ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಬುಧವಾರ, 27 ಜನವರಿ 1999

Published 26 ಜನವರಿ 2024, 21:50 IST
Last Updated 26 ಜನವರಿ 2024, 21:50 IST
ಅಕ್ಷರ ಗಾತ್ರ

ಹೆಚ್ಚಿದ ‘ಅಪವಿತ್ರ ಮೈತ್ರಿ’ ರಾಜ್ಯಪಾಲರ ಕಳವಳ

ಬೆಂಗಳೂರು, ಜ. 26– ಹೆಚ್ಚುತ್ತಿರುವ ಭ್ರಷ್ಟಾಚಾರ, ಕುಸಿಯುತ್ತಿರುವ ನೈತಿಕ ಮೌಲ್ಯಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಡಳಿತಶಾಹಿಗಳ ನಡುವೆ ಹೆಚ್ಚುತ್ತಿರುವ ‘ಅಪವಿತ್ರ ಮೈತ್ರಿ’ಯ ಬಗ್ಗೆ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರು ಇಂದು ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಶ್ರೇಷ್ಠ ವ್ಯಕ್ತಿಗಳಿಗೆ ನೆಲೆ ನೀಡಿದ ಈ ನಾಡು ಭ್ರಷ್ಟಾಚಾರದ ಸುಳಿಯಲ್ಲಿ ಮತ್ತು ನೈತಿಕ ಮೌಲ್ಯಗಳ ಅವಸಾನದಲ್ಲಿ ಸಿಲುಕುತ್ತಿರುವುದನ್ನು ನೋಡಿದರೆ ಸಂಕಟ ಆಗುತ್ತಿದೆ ಎಂದು ವಿಷಾದಿಸಿದರು.

ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ರಾಜಕೀಯ ಸಂಘರ್ಷಗಳೂ ವ್ಯಕ್ತಿಗತ ಸಂಘರ್ಷಗಳಾಗುತ್ತಿರುವುದು ವಿಪರ್ಯಾಸ. ಇದು ಕೇವಲ ರಾಜಕೀಯ ಪ್ರಾಬಲ್ಯಕ್ಕಾಗಿ ನಡೆಯುತ್ತಿದೆಯೇ ವಿನಾ ಯಾವುದೇ ತಾತ್ವಿಕ ನೆಲೆಗಟ್ಟಿಗಾಗಿ ಅಲ್ಲ. ನಮ್ಮ ಶಿಕ್ಷಣದ ಮೌಲ್ಯವೂ ನಶಿಸುತ್ತಿರುವುದು ಹಲವು ಕೆಡುಕುಗಳಿಗೆ ಕಾರಣ ಎಂದರು.

***

ಮತಾಂತರ ಆಜನ್ಮಸಿದ್ಧ ಹಕ್ಕು ಸಾಹಿತಿ ಅನಂತಮೂರ್ತಿ

ಬೆಂಗಳೂರು, ಜ. 26– ಮತಾಂತರವಾಗುವುದು ಆಜನ್ಮಸಿದ್ಧ ಹಕ್ಕು. ಆದ್ದರಿಂದ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರುವುದಕ್ಕೆ ಬಿಡಬಾರದು ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಇಂದು ಇಲ್ಲಿ ಹೇಳಿದರು.

ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ ‘ಜನಸಾಹಿತ್ಯ– ಜನಚಳವಳಿ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ಬೂಸಾ ಚಳವಳಿ’ಗೆ 25 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಯಾರಾದರೂ ಮತಾಂತರ ಆದರೆ ಮೊದಲು ಹಿಂದೂ ಧರ್ಮದ ಮಠಾಧಿಪತಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇನ್ನು ಕ್ರೈಸ್ತ ಅಥವಾ ಇತರ ಧರ್ಮೀಯರು ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು ಎಂದುಕೊಂಡರೂ ಈ ಧರ್ಮದಲ್ಲಿರುವ ನಾನಾ ಜಾತಿಗಳಿಂದಾಗಿ ಅವರಿಗೆ ತಾವು ಯಾವ ಜಾತಿಗೆ ಸೇರಬೇಕೆಂಬ ಸಮಸ್ಯೆ ಎದುರಾಗುತ್ತದೆ ಎಂದು ಅವರು ವಿವರಿಸಿದರು.

***

ಬಿಹಾರದ ರಣವೀರ ಸೇನೆ ಅಟ್ಟಹಾಸ: 21 ಮಂದಿಯ ಕಗ್ಗೊಲೆ

ಪಟ್ನಾ, ಜ. 26– (ಯುಎನ್ಐ, ಪಿಟಿಐ)– ಬಿಹಾರ ಭೂ ಮಾಲೀಕರ ನಿಷೇಧಿತ ರಣವೀರ ಸೇನೆಯು ನಕ್ಸಲೀಯರ ಉಪಟಳ ಹೆಚ್ಚಿರುವ ಜೆಹಾನಾಬಾದ್‌ ಜಿಲ್ಲೆಯ ಶಂಕರ್ ಬಿಘಾ ಗ್ರಾಮದ ಪರಿಶಿಷ್ಟರ ಕೇರಿಯ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 21 ಮಂದಿಯನ್ನು ಕೊಂದುಹಾಕಿದೆ.

ಸತ್ತವರಲ್ಲಿ ಆರು ಮಕ್ಕಳು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಪಟ್ನಾ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಸುಮಾರು 100ಕ್ಕೂ ಹೆಚ್ಚು ಜನರಿದ್ದ ಶಸ್ತ್ರಸಜ್ಜಿತ ರಣವೀರ ಸೇನೆಯ ಗುಂಪು ಗಣರಾಜ್ಯೋತ್ಸವದ ಮುನ್ನಾ ದಿನ ನಡೆಸಿದ ಈ ಕರಾಳ ಕೃತ್ಯದಿಂದಾಗಿ ಬಿಹಾರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT