ಜ. 17–
ನೈಸರ್ಗಿಕ ಸಂಪನ್ಮೂಲ ಗಳು ಮತ್ತು ಬೌದ್ಧಿಕ (ಮಾನವ) ಶಕ್ತಿಗಳನ್ನು ಯೋಜಿತವಾಗಿ ಬಳಸಿದರೆ ಮುಂದಿನ ಎರಡು ದಶಕಗಳಲ್ಲಿ ಭಾರತ ‘ಆರ್ಥಿಕ ಶಕ್ತಿ’ಯಾಗಿ ಹೊರಹೊಮ್ಮುವ ದೃಢ ವಿಶ್ವಾಸವನ್ನು ಕೇಂದ್ರ ಸರ್ಕಾರದ ರಕ್ಷಣಾ ಸಲಹೆಗಾರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಇಂದು ನಡೆದ ಕರ್ನಾಟಕ ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ತಂತ್ರಜ್ಞಾನ ಅಭಿವೃದ್ಧಿ, ಔದ್ಯೋಗಿಕ ಅವಕಾಶ ಮತ್ತು ಸೌಲಭ್ಯಗಳು, ಆರ್ಥಿಕ ಬೆಳವಣಿಗೆ, ಸಾಮಾಜಿಕ ಏಕತೆ, ನೆಮ್ಮದಿ ಮತ್ತು ಸುಖ ಸಂತೋಷಗಳಿಂದ ತುಂಬಿ ತುಳುಕುವ ನಾಳಿನ ಭಾರತವನ್ನು ನಿರ್ಮಾಣ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ ಎಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು